ಸುರಪುರ: ರಾಜ್ಯದಲ್ಲಿನ ಇಂಜಿನಿಯರಿಂಗ್ ಸೀಟುಗಳ ಶುಲ್ಕ ಹೆಚ್ಚಳವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡರು ನಗರದ ತಹಸೀಲ್ ಕಚೇರಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕಳೆದ ಕೆಲ ದಿನಗಳ ಹಿಂದೆ ಉನ್ನತ ಶಿಕ್ಷಣ ಸಚಿವರು ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕದಲ್ಲಿ ಯಾವುದೇ ಹೆಚ್ಚಳವಿಲ್ಲ ಹಿಂದಿನಂತೆಯೇ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು.ಆದರೆ ಸರಕಾರಿ ಸೀಟುಗಳ ಶುಲ್ಕ ೬೨ ಸಾವಿರ ಬೋಧನಾ ಶುಲ್ಕ ಇರಲಿದೆ ಇದರ ಜೊತೆಗೆ ೨೦ ಸಾವಿರ ರೂಪಾಯಿಗಳ ಇತರೆ ಶುಲ್ಕ ಮತ್ತು ಸ್ಕಿಲ್ ಲ್ಯಾಬ್ ಸೌಲಭ್ಯಕ್ಕಾಗಿ ೧೦ ರಿಂದ ೨೦ ಸಾವಿರ ರೂಪಾಯಿಗಳ ವರೆಗೆ ಶುಲ್ಕ ಹೆಚ್ಚುವರಿ ವಸೂಲಿಗೆ ಸರ್ಕಾರ ಅವಕಾಶ ನೀಡಿದೆ,ಇದರಿಂದಾಗಿ ಸುಮಾರು ೪೦ ಸಾವಿರ ರೂಪಾಯಿವರೆಗೆ ಶುಲ್ಕ ಹೆಚ್ಚುವರಿಯಾಗಿ ಪರೋಕ್ಷವಾಗಿ ನೀಡಬೇಕಾಗುತ್ತಿದೆ.
ಕೋವಿಡ್ ಸಂಕಷ್ಟದಿಂದ ಹೈರಾಣಾಗಿರುವ ಬಡ ಕುಟುಂಬಗಳು ಈಗ ಮಕ್ಕಳ ಪೋಷಕರಿಗೆ ಹೆಚ್ಚಿನ ಶುಲ್ಕ ಕೊಡುವುದು ಸಾಧ್ಯವಾಗದೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ.ಇದನ್ನು ಎಬಿವಿಪಿ ಖಂಡಿಸುತ್ತದೆ.ಆದ್ದರಿಂದ ಕೂಡಲೇ ಸರಕಾರ ಹೆಚ್ಚುವರಿ ಶುಲ್ಕ ವಿಧಿಸಿ ಹೊರಡಿಸಿರುವ ಆದೇಶ ಹಿಂಪಡೆಯಬೇಕು ಇಲ್ಲವಾದಲ್ಲಿ ಎಬಿವಿಪಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂತರ ಸರಕಾರಕ್ಕೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಪರಿಷತ್ ನಗರ ಉಪಾಧ್ಯಕ್ಷ ಹಣಮಂತ ಸಿಂಘೆ,ನಗರ ಸಹ ಕಾರ್ಯದರ್ಶಿ ಹುಲಗಪ್ಪ ಮೇದಾ,ಭೀಮು ರತ್ತಾಳ,ಶರಣು ಕನ್ನೆಳ್ಳಿ,ಸಂತೋಷ,ಮೌನೇಶ,ಮರೆಣ್ಣ,ಸೋಫಿ,ತನುಶ್ರೀ,ಅನು ಸೇರಿದಂತೆ ಅನೇಕರಿದ್ದರು.