ಆಳಂದ: ತೊಗರಿ ಬೆಳೆ ಹಾನಿಗೆ ಪರಿಹಾರ ನೀಡಬೇಕು ಹಾಗೂ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ನವ ಕರ್ನಾಟ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡು ತಹಸೀಲ್ದಾರ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ತಾಲೂಕಿನಲ್ಲಿ ಶೇ ೮೦ರಷ್ಟು ಬೆಳೆ ತೊಗರಿ ಮತ್ತಿತರ ಬೆಳೆ ಹಾನಿಯಾಗಿ ರೈತರು ನಷ್ಟದಲ್ಲಿದ್ದಾರೆ. ಕಬ್ಬು ಬೆಳೆಗೆ ಪ್ರತಿಟನ್‌ಗೆ ೨೮೦೦ ರೂ. ಬೆಲೆ ನಿಗದಿ ಹಾಗೂ ಯುನಿವರ್ಸ್‌ಲ್ ಇನ್ಸೂರೆನ್ಸ್ ಕಂಪನಿನಂದ ರೈತರಿಗೆ ಬೆಳೆ ವಿಮೆ ಪಾವತಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಬಸ್ ನಿಲ್ದಾಣದಿಂದ ರಜ್ವಿರೋಡ್ ಮುಖಾಂತರ ತಹಸೀಲ್ದಾರ ಕಚೇರಿಯ ವರೆಗೆ ಪ್ರತಿಭಟನೆ ಕೈಗೊಂಡು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರಿಗೆ ಮನವಿ ಸಲ್ಲಿಸಿದ ಮುಖಂಡರು ಅಕಾಲಿಕ ಮಳೆಯಿಂದ ಹಾಗೂ ಅತಿವೃಷ್ಟಿ ಅನಾವೃಷ್ಟಿ ತೊಗರಿ, ಹೆಸರು, ಉದ್ದು, ಸೋಯಾಭಿನ್, ಹತ್ತಿ ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ ಎಂದರು.
ತಾಲೂಕಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಿಂದ ಕಬ್ಬು ನುರಿಸುವ ಕಾರ್ಯ ನಡೆಯುತ್ತಿದೆ. ಪ್ರತಿಟನ್ ಕಬ್ಬಿಗೆ ೨೮೦೦ ರೂಪಾಯಿ ಬೆಲೆ ನಿಗಧಿ ಪಡಿಸಿ ನೀಡಬೇಕು. ಯುನಿವರ್ಸ್‌ಲ್ ಕಂಪನಿ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಹಾನಿಯ ವಿಮೆ ಮೊತ್ತ ಪಾವತಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ದಯಾನಂದ ಪಾಟೀಲ, ಸಿದ್ಧರಾಮ ಪಾಟೀಲ ಮಾದನಹಿಪ್ಪರಗಾ, ಅಮರನಾಥ ಝಳಕಿ, ಚಂದ್ರಕಾಂತ ವಗ್ಗೆ, ಸಂತೋಷ ಪಾಟೀಲ, ಬಸವರಾಜ ಹಿಪ್ಪರಗಿ ಪಾಲ್ಗೊಂಡಿದ್ದರು.