ಸುರಪುರ: ತಾಲೂಕಿನ ಚಂದ್ಲಾಪುರ ಗ್ರಾಮದಲ್ಲಿಯ ರೈತರಿಗೆ ಹತ್ತಿ ಕಳ್ಳತನದ ಸಮಸ್ಯೆ ಎದುರಾಗಿದೆ.ಕ್ವಿಂಟಾಲ್ ಹತ್ತಿಗೆ ಸುಮಾರು ೧೦ ಸಾವಿರ ಬೆಲೆ ಬಂದಿದ್ದರಿಂದ ಕಳ್ಳರು ರೈತರು ಬೆಳೆದ ಹತ್ತಿಗೆ ಕನ್ನ ಹಾಕುತ್ತಿದ್ದಾರೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಚಂದ್ಲಾಪುರ ಗ್ರಾಮದ ರೈತ ಮರಿಲಿಂಗಪ್ಪ ಎನ್ನುವವರು ತಮ್ಮ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆಯನ್ನು ರಾತ್ರೋರಾತ್ರಿ ಕಳ್ಳರು ಗಿಡದಲ್ಲಿರುವ ಹತ್ತಿಯನ್ನೇ ಬಿಡಿಸಿಕೊಂಡು ಪರಾರಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಕಳೆದ ಎರಡು ದಿನಗಳ ಹಿಂದೆಯೇ ರೈತ ಮರಿಲಿಂಗಪ್ಪ ಹತ್ತಿ ಬಿಡಿಸುವ ಕಾರ್ಯ ಆರಂಭಿಸಿದ್ದರು.
ಆದರೆ ಅದೇ ದಿನ ರಾತ್ರಿ ಹೊಲಕ್ಕೆ ನುಗ್ಗಿರುವ ಕಳ್ಳರು ಸುಮಾರು ೩ ಕ್ವಿಂಟಾಲಿನಷ್ಟು ಹತ್ತಿಯನ್ನು ಬಿಡಿಸಿಕೊಂಡು ಹೋಗಿದ್ದಾರೆ.ಸಾಲಶೂಲ ಮಾಡಿ ವ್ಯವಸಾಯ ಮಾಡುತ್ತೇವೆ,ಆದರೆ ಹೀಗೆ ಕಳ್ಳರು ಜಮೀನಲ್ಲಿನ ಫಸಲು ಕದಿಯುತ್ತಿರುವುದರಿಂದ ರೈತರು ಮತ್ತಷ್ಟು ಸಾಲಕ್ಕೆ ಗುರಿಯಾಗುತ್ತೇವೆ.ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕು ಮತ್ತು ಸರಕಾರ ನಮ್ಮಂತಹ ಬಡ ರೈತರ ನೆರವಿಗೆ ಬರಬೇಕು ಎಂದು ಮನವಿ ಮಾಡುತ್ತಿದ್ದಾರೆ.