ಕಲಬುರಗಿ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಂಚಾಯತ ರಾಜ್ ವ್ಯವಸ್ಥೆಯನ್ನು ಬಲಹೀನಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಗಳಿಗೆ ಚುನಾವಣೆ ನಡೆಸದೆ ಮುಂದೂಡುವ ಮೂಲಕ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಸರ್ಕಾರವೇ ಖುದ್ದು ತೊಡರಯಗಾಲು ಹಾಕುತ್ತಿದೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ರಾಜ್ಯ ವಾಣಿಜ್ಯ ಆಯೋಗದ ಶಿಫಾರಸ್ಸು ಸೇರಿಸಿ ಶೇ 25 ಅನ ಟೈಡ್ ಫಂಡ್ ನ್ನು ನಿಗದಿ ಪಡಿಸಲಾಗಿತ್ತು. ಇನ್ನೂ ಗ್ರಾಮ ಪಂಚಾಯತ ನಲ್ಲಿ ಭ್ರಷ್ಟತೆ ತಲೆ ಎತ್ತಬಾರದು ಹಾಗೂ ಉತ್ತಮ ಆಡಳಿತ ಒದಗಿಸುವ ಉದ್ದೇಶದಿಂದ ಗ್ರಾಮಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿಯನ್ನು ಮೂವತ್ತು ತಿಂಗಳಿಗೆ ನಿಗದಿ ಮಾಡಲಾಗಿತ್ತು. ಜೊತೆಗೆ ಸದಸ್ಯರ ಭ್ರಷ್ಟಾಚಾರದಲ್ಲಿ ತೊಡಗಿದ್ದು ದಾಖಲೆ ಸಮೇತ ಸಾಬೀತಾದರೆ ಅವರ ಸದಸ್ಯತ್ವ ರದ್ದು ಮಾಡಲು ಅವಕಾಶ ಇತ್ತು. ಆದರೆ ಬಿಜೆಪಿ ಸರ್ಕಾರ ಪಂಚಾಯತ ರಾಜ್ ವಿಧೇಯಕ ಪಾಸ್ ಮಾಡುವ ಮೂಲಕ ಈ ಹಿಂದಿನ ಕಾಯಿದೆಯನ್ನು ಜಾರಿಗೊಳಿಸಲು ಬಿಲ್ ಪಾಸ್ ಮಾಡಿದೆ.
ಕನಿಷ್ಠ ಒಂದುವರೆ ವರ್ಷ ಆದರೂ ಕೂಡಾ ತಾಪಂ ಜಿಪಂ ಚುನಾವಣೆ ಯಾಕೆ ನಡೆಸಿಲ್ಲ.? ಸಂವಿಧಾನದಲ್ಲಿ ಹೇಳಿದಂತೆ ಆರ್ಟಿಕಲ್ 243 (E). ಪ್ರಕಾರ ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಬೇಕು ಆದರೆ ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಜೊತೆಗೆ ಮೀಸಲಾತಿ ಪ್ರಕಟವಾದ ಮೇಲೆ ಕ್ಷೇತ್ರಗಳಿಗ ಪುನರ್ವಿಂಗಡಣೆಗಾಗಿ ಆಯೋಗವನ್ನು ಸ್ಥಾಪಿಸಲಾಗಿದೆ.
ಬಿಜೆಪಿ ಸರ್ಕಾರಕ್ಕೆ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದ ಖರ್ಗೆ, ಅವರು ನೈಸರ್ಗಿಕ ವಿಕೋಪ ಅಥವಾ ಯುದ್ದದಂತ ಪ್ರಮುಖ ಕಾರಣಗಳಿಲ್ಲದೇ ತಾಪಂ ಜಿಪಂ ಗಳಿಗೆ ಚುನಾವಣೆ ಸರ್ಕಾರ ನಡೆಸಲು ಹಿಂದೇಟು ಹಾಕುತ್ತಿದೆ. ಕೊರೋನಾ ಸಂದರ್ಭಲ್ಲಿ ಪ.ಬಂಗಾಳ, ಮಧ್ಯ ಪ್ರದೇಶದಲ್ಲಿ ಚುನಾವಣೆ ಈಗಲೂ ಇಲ್ಲಿಯೂ ಚುನಾವಣೆ ನಡೆಯುತ್ತಿದೆ ಆದರೆ ತಾಪಂ ಜಿಪಂ ಚುನಾವಣೆ ನಡೆಸಲು ಭಯ? ಈ ಮುಂಚೆ ಚುನಾವಣೆ ನಡೆಸಲು ಚುನಾವಣೆ ಆಯೋಗಕ್ಕೆ ಅಧಿಕಾರ ನೀಡಲಾಗಿತ್ತು. ಮೀಸಲಾತಿ ಪ್ರಕಟಣೆ ಹೊರ ಬಂದ ಮೇಲೆ ಪುನರ್ ವಿಂಗಡನೆ ಮಾಡಲು ಆಯೋಗವನ್ನು ರಚಿಸಿದ್ದಾರೆ. ಬಿಲ್ ನಲ್ಲಿ ಪ್ರಸ್ತಾಪಿಸಿರುವಂತೆ ಚುನಾವಣೆ ಆಯೋಗದ ಮೇಲೆ ಆರೋಪ ಮಾಡಲಾಗಿದೆ. ಮೀಸಲಾತಿಯನ್ನು ನಿಯಮ ಮೀರಿ ಕೊಡಲಾಗಿದೆ ಎಂದು ಬಿಲ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ತಾಪಂ ಜಿಪಂ ಗಳಿಗೆ ಚುನಾವಣ ನಡೆಸಲು ಸರ್ಕಾರಕ್ಕೆ ಮನಸಿಲ್ಲ.
ಈ ಹಿಂದೆ ಚುನಾವಣಾ ನಡೆದಾಗೆಲ್ಲ ಬಿಜೆಪಿಗೆ ನಿರೀಕ್ಷಿತ ಕ್ಷೇತ್ರಗಳಲ್ಲಿ ಗೆಲುವು ಸಿಕಿಲ್ಲ. ಈಗಲೂ ಅದೇ ಸ್ಥಿತಿ ಇರುವುದರಿಂದ ಚುನಾವಣೆ ನಡೆಸುತ್ತಿಲ್ಲ. ಗ್ರಾಮಪಂಚಾಯತದಲ್ಲಿ ಕ್ರಿಯಾಯೋಜನೆ ಮಾಡಲು ಅನುದಾನವಿಲ್ಲ. 15 ನೇ ಹಣಕಾಸು ಆಯೋಗದ ಲಾಭ ಮೋದಿಯವರಿಗೆ ಹೋಗುತ್ತಿದೆ. ಕೇಂದ್ರದ ಯೋಜನೆಗಳಿಗೆ ಗ್ರಾಮಪಂಚಾಯತ ಹಣ ಬಸಲಾಗುತ್ತಿದೆ. ಜಲ ಜೀವನ ಮಿಷನ್ ಸೇರಿದಂತೆ (25%) ಬಹುತೇಕ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಗ್ರಾಮಪಂಚಾಯತ ಅನುದಾನ ಬಳಸಿಕೊಳ್ಳಲಾಗುತ್ತಿದೆ.
ಗ್ರಾಪಂ ಗಳಿಗೆ ಅನುದಾನವೇ ನೀಡುತ್ತಿಲ್ಲ ಹಾಗಾಗಿ ನೌಕರರ ಸಂಬಳಕ್ಕೆ ಸಂಚಕಾರ ಬಿದ್ದಿದೆ. ಈ ಹಿಂದೆ ಪ್ರತಿ ಗ್ರಾಮಪಂಚಾತಗಳಿಗೆ ರೂ 2 ಕೋಟಿ ಕೊಡುವುದಾಗಿ ಹೇಳಿದ್ದಾರೆ ಇದೂವರೆಗೆ ಆ ಅನುದಾನ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಮಾಡಿದ ಮೇಲೆ ಸ್ವರಾಜ್ ಹೆಸರಲ್ಲಿ ಬಿಜೆಪಿ ಕಾರ್ಯಕ್ರಮ ನಡೆಸಿದೆ, ಎಂದು ವ್ಯಂಗ್ಯ ವಾಡಿದರು. 1.11ಲಕ್ಷ ಕೋಟಿ ಅನುದಾನವನ್ನ ನರೇಗಾ ಯೋಜನೆಗಳಿಗೆ ಮೀಸಲಿಡಲಾಗಿತ್ತು. ಆದರೆ ಈ ಸಲ ಕೇವಲ 73 ಸಾವಿರ ಕೋಟಿ ಮಾತ್ರ ಮೀಸಲಿಡಲಾಗಿದೆ. ವಸತಿ ಯೋಜನೆಗಳಿಗೆ ಹೊಸ ಮನೆಗಳು ಮಂಜೂರಾಗಿಲ್ಲ. ಈ ಹಿಂದೆ ನಾವು ಅಧಿಕಾರದಲ್ಲಿರುವಾಗ ಮಂಜೂರು ಮಾಡಿದ ಯೋಜನೆಗಳಿಗೆ ಈ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದರು.
ಕೇರಳ ಮಾದರಿಯಲ್ಲಿ ಅಧ್ಯಕ್ಷರಿಗೆ ಕಾರ್ ಕೊಡುತ್ತೇವೆ ಎಂದಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಅವರಿಗೆ ದುಡ್ಡು ಕೊಟ್ಟರೆ ಸಾಕು ನಡೆದುಕೊಂಡೆ ಹೋಗಿ ಕೆಲಸ ಮಾಡುತ್ತಾರೆ. ನಗರಸಭೆಗೆ ಅನುದಾನವಿಲ್ಲ.ಕಲಬುರಗಿ ಯನ್ನು ಸ್ಮಾರ್ಟ್ ಸಿಟಿ ಮಾಡುವುದಾಗಿ ಹೇಳಿದ್ದರು ಎಲ್ಲಿ ಹೋಯ್ತು ಸ್ಮಾರ್ಟ್ ಸಿಟಿ ಯೋಜನೆ? ಇದು ಸ್ಥಳೀಯ ಸಂಸ್ಥೆಗೆ ಬಿಜೆಪಿ ತೋರಿಸುವ ಬದ್ದತೆ ಎಂದರು.
ಬಿಜೆಪಿಯವರಿಗೆ ಚುನಾವಣೆ ಇದ್ದಾಗ ಮಾತ್ರ ಇಂತವೆಲ್ಲ ನೆನಪಿಗೆ ಬರ್ತಿವೆ. ಜಿಲ್ಲಾ ಉಸ್ತುವಾರಿಯನ್ನ ನೇಮಕ ಮಾಡದ ಸರ್ಕಾರ ಈ ಭಾಗದ ಅಭಿವೃದ್ದಿ ಹೇಗೆ ತಾನೆ ಮಾಡುತ್ತಾರೆ. ಆರ್ಥಿಕ ಸಬಲೀಕರಣದ ಯೋಜನೆಗಳನ್ನು ಬಿಜೆಪಿಯವರು ಮಾಡಿಲ್ಲ. ಇದು ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮುಗಿಸುವ ಸಂಚಾಗಿದೆ ಎಂದು ದೂರಿದ ಅವರು ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಹೇಳಿದರು.
ಬಿಜಿ ಪಾಟೀಲ್ ಅವರ ಮೇಲೆ ಸ್ಥಳೀಯ ಶಾಸಕರ ಸಹಕಾರವಿಲ್ಲ ಹಾಗಾಗಿ ಹುಬ್ಬಳ್ಳಿ ಮೂಲದ ಪ್ರತಿಷ್ಠಿತ ಸಾರಿಗೆ ಸಂಸ್ಥೆಯ ನೌಕರರನ್ನು ಕರೆಸಿಕೊಂಡು ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದ್ದು ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು ಎಂದರು.
ನೋಟ್ ದೋ ಓಟ್ ಲೋ ಎನ್ನವ ಉಕ್ತಿ ಯನ್ನು ಪಾಲಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಅವರು ತಮ್ಮ ಅನುದಾನವನ್ನು ಹೇಗೆ ಎಲ್ಲಿ ಬಳಸಿಕೊಂಡಿದ್ದಾರೆ? ಎಷ್ಟು ಗ್ರಾಮಪಂಚಾಯತಿಗಳಿಗೆ ಭೇಟಿ ನೀಡಿದ್ದಾರೆ. ಸ್ಥಳೀಯ ಸಂಸ್ಥೆಯ ಬಲವರ್ಧನೆಗೆ ಶಿವಾನಂದ ಪಾಟೀಲ್ ಸರ್ವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಪ್ರಿಯಾಂಕ್ ಖರ್ಗೆ ಅವರು ಬಿಜಿ ಪಾಟೀಲ್ ಅವರನ್ನು ಬಿಜಿನೆಸ್ ಮ್ಯಾನ್ ಎಂದಿದ್ದೇವೆ ಹೊರತು ಅವರು ಭ್ರಷ್ಠರು ಎಂದು ಹೇಳಿಲ್ಲ.
ಕಾಂಗ್ರೆಸ್ ಪಕ್ಷ ವ್ಯವಸ್ಥೆ ಮಾಡುತ್ತಿಲ್ಲವೇ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ನಾವು ಕೈಮುಗಿದು ಮತ ಕೇಳಿತ್ತಿದ್ದೇವೆ, ಆದರೆ, ಬಿಜೆಪಿಯವರು ಕೈ ಬಿಸಿ ಮಾಡಿ ಓಟು ಕೇಳುತ್ತಿದ್ದಾರೆ. ಶಿವಾನಂದ ಅವರು ಪ್ರಾಮಾಣಿಕ ವ್ಯಕ್ತಿ ಹಣ ಹಂಚುವಷ್ಟು ಶಕ್ತಿ ಹೊಂದಿಲ್ಲ. ನಾನು ಕಾಂಗ್ರೆಸ್ ಪಕ್ಷದವನು ಪಕ್ಷಕ್ಕಾಗಿ ನಾನು ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ.
ಬಿಟ್ ಕಾಯಿನ್ ಪ್ರಮುಖ ಸ್ಕ್ಯಾಮ್ ನ ಪ್ರಮುಖ ಆರೋಪಿ ಶ್ರೀಕಿ ಎಲ್ಲಿದ್ದಾನೆ ಎನ್ನುವುದು ತಿಳಿಯುತ್ತಿಲ್ಲ ಎಂದು ಕೇಳಿದಾಗ, ಪೋಲೀಸ್ ವ್ಯವಸ್ಥೆ ಹೇಗಿದೆ ಎಂದು ಮೊನ್ನೆ ಗೃಹ ಸಚಿವರೇ ಖುದ್ದಾಗಿ ಹೇಳಿದ್ದಾರೆ ಎಂದ ಮೇಲೆ ಪೊಲೀಸ್ ಇಲಾಖೆ ಬಲಹೀನವಾಗಿದೆ ಎಂದು ಅವರೇ ಒಪ್ಪಿಕೊಂಡಾಗಿದೆ. ಹತ್ತನೆಯ ತಾರೀಖಿನ ನಂತರ ನಾನು ಮತ್ತೆ ಮಾಧ್ಯಮದ ಮುಂದೆ ಬರುತ್ತೇನೆ ಅದು ಭಾಗ ಮೂರು ಆಗಲಿದೆ. ಇದರ ಬಗ್ಗೆ ಸರ್ಕಾರ ಸರಿಯಾದ ತನಿಖೆ ನಡೆಸುತ್ತಿಲ್ಲ, ನಡೆಸಿದರೆ ಸರ್ಕಾರಕ್ಕೆ ಖಂಡಿತ ಆಪತ್ತಿದೆ.
ಕೊರೋನಾ ಮುಂದಿನ ಅಲೆ ಬರಲಿದೆ ಎನ್ನುವ ಭೀತಿ ಇದೆ ಜಿಲ್ಲೆಯಲ್ಲಿ ಅಧಿಕಾರಿಗಳು ಹೇಗೆ ತಯಾರಿ ನಡೆಸಿದ್ದಾರೆ ಎಂದು ಪ್ರಶ್ನಿಸಿದಾಗ, ನಾನು ಈಗಾಗಲೇ ಸಚಿವರಾದ ಸುಧಾರಕ್ ಅವರಿಗೆ ಪತ್ರ ಬರೆದು ಜೀನೋಂ ಸಿಕ್ವೆನ್ಸಿಂಗ್ ಲ್ಯಾಬ್ ಸ್ಥಾಪನೆಗೆ ಒತ್ತಾಯಿಸಿದ್ದೇನೆ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಆಕ್ಷಜನ್ ಸಮರ್ಪಕವಾಗಿ ಸರಬರಾಜು ಮಾಡಿಲ್ಲ. ಯಾವುದೇ ಸಮರ್ಪಕ ತಯಾರಿ ಮಾಡಲು ವಿಫಲವಾಗಿರುವ ಸರ್ಕಾರ ಯುದ್ದಕಾಲೇ ಶಸ್ತ್ರಭ್ಯಾಸ ಮಾಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದರು
ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ್ ಪಾಟೀಲ್ ಮಾತನಾಡಿ, ಅವಿಭಜಿತ ಕಲಬುರಗಿ ಯಾದಗಿರಿ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದೇವೆ. ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಮತದಾರರು ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಮಾತನಾಡಿ ಎಂಪಿ ಉಮೇಶ್ ಜಾಧವ ಅವರೊಬ್ಬ ಸಮಯಸಾಧಕ. ಟಿಕೇಟ್ ನೀಡಿ ಪ್ರಚಾರ ಮಾಡಿ ಗೆಲ್ಲಿಸಿದ ನಾಯಕರಾದ ಖರ್ಗೆ ಹಾಗೂ ಧರ್ಮಸಿಂಗ್ ಸಾಹೇಬರ ಬೆನ್ನಿಗೆ ಚೂರಿ ಹಾಕಿರುವ ಅವರು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಆ ಅವಿವೇಕಿಗೆ ಇಲ್ಲ ಎಂದು ಕುಟುಕಿದರು.
ಖರ್ಗೆ ಸಾಹೇಬರು ಜಾರಿಗೆ ತಂದ ಯೋಜನೆಗಳನ್ನೇ ಉಳಿಸಿಕೊಳ್ಳಲಾಗವರು ತಮ್ಮ ಬಗ್ಗೆ ತಾವೇ ತಿಳಿದುಕೊಳ್ಳಬೇಕು ಹಾಗೂ ನಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಎಚ್ಚರಿಕೆ ನೀಡಿದರು. ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಮತ್ತಿತರಿದ್ದರು.