ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ: ಡಾ. ಮಲ್ಲಿಕಾರ್ಜುನ‌ ಖರ್ಗೆ

0
6

ಕಲಬುರಗಿ: ಕಾಂಗ್ರೆಸ್ ಪಕ್ಷ‌ ಹಣವಂತರಿಗೆ ಮಣೆ ಹಾಕದೆ ಸಾಮಾನ್ಯ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿದೆ. ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿದರೆ, ಎಂತಹ ದುಡ್ಡಿದ್ದವನು ಕೂಡಾ ಧೂಳಿಪಟವಾಗುತ್ತಾನೆ‌ ಎಂದು ರಾಜ್ಯ ಸಭಾ ವಿರೋಧ ಪಕ್ಷದ ನಾಯಕರಾದ  ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದ ಜೈ ಭವಾನಿ ಕಲ್ಯಾಣ ಮಂಟಪದಲ್ಲಿ ಜರುಗಿದ ಕಲಬುರಗಿ ಯಾದಗಿರಿ ವಿಧಾನಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ‌ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲರ ಅನುಭವವನ್ನು‌ ಕೊಂಡಾಡಿದ ಖರ್ಗೆ ಅವರು ಈ ಹಿಂದಿನ‌ ಇತಿಹಾಸ ತೆಗೆದು‌‌ ನೋಡಿದರೆ ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮಾನ್ಯ ಕಾರ್ಯಕರ್ತರಿಗೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದೆ. ಆಗಲೂ ಕೂಡಾ ಹಣವಂತರೆ ನಮ್ಮ ವಿರುದ್ದ ಸ್ಪರ್ಧಿಸಿದ್ದರು. ಆದರೆ ಪಕ್ಷ ಒಂದಾಗಿ ಸಂಘಟನೆಯೊಂದಿಗೆ ಕೆಲಸ ಮಾಡಿ ಗೆದ್ದಿದ್ದೇವೆ ಈಗಲೂ ಕೂಡಾ‌ ಶಿವಾನಂದ ಪಾಟೀಲನಂತ ಸಮಾನ್ಯ ಕಾರ್ಯಕರ್ತ ಅಭಿವೃದ್ದಿ ತುಡಿತ ಇರುವ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ದಿ ಹಾಗೂ ತತ್ವದ ಮೇಲೆ ಕಾಂಗ್ರೆಸ್ ರಾಜಕೀಯ ಮಾಡುತ್ತಾ ಬಂದಿದೆ. ಆದರೆ ಬಿಜೆಪಿಯ ತತ್ವ ಸಿದ್ದಾಂತಗಳ ಹೇಗಿವೆ ಎನ್ನುವುದನ್ನು ನೀವು ಮನಗಾಣಬೇಕು. ನಾನು ಕೂಡಾ ತತ್ವದ ಆಧಾರದ ಮೇಲೆ ಸೋತೆ ಇದಕ್ಕೆ ಮೋದಿ ಶಾ ಹಾಗೂ ಆರ್ ಎಸ್ ಎಸ್ ಸಿದ್ದಾಂತ ಗೆದ್ದಿತು.‌ ನೀವೆಲ್ಲ ಒಂದಾಗಿ ಕೆಲಸ ಮಾಡಿ ಕಾಂಗ್ರೆಸ್ ಸಿದ್ದಾಂತ ಗೆಲ್ಲುವಂತೆ ಮಾಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ತನ್ನ ಅಧಿಕಾರಲ್ಲಿರುವಷ್ಟು ವರ್ಷ ನೀರಾವರಿ‌ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಒತ್ತು ನೀಡಿದೆ. ನರೇಗಾ, ಆಹಾರ ಭದ್ರತೆ, ಉಚಿತ ಶಿಕ್ಷಣದಂತ ಗಮನಾರ್ಹ‌ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೊಳಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಅಭಿವೃದ್ದಿ ಕಾರ್ಯಗಳಿಗೆ ತೀಲಾಂಜಲಿ‌ ನೀಡಿದೆ ಎಂದು ಟೀಕಿಸಿದರು.

ಆರ್ಟಿಕಲ್ 371 (J) ಜಾರಿಯಾಗಲೂ ಯಾರು ಕಾರಣರು ಎನ್ನುವ ಬಗ್ಗೆ ಬೇರೆ ಬೇರೆ ಮಾತನಾಡುತ್ತಾರೆ. ಆದರೆ, ಸಂಸತ್ತಿನಲ್ಲಿ ಎಲ್ಲ‌ ವಿವರವನ್ನು ದಾಖಲಿಸಿದ್ದಾರೆ ಅಲ್ಲಿ ಎಲ್ಲರ ಹಣೆಬರಹ ತಿಳಿಯಲಿದೆ ಎಂದರು. ವಿಶೇಷ ಸ್ಥಾನಮಾನ ಸಿಕ್ಕ‌ ನಂತರ ಈ ಭಾಗದ ಬಡ ಮಕ್ಕಳು ಡಾಕ್ಟರ್ ಇಂಜೀನಿಯರ್ ಆಗಿದ್ದಾರೆ. ಇದಕ್ಕೆ ಕಾರಣ ಯಾರು? ನಾವು ಹೋರಾಟ ಮಾಡಿದ್ದರಿಂದಲೇ ಸಾಧ್ಯವಾಗಿದೆ ಎಂದರು.

ಇಡೀ‌ ದೇಶದಲ್ಲಿಯೇ ಕರ್ನಾಟಕ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲಿಯೂ ಕೂಡಾ ಗ್ರಾಮಪಂಚಾಯತಿ ಸದಸ್ಯರಿಗೆ ವಿಧಾನಪರಿಷತ್ ಅಭ್ಯರ್ಥಿಗೆ ಮತದಾನದ ಹಕ್ಕು ನೀಡಿಲ್ಲ. ಆದರೆ ಕಾಂಗ್ರೆಸ್ ಪಕ್ಷದವರು ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಗ್ರಾಮಪಂಚಾಯತಿ ಸದಸ್ಯರಿಗೆ ಮತದಾನದ ಹಕ್ಕು ಕೊಡಿಸಿದ್ದೇವೆ ಇದು ಇತಿಹಾಸವಾಗಿ ಉಳಿದಿದೆ.

ಪ್ರತ್ಯೇಕ ರೇಲ್ವೆ ವಲಯ, ಜವಳಿ ಪಾರ್ಕ್, ಮುಂತಾದ ಯೋಜನೆಗಳನ್ನು ಮಂಜೂರು ಮಾಡಿದ್ದರೂ ಕೂಡಾ ನನ್ನ ವಿರುದ್ದ ಮಸಲತ್ತು ನಡೆಸಿದ ಮೋದಿ ಶಾ ಸೋಲಿಸಿದರು. ನೀವೆಲ್ಲ ನನ್ನ ಅಂದಿನ ಸೋಲಿಗೆ ಸೇಡಿಗೆ ಇಂದು ಶಿವಾನಂದ ಪಾಟೀಲ್ ರನ್ನು ಗೆಲ್ಲಿಸುವ ಮೂಲಕ ಅಭಿವೃದ್ದಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಏನು ಸಾಧನೆ ಮಾಡಿ‌ದೆ ಎಂದು ಓಟು‌ ಕೊಡಬೇಕು? ಅಡುಗೆ ಅನಿಲ, ಡಿಸೇಲ್ ಪೆಟ್ರೋಲ್‌ಬೆಲೆ ಏರಿಸಿದ್ದಕ್ಕೆ ಓಟು ಕೊಡಬೇಕಾ? ದಿನಬಳಕೆ ವಸ್ತುಗಳ ಬೆಲೆ ಏರಿಸಿದ್ದಕ್ಕೆ ಓಟು‌‌ ಕೊಡಬೇಕಾ? ಕೇಂದ್ರದ‌ ಸುಳ್ಳಿನ ಸರದಾರನ‌ ಆಡಳಿತದಿಂದ ಜನರು ಸಂಕಷ್ಟದಲ್ಲಿದ್ದಾರೆ. ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಮೂರು ಕೃಷಿ‌ ಕಾಯಿದೆಗಳ ವಿರುದ್ದ ನಾವು ಮಾತನಾಡಿದಾಗ ನಮ್ಮ ಮಾತನ್ನು ಮೋದಿ ಒಪ್ಪಲಿಲ್ಲ. ಈಗೇನಾಗಿದೆ, ಉಪ ಚುನಾವಣೆ ಸೋಲಿನ ಪರಿಣಾಮ ಹಾಗೂ ಮುಂಬರುವ ಯುಪಿ, ಪಂಜಾಬ್ ಹಾಗೂ ಬೇರೆ ರಾಜ್ಯಗಳಲ್ಲಿ‌ ಸೋಲಾಗುವುದನ್ನು ಮನಗಂಡು ಯಾವುದೇ ಚರ್ಚೆ ನಡೆಸದೆ ಕಳ್ಳರ ತರ ರಾತ್ರೋ‌ರಾತ್ರಿ ಕೃಷಿ‌ ಕಾಯಿದೆಗಳನ್ನು ವಾಪಸ್ ಪಡೆದರು ಎಂದು ಟೀಕಿಸಿದರು.

ಮಾಜಿ ಸಚಿವರಾದ ಡಾ‌ ಶರಣಪ್ರಕಾಶ್ ಮಾತನಾಡಿ ಮತದಾರರರು ಮತ ಚಲಾವಣೆ ಮಾಡುವ ಮುನ್ನ ಅಭ್ಯರ್ಥಿಯ ಹಿನ್ನೆಲೆ, ಆತನ‌ ಪಕ್ಷದ ಸಿದ್ದಾಂತವನ್ನು‌ ಪರಿಗಣಿಸಬೇಕು. ಮತದಾರರು ಪ್ರಬುದ್ಧರಾದಾಗ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಸಂವಿಧಾನ ಎಲ್ಲರಿಗೂ ಸ್ವಾಭಿಮಾನದ ಬದುಕು ನೀಡಿದೆ. ಮತಗಳಿಗೆ ಯಾರೂ ಬೆಲೆ‌ ಕಟ್ಟಲಾಗದು.

ಆದರೂ‌ ಕೂಡಾ ಕಳೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಯಾಕೆ ಸೋಲಾಯಿತು? ರಾಜಕೀಯದ ಗಂಧ ಗಾಳಿ ಗೊತ್ತಿಲ್ಲದ, ಸ್ಥಳೀಯ ಸಂಸ್ಥೆಗಳ ಸದಸ್ಯರಾಗದ ಹಾಗೂ ಆ ವ್ಯವಸ್ಥೆಯ ಪರಿಕಲ್ಪನೆ ಇಲ್ಲದ ಬಿ.ಜಿ.ಪಾಟೀಲ್ ಹೇಗೆ ಗೆದ್ದರು? ಗೆದ್ದು ಹೋದ ಮೇಲೆ ಆರು ವರ್ಷ ಏನು ಕೆಲಸ ಮಾಡಿದರು? ವಿಧಾನಪರಿಷತ್ ನಲ್ಲಿ ಎಷ್ಟು ಬಾರಿ‌ ಈ‌ ಭಾಗದ ಜನರ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡಿದರು ? ಇದಕ್ಕೆಲ್ಲ ಉತ್ತರ ಅವರ ಬಳಿ ಹಣವಿದೆ.

ಹಣದಿಂದಲೇ ಈ ಸಲವೂ ಗೆಲ್ಲಬೇಕು ಎಂದು ಕೊಂಡರೆ ಅದು ಅಸಾಧ್ಯ ಯಾಕೆಂದರೆ ನಮ್ಮ ಸ್ವಾಭಿಮಾನಿ ಸದಸ್ಯರು ತಮ್ಮ ಮತವನ್ನು ಮಾರಿಕೊಳ್ಳುವುದಿಲ್ಲ. ಬಡವರ ಹಾಗೂ ಮಂತರ ನಡುವಿನ ಈ ಹೋರಾಟದಲ್ಲಿ ಬಡವರಾದ ಶಿವಾನಂದ ಪಾಟೀಲ್ ಗೆಲ್ಲಲಿದ್ದಾರೆ ಎಂದು‌ ವಿಶ್ವಾಸ ವ್ಯಕ್ತಪಡಿಸಿದರು.

ನಳೀನ್‌ಕುಮಾರ ಕಟೀಲ್‌ಗೆ ಬುದ್ಧಿಭ್ರಮಣೆಯಾಗಿದೆ. ಈಗಿರುವ ಗ್ರಾಮಪಂಚಾಯತ ಸದಸ್ಯರಿಗೆ ತಿಂಗಳ ವೇತನ‌ ಕೊಡಲು ಆಗಿಲ್ಲ. ಇವರು ಗ್ರಾಮಪಂಚಾಯತ ಸದಸ್ಯರಿಗೆ ತಿಂಗಳ ಹತ್ತುಸಾವಿರ ವೇತನ‌ ಕೊಡುತ್ತಾರಂತೆ. ಎಲ್ಲಿಂದ ಹಣ ತರುತ್ತಾರೆ? ಎಂದು ವಾಗ್ದಾಳಿ ನಡೆಸಿದರು.

‘ ಸತ್ಯದ ಬಲದಿಂದ ಅಸತ್ಯದ ಕೇಡ‌ ನೋಡಯ್ಯ ‘ ಎನ್ನುವ ಬಸವಣ್ಣನವರ ವಚನದ ಸಾಲನ್ನು ಹೇಳುವ ಮೂಲಕ‌ ಮಾತು‌ ಪ್ರಾರಂಭಿಸಿದ ಶಾಸಕರಾದ ಅಜಯ್ ಸಿಂಗ್ ಅವರು ಈ‌ ಸಲದ ಪರಿಷತ್ ಚುನಾವಣೆ ಸತ್ಯ ಹಾಗೂ ಅಸತ್ಯದ ನಡುವಿನ ಹೋರಾಟವಾಗಿದೆ. ಸ್ವಾಭಿಮಾನಿ ಮತದಾರರು ಸತ್ಯದ ಪರವಾಗಿ ಮತಚಲಾಯಿಸುವ ಮೂಲಕ ಅಸತ್ಯವನ್ನು‌ ಸೋಲಿಸಿ. ಹಣವಂತರಾದ ಭ್ರಷ್ಟ ಬಿಜೆಪಿಯ ಅಭ್ಯರ್ಥಿ ಬಿ.ಜಿ.ಪಾಟೀಲ್ ಎಷ್ಟೇ ಹಣ ಹಂಚಿದರು ಹಾಗೂ ಬಂಗಾರ ಹಂಚಿದರೆ ಏನೂ ಪ್ರಯೋಜನವಾಗುವುದಿಲ್ಲ. ಮತದಾರರ ನಿರ್ಧಾರ ಬದಲಾಗುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು ವಿಶ್ವಾಸದಿಂದ ನುಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಪ್ರಧಾನಿ ಮೋದಿ ರಾಜ್ಯ ಸರ್ಕಾರವನ್ನು‌10% ಸರ್ಕಾರ ಎಂದು ಟೀಕಿಸಿದ್ದರು. ಈಗಿನ ಬಿಜೆಪಿ ಸರ್ಕಾರ 40% ಸರ್ಕಾರವಾಗಿದೆ.‌ ಇದನ್ನು ಕಾಂಗ್ರೆಸ್ ಹೇಳುತ್ತಿಲ್ಲ, ಬದಲಿಗೆ ಗುತ್ತಿಗೆದಾರರ ಸಂಘವೇ ಈ‌ಬಗ್ಗೆ‌ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂದರು.

ಕಾಂಗ್ರೆಸ್ ಅಭ್ಯರ್ಥಿಯಾದ ಶಿವಾನಂದ ಪಾಟೀಲ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭಿವೃದ್ದಿ ಆಧಾರದ ಮೇಲೆ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ತಳಮಟ್ಟದಿಂದ ಬೆಳೆದು ಬಂದ ನಾನು ಸ್ಥಳೀಯ ಸಂಸ್ಥೆಗಳಿಗೆ ನ್ಯಾಯ ಒದಗಿಸುವ ಉದ್ದೇಶ ಹೊಂದಿದ್ದೇನೆ.‌ ಒಮ್ಮೆ ಆಶೀರ್ವಾದ ಮಾಡಿ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಗೆದ್ದು ಹೋದ ಮೇಲೆ ಪಂಚಾಯತಿಗೆ ಭೇಟಿ ನೀಡಿಲ್ಲ. ಆದರೂ ಕೂಡಾ ಈಗ ಮತ್ತೆ ಮತ ಕೇಳಲು ಹೊರಟಿದ್ದಾರೆ. ಯಾವ ನೈತಿಕತೆ ಮೇಲೆ ಮತ ಕೇಳುತ್ತಾರೆ? ಹಣದಿಂದ ಚುನಾವಣೆ ಗೆಲ್ಲಬಹುದೆಂದು ತಿಳಿದಿದ್ದಾರೆ. ಒಂದು ಕಡೆ ಹಣ ಹೊಂದಿರುವ ವ್ಯಕ್ತಿ ಮತ್ತೊಂದು ಕಡೆ ಜನಪರ ನಿಲುವು ಹೊಂದಿರುವ ಪ್ರಾಮಾಣಿಕ ವ್ಯಕ್ತಿ ಇದ್ದಾರೆ. ಸರಿಯಾದ ಆಯ್ಕೆ ನಿಮ್ಮದಾಗಿರಲಿ ಅದು ನನಗೆ ಮತ ನೀಡುವ ಮೂಲಕ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಸಹಕಾರ‌ ನೀಡಿ ಎಂದರು.

ಮಾಜಿ ಎಂ ಎಲ್ ಎ ಬಿ.ಅರ್.‌ಪಾಟೀಲ್ ಮಾತನಾಡಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ ಆಯ್ಕೆಯಾಗಿ ಹೋಗುವವರು ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಬಗ್ಗೆ ತಿಳಿದಿರಬೇಕು. ಹಾಗಾದರೆ ಮಾತ್ರ ಅಂತ ಸಂಸ್ಥೆಗಳಿಗೆ ನ್ಯಾಯಕೊಟ್ಟಂತಾಗುತ್ತದೆ. ಹಾಗಾಗಿ ಎಲ್ಲರೂ ಪಣತೊಟ್ಟು ಸ್ಥಳೀಯ ಸಂಸ್ಥೆಗಳ ಬಗ್ಗೆ ಕೆಲಸ ಮಾಡಿ ಅನುಭವವಿರುವ ಶಿವಾನಂದ ಪಾಟೀಲ್ ಅವರನ್ನ ಆಯ್ಕೆ ಮಾಡಿ ಕಳಿಸಬೇಕು ಅವರು ಆಯ್ಕೆಯಾದರೆ ನಿಮಗೆ ಧ್ವನಿಯಾಗುತ್ತಾರೆ ಎಂದರು.

ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ ಮಾತನಾಡಿ ಈ ಹಿಂದಿನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್‌ ಅವರ ಆರು‌ ವರ್ಷಗಳ ಸಾಧನೆ ಶೂನ್ಯ. ಪಂಚಾಯತ ವ್ಯವಸ್ಥೆಯ ಬಗ್ಗೆ ಅವರಿಗೆ ಅರಿವಿಲ್ಲ ಅಂತವರನ್ನು ಆಯ್ಕೆ ಮಾಡಿದರೆ ಅಭಿವೃದ್ದಿಗೆ ಹಿನ್ನೆಡೆಯಾಗುತ್ತದೆ ಹಾಗಾಗಿ ಪಂಚಾಯತ ವ್ಯವಸ್ಥೆಯಲ್ಲಿ ಅಪಾರ ಅನುಭವವಿರುವ ಹಾಗೂ ಅಭಿವೃದ್ದಿ‌ ಪರ ಚಿಂತನೆಯುಳ್ಳ ಕಾಂಗ್ರೆಸ್ ಅಭ್ಯರ್ಥಿ‌ ಶಿವಾನಂದ ಪಾಟೀಲರನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.

ಖರ್ಗೆ ಅವರ ಅಂಗಡಿ ಬಂದ್ ಆಗಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರಿಗೆ ಟಾಂಗ್ ಕೊಟ್ಟ ಅಲ್ಲಮಪ್ರಭು ಪಾಟೀಲ್, ಖರ್ಗೆ ಅವರದು ದೇವರ ಆಳ್ವಿಕೆ ನಿಮ್ಮಂತ ದೆವ್ವದ ಆಳ್ವಿಕೆ ಅಲ್ಲ. ಆರ್ ಎಸ್ ಎಸ್ ನ‌ ಕುತಂತ್ರದಿಂದ ಅವರು ಒಮ್ಮೆ ಸೋತಿರಬಹುದು ಆದರೆ, ಮುಂದೊಂದು ದೇಶದ ಪ್ರಧಾನಿಯಾಗಲಿದ್ದಾರೆ ಇದನ್ನು ಬರೆದಿಟ್ಟುಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.

ಶಾಸಕರಾದ ಕನೀಜ್ ಫಾತೀಮಾ ಹಾಗೂ ವಿಜಯಕುಮಾರ್ ರಾಮಕೃಷ್ಣ ಮಾತನಾಡಿದರು. ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಶಾಸಕರಾದ ಅಜಯಸಿಂಗ್, ಕನೀಜ್ ಫಾತೀಮಾ, ಮಾಜಿ‌ ಸಚಿವರಾದ ಶರಣಪ್ರಕಾಶ ಪಾಟೀಲ್, ಬಾಬುರಾವ ಚವ್ಹಾಣ, ಮಾಜಿ ಎಂ ಎಲ್‌ಸಿ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕರಾದ‌ ಬಿ ಆರ್ ಪಾಟೀಲ್, ವಿಜಯಕುಮಾರ್ ರಾಮಕೃಷ್ಣ, ಸುಭಾಷ್ ರಾಠೋಡ, ಭೀಮರೆಡ್ಡಿ ಪಾಟೀಲ್‌ ಕುರಕುಂದಾ, ಸೈಯದ್ ಅಹಮದ್, ಲತಾ ರಾಠೋಡ, ನೀಲಕಂಠರಾವ್ ಮುಲಗೆ, ಪ್ರವೀಣ ಹರವಾಳ, ಬಾಬಾಖಾನ್, ಕಿರಣ್ ದೇಶಮಖ್, ಮಜರ್ ಹುಸೇನ್, ಫಾರೂಕ್ ಸೇಠ್, ರಾಜೀವ್ ಜಾನೆ ಹಾಗೂ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here