ಅವಸಾನಗೊಂಡ ಆತ್ಮಸಾಕ್ಷಿಗಳೂ ಮತ್ತು ’ಜೈಭೀಮ್’ ಸಿನೆಮಾವೂ..!

0
26
  • # ಕೆ.ಶಿವು.ಲಕ್ಕಣ್ಣವರ

ತನ್ನನ್ನು ನಾಗರಿಕ ಎಂದು ಕರೆದುಕೊಳ್ಳುವ ಸಮಾಜದಲ್ಲಿ ಪೂರ್ವಗ್ರಹಗಳಿದ್ದಲ್ಲಿ ಅವುಗಳನ್ನು ಮೂರು ತಾಸು ಬದಿಗೆ ಸರಿಸಿ ಮನಸ್ಸು ತೆರೆದು ’ಜೈ ಭೀಮ್’ ಚಲನಚಿತ್ರವನ್ನು ಅದರ ಎಲ್ಲ ಮಿತಿಗಳೊಂದಿಗೆ ಒಮ್ಮೆ ನೋಡುವುದು ಒಳಿತು ಎಂಬುದೇ ನನ್ನ ಅಭಿಪ್ರಾಯ. ನಾನು ಮೊನ್ನೆ ಮತ್ತೊಮ್ಮೆ ‘ಜೈಭೀಮ್’ ಸಿನಿಮಾವನ್ನು ನೋಡಿದೆ. ಆಗ ಬತ್ತಿ ಹೋಗಿರಬಹುದಾದ ಅಂತಃಕರಣದ ಸೆಲೆಗಳು ಮತ್ತೆ ಮತ್ತೇ ಜಿನುಗಿದವು..!

ಕ್ರೂರ ಜಾತಿ ವ್ಯವಸ್ಥೆಯ ಧೂರ್ತ ಹುನ್ನಾರಗಳಿಗೆ ಕೊನೆ ಮೊದಲಿಲ್ಲ. ಮೇಲು ಕೀಳಿನ ಹಾಲಾಹಲವನ್ನು ತುಂಬಿ ತುಳುಕಿಸುವ ಜಾತಿ ಪದ್ಧತಿ ಹಿಂದೂ ಸಮಾಜದ ವೈಶಿಷ್ಟ್ಯವೂ ಆಗಿದೆ. ಮನುಷ್ಯನೇ ಮನುಷ್ಯನನ್ನು ಹಿಂಸಿಸಿ ಅವಮಾನಿಸಿ ಮೃಗದಂತೆ ಬೇಟೆಯಾಡಿ ಕೊಲ್ಲುವ ಕ್ರೌರ್ಯದ ಅತೀ ಅಮಾನುಷ ನಿರ್ಮಿತಿಯಿವು ಎಂದು ಅನ್ನಿಸಿತು ನನಗೆ.

Contact Your\'s Advertisement; 9902492681

’ಜೈ ಭೀಮ್’ ಚಲನಚಿತ್ರದ ಮೊದಲ ದೃಶ್ಯವೇ ’ನಾಗರಿಕ’ ಸಮಾಜದ ಕರಾಳ ಮುಖದ ಕುರೂಪವನ್ನು ತೆರೆದು ತೋರಿಸುತ್ತದೆ. ಬಿಡುಗಡೆಯಾದ ಕೈದಿಗಳನ್ನು ಜೈಲಿನ ಆವರಣದಲ್ಲಿ ಪೊಲೀಸರು ಅವರವರ ಜಾತಿಯ ಆಧಾರದ ಮೇಲೆಯೇ ಪ್ರತ್ಯೇಕಗೊಳಿಸಿ ನಿಲ್ಲಿಸುತ್ತಾರೆ.

ಬಲಿಷ್ಠ ಜಾತಿಯವರನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ದಲಿತರು ಮತ್ತು ಆದಿವಾಸಿಗಳನ್ನು ಉಳಿಸಿಕೊಂಡು ಅವರು ಮಾಡಿಯೇ ಇಲ್ಲದ ಹೊಸ ಆಪಾದನೆಗಳನ್ನು ಹೇರಲಾಗುತ್ತದೆ. ನಿಜವಾದ ಅಪರಾಧಿಗಳು ಪತ್ತೆಯಾಗದೇ ಬಾಕಿ ಉಳಿದಿರುವ ಕೇಸುಗಳಲ್ಲಿ ಇವರನ್ನು ಸಿಲುಕಿಸಿ ಪುನಃ ಜೈಲಿಗೆ ಅಟ್ಟಲಾಗುತ್ತದೆ. ಬಗೆ ಹರಿಸಲಾಗದೇ ಬಾಕಿ ಉಳಿಸಿರುವ ಕೇಸುಗಳಲ್ಲಿ ಈ ಅತಿ ದೀನರನ್ನು ಇರುಕಿಸಲಾಗುತ್ತದೆ. ಹೀಗೆಯೇ ಬಲಿಪಶುಗಳನ್ನು ಪೂರೈಕೆ ಮಾಡುವ ಜೈಲರನ ಜೇಬುಗಳನ್ನು ಪೊಲೀಸರೇ ಭರ್ತಿ ಮಾಡುತ್ತಾರೆ.

ತಮಿಳುನಾಡಿನಲ್ಲಿ ಇರುಳರೆಂದೂ, ಕರ್ನಾಟಕದಲ್ಲಿ ಇರುಳಿಗರೆಂದೂ ಕರೆಯಲಾಗುವ ಈ ಸಮುದಾಯ ಅತ್ಯಂತ ಹಿಂದುಳಿದ ಬುಡಕಟ್ಟಿಗೆ ಸೇರಿದವರು. ಹಾವು ಹಿಡಿದು ಕಾಡಿಗೆ ಬಿಡುವ ಮತ್ತು ಹಾವಿನ ವಿಷಕ್ಕೆ ಔಷಧಿ ಕೊಡುವ ಈ ಜನರು ಹೊಲಗದ್ದೆಗಳಲ್ಲಿ ಫಸಲು ಮುಕ್ಕುವ ಇಲಿಗಳ ಹಿಡಿಯುವವರು.

ಬ್ರಿಟಿಷ್ ಸರ್ಕಾರದಿಂದ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡಿದ್ದ ಹಲವಾರು ಜಾತಿಗಳು ಮತ್ತು ಬುಡಕಟ್ಟುಗಳ ಪೈಕಿ ಇರುಳರೂ ಸೇರಿದ್ದಾರೆ. ಎರಡು ಹೊತ್ತಿನ ಅನ್ನಕ್ಕೆ ಮತ್ತು ಗೇಣು ಬಟ್ಟೆಗೆ ಗಳಿಸುವಲ್ಲೇ ಮುಗಿದು ಹೋಗುವ ದೀನರ ಬದುಕುಗಳು ಇವರದು.

ಇರುಳಿಗರನ್ನು ಮತ್ತು ಇವರಂತಹ ಅಸಂಖ್ಯ ತಬ್ಬಲಿ ಜಾತಿಗಳನ್ನು ಸವರ್ಣೀಯ ಸಮಾಜ ಮತ್ತು ನಮ್ಮ ಅಪರಾಧ ನ್ಯಾಯಾಂಗ ವ್ಯವಸ್ಥೆ (Criminal Justice System) ನಡೆಸಿಕೊಳ್ಳುವ ಪರಿ ಅತೀ ಅಮಾನುಷವಾದುದು. ದಿಕ್ಕಿಲ್ಲದ ನಾಯಿ, ನರಿಗಳು, ಹುಳು ಹುಪ್ಪಟೆಗಳಿಗಿಂತಲೂ ಕೀಳಾಗಿ ಹುಟ್ಟಿ ಸಾಯುವ ಇವರನ್ನು ಮನುಷ್ಯರೆಂದು ಬಗೆದೇ ಇಲ್ಲ.

ಹಾಗೆಂದೇ ಮಾನವ ಹಕ್ಕುಗಳು ಎಂಬ ಪರಿಕಲ್ಪನೆ ಇವರನ್ನು ದೂರದಿಂದಲೂ ಮುಟ್ಟುವುದಿಲ್ಲ. ಇವರ ಭಾರತವೇ ಬೇರೆ. ಅದು ಕತ್ತಲ ಭಾರತವು. ಅದೃಶ್ಯ ಭಾರತ. ನಾಗರಿಕ ಎಂದು ಹೇಳಲಾಗುವ ಅನಾಗರಿಕ ಸಮಾಜದ ಕುರುಡುಗಣ್ಣಿಗೆ, ಕಿವುಡುಗಿವಿಗೆ, ಸತ್ತ ನಾಲಗೆಗೆ, ಅವಸಾನಗೊಂಡ ಆತ್ಮಸಾಕ್ಷಿಯನ್ನು ಆರ್ತತೆ, ಅಸಹಾಯಕತೆಯಿಂದ ನೋಡುವ ಆದಿವಾಸಿ ಮತ್ತು ದಲಿತರ ಭಾರತವು.

‘ಜೈ ಭೀಮ್’ ಚಲನಚಿತ್ರದ ಕ್ರೌರ್ಯವನ್ನು ಛತ್ತೀಸಗಢ ಮತ್ತು ಝಾರ್ಖಂಡದಂತಹ ಆದಿವಾಸಿ ಬಹುಳ ಸೀಮೆಯಂತೂ ಅನವರತ ಎದುರಿಸುತ್ತ ಬಂದಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ನೆಲೆಸಿರುವ ಹೊಲಗದ್ದೆಗಳಲ್ಲಿ ಇಲಿ ಹಿಡಿದು ತಿನ್ನುವ ಮೂಸಾಹರ ಎಂಬ ಅತಿ ದಲಿತ ಜಾತಿಯೊಂದಿದೆ. ಅದರಲ್ಲಿ ಅಕ್ಷರಸ್ಥರ ಪ್ರಮಾಣ ಶೇಕಡಾ ಮೂರು.

ಇದೇ ಗತಿ ಮುಂದುವರೆದರೆ ಈ ಜಾತಿ ಸಂಪೂರ್ಣ ಸಾಕ್ಷರವಾಗಲು ನಾಲ್ಕು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಬೇಕಾದೀತಂತೆ..! ಮೂಸಾಹರರೊಂದಿಗೆ ಇರುಳರೂ ಸೇರಿದಂತೇ ಇನ್ನೂ ನೂರಾರು ಜಾತಿಗಳು ಮತ್ತು ಬುಡಕಟ್ಟುಗಳು ಈ ಪಟ್ಟಿಗೆ ಸೇರುವುದು ನಿಶ್ಚಿತವಾಗಿದೆ.

ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು Annihilation of Caste ನ ಎಂಟನೆಯ ಅಧ್ಯಾಯದಲ್ಲಿ ಆದಿವಾಸಿಗಳ ದುಸ್ಥಿತಿಯ ಕುರಿತು ಎತ್ತಿರುವ ಪ್ರಶ್ನೆಯೊಂದು ಹೀಗಿದೆಯೂ–

“ಆದಿವಾಸಿಗಳನ್ನು ಇವ ನಮ್ಮವನೆಂದು ತಬ್ಬಿಕೊಂಡು ಪ್ರೀತಿಸಲು ಹಿಂದೂ ಸಮಾಜ ಮುಂದಾಗಲೇ ಇಲ್ಲ. ಬದುಕಿಡೀ ಜಾತಿ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದೇ ಹಿಂದುವಿನ ಪರಮ ಉದ್ದೇಶವಾಗಿದ್ದಾಗ ಈ ಕೆಲಸ ಮಾಡಲು ಹಿಂದುವಿಗೆ ಹೇಗೆ ಸಾಧ್ಯವಾದೀತು”.!?

1871 ರಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ ಕ್ರಿಮಿನಲ್ ಟ್ರೈಬ್ಸ್ ಕಾಯಿದೆಯನ್ನು 1951 ರಲ್ಲಿಯೇ ರದ್ದು ಮಾಡಲಾಗುತ್ತದೆ. ಆದರೆ ಕಾಗದದ ಮೇಲೆ ಮಾತ್ರವೇ ರದ್ದಾಗಿರುವ ಈ ಕಾಯಿದೆಯನ್ನು ಪೊಲೀಸ್ ವ್ಯವಸ್ಥೆ ಜೀವಂತವಾಗಿ ಇರಿಸಿಕೊಂಡಿದೆ. ಕ್ರಿಮಿನಲ್ ಟ್ರೈಬ್ಸ್ ಹಣೆಪಟ್ಟಿ ಹಚ್ಚಲಾಗಿದ್ದ ನೂರಾರು ಬುಡಕಟ್ಟುಗಳ ಅಮಾಯಕ ಜನರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದೆ.

ಅವರು ಮಾಡದೆಯೇ ಇರುವ ಅಪರಾಧಗಳಲ್ಲಿ ಬಂಧಿಸಿ ಜೈಲುಗಳಲ್ಲಿ ಚಿತ್ರಹಿಂಸೆ ಮಾಡಿ, ಅವರಿಂದ ಬಲವಂತದಿಂದ ಹುಸಿ ತಪ್ಪೊಪ್ಪಿಗೆ ಪತ್ರ ಪಡೆದು, ಅದನ್ನು ನ್ಯಾಯಾಲಯಗಳಲ್ಲಿ ಮಂಡಿಸಿ, ಶಿಕ್ಷೆ ಕೊಡಿಸಿ ಜೈಲುಗಳ ನರಕಕ್ಕೆ ನೂಕಲಾಗುತ್ತಿದೆ. ಚಿತ್ರವಧೆಯ ಹಂತದಲ್ಲೇ ಪ್ರಾಣ ಬಿಡುವ ದಿಕ್ಕಿಲದವರ ಲೆಕ್ಕವಿಲ್ಲ.

ಅಮಾಯಕ ಅನಕ್ಷರಸ್ಥ ತಬ್ಬಲಿ ಜನಾಂಗಗಳ ಈ ಚಿತ್ರವಧೆಯ ರಕ್ತ ನಾಗರಿಕ ಸಮಾಜದ ಕೈಗಳನ್ನು ಮೆತ್ತಿ ತೊಟ್ಟಿಕ್ಕುತ್ತಿದೆ. ಕಣ್ಣುಮುಚ್ಚಿ ಲೋಲುಪತೆಯಲ್ಲಿ ಮೈಮರೆತಿರುವ ಈ ಜಾತಿ ವ್ಯಾಧಿಪೀಡಿತ ಸಮಾಜದ ಆತ್ಮಸಾಕ್ಷಿ ಸಾವಿರಾರು ವರ್ಷಗಳ ಅಂಧ ಅಮಾನುಷ ಪರಂಪರೆಯಡಿ ಹೂತು ಹೋಗಿದೆ.

ರಾಷ್ಟ್ರೀಯ ಚಿತ್ರಹಿಂಸೆ ವಿರೋಧೀ ಆಂದೋಲನದ (National Campaign Against Torture) ಅಧ್ಯಯನದ ಪ್ರಕಾರ ದಿನಂಪ್ರತಿ ಸರಾಸರಿ ಐವರು ಬಂಧಿತರು ಪೊಲೀಸ್ ವಶದಲ್ಲಿ ಚಿತ್ರಹಿಂಸೆಯಿಂದ ಸಾಯುತ್ತಿದ್ದಾರೆ. 2019 ರಲ್ಲಿ ಹೀಗೆಯೇ ಕಾನೂನು ಪಾಲಕರಿಂದ ’ಕೊಲೆ’ಯಾದವರ ಸಂಖ್ಯೆ 1,723.ಗೂ ಹೆಚ್ಚು.

2020 ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದಾಖಲಿಸಿರುವ ನ್ಯಾಯಾಂಗ ವಶದ ಸಾವುಗಳ ಸಂಖ್ಯೆ 1,569. ಕಾಗದದ ಮೇಲೆಯೇ ಕಡತಗಳಲ್ಲಿ ಅಂಕಿ ಅಂಶಗಳಾಗಿ ಮಾತ್ರವೇ ದಾಖಲಾಗುವ ಈ ಸಾವುಗಳ ಹಿಂದೆಯೇ ಎಂತೆಂತಹ ಕ್ರೌರ್ಯ- ಕಣ್ಣೀರಿನ ಕತೆಗಳಿದ್ದಾವು..!

ಠಾಣೆಗಳಲ್ಲಿ ಜರುಗುವ ಈ ’ಕೊಲೆ’ಗಳ ಬಲಿಪಶುಗಳು ಬಹುತೇಕ ತಳವರ್ಗಗಳಿಗೆ ಸೇರಿದವರು. ದಲಿತರು, ಬುಡಕಟ್ಟು ಜನಾಂಗಗಳವರು ಹಾಗೂ ಮುಸಲ್ಮಾನರು. ಭಾರತ ಸರ್ಕಾರ ಅಪರಾಧಗಳ ಕುರಿತು (ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವರ್ಷ ವರ್ಷವೂ ಅಂಕಿ ಅಂಶಗಳನ್ನು ಪ್ರಕಟಿಸುತ್ತದೆ.

ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಬಡವರು ಮತ್ತು ದಮನಿತರ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವ ದುಷ್ಟತನದ ಒಂದು ಸಣ್ಣ ಉದಾಹರಣೆ ಈ ಅಂಕಿ ಅಂಶಗಳು. ಹಣ ತೆತ್ತು ಉತ್ತಮ ವಕೀಲರನ್ನು ನೇಮಕ ಮಾಡಿಕೊಳ್ಳುವ ಹಣವಂತರು ಮತ್ತು ಬಲಿಷ್ಠರು-ಪ್ರಭಾವಿಗಳನ್ನು ಬಂಧಿಸಿಡುವ ಶಕ್ತಿ ಯಾವ ಜೈಲಿನ ಸಲಾಕೆಗಳಿಗೂ ಇಲ್ಲ.

ಸರ್ಕಾರಿ ಸಂಸ್ಥೆಯೇ ಆಗಿರುವ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಶಿಕ್ಷೆಯಾಗಿ ಸೆರೆವಾಸ ಅನುಭವಿಸಿರುವ ವಿಚಾರಣಾಧೀನ ಕೈದಿಗಳ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಮುಸಲ್ಮಾನರ ಪ್ರಮಾಣ ಶೇಕಡಾ 50.8.ರಷ್ಟು ದೇಶದ ಜನಸಂಖ್ಯೆಯಲ್ಲಿ ಇವರ ಒಟ್ಟು ಪ್ರಮಾಣ ಶೇಕಡಾ 39.4.ರಷ್ಟು.

ಈ ಮೂರೂ ಸಮುದಾಯಗಳೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವುಗಳು. ದಾರಿದ್ರ್ಯದ ತಿರುಗಣಿಗೆ ಸಿಕ್ಕ ಈ ಸಮುದಾಯಗಳು ನಿರುದ್ಯೋಗದ ಉರಿಯನ್ನೂ ಎದುರಿಸುತ್ತ ಬಂದಿವೆ. ಭೂ ಒಡೆತನದ ಬಲವೂ ಇವುಗಳಿಗೆ ಇಲ್ಲ. ಬಲಿಷ್ಠ ಜಾತಿಗಳ ದಮನ ದೌರ್ಜನ್ಯ ಹಿಂಸೆಗಳಲ್ಲಿ ಬೇಯುತ್ತ ಬಂದಿವೆ. ಅಮೆರಿಕೆಯಲ್ಲಿ ಕೂಡ ದಮನಿತ ಜನಾಂಗವಾದ ಕಪ್ಪು ವರ್ಣೀಯರ ಜನಸಂಖ್ಯಾ ಪ್ರಮಾಣ ಶೇಕಡಾ13 ರಷ್ಟಿದೆ. ಆದರೆ ಜೈಲುಗಳಲ್ಲಿ ಕೊಳೆಯುತ್ತಿರುವ ಕಪ್ಪು ಜನರ ಪ್ರಮಾಣ ಶೇ.40 ರಷ್ಟು.

ತಾರತಮ್ಯ ತುಂಬಿ ತುಳುಕಿರುವ ವ್ಯಾಧಿಗ್ರಸ್ತ ಅಸಮಾನ ಸಮಾಜದ ಪ್ರತಿಬಿಂಬವಿದು. ಸ್ವಾತಂತ್ರ್ಯ, ಸಮಾನತೆ, ಸೋದರತೆ ಹೊಂದಿದ ಸಮಾಜ ಮಾತ್ರವೇ ಆರೋಗ್ಯಕರವೂ ಬಲಿಷ್ಠವೂ ಮತ್ತು ಸಮೃದ್ಧವೂ ಆಗಬಲ್ಲದಲ್ಲವೇ.!?

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here