ಆಳಂದ: ವ್ಯಕ್ತಿ ಅಳಿದರೂ ವ್ಯಕ್ತಿಯ ಜ್ಞಾನ ಮತ್ತು ವಿಚಾರಗಳು ಸರ್ವಕಾಲಿಕವಾಗಿರುತ್ತವೆ ಎಂದು ಎಸ್‌ಆರ್‌ಜಿ ಫೌಂಡೇಶನ್ ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್‌ಆರ್‌ಜಿ ಫೌಂಡೇಶನನ ಅಡಿಯಲ್ಲಿ ನಡೆಯುತ್ತಿರುವ ವೆಂಕಯ್ಯ ಕೂಸಯ್ಯ ಗುತ್ತೇದಾರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಬಿ.ಎ, ಬಿ.ಎಸ್ಸಿ ಮತ್ತು ಬಿ.ಕಾಮ್ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೂಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ಯುವಸಮೂಹ ಕೀಳರಿಮೆ, ಜಿಗುಪ್ಸೆ ಅತಿಯಾಗಿ ಹೊಂದಿರುವುದರಿಂದ ಜೀವನದಲ್ಲಿ ಫಲ ಕಾಣಲು ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ಸಕಾರಾತ್ಮಕ ಚಿಂತನೆ, ಸದ್ವಿಚಾರ, ಸದ್ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.
ಯಶಸ್ಸು ಪಡೆಯಲು ಅಡ್ಡದಾರಿಯಿಲ್ಲ ಕೇವಲ ಪರಿಶ್ರಮವೊಂದೇ ಅದಕ್ಕಿರುವ ಮಾರ್ಗವಾಗಿದೆ ಅದನ್ನು ಸಾಧಿಸಲು ನಿರಂತರ ಅಧ್ಯಯನ ಮಾಡುವುದು ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಬರಲು ಶ್ರಮಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಉಪನ್ಯಾಸಕ ಶ್ರೀಶೈಲ ಮಾಳಗೆ ಅವರು, ಜಗತ್ತಿನ ಅನೇಕ ದಾರ್ಶನಿಕರು ತೀರಾ ಬಡತನ ಕುಟುಂಬದಲ್ಲಿ ಜನಿಸಿ ತಮ್ಮ ಅಗಾಧವಾದ ಜ್ಞಾನ ಪ್ರತಿಭೆಯಿಂದ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ ಈ ನಿಟ್ಟಿನಲ್ಲಿ ಇಂದಿನ ಯುವಸಮೂಹ ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ನಮ್ಮ ದಿನನಿತ್ಯದ ಬದುಕಿನ ಅವಶ್ಯಕತೆಗಳನ್ನು ಪೂರೈಸುಕೊಳ್ಳುವುದರ ಜೊತೆಗೆ ಸಾಮಾಜಿಕ ಕಳಕಳಿಯು ಹೊಂದಿರಬೇಕು ಅದಕ್ಕಾಗಿ ಉತ್ತಮವಾದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಆದ್ಯತೆಗಳು ಬದಲಾಗಿವೆ ಅದಕ್ಕಾಗಿ ವಿದ್ಯಾರ್ಥಿಗಳು ಈಗಿನ ಸನ್ನಿವೇಶಕ್ಕೆ ತಕ್ಕಂತೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿರಬೇಕು ಎಂದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇವ ವಡಗಾಂವ, ಬಿ.ಎಡ್ ಕಾಲೇಜಿನ ಪ್ರಾಚಾರ್ಯ ಅಶೋಕರೆಡ್ಡಿ, ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ, ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಜ್ಯೋತಿ ವಿಶಾಖ್, ವಿದ್ಯಾರ್ಥಿ ಪ್ರತಿನಿಧಿ ವಿನೋದ ರಾಠೋಡ ಇದ್ದರು.
ವಿದ್ಯಾರ್ಥಿನಿ ಸಿದ್ದಮ್ಮ ಸ್ವಾಗತಿಸಿದರೇ, ರೂಪಾ ವಂದಿಸಿದರು. ಲಕ್ಷ್ಮೀ ನಿರೂಪಿಸಿದರೆ, ಕಾಲೇಜಿನ ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಅಧ್ಯಕ್ಷತೆ ವಹಿಸಿದರು.
ಬಾಕ್ಸ್: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಂಸ್ಥೆಯ ವತಿಯಿಂದಲೇ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.- ಡಾ. ರಾಘವೆಂದ್ರ ಚಿಂಚನಸೂರ, ಆಡಳಿತಾಧಿಕಾರಿ, ಎಸ್‌ಆರ್‌ಜಿ ಫೌಂಡೇಶನ್.