ಸುರಪುರ: ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಮುಖಂಡ ಬಾಬುಗೌಡ ಪಾಟೀಲ ಅಗತೀರ್ಥ ಅವರ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಮತ್ತು ಈಗ ದಾಖಲಾಗಿರುವ ಪ್ರಕರಣಗಳನ್ನು ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಸಮಾಜ ಹಾಗು ಹಾಗೂ ಬಾಬುಗೌಡ ಪಾಟೀಲ ಅಭಿಮಾನಿಗಳ ಬಳಗದಿಂದ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ್ದ ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ಬಾಬುಗೌಡ ಅವರ ಪರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸುಮಾರು 2 ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೀರಶೈವ ಲಿಂಗಾಯತ ಸಮಾಜದ ಮುಖಂಡ ಶಂಕ್ರಣ್ಣ ವಣಿಕ್ಯಾಳ ಮಾತನಾಡಿ, ತಪ್ಪು ಮಾಡದೆ ಇದ್ದರೂ ಅನವಶ್ಯಕವಾಗಿ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ವಿನಾಕಾರಣ ಬಾಬುಗೌಡ ಅವರನ್ನು ಬಂಧಿಸಲಾಗಿದೆ. ಕೆಲ ಪ್ರಭಾವಿ ರಾಜಕೀಯ ವ್ಯಕ್ತಿಗಳು ಪೊಲೀಸ್ ಇಲಾಖೆ ಮೇಲೆ ಒತ್ತಡ ತಂದು ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ. ಅಂತಹ ನಾಯಕರಿಗೆ ಸಮಾಜದ ಜನ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಸಿದರು.
ವೀರಶೈವ ಸಮಾಜ ಎಲ್ಲ ಜನರನ್ನು ಸಮಾನತೆಯಿಂದ ತೆಗೆದುಕೊಂಡು ಹೋಗುವ ಸಮಾಜ. ನಮ್ಮ ಸಮಾಜಕ್ಕೆ ಅನ್ಯಾಯವಾದರೆ ಸಹಿಸಲಾಗದು ನಾವು ಕೈಯಲ್ಲಿ ಲಿಂಗ ಹಿಡಿಯುವ ಕೈಯಲ್ಲಿ ಕತ್ತಿಯು ಇರುತ್ತದೆ ಎಂದು ಆಕ್ರೋಶಗೊಂಡರು.ಅಲ್ಲದೆ ಕೂಡಲೇ ಬಾಬುಗೌಡ ಮೇಲಿನ ಕೇಸಲ್ಲಿ ದಾಖಲಿಸಿರುವ ಕಲಂ ತೆಗೆಯುವಂತೆ ಆಗ್ರಹಿಸಿದರು.
ಬಿಜೆಪಿ ಮುಖಂಡ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಅನೇಕ ವರ್ಷಗಳಿಂದ ಸಮಾಜದ ಜನರಿಗೆ ಅನ್ಯಾಯವಾಗುತ್ತಿದೆ. ಇದನ್ನು ಖಂಡಿಸುತ್ತಾ ಇಂತಹ ಘಟನೆಗಳು ಮುಂದೆ ಆಗದಂತೆ ಸಮಾಜ ಎಚ್ಚರ ವಹಿಸುವ ದೃಷ್ಟಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದು ಆರಂಭ ಮುಂದೆಯೂ ಹೀಗೆಯೆ ಮಾಡಿದಲ್ಲಿ ಇಡೀ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಮಲ್ಲಿಕಾರ್ಜುನರಡ್ಡಿ ಬಾಬುಗೌಡ ಅವರ ಮೇಲಿನ ಸುಳ್ಳು ಪ್ರಕರಣವನ್ನು ಕೈಬಿಡಬೇಕು, ಕೆಂಭಾವಿ ಪಿಎಸ್‍ಐ ಗಜಾನಂದ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಇಲ್ಲದಿದ್ದರೆ 15 ದಿನಗಳಲ್ಲಿ ಕೆಂಭಾವಿ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳುತ್ತೆವೆ ಎಂದು ಎಚ್ಚರಿಸಿದರು.
ನಂತರ ಮನವಿ ಆಲಿಸಿದ ಡಿವೈಎಸ್ಪಿ ಡಾ:ದೇವರಾಜ ಬಿ ಮಾತನಾಡಿ,ತಮ್ಮೆಲ್ಲ ಮನವಿಯನ್ನು ಗಮನಿಸಲಾಗಿದೆ, ಪ್ರಕರಣದ ಕುರಿತು ಪ್ರಾಮಾಣಿಕವಾಗಿ ತನಿಖೆ ನಡೆಸಿ ಈಗ ದಾಖಲಾಗಿರುವ ಕಲಂಗಳ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾವುದು ಎಂದು ಭರವಸೆ ನೀಡಿದರು.ನಂತರ ಗ್ರೇಡ-2 ತಹಸೀಲ್ದಾರ್ ಸೂಫಿಯಾ ಸುಲ್ತಾನ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬಸನಗೌಡ ಯಾಳಗಿ, ಸಿದ್ದರಾಜರೆಡ್ಡಿ ಯಾದಗಿರಿ, ಶರಣಬಸವ ಡಿಗ್ಗಾವಿ, ಬಾಬುಗೌಡ ಹಗರಟಗಿ, ಗೌಡಪ್ಪಗೌಡ ಅರಕೇರಿ, ಶಿವರಾಜ ಬೂದುರ, ಹಳ್ಳೆಪ್ಪಗೌಡ, ಪ್ರಶಾಂತ ಹದನೂರ, ಮಲ್ಲನಗೌಡ ಕುಳಗೇರಿ, ಶರಣಗೌಡ, ಭೀಮರೆಡ್ಡಿ ಬೆಕಿನಾಳ, ಪ್ರಶಾಂತ ದೊಡ್ಡಮನಿ, ವೀರೇಶ ದೇಸಾಯಿ, ಪ್ರಭುಗೌಡ, ಮಲ್ಲನಗೌಡ, ಭೀಮನಗೌಡ, ಚಂದುಶೇಖರ ಡೊಣ್ಣುರು, ಅವಿನಾಶ, ಪ್ರಕಾಶ, ಮಂಜುನಾಥ, ಶಿವು ಕಲಕೇರಿ, ರಾಜು, ಸಿದ್ದಯ್ಯ ಕಡ್ಲೆಪ್ಪಮಠ, ಹಣಮಂತರೆಡ್ಡಿ ಕರಡಕಲ್ ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು.