ಕಲಬುರಗಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ಪ್ರಭಾವ ಎಂಬ ವಿಷಯ ಕುರಿತು ಬುಧವಾರ ಮದರ್ ತೆರೆಸಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಾಗಾರದ ನಂತರ ಜರುಗಿದ ಕವಿ ಸಮಯ ಕಾರ್ಯಕ್ರಮದಲ್ಲಿ ಡಾ. ಎಸ್.ಪಿ. ಸುಳ್ಳದ, ಡಾ. ಸೂರ್ಯಕಾಂತ ಪಾಟೀಲ, ಡಾ. ನಾಗಪ್ಪ ಗೋಗಿ, ಫರವೀನ ಸುಲ್ತಾನ, ಡಾ. ರಾಜಶೇಖರ ಮಾಂಗ್, ಡಾ. ಕೆ. ಗಿರಿಮಲ್ಲ, ಅನಸೂಯಾ ನಾಗನಳ್ಳಿ, ಡಾ. ಎಸ್.ಎ. ವಡ್ಡನಕೇರಿ ಇತರರು ತಮ್ಮ ಕವನ ವಾಚಿಸಿದರು.
ವಿಷಯ ಮಂಡಿಸಿದ ನಿವೃತ್ತ ಪ್ರಾಚಾರ್ಯ ಡಾ. ಶ್ರೀಶೈಲ ನಾಗರಾಳ ಮಾತನಾಡಿ, ಕಾವ್ಯ ತಂತ್ರಕ್ಕೊಳಪಡಿಸುವ ಮಂತ್ರ. ಅನುಭವ, ಮಾತು, ಭಾವನೆಗಳಿಗೆ ಸಂಸ್ಕಾರ ಕೊಟ್ಟರೆ ಕವಿತೆಯಾಗಬಲ್ಲದು. ಮಾತಿಗೆ ಕಾವ್ಯದ ಸ್ಪರ್ಶ ಕೊಟ್ಟರೆ ಮನ ಮುದಗೊಳ್ಳಬಲ್ಲದು ಎಂದು ಹೇಳಿದರು.
ವಚನಕಾರರು ಮಾತಿಗೆ ಕಾವ್ಯ ದೀಕ್ಷೆ ಕೊಟ್ಟರು. ದಾಸರು ಮಾತಿಗೆ ಸಂಗೀತದ ಲಯ ಕೊಟ್ಟರು. ಪದಗಳ ಜೋಡಣೆಯೊಂದೇ ಕಾವ್ಯವಲ್ಲ. ಕಾವ್ಯಕ್ಕೆ ಕವಿ ನಿರ್ಮಾಪಕರಾದರೆ, ಸಹೃದಯರು ಕಾವ್ಯಕ್ಕೆ ಪೋಷಕರು. ಕಾವ್ಯ ನಿಲ್ಲುವುದು ಜನ ಒಪ್ಪಿಕೊಂಡಾಗ ಮಾತ್ರ. ಕಾವ್ಯಕ್ಕೆ ಭಾವ ಪ್ರಾಣವಾದರೆ, ರೂಪಕಗಳು ಅದರ ಶರೀರ. ಭಾವ ತೀವ್ರತೆಯ ಹವ್ಯಾಸಕ್ಕೆ ಬಿದ್ದು ಇಂದು ಕಾವ್ಯ ಬರೆಯುತ್ತಿದ್ದೇವೆ. ಕಾವ್ಯ ದೇವರನ್ನಾಗಿ ಮಾಡದೆ ಮನುಷ್ಯರನ್ನಾಗಿ ಮಾಡಬೇಕು ಎಂದು ಅವರು ತಿಳಿಸಿದರು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.