ಉಡುಪಿ:- ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ 12 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಕನ್ನಂಗಾರ್, ಕಾರ್ಕಳ, ಕಾಪು ಹಾಗೂ ಉಡುಪಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಸಂದೇಶ ಮಾತುಗಳನ್ನಾಡಿದ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ನಾಯಕರು ಕ್ಯಾಂಪಸ್ ಫ್ರಂಟ್ ಸ್ಥಾಪನೆಗೊಂಡು ಇಂದಿಗೆ 12 ವರ್ಷಗಳು ಪೂರ್ಣಗೊಳ್ಳುತ್ತಿದ್ದು ಈ ಶುಭ ಸಂದರ್ಭವೂ ನಮ್ಮ ಸಂಘಟನೆಯ ಪ್ರಭಾವ ಮತ್ತು ಬೆಳವಣಿಗೆಯ ಕುರಿತು ಅರಿತಾಗ ತುಂಬಾ ಸಂತೋಷವಾಗುತ್ತದೆ ಮತ್ತು ಅದರ ಜೊತೆಗೆ ಮುಂದಿನ ಸವಾಲುಗಳನ್ನು ಎದುರಿಸುವ ಕುರಿತು ಹುಮ್ಮಸ್ಸು ತುಂಬುತ್ತೆ.
ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಖ್ಯಾತೆ ಪಡೆದ ಭಾರತದಲ್ಲಿ ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ ಎಂಬ ಆತಂಕಕಾರಿ ಕೂಗುಗಳು, ಧ್ವನಿಗಳು ಮೊಳಗುತ್ತಿರುವುದಕ್ಕೆ ವಿಶ್ವವೇ ಸಾಕ್ಷಿಯಾಗಿದೆ.
ದೇಶ ಮತ್ತು ರಾಜ್ಯವನ್ನು ಆಳುತ್ತಿರುವ ಸರಕಾರಗಳು ಸಂವಿಧಾನದ ಪ್ರತಿಜ್ಞೆಯೊಂದಿಗೆ ಅಧಿಕಾರ ವಹಿಸಿಕೊಂಡ ಬಳಿಕ ಅದೇ ಸಂವಿಧಾನವನ್ನು ಬುಡಮೇಲುಗೊಳಿಸುವ ಹುನ್ನಾರದಲ್ಲಿ ತೊಡಗಿರುವಾಗ, ಸಂವಿಧಾನವನ್ನು ಉಳಿಸಿದರೆ ಮಾತ್ರ, ದೇಶ ಉಳಿಯಬಲ್ಲದು ಎಂಬ ಆಲೋಚನೆಯೊಂದಿಗೆ ಸರಕಾರ ಜಾರಿಗೆ ತರುವ ಜನವಿರೋಧಿ ನೀತಿಗಳನ್ನು, ಸಂವಿಧಾನ ವಿರೋಧಿ ಕಾಯ್ದೆಗಳನ್ನು, ವಿದ್ಯಾರ್ಥಿ ವಿರೋಧಿ ತೀರ್ಮಾನಗಳ ವಿರುದ್ಧ ರಾಜಿ ರಹಿತ ಹೋರಾಟದೊಂದಿಗೆ ಕ್ಯಾಂಪಸ್ ಫ್ರಂಟ್ ಮುಂದೆ ಸಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾಧ್ಯಕ್ಷರಾದ ಅಸೀಲ್ ಅಕ್ರಮ್,ಕಾರ್ಯದರ್ಶಿ ಸಾಧಿಕ್, ಜಿಲ್ಲಾ ಮುಖಂಡರಾದ ಝಂಝಂ, ಉಪಾಧ್ಯಕ್ಷರಾದ ಅರ್ಫಾಝ್,ಉಪಕಾರ್ಯದರ್ಶಿ ನಿದಾ ಅಫ್ರಾ,ಜಿಲ್ಲಾ ಸಮಿತಿ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.