ವಾಡಿ: ದೇಶದ ಯುವಜನರನ್ನು ಕಾಡುತ್ತಿರುವ ನಿರುದ್ಯೋಗ ಎಂಬ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಉದ್ಯೋಗ ಕ್ರಾಂತಿಯ ಘೋಷಣೆಯೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಯುವಜನರನ್ನು ಬೀದಿ ಭಿಕ್ಷುಕರಂತೆ ಕಂಡಿವೆ. ಉದ್ಯೋಗ ಮೂಲಭೂತ ಹಕ್ಕಾಗಲು ಒತ್ತಾಯಿಸಿ ಅ.೩೦ ರಂದು ವಾಡಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಭವನದಲ್ಲಿ ೮ನೇ ಜಿಲ್ಲಾ ಮಟ್ಟದ ಯುವಜನ ಸಮ್ಮೇಳನ ನಡೆಯಲಿದೆ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನಗರಾಧ್ಯಕ್ಷ ಮಲ್ಲಿನಾಥ ಹುಂಡೇಕಲ್ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಹುಂಡೇಕಲ್, ದೇಶದಲ್ಲಿ ರೈತರು, ಯುವಜನರು, ಮಹಿಳೆಯರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತಮ್ಮದೇಯಾದ ಬೇಡಿಕೆಗಳಿಗಾಗಿ ಕಳೆದ ಏಳು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಬೆಳೆಗೆ ಬೆಲೆ ಸಿಗದೆ ರೈತರು ಸಾವಿನ ಮನೆಯ ಕದತಟ್ಟುತ್ತಿದ್ದಾರೆ. ಅತ್ಯಾಚಾರ, ದೌರ್ಜನ್ಯ, ಶೋಷಣೆಗಳಿಂದ ಮಹಿಳೆಯರು ಜರ್ಜರಿತರಾಗಿದ್ದಾರೆ. ಶಿಕ್ಷಣ ಮಾರಾಟದ ವಸ್ತುವಾಗಿ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಯುವಜನರು ಮತ್ತು ಕಾರ್ಮಿಕರು ನಿರುದ್ಯೋಗ ಎಂಬ ಪೆಡಂಭೂತಕ್ಕೆ ಬದುಕು ಬಲಿ ನೀಡುತ್ತಿದ್ದಾರೆ. ಸರ್ಕರಗಳು ಹೋರಾಟಗಳಿಗೆ ಕಿಮ್ಮತ್ತು ನೀಡದೆ ಮೊಂಡುತನ ಪ್ರದರ್ಶಿಸುತ್ತಿವೆ. ಇದರ ನಡುವೆಯೂ ಯುವಜನರು ಸಂಘಟಿತವಾಗಿ ಘರ್ಜಿಸುವ ಮೂಲಕ ಸರ್ಕಾರಗಳನ್ನು ನಡುಗಿಸಿದ್ದಾರೆ ಎಂದರು.
ಚುನಾವಣೆಗಳಲ್ಲಿ ಬಣ್ಣ ಬಣ್ಣದ ಕನಸುಗಳನ್ನು ತೋರಿಸುವ ಭ್ರಷ್ಟ ರಾಜಕಾರಣಿಗಳು, ಅಧಿಕಾರಕ್ಕೇರಿದ ಬಳಿಕ ದೇಶದ ಜನರನ್ನು ತುಳಿಯುವ ವ್ಯಸ್ಥಿತ ತಂತ್ರಗಳನ್ನು ಹೆಣೆಯುತ್ತಾರೆ. ನಿರುದ್ಯೋಗ, ಅಶ್ಲೀಲ ಸಿನೆಮಾ ಸಾಹಿತ್ಯ, ಕ್ರೌರ್ಯ, ಜೂಜಾಟ, ಮದ್ಯ, ಮಾದಕ ವಸ್ತುಗಳನ್ನು ಮುಂದಿಟ್ಟು ಯುವಜನರ ಭವಿಷ್ಯ ನರಕಗೊಳಿಸುತ್ತಿದ್ದಾರೆ. ಶ್ರಮಾದಾರಿತ ಕಾರ್ಖಾನೆಗಳ ಸ್ಥಾಪನೆಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಉದ್ಯೋಗ ನೀಡುವ ಹೆಸರಿನಲ್ಲಿ ಅರ್ಜಿ ಶುಲ್ಕ ಮೂಲಕ ಸುಲಿಗೆ ಮಾಡಲಾಗುತ್ತಿದೆ. ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಕೊಳ್ಳುವಲ್ಲಿ ಆಸಕ್ತಿ ತೋರುತ್ತಿಲ್ಲ.
ಇರುವ ಹುದ್ದೆಗಳನ್ನು ಕಡಿತಗೊಳಿಸುವ ಹುನ್ನಾರ ಸರ್ಕಾರಗಳದ್ದಾಗಿದೆ. ಕೆಪಿಎಸ್ಸಿ ನೇಮಕಾತಿಯಲ್ಲೂ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ಪಾರದರ್ಶಕ ನೇಮಕಾತಿ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಲ್ಲಿನಾಥ ಹುಂಡೇಕಲ್, ಈ ಎಲ್ಲಾ ಸಮಸ್ಯೆಗಳ ವಿರುದ್ಧ ಯುವಜನರ ಹೋರಾಟ ಪ್ರಬಲಗೊಳಿಸುವ ಉದ್ದೇಶದಿಂದ ಒಂದು ದಿನದ ಯುವಜನ ಸಮ್ಮೇಳನ ನಡೆಯುತ್ತಿದೆ.
ಜಿಲ್ಲೆಯ ವಿವಿಧೆಡೆಯಿಂದ ಯುವಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, ಎಐಡಿವೈಒ ರಾಜ್ಯಾಧ್ಯಕ್ಷೆ ಉಮಾದೇವಿ, ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ರಾಜ್ಯ ನಾಯಕ ಆರ್.ಕೆ.ವೀರಭದ್ರಪ್ಪ, ಜೇವರ್ಗಿ ಸರಕಾರಿ ಕಾಲೇಜಿನ ಉಪನ್ಯಾಸಕ ಡಾ.ಕರಿಗೂಳೇಶ್ವರ ಸೇರಿದಂತೆ ಎಐಡಿವೈಒ ಜಿಲ್ಲಾ ನಾಯಕರು ಸಮ್ಮೇಳನದಲ್ಲಿ ಪಾಲ್ಗೊಂಡು ವಿಚಾರ ಮಂಡಿಸಲಿದ್ದಾರೆ ಎಂದು ವಿವರಿಸಿದರು. ಎಐಡಿವೈಒ ನಗರ ಸಮಿತಿ ಉಪಾಧ್ಯಕ್ಷ ರಾಜು ಒಡೆಯರಾಜ್, ಕಾರ್ಯದರ್ಶಿ ಗೌತಮ ಪರತೂರಕರ ಸುದ್ದಿಗೋಷ್ಠಿಯಲ್ಲಿದ್ದರು.