ಕಲಬುರಗಿ: ರಾಜ್ಯದ ಸರಕಾರದ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಮಕ್ಕಳಿಗೆ ಮೊಟ್ಟೆ ನೀಡುವ ನಿರ್ಧಾರ ಪುನರ್ ಪರಿಶೀಲನೆ ಮಡುವುದು ಅಗತ್ಯವಾಗಿದ್ದು, ಈ ದಿಶೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಇದರ ಕುರಿತು ಸವಿಸ್ತಾರವಾಗಿ ಆಲೋಚಿಸಿ ಮೊಟ್ಟೆ ನೀಡುವುದನ್ನು ಕೂಡಲೇ ನಿಲ್ಲಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗಲಿಂಗಯ್ಯ ಮಠಪತಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವುದು ಅಗತ್ಯವಿದ್ದು ಕೇವಲ ಮೊಟ್ಟೆ ತಿನ್ನುವುದರಿಂದ ಮಾತ್ರ ಪೌಷ್ಟಿಕತೆ ಸಿಗುವುದಿಲ್ಲ. ಅದರ ಬದಲಾಗಿ ದ್ವಿದಳ ಧಾನ್ಯ, ಸಿರಿಧಾನ್ಯ, ಹಸಿಕಾಳು, ಶೇಂಗಾ-ಬೆಲ್ಲ ಸೇರಿದಂತೆ ಅನೇಕ ಪದಾರ್ಥಗಳಲ್ಲಿ ಅತ್ಯಧಿಕವಾಗಿ ಪೌಷ್ಟಿಕಾಂಶತೆ ಹೊಂದಿದ್ದು, ಹೀಗಾಗಿ ಮೊಟ್ಟೆ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಕೂಡಲೇ ಹಿಂದಕ್ಕೆ ಸರಿಯುವಂತೆ ಅವರು ಆಗ್ರಹಿಸಿದ್ದಾರೆ.
ಶಾಲಾ ಪರಿಸರ ಮಕ್ಕಳ ಮನೋ ವಿಕಾಸದ ಮೇಲೆ ಸದ್ವಿಚಾರದ ಪರಿಣಾಮ ಬೀರುವ ತಾಣವಾಗಿದ್ದು ಮೊಟ್ಟೆ ವಿತರಣೆ ಮಾಡುವುದರಿಂದ ಇಂತಹ ಪರಿಸರದಲ್ಲಿ ಮಕ್ಕಳಲ್ಲಿ ಭೇದ-ಭಾವದ ಪರಿಕಲ್ಪನೆಗೆ ಸರಕಾರವೇ ಮುಂದೆ ನಿಂತು ಆಹ್ವಾನ ನೀಡಿದಂತಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.