ಕಲಬುರಗಿ: ಸರ್ಕಾರಗಳು ವೃತ್ತಿಶಿಕ್ಷಣದ ಕಲಿಕೆಗೆ ನೀಡುವಷ್ಟು ಪ್ರಾಧಾನ್ಯತೆಯನ್ನು ಪ್ರಾಥಮಿಕ ಶಿಕ್ಷಣದ ಕಲಿಕೆಗೆ ನೀಡುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷ ಉದಯ್ ಉಮೇಶ್ ಲಲಿತ್ ಅವರು ವಿಷಾದ ವ್ಯಕ್ತಪಡಿಸಿದರು.
ನಗರದ ಹೆಚ್‌ಕೆಇ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂನಲ್ಲಿ ರವಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರಗಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಯೋಗದಲ್ಲಿ ಆಯೋಜಿಸಿದ್ದ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವಲ್ಲಿ ಹಕ್ಕುಗಳು ಮತ್ತು ಅರ್ಹತೆ ನೀಡುವಿಕೆಯ ವಾಸ್ತವೀಕರಣ-೨೦೩೦ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ವೈದ್ಯಕೀಯ, ಇಂಜಿನಿಯರಿಂಗ್, ಐಐಟಿ ಮುಂತಾದ ವೃತ್ತಿಶಿಕ್ಷಣ ಕೋರ್ಸ್‌ಗಳ ಬಗ್ಗೆ ಸರ್ಕಾರಗಳು ಮುತುವರ್ಜಿ ವಹಿಸುತ್ತಿವೆ ಎಂದು ದೇಶದಲ್ಲಿರುವ ಸರ್ಕಾರಿ ವಲಯದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಿಂಗ್ ಜಾರ್ಜ್ ಇಂಜಿನಿಯರಿಂಗ್ ಕಾಲೇಜು, ಜೆಜೆ ಆರ್ಕಿಟೆಕ್ಚರ್ ಮುಂತಾದ ಉನ್ನತ ಶಿಕ್ಷಣ ಸಂಸ್ಥೆಗಳ ಬಗ್ಗೆ ಪ್ರಸ್ತಾಪಿಸಿದ ಅವರು ಸರ್ಕಾರಗಳು ಯಾಕೆ ಇಂತಹ ಕಾಳಜಿಯನ್ನು ಪ್ರಾಥಮಿಕ ಶಿಕ್ಷಣದ ಕಲಿಕೆ ಬಗ್ಗೆ ತೋರುತ್ತಿಲ್ಲ ಎಂದು ಅವರು ಹೇಳಿದರು.
ಎಲ್ಲಾ ಸಮುದಾಯಕ್ಕೂ ಶಿಕ್ಷಣ ಸೇರಿದಂತೆ ಎಲ್ಲಾ ಅವಕಾಶಗಳು ಸಮಾನವಾಗಿ ದೊರಕಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.
ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಬೇಕಾದರೆ, ಒಟ್ಟು ೧೭ ಅಂಶಗಳ ಮಾನದಂಡವಿದ್ದು, ಮಕ್ಕಳ ಶಿಕ್ಷಣದ ಜೊತೆಗೆ ಮಹಿಳೆಯರ ಸಬಲೀಕರಣವಾಗಬೇಕು ಎಂದು ಅವರು ಒತ್ತಿಹೇಳಿದರು.
ಕರ್ನಾಟಕ ರಾಜ್ಯ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಗೌರವಾನ್ವಿತ ರಿತು ರಾಜ್ ಅವಸ್ಥಿ ಆವರು ಮಾತನಾಡಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನ್ ಇಂಡಿಯಾ ಕಾನೂನು ಅರಿವು ಹಾಗೂ ಜನಸಮೂಹ ಜಾಗೃತಿ ಅಭಿಯಾನ ಕಾರ್ಯಕ್ರಮವು ಗ್ರಾಮೀಣ ಮತ್ತು ದೂರದ ಪ್ರದೇಶದ ಯುವ ಸಮುದಾಯಕ್ಕೆ ತಲುಪಿ, ಅದರ ಪ್ರಯೋಜನ ಪಡೆಯುವಂತಾಗಬೇಕು. ಕಾನೂನು ಅರಿವು ಶಿಕ್ಷಣದ ಮೂಲಕ ಅವರು ಸಶಕ್ತರಾಗಬೇಕು. ಈ ನಿಟ್ಟಿನಲ್ಲಿ ವಕೀಲ ಸಮುದಾಯ, ಕಾನೂನು ವಿದ್ಯಾರ್ಥಿಗಳು,ಪ್ಯಾರಾ ಲೀಗಲ್ ಸ್ವಯಂಸೇವಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಕಾನೂನು ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಕಾನೂನು ಸೇವೆಗಳ ಕ್ಲಿನಿಕ್‌ಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿ, ಕ್ಲಿನಿಕ್‌ಗಳ ಪ್ರಮಾಣಿತ ಕಾರ್ಯಾಚರಣಾ ವಿಧಾನ ಕುರಿತ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಗೌರವಾನ್ವಿತ ರಿತು ರಾಜ್ ಅವಸ್ಥಿ ಅವರು, ವಿಘ್ನೇಶ್ ಶ್ರೀನಿವಾಸ್ ಅವರೇಕಾಳ್ ಎಂಬ ಯುವ ವಕೀಲ ಹೊರತಂದಿರುವ ಜನಸಾಮಾನ್ಯರಿಗಾಗಿ ಕಾನೂನು ಮಾಹಿತಿ – ವರ್ಣಚಿತ್ರದ ಕಿರು ಕಾದಂಬರಿಯ ೨ನೇ ಆವೃತ್ತಿಯ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ರಾಜ್ಯ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಾಧೀಶ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷ ಬಿ, ವೀರಪ್ಪ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕರ್ನಾಟಕ ರಾಜ್ಯ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಾಧೀಶ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಪಿ.ಎಸ್. ದಿನೇಶ್ ಕುಮಾರ್ ಅವರು ಸ್ವಾಗತಿಸಿದರು. ಕರ್ನಾಟಕ ರಾಜ್ಯ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಾಧೀಶ ಹಾಗೂ ಆಡಳಿತ ನ್ಯಾಯಾಧೀಶ ಕೃಷ್ಣ ಎಸ್.ದೀಕ್ಷಿತ್ ಅವರು ವಂದಿಸಿದರು.
ಕರ್ನಾಟಕ ರಾಜ್ಯ ಹೈಕೋರ್ಟ್, ಕಲಬುರಗಿ ಪೀಠದ ಸರ್ಕಾರಿ ವಕೀಲರಾದ ಅನುರಾದ ದೇಸಾಯಿ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಬಂಜಾರ ಸಮುದಾಯದ ಮಹಿಳೆಯರು ಹಾಡುವ ಮೂಲಕ ಗಣ್ಯರನ್ನು ವೇದಿಕೆಗೆ ಕರೆತಂದರು. ತಮ್ಮ ಭಾಷಣದಲ್ಲಿ ಬಂಜಾರ ಸಮುದಾಯದ ಮಹಿಳೆಯರ ವೇಷ-ಭೂಷಣ ಬಗ್ಗೆ ಗುಣಗಾನ ಮಾಡಿದ ಸುಪ್ರೀಂಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು, ಕಾರ್ಯಕ್ರಮ ಮುಗಿದ ಬಳಿಕ ಮಹಿಳೆಯು ಕುಳಿತಿದ್ದ ಸ್ಥಳಕ್ಕೆ ತೆರಳಿ, ಬಂಜಾರ ಕಲೆ ಮತ್ತು ಸಂಸ್ಕೃತಿ ಬಗ್ಗೆ ಆಸಕ್ತಿಯಿಂದ ತಿಳಿದುಕೊಂಡರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಾಧೀಶ ಆರ್. ದೇವದಾಸ್, ಕರ್ನಾಟಕ ಸರ್ಕಾರದ ಅಟ್ವೋಕೇಟ್ ಜನರಲ್ ಪ್ರಭುಲಿಂಗ್ ನಾವಲಗಿ ಇದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಂಕರೇಗೌಡ, ಕಲಬುರಗಿ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್‌ಗಳಾದ ವಿಜಯ್ ಮತ್ತು ಶ್ರೀನಿವಾಸ್ ಸುವರ್ಣ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಧೀಶ ಗೌರವಾನ್ವಿತ ಕೆ. ಸುಬ್ರಮಣ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಶಾಂತ್ ಮಹಾವೀರ್ ಚೌಗುಲೆ, ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯು. ಚಂದ್ರನಾಯಕ್, ಜಿಲ್ಲಾಧಿಕಾರಿ ವಿ,ವಿ, ಜ್ಯೋತ್ಸ್ನಾ, ಜಿ.ಪಂ.ಸಿಇಓ ದಿಲೀಶ್ ಶಶಿ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಕಲಬುರಗಿ ಮಹಾನಗರ ಪಾಲಿಕೆಯ ಕಮೀಷನರ್ ಸ್ನೇಹಲ್ ಸುಧಾಕರ್ ಲೋಖಂಡೆ, ಕಲಬುರಗಿ ಹೈಕೋರ್ಟ್‌ನ ಹಿರಿಯ ಅಧಿಕಾರಿಗಳು, ಬಾರ್ ಅಸೋಸಿಯೇಶನ್‌ನ ಪದಾಧಿಕಾರಿಗಳು, ವಕೀಲರು, ಕಾನೂನು ವಿದ್ಯಾರ್ಥಿಗಳು, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮುಂತಾದವರು ಇದ್ದರು.