ಆಳಂದ: ಕನ್ನಡ ನಾಡು ನುಡಿ, ಭಾಷೆಯ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಕನ್ನಡ ಕಾವಲುಗಾರರಾಗಿ ನಿಲ್ಲಬೇಕಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ನಾಡು ಶ್ರೀಗಂಧದ ನಾಡು, ಕರುನಾಡು ಕನ್ನಡಾಂಭೆಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುತ್ತದೆ. ಹಚ್ಚು ಹಸಿರಿನಿಂದ ಸುಂಧರ ಬೆಟ್ಟ ಗುಡ್ಡಗಳಿಂದ ನದಿಗಳ ಹರಿಯುವ ಸಾಧು ಸಂತರ, ದಾಸರ, ಶಿವಶರಣರು ಕವಿಗಳಿಂದ ಕಂಗೋಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿಯಾಗಿದೆ ಅದನ್ನು ಉಳಿವಿಗಾಗಿ ಶ್ರಮಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಕನ್ನಡಕ್ಕಾಗಿ ರಾಜ್ಯ ಸರ್ಕಾರವು ಕನ್ನಡ ಅಭಿಯಾನ ನಡೆಸಿ ಕನ್ನಡ ಕಂಪು ಹರಿಸಿದೆ. ನಾವೆಲ್ಲರೂ ಸಹ ನವೆಂಬರ್ ಕನ್ನಡಿಗರಾಗದೇ ಕನ್ನಡ ನಾಡಿನ ಜವಾಬ್ದಾರಿಯುತ್ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುವುದು, ಬರೆಯುವುದು ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಕನ್ನಡೇರತರಿಗೆ ಕನ್ನಡ ಕಲಿಸುತ್ತೇನೆ ಕನ್ನಡ ನುಡಿ ಸಂಸ್ಕೃತಿ ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇನೆ ಎಂದು ಪ್ರಮಾಮಾಡಿ ಮುನ್ನೆಡೆಯಬೇಕಾಗಿದೆ ಎಂದು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಕೆ. ಶೀಲವಂತ ಅವರು ಮಾತನಾಡಿ, ಕನ್ನಡ ನಾಡು, ನುಡಿ ಭಾಷೆಯ ದೊಡ್ಡ ಇತಿಹಾಸ ಪರಂಪರೆಯನ್ನು ಹೊಂದಿದೆ. ಪ್ರತಿಯೊಬ್ಬರು ಕನ್ನಡ ಸ್ವಾಭಿಮಾನಿಗಳಾಗಿ ಅದರ ಶ್ರೇಯೋಭಿವೃದ್ಧಿಗೆ ಕಂಕಣಬದ್ಧರಾಗಿ ಶ್ರಮಿಸಿದಾಗ ಮಾತ್ರ ಕನ್ನಡ ಭಾಷೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಬೇಕಾಗಿದೆ ಎಂದರು.
ಉಪನ್ಯಾಸಕ ಸಂಜಯ ಪಾಟೀಲ ಅವರು ಮಾತನಾಡಿ, ಜಗತ್ತಿನ ೫ ಸಾವಿರ ಭಾಷೆಗಳಲ್ಲಿ ಕೇವಲ ೧೧ ಭಾಷೆಗಳಿಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದರ ಪೈಕಿ ಕನ್ನಡ ಭಾಷೆಯೂ ಒಂದಾಗಿದೆ. ಇಂಥ ಇತಿಹಾಸ ಪರಂಪರೆಯನ್ನು ನಾವು ಉಳಿಸಿ ಬೆಳೆಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಚಂದ್ರಕಾಂತ (ಈರಣ್ಣಾ) ಹತ್ತರಕಿ, ಉಪಸ್ಥಿತರಿದ್ದರು.
ಗ್ರೇಡ್-೨ ತಹಸೀಲ್ದಾರ ಬಸವರಾಜ ರಕ್ಕಸಗಿ, ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಕೋರಳ್ಳಿ, ತಾಲೂಕು ಅಧ್ಯಕ್ಷ ನಾಗರಾಜ ಘೋಡಕೆ, ಕರವೇ ಅಧ್ಯಕ್ಷ ಲಕ್ಷ್ಮೀಕಾಂತ ಉದನೂರ, ಬೀರಣ್ಣಾ ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ, ಡಾ| ಸಂಜಯ ರೆಡ್ಡಿ, ಶಣಗೌಡ ಪಾಟೀಲ, ಕ್ಷೇತ್ರಶಿಕ್ಷಣಾಧಿಕಾರಿ ಬಸಂತಾಬಾಯಿ ಹಕ್ಕಿ, ಬಸವರಾಜ ಕಾಳೆ, ಎಇಇ ಚಂದ್ರಮೌಳಿ ಮತ್ತಿತರು ಪಾಳ್ಗೊಂಡಿದ್ದರು.
ತಹಸೀಲ್ದಾರರು ಮತ್ತು ಉತ್ಸವ ಸಮಿತಿ ಅಧ್ಯಕ್ಷ ಯಲ್ಲಪ್ಪ ಸುಬೇದಾರ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಕಲ್ಲಪ್ಪ ಬಿಜ್ಜರ್ಗಿ ನಿರೂಪಿಸಿದರು. ಸರ್ಕಾರಿ ಕನ್ಯಾ ಪ್ರೌಢಶಾಲೆಯ ಸಂಗೀತ ಶಿಕ್ಷಕ ಶಂಕರ ಹೂಗಾರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ವಿಜಯಕುಮಾರ ಕೋಥಳಿಕರ್ ಕನ್ನಡ ಗೀತೆ ಹಾಡಿದರು.