ಸುರಪುರ: ತಾಲೂಕಿನ ಮಲ್ಲಿಬಾವಿ ಗ್ರಾಮದಲ್ಲಿನ ಜನರು ಕೊರೊನಾ ಲಸಿಕೆ ಪಡೆಯಲು ಮನೆ ಬಾಗಿಲಿಗೆ ಹೋದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆ ಶನಿವಾರ ನಡೆದಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು,ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿಗಳು ಮನೆಗೆ ಹೋಗಿ ಕೊರೊನಾ ಲಸಿಕೆಯನ್ನು ತೆಗೆದುಕೊಳ್ಳುವಂತೆ ತಿಳಿಸಿದರು.ಕೆಲವರು ಮನೆಯ ಬಾಗಿಲನ್ನು ಹಾಕಿಕೊಂಡು ಲಸಿಕೆ ಪಡೆದುಕೊಳ್ಳುವುದಿಲ್ಲ ಮತ್ತು ನಮ್ಮ ಯಜಮಾನ ಬರುವವರೆಗೂ ಮನೆಯ ಬಾಗಿಲನ್ನೂ ತೆರೆಯುವದಿಲ್ಲವೆಂದು ಬಾಗಿಲು ಹಾಕಿಕೊಂಡರು.ಇನ್ನೂ ಕೆಲವರು ಹಿಂದೆ ಲಸಿಕೆ ಪಡೆದಿದ್ದೇವೆ ಎಂದು ಸುಳ್ಳು ನೇಪ ಹೇಳುವ ಮೂಲಕ ಲಸಿಕೆ ಪಡೆಯಲು ನಿರಾಕರಿಸಿದ್ದಾರೆ.
ಈಗ ಮತ್ತೆ ಲಸಿಕೆಯನ್ನು ಪಡೆಯುವಂತೆ ಅಧಿಕಾರಿಗಳು ತಿಳಿಸುತ್ತಿದ್ದಂತೆ,ನಮ್ಮನ್ನು ಸಾಯಿ ಹೊಡೆಯಬೇಕು ಅಂದುಕೊಂಡಿದ್ದಿರೇನು ಎಂದು ರೇಗಾಡುವ ಮೂಲಕ ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ.ಮತ್ತೆ ಕೆಲವರು ನಾನು ಲಸಿಕೆ ಪಡೆಯಬೇಕೆಂದರೆ ನನಗೆ ಮಾಶಾಸನ ಮಾಡಿಸಿಕೊಡುವುದಾದರೆ ಲಸಿಕೆ ಪಡೆಯುವೆ ಎಂದು ಷರತ್ತು ಹಾಕುತ್ತಿರುವುದು ಕಂಡುಬಂದಿದೆ.
ಸರಕಾರ ಲಸಿಕೆ ಪಡೆಯದವರಿಗೆ ಸರಕಾರದ ಎಲ್ಲಾ ಸೌಲಭ್ಯಗಳನ್ನು ನಿಲ್ಲಿಸುವುದಾಗಿ ಬೆದರಿಸುತ್ತಿದ್ದರು ಇಲ್ಲಿಯ ಜನರು ಇದ್ಯಾವುದಕ್ಕೂ ಕ್ಯಾರೆ ಎನ್ನದಂತೆ ನಿರಾಕರಿಸುತ್ತಿದ್ದಾರೆ.ಇದಕ್ಕೆಲ್ಲ ಜನರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸದಿರುವುದು ಕಾರಣ ಎಂಬುದು ಮೇಲ್ನೊಟಕ್ಕೆ ಕಂಡುಬರುತ್ತಿದೆ.ಜನರ ಮನೆಬಾಗಿಲಿಗೆ ಹೋಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಲಸಿಕೆ ಹಾಕಲು ಸಾಧ್ಯವಾಗದೆ ಹಿಂದುರಿಗಿರುವ ಘಟನೆ ಜರುಗಿತು.