ಗಣಿ ಕಂಪನಿಗಳ ದಾಳದಿಂದ ದೂರ ಉಳಿದಿಲ್ಲ ಪಶ್ಚಿಮದ ಸಹ್ಯಾದ್ರಿ ಕಪ್ಪತಗುಡ್ಡ..!

0
30
  • ಕೆ.ಶಿವು.ಲಕ್ಕಣ್ಣವರ

ಏನೆಲ್ಲ ಸವಾಲುಗಳು ಎದುರಾದರೂ ಧೃತಿಗೆಡದ ಪರಿಸರಪ್ರೇಮಿಗಳು, ಸ್ವಾಮೀಜಿಗಳು ಹಾಗೂ ಜನರು ಧೃತಿಗೆಡದೇ ಹೋರಾಡಿ ಕೊನೆಗೂ ಕಪ್ಪತಗುಡ್ಡವನ್ನು ವನ್ಯಧಾಮವನ್ನಾಗಿ ಮಾಡಿಸಿದರು. ಹಾಗಂತ ಸುಮ್ಮನೇ ಕೂಡುವ ಕಾಲ ಇದಲ್ಲ. ಕಾರಣ, ಇದು ಅಷ್ಟಕ್ಕೇ ಮುಗಿದಿಲ್ಲ ಕೂಡ..! ಹಲವರ ಹದ್ದಿನ ಕಣ್ಣುಗಳು ಇಲ್ಲಿನ ಸಂಪತ್ತು ದೋಚಲು ತೆರೆಮರೆಯಲ್ಲಿ ಸಂಚು ರೂಪಿಸುತ್ತಲೇ ಇವೆ.

ಕಪ್ಪತಗುಡ್ಡವನ್ನು ಸಂರಕ್ಷಿತ ಪ್ರದೇಶ ಅಥವಾ ವನ್ಯಧಾಮವೆಂದು ಸರ್ಕಾರ ಘೋಷಿಸಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯ ಮಾಡಿದ್ದು ಹಲವು ಗಣಿಗಾರಿಕೆ ಮತ್ತು ಪವನ ವಿದ್ಯುತ್ ಉತ್ಪಾದಿಸುವ ಕಂಪನಿಗಳಿಗೆ ನಡುಕ ಹುಟ್ಟಿಸಿತ್ತು. ಆಗ ಕೆಲವು ಸಂಸ್ಥೆಗಳು, ಕಪ್ಪತಗುಡ್ಡ ಬರಡು ಪ್ರದೇಶವಾಗಿದ್ದೂ, ಇಲ್ಲಿ ಯಾವುದೇ ಔಷಧೀಯ ಸಸ್ಯ, ಅಳಿವಿನಂಚಿನಲ್ಲಿರುವ ಹಾಗೂ ವಿಶೇಷ ವನ್ಯಜೀವಿಗಳಿಲ್ಲ ಎಂದು ಪ್ರತಿಪಾದಿಸಿದ್ದವು. ಇಲ್ಲಿ ಕರಡಿ, ಚಿರತೆಗಳಿಲ್ಲ, ಸಾರಂಗ, ನವಿಲುಗಳಿಲ್ಲ, ಇಲ್ಲಿರುವುದು ಬರೀ ಕಾಗೆ ಮತ್ತು ನಾಯಿಗಳು ಎಂದೂ ಬಹು ಕಾಲದಿಂದಲೂ ಬಂದಂತ ಆಯಾ ಕಾಲಗಟ್ಟದ ಜಿಲ್ಲಾಧಿಕಾರಿಗಳಿಗೆ ನಂಬಿಸುತ್ತಲೇ ಬಂದಿದ್ದರು. ಹೀಗೆಯೇ ಎಲ್ಲಾ ಅಧಿಕಾರಿಗಳು ಮತ್ತು ಸರ್ಕಾರವನ್ನು ನಂಬಿಸುತ್ತಲೇ ಗುಡ್ಡವನ್ನು ಕೊಳ್ಳೆ ಹೊಡೆಯಲೇ ಬಂದಿದ್ದವು ಕಂಪನಿಗಳು.

Contact Your\'s Advertisement; 9902492681

ಹೀಗಾದರೂ 2009 ರಲ್ಲಿ ಪರಿಸರ ಪ್ರೇಮಿಗಳ ತಂಡವೊಂದು ಕಪ್ಪತಗುಡ್ಡಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡಿತ್ತು. ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ.ಕೋಟ್ರೇಶ್ ಎಂಬುವವರು ಅಧ್ಯಯನ ವರದಿ ಸಲ್ಲಿಸಿದ್ದರು. 2010 ರಲ್ಲಿ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಕಪ್ಪತಗುಡ್ಡವನ್ನು ವನ್ಯಧಾಮವೆಂದು ಘೋಷಿಸುವ ಬಗ್ಗೆ ನಿರ್ಣಯಿಸಲಾಗಿತ್ತು. ನಂತರ 21.02.2013 ರಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷರಾಗಿದ್ದ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಮುಂಡರಗಿ ತಾಲೂಕಿನ ಡಂಬಳದಲ್ಲಿ ಸಭೆ ನಡೆಸಲಾಗಿತ್ತು.

ಇದಾದ ಒಂದು ತಿಂಗಳ ಬಳಿಕ, 15.03.2013 ರಂದು ರಾಜ್ಯ ವನ್ಯಜೀವಿ ಮಂಡಳಿ ಸಭೆ ಸೇರಿ ಸಮಾಲೋಚನೆ ನಡೆಸಿ, ವರದಿ ಆಧಾರದ ಮೇಲೆಯೇ ಈ ಗುಡ್ಡವನ್ನು ವನ್ಯಧಾಮವೆಂದು ಘೋಷಿಸಲು ನಿರ್ಧರಿಸಲಾತ್ತು. ಆದರೆ, ಗಣಿಕೋರ ಮತ್ತು ಪವನ ವಿದ್ಯುತ್ ಕಂಪನಿಗಳ ಸಂಚುಕೋರ ಕಳ್ಳರ ಪ್ರಭಾವದಿಂದಾಗಿ ಆ ನಿರ್ಧಾರ ಆದೇಶವಾಗಿ ಹೊರಬೀಳಲೇ ಇಲ್ಲ.

ಈ ಕಮ್ಮಕ್ಕಿನಿಂದ ಮೊದಲೇ ಘೋಷಿಸಿದ್ದ ಅಭಿಯಾರಣ್ಯ ಸ್ಥಾನಮಾನವನ್ನು ಸರ್ಕಾರವು 2016 ಅಂತ್ಯದಲ್ಲಿ ಹಿಂಪಡೆಯಿತು. ತಕ್ಷಣವೇ ಗಣಿ ಕಂಪನಿಗಳ ಮತ್ತು ವಿದ್ಯುತ್ ಕಂಪನಿಗಳ ಚಟುವಟಿಕೆಗಳು ಬಿರುಸುಗೊಂಡವು. ಇದರ ಬಗ್ಗೆ ಸರ್ಕಾರಕ್ಕೆ ಮಾಧ್ಯಮಗಳ ಮೂಲಕ ತಿಳಿಸಿದಾಗ ಸರ್ಕಾರದಿಂದ ಪ್ರತಿಸ್ಪಂದನೆ ಸಿಗಲೇ ಇಲ್ಲ. ಅದೇ ಜನವರಿ ಅಂತ್ಯಕ್ಕೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಲು ಗದಗಿನ ಹತ್ತಿರದಲ್ಲಿರುವ ಡಂಬಳದಲ್ಲಿ ಸಭೆ ಏರ್ಪಡಿಸಲಾಯಿತು.

ಅಲ್ಲಿ ಗಣಿಗಾರಿಕೆ ಸಂಸ್ಥೆಗಳ ಕೆಲ ಪ್ರತಿನಿಧಿಗಳು ಸುಳ್ಳು ದಾಖಲೆ ನೀಡಿ ಅಪಹಾಸ್ಯಕ್ಕೀಡಾದರು. ಆ ಪ್ರತಿನಿಧಿಗಳು ಕೆಲ ಸಂಘಟನೆಯ ಲೆಟರ್ ಹೆಡ್‌ಗಳನ್ನು ತೆಗೆದುಕೊಂಡು ಬಂದು ಅವುಗಳನ್ನೇ ದಾಖಲೆಗಳು ಹಾಗೂ ಕೆಲ ಸಂಘಟನೆಗಳು ಸ್ಥಾನಮಾನ ಬೇಡ ಎನ್ನುತ್ತಿವೆ ಎಂದು ಪ್ರತಿಪಾದಿಸಿದರು.

ಇದಾದ ಕೆಲವೇ ಕ್ಷಣಗಳಲ್ಲಿ ಆಯಾ ಸಂಘಟನೆಗಳು ಈ ಪ್ರತಿನಿಧಿಗಳು ತಮ್ಮ ಲೆಟರ್ ಹೆಡ್‌ಗಳನ್ನು ಸುಳ್ಳು ಹೇಳಿ ಪಡೆದುಕೊಂಡಿವೆ ಎಂದು ತಿಳಿಸಿದಾಗ, ಬಂದ ಮೂವರು ಅಧಿಕಾರಿಗಳೂ ಸುಮ್ಮನೇ ವಾಪಸಾದರು. ಇಷ್ಟೆಲ್ಲ ಆದರೂ ರಾಜ್ಯ ಸರ್ಕಾರ ಇದಕ್ಕೆ ಸಮ್ಮತಿಸಲಿಲ್ಲ. ಗದಗಿನ ಪರಿಸರ ಪ್ರೇಮಿಗಳು, ಸಾಹಿತಿಗಳು, ಚಿಂತಕರು ಹಾಗೂ ಸಾರ್ವಜನಿಕರೆಲ್ಲರೂ ಸೇರಿ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಫೆಬ್ರುವರಿ 13, 2017 ರಂದು 3 ದಿನಗಳ ಅಹೋರಾತ್ರಿ ಉಪವಾಸ ಕೈಗೊಂಡರು. ಹೋರಾಟದ ಕಾವು ದಿನೇದಿನೇ ಏರತೊಡಗಿತು. ಸರ್ಕಾರದ ಬಗ್ಗೆ ಅನುಮಾನ, ಅಪಸ್ವರಗಳು ಆರಂಭವಾಗತೊಡಗಿದವು.

ಏಪ್ರಿಲ್ 11, 2017 ರಂದು ಕೊನೆಗೂ ರಾಜ್ಯ ಸರ್ಕಾರ, 90 ಸಾವಿರ ಎಕರೆ ವಿಸ್ತೀರ್ಣದ ಕಪ್ಪತಗುಡ್ಡದ 18.872 ಹೆಕ್ಟೇರ್ ಪ್ರದೇಶವನ್ನು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿತು. ಅದಾದ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಗಣಿಗಾರಿಕೆ ಕಂಪನಿಯೊಂದು ಮತ್ತೊಮ್ಮೆ ಚಿನ್ನದ ಗಣಿಗಾರಿಕೆಯನ್ನೂ ಮಾಡಲು ಅರ್ಜಿ ಸಲ್ಲಿಸಿತು. ಮುಂಡರಗಿ ತಾಲೂಕಿನ ಅತ್ತಿಕಟ್ಟೆ ಗ್ರಾಮದಲ್ಲಿ ಕಂಪನಿ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದನ್ನು ಕಂಡು ಗ್ರಾಮದ ಜನರು ಆಕ್ಷೇಪ ವ್ಯಕ್ತಪಡಿಸಿದರು.

ಸರ್ವೆ ನಂಬರ್ 46, 47 ರಲ್ಲಿ ಅವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದನ್ನು ಕಂಡು ಗದಗಿನ ‘ಜಯ ಕರ್ನಾಟಕ’ ಸಂಘದವರು ತಕ್ಷಣವೇ ದೌಡಾಯಿಸಿ ಖಂಡಿಸಿದರು. ಈ ವಿಷಯವಾಗಿ ಸೆಪ್ಟೆಂಬರ್ 21 ರಂದು ಹೈಕೋರ್ಟ್‍ಗೆ ಬಲ್ದೋಟಾ ಕಂಪನಿ ಅರ್ಜಿ ಸಲ್ಲಿಸಿತ್ತು. ಆಗ ಬಳ್ಳಾರಿ ಮೂಲದ ಸಂತೋಷ ಮಾರ್ಟಿನ್ ಎಂಬ ಪರಿಸರವಾದಿ ಇವರ ವಿರುದ್ಧ ಪ್ರಶ್ನಿಸಿ ಕೋರ್ಟ್‍ನಲ್ಲಿ ಗೆಲವು ಸಾಧಿಸಿದರು.

ಗಣಿ ಉದ್ಯಮಿಗಳ ಈ ಬಗೆಯ ಸಂಚುಗಳು ಇದೇ ಮೊದಲೇನಲ್ಲ. 105 ವರ್ಷಗಳ ಹಿಂದೆಯೇ, ಅಂದರೆ, 1912 ರಲ್ಲಿ ‘ಧಾರವಾಡ ಗೋಲ್ಡ್ ಮೈನ್ಸ್ ಲಿಮಿಟೆಡ್’ ಎಂಬ ಸಂಸ್ಥೆ ಎಂಟು ವರ್ಷ ಕಪ್ಪತಗುಡ್ಡದಲ್ಲಿ ಚಿನ್ನದ ಅದಿರು ತೆಗೆದಿತ್ತು. ನಂತರ ಎಷ್ಟೋ ವರ್ಷಗಳವರೆಗೆ ಇಲ್ಲಿ ಗಣಿಗಾರಿಕೆ ಇರಲಿಲ್ಲ. ಈ ಗುಡ್ಡದ ವ್ಯಾಪ್ತಿಯಲ್ಲಿರುವ ಶಿರಹಟ್ಟಿ ತಾಲೂಕಿನ ಜಿಲ್ಲಿಗೆರೆ ಗ್ರಾಮದಲ್ಲಿ ‘ಸಾಂಗ್ಲಿ ಗೋಲ್ಡ್ ಮೈನ್ಸ್’ ಎಂಬ ಕಂಪನಿ ಒಟ್ಟು 98 ಎಕರೆ 6 ಗುಂಟೆ ಪ್ರದೇಶಕ್ಕೆ ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಿತ್ತು. ಆದರೆ, ಅರ್ಜಿ ಜೊತೆಗೆ ಮೂಲ ದಾಖಲೆಗಳು ಹಾಗೂ ನಕಾಶೆ ಇರದ ಕಾರಣ ಅರಣ್ಯ ಇಲಾಖೆ ಅರ್ಜಿಯನ್ನು ತಳ್ಳಿಹಾಕಿತ್ತು. “ಇದೇ ಪ್ರದೇಶದಲ್ಲಿ ಆರು ವರ್ಷಗಳ ಕಾಲ ಗಣಿಗಾರಿಕೆ ಮಾಡಬಹುದು. ಇಲ್ಲಿ ಮಧ್ಯಮ ಗುಣಮಟ್ಟದ ಚಿನ್ನ ಇದೆ ಹಾಗೂ ಇಲ್ಲಿ ಅಂದಾಜು 11 ಲಕ್ಷ ಟನ್ ಚಿನ್ನದ ಅದಿರು ಇದೆ,” ಎಂದೂ ಗಣಿ ಕಂಪನಿಯೊಂದು ಅರ್ಜಿ ಸಲ್ಲಿಸಿತ್ತು. ಇದೂ ಕೋರ್ಟ್‌ವರೆಗೂ ಹೋಯಿತು.

ಕಪ್ಪತಗುಡ್ಡ ಎಂಬ ಜೀವವೈವಿಧ್ಯ ತಾಣ..! ಗದುಗಿನ ಬಿಂಕದಕಟ್ಟಿ ಗ್ರಾಮದಂಚಿನಿಂದ ಆರಂಭವಾಗುವ ಕಪ್ಪತಗುಡ್ಡವು ಮುಂಡರಗಿ ತಾಲೂಕಿನ ಶಿಂಗಟಾಲೂರಿನವರೆಗೆ ಚಾಚಿಕೊಂಡಿದೆ. ಈ ಗುಡ್ಡವು ಒಟ್ಟು 63 ಕಿಲೋ ಮೀಟರ್ ಗಳಷ್ಟು ಉದ್ದವಿದ್ದು, 32,346.524 ಹೆಕ್ಟೇರ್‌ನಷ್ಟು ವಿಸ್ತಾರವಾಗಿದೆ. ಕೆಂಪು ಮಿಶ್ರಿತ ಮಣ್ಣಿನಿಂದ ಕೂಡಿರುವ ಈ ಗುಡ್ಡದ ಒಡಲಲ್ಲಿ ಹೆಮಟೈಟ್, ಲಿಮೋನೈಟ್, ತಾಮ್ರ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಚಿನ್ನ ಸೇರಿದಂತೆ ಹಲವು ಖನಿಜಗಳಿವೆ.

ಇಲ್ಲಿ 300 ಕ್ಕೂ ಅಧಿಕ ಜಾತಿಯ ಔಷಧೀಯ ಸಸ್ಯಗಳಿವೆ. ಚಿರತೆ, ಕರಡಿ, ತೋಳ, ನರಿ, ಪುನುಗ ಬೆಕ್ಕು, ಕಾಡು ಕುರಿ, ಚುಕ್ಕೆ ಜಿಂಕೆ, ಮುಳ್ಳು ಹಂದಿ, ಸಾರಂಗ ಹಾಗೂ 13 ಸಾವಿರಕ್ಕೂ ಹೆಚ್ಚು ನವಿಲುಗಳೂ ಇವೆ. ಗದಗ ಜಿಲ್ಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಕವಲುಕವಲಾಗಿ ಹರಡಿಕೊಂಡಿರುವ ಚಿಕ್ಕ-ದೊಡ್ಡ ಗುಡ್ಡದ ಸಾಲುಗಳೇ ಕಪ್ಪತಗುಡ್ಡಗಳು. ಅದರಲ್ಲೊಂದು ಸರಣಿ ಮುಂಡರಗಿ ತಾಲೂಕಿನ ಸಿಂಗಟಾಲೂರು ಕ್ಷೇತ್ರದ ವರೆಗೂ ಚಾಚಿಕೊಂಡಿದೆ. ಡೋಣಿ ಗ್ರಾಮದಿಂದ 4 ಕಿಲೋ ಮೀಟರ್ ಗಳಷ್ಟು ಅಂತರದಲ್ಲಿ ಬೃಹದಾಕಾರದ ಶಿಖರಗಳನ್ನೊಳಗೊಂಡ ಬೆಟ್ಟಗಳ ಸಮುಚ್ಚಯ ಮಾತ್ರವೇ ಕಪ್ಪತಗುಡ್ಡ ಎಂಬುದು ಪ್ರತೀತಿ. ಆದರೆ, ಬಹುತೇಕರಿಗೆ ಇದು ಗೊತ್ತಿಲ್ಲ.

ಬಿಂಕದಕಟ್ಟಿಯಿದ ಶಿಂಗಟಾಲೂರಿನವರೆಗೆ ಇರುವ ಗಿರಿಗಳ ಸಮುಚ್ಚಯವೆಲ್ಲ ಕಪ್ಪತಗುಡ್ಡವೇ. ಹಿಂದೆಯೇ ಬಹುಸಂಖ್ಯೆಯಲ್ಲಿ ಪಾರಿವಾಳಗಳ ನೆಲೆ ಇದಾಗಿದ್ದರಿಂದ ‘ಕಪೋತಗಿರಿ’ ಎಂಬುದು ವಾಡಿಕೆಯಲ್ಲಿರುವ ಹೆಸರು. ಕಪ್ಪತಮಲ್ಲಯ್ಯ ಹಾಗೂ ನಂದಿವೇರಿ ಬಸವಣ್ಣ ಇಲ್ಲಿನ ಅಧಿದೇವತೆಗಳು ಎಂಬ ಪ್ರತೀತಿ ಇದೆ.

ಕಪ್ಪತಗುಡ್ಡ ಖನಿಜ ಸಂಪತ್ತಿನ ಆಗರ. ಹಿಂದೊಮ್ಮೆ ಅಮೂಲ್ಯ ಹಾಗೂ ಅಪರೂಪದ ನೂರಾರು ಔಷಧೀಯ ಸಸ್ಯಗಳ ಬೀಡಾಗಿ, ಗಿಡಮರಗಳಿಂದ ತುಂಬಿಕೊಂಡು, ಪಶುಪಕ್ಷಿಗಳ ಸಂಕುಲ, ಕಲರವದೊಂದಿಗೆ ಪ್ರಕೃತಿಯ ರಮ್ಯ ನಿಗೂಢತೆ, ಚೆಲುವು, ಭವ್ಯತೆಯಿಂದ ಬೀಗುತ್ತ ಮಾಧುರ್ಯದ ರಸಭಕ್ಷ್ಯವನ್ನುಣಿಸುತ್ತಿದ್ದ ಈ ಬೆಟ್ಟ ಪ್ರದೇಶವು, ಕಳೆದ ಆರೆಂಟು ದಶಕಗಳಲ್ಲಿ ಶೋಷಣೆಗೀಡಾಗಿ ಬೆತ್ತಲು ಗುಡ್ಡವಾಗಿ ರಣರಣಿಸಿ ಕಂಗೆಟ್ಟಿದೆ. ಕಳೆದ ಶತಮಾನದ ಕೊನೆಯಲ್ಲಿ ವಿಕೃತಿಯ ಪರಾಕಾಷ್ಠೆ ತಲುಪಿ ಸೋತು ಸೊರಗಿತ್ತು. ನಂತರ ಅದು ಹಸುರಾಗಿದ್ದು ವಿಸ್ಮಯವೇ ಸರಿ.

ಅಪರೂಪದ ಸಸ್ಯ, ಮರಗಳ ಬೆಟ್ಟಶ್ರೇಣಿ ಕಪ್ಪತ್ತಗುಡ್ಡವೂ..! ಆಲ, ಅಂಕೇರಿ, ಅಮತಬಳ್ಳಿ, ಅರಳಿ, ಅಮಟೆ, ಅನಂತಮೂಲ, ಅಜವಾನ, ಅತ್ತಿ ಅಡಸೋಗಿ, ನಕರಿಸೊಪ್ಪು, ಚಿತ್ರಮೂಲ, ಸಂಜೀವಿನಿ, ಕಾಡು ಬಾದಾಮಿ, ರಕ್ತಚಂದನ ಕಾರಿ, ಕಕ್ಕಿ ಕವಳೆ, ಕಣಗಲ, ಬಸವನಪಾದ, ಹನಮ ಹಸ್ತ, ಕಾಡಿಗ್ಗರಗ, ಉತ್ತರಾಣಿ, ಕಾಡನಿಂಬೆ, ಗಜಗಕಾಸರಕ್, ಕೇಶ ಕೆಜೋರಾ, ಕರ್ಪೂರ, ಲೋಬಾನ, ಕರಿಎಕ್ಕ, ಬಿಳಿಎಕ್ಕ, ಗುಲಗಂಜಿ, ಚೊಗಚಿ, ಗೊರಂಟೆ, ತೇಗ, ತಪಸಿ, ಪಾಷಾಣ ಬೇದಿ, ಪಾರಿಜಾತ, ಪುಷ್ಕರ ಮೂಲ, ಬಕುಲಾಬಾಲಿ, ರುದ್ರಾಕ್ಷಿ ಸಪ್ತ ವರ್ಣ, ಮೂಚ ಪತ್ತಿ, ಶಂಕಪುಷ್ಪ ಹೊಗ್ಗೂಳ, ಹಿರೇಮದ್ದು, ಹಿಪ್ಪಲ ಸೊನಕ್ಕೆ, ಶಿಖಕಲ್ಲಿ ಸಬ್ಬಸಗಿ, ಪಚಗ, ಕಾಡು ಸಬ್ಬಸಗಿ, ಹೊಂಗೆ, ಬೇವು, ಹುಣಸಿ, ನೆಲ್ಲಿ, ತಪಸಿ, ಬಿಲ್ವಪತ್ರಿ, ಆಂಜನ, ಮುತ್ತಲ, ಬಳವಲ, ಬಾರಿ, ಅರಳಿ, ಬಸರಿ, ಬನ್ನಿ ಮುಂತಾದ ಸಸ್ಯಗಳ ಮತ್ತು ಮರಗಳು ಇವೆ ಇಲ್ಲಿ.

ಕೆಲವು ಪ್ರಮುಖರ ಅಂಬೋಣ ಮತ್ತು ಜನ, ಅಧಿಕಾರಿಗಳು ಏನಂತಾರೆ..?: ಗುಡ್ಡದ ಅಂಚಿನ ಜನರಿಗೆ ಬೇರೆ ಕಡೆಗೆ ವ್ಯವಸ್ಥೆ ಮಾಡುವುದು ಸೂಕ್ತ. ಇಲ್ಲಿನ ಕೆಲ ಕುರಿಗಾಹಿಗಳು ಮರಗಳಡಿ ಅಡುಗೆ ಮಾಡಿ ಊಟ ಮಾಡಿ, ಎಲ್ಲವನ್ನೂ ಅಲ್ಲಿಯೇ ಉಳಿಸಿಹೋಗುತ್ತಿದ್ದಾರೆ. ಇದರಿಂದ ಇಲ್ಲಿನ ಪ್ರಾಣಿ, ಪಕ್ಷಿಗಳಿಗೆ ತೊಂದರೆ ಆಗುತ್ತಿದೆ. ನವಿಲುಗಳ ಸಂಖ್ಯೆ ಕಡಿಮೆಯಾಗಲು ಇದೇ ಕಾರಣ ಎಂದು ಪ್ರಭುರಾಜಗೌಡ ಪಾಟೀಲ, ಸಮಾಜ ಸೇವಕ & nbsp; ಹೇಳುತ್ತಾರೆ.

ಕಪ್ಪತಗುಡ್ಡ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗಿದೆ ಎಂದು ಕೈಕಟ್ಟಿ ಕೂಡುವಂತಿಲ್ಲ. ಗಣಿ ಕಂಪನಿಗಳ ವಾರೆಗಣ್ಣು ಗಿರಿಯತ್ತ ಇನ್ನೂ ಹೆಚ್ಚಾಗಿ ಇದೆ. ಅದರ ಜೊತೆಗೆ, ಪವನ ವಿದ್ಯುತ್ ಸ್ಥಾವರಗಳು ಅಲ್ಲಿ ಕಾಲಿಟ್ಟಿವೆ. ಒಟ್ಟಾರೆ ಎಲ್ಲ ಪರಿಸರವಾದಿಗಳು ಮತ್ತು ಪರಿಸರ ಪ್ರೇಮಿಗಳು ಗುಡ್ಡವನ್ನು ಕಾಯುವ ಪರಿಸ್ಥಿತಿ ಇನ್ನೂ ಇದೆ ಎಂದು ಮಂಜುನಾಥ ನಾಯಕ, ಸ್ಥಳೀಯರು, ಹೇಳುತ್ತಾರೆ.

ಈ ಗುಡ್ಡದ ಅಂಚಿನಲ್ಲಿ ವಾಸಿಸುವ ಕೆಲವರು ಬೇಸಿಗೆ ಪ್ರಾರಂಭವಾದ ಕೂಡಲೇ ತಮ್ಮನ್ನೆಲ್ಲ ಒಕ್ಕಲೆಬಿಸುತ್ತಾರೆ ಎಂದು ಗುಡ್ಡಕ್ಕೆ ಬೆಂಕಿ ಇಡುತ್ತಾರೆ. ಈ ರೀತಿಯಾಗಿ ಬೆಂಕಿ ಇಟ್ಟರೆ ವರ್ಷವೆಲ್ಲ ಒಳ್ಳೆಯದಾಗುತ್ತದೆ ಎಂಬ ಮೌಢ್ಯ ಬಿತ್ತಲಾಗಿದೆ. ಈಗ ಅರಣ್ಯ ಇಲಾಖೆಯ ರಕ್ಷಕರು (ಗಾರ್ಡ್ಸ್) ಹೆಚ್ಚಿರುವುದರಿಂದ ಅದೆಲ್ಲ ನಿಯಂತ್ರಣವಾಗಿದೆ ಎನ್ನುತ್ತಾರೆ ಮಂಜುನಾಥ ಡೋಣಿ, ಸಂಭಾಪೂರ.

ಕಪ್ಪತಗುಡ್ಡದ ಕುರಿತು ಜನರಿಗೆ ತುಂಬಾ ಪ್ರೀತಿ, ಕಾಳಜಿ ಇದೆ. ಗುಡ್ಡದ ಬಗ್ಗೆ ಏನಾದರೂ ಕಾರ್ಯಕ್ರಮ ಮಾಡಿದರೆ ಗ್ರಾಮಸ್ಥರು ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಜನರ ಬೆಂಬಲ ಸಿಕ್ಕಿದ್ದು ಖುಷಿಯ ವಿಚಾರ. ಬರಡಾಗಿದ್ದ ಗುಡ್ಡವನ್ನು ಹಸಿರು ಮಾಡಿದ್ದು ರೋಚಕ ಕತೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ತಂದಿದೆ ಎಂಬುದು ಸೋನಲ್ ವೃಶ್ನಿ, ಗದಗ ಜಿಲ್ಲಾ ಅರಣ್ಯಾಧಿಕಾರಿಯವರ ಅಂಬೋಣವಾಗಿದೆ.

ಕಪ್ಪತಗುಡ್ಡ ನೋಡಲು ಸುತ್ತಲ ಜಿಲ್ಲೆಗಳಿಂದಷ್ಟೇ ಅಲ್ಲ, ಸುತ್ತಮುತ್ತಲ ರಾಜ್ಯದಿಂದಲೂ ಜನ ಬರುತ್ತಾರೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಪ್ರವಾಸಿಗರ ದಂಡು ಇದ್ದೇ ಇರುತ್ತದೆ. ಉತ್ತರ ಕರ್ನಾಟಕ ಎಂದರೆ ಬರ, ಬಿಸಿಲು ಎಂದುಕೊಂಡವರು ಕಪ್ಪತಗುಡ್ಡವನ್ನು ನೋಡಿದರೆ ನಿಬ್ಬೆರಗಾಗುವುದರಲ್ಲಿ ಸಂಶಯವಿಲ್ಲವೆಂದು ಎಸ್.ಬಿ.ಪೂಜಾರ್, ಅರಣ್ಯ ಇಲಾಖೆ ಸಿಬ್ಬಂದಿ ಅವರು ಹೆಮ್ಮೆಯಿಂದ ಹೇಳುತ್ತಾರೆ.
ಹೀಗೆಯೇ ಹತ್ತು ಹಲವು ಪ್ರಮುರ ಹೆಮ್ಮೆಯ ತಾಣವಾಗಿದೆ ಕಪ್ಪತ್ತಗುಡ್ಡ..!

ಕಪ್ಪತ ಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರದ ಚಿಂತನೆಯೂ..!? ಅಪಾರ ಜೀವ ವೈವಿಧ್ಯತೆಯ ಆಗರವಾಗಿರುವ ಕಪ್ಪತಗುಡ್ಡದ ಮೇಲೆ ಮತ್ತೆ ಮತ್ತೇ ಗಣಿ ಉದ್ಯಮಿಗಳ ಕಣ್ಣು ಬಿದ್ದಿದೆ. ರಾಜ್ಯ ಸರ್ಕಾರ ಗದಗದ ಕಪ್ಪತ್ತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಅನುಮತಿ ನೀಡಲು ಯೋಜಿಸುತ್ತಿದೆ.

ಗದಗ ಜಿಲ್ಲೆಯ ಕಪ್ಪತ್ತಗುಡ್ಡ ‘ವನ್ಯಜೀವಿಧಾಮ’ ಸ್ಥಾನಮಾನ ರದ್ದುಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಬಂದಿದೆ. ‘ವನ್ಯಜೀವಿಧಾಮ ಸ್ಥಾನಮಾನವನ್ನು ರದ್ದುಗೊಳಿಸಲು ಪ್ರಭಾವಿ ಗಣಿ ಕಂಪನಿಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತವೆ. ಇದಕ್ಕಾಗಿ ಸ್ಥಳೀಯರನ್ನೂ ಬಳಕೆ ಮಾಡಿಕೊಳ್ಳುತ್ತಿವೆ.

ಇಲ್ಲಿರುವ ‘ಚಿನ್ನದ ಅದಿರು ನಿಕ್ಷೇಪದ ಮೇಲೆಯೇ ಈ ಕಂಪನಿಗಳ ಕಣ್ಣು ನೆಟ್ಟಿವೆ’ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ವನ್ಯಜೀವಿಧಾಮ ಸ್ಥಾನಮಾನವನ್ನು ರದ್ದು ಮಾಡಿದರೆ, ಅದರಿಂದ ಗಣಿಗಾರಿಕೆಗೆ ಅನುಕೂಲವಾಗುತ್ತದೆ. ಹೀಗಾಗಿ ಈ ಕಂಪನಿಗಳು ಜನರನ್ನು ಮುಂದಿಟ್ಟುಕೊಂಡು ಮರೆಯಿಂದ ಸಮರ ನಡೆಸುತ್ತಿವೆ.

ಗದಗ ಜಿಲ್ಲೆ ಒಣ ಪ್ರದೇಶವಾಗಿದ್ದು, ಜಿಲ್ಲೆಯಲ್ಲಿ ಶೇ 6 ರಷ್ಟು ಮಾತ್ರ ಅರಣ್ಯಭೂಮಿ ಇದೆ. ಕಪ್ಪತಗುಡ್ಡದಲ್ಲಿ ಶೇ 5 ರಷ್ಟು ಅರಣ್ಯವಿದೆ. ಒಟ್ಟು 32 ಸಾವಿರ ಹೆಕ್ಟೇರ್‌ನಲ್ಲಿ 25,000 ಹೆಕ್ಟೇರ್‌ ಅರಣ್ಯ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕುಗಳಲ್ಲಿ ವ್ಯಾಪಿಸಿದೆ.

ಈ ಪ್ರದೇಶವು ಅಪರೂಪದ ಗಿಡಮೂಲಿಕೆಗಳು ಮತ್ತು ಔಷಧಿಯ ಸಸ್ಯಗಳ ಆಗರ. ಅಲ್ಲದೇ, ವನ್ಯಜೀವಿಗಳ ಆವಾಸ ಸ್ಥಾನವೂ ಆಗಿದೆ. ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮೀಜಿ ಮತ್ತು ಇತರ ಪ್ರಮುಖರ ಹೋರಾಟದ ಪರಿಣಾಮ ಈ ಪ್ರದೇಶ ಮೂಲ ಸ್ವರೂಪದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ.

ಹೀಗಿರುವಾಗ ವನ್ಯಜೀವಿಧಾಮ ಸ್ಥಾನಮಾನ ಹಿಂದಕ್ಕೆ ಪಡೆಯುವಂತೆ ಕಾಣದ ಕೈಗಳ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿಧಾಮ ಎಂದು ಘೋಷಿಸಿದ ಅಧಿಸೂಚನೆಯನ್ನೂ ಡಿನೋಟಿಫೈ ಮಾಡುವಂತೆ ಸಲ್ಲಿಕೆಯಾದ ಕಡತ ಮುಖ್ಯಮಂತ್ರಿ ಮತ್ತೇ ಈಗ ಯಡಿಯೂರಪ್ಪ ಅವರ ಮುಂದೆ ಬಂದಿದೆ.

ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕಾದರೂ ಇಲ್ಲಿ ಹಾದಿ ಸುಗಮ ಮಾಡಿಕೊಂಡರೆ, ಕೇಂದ್ರದಲ್ಲಿ ನಿಭಾಯಿಸಬಹುದು ಎಂಬುದು ಗಣಿ ಕಂಪನಿಗಳ ಲೆಕ್ಕಾಚಾರ. ವನ್ಯಜೀವಿ ಧಾಮದಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶ ನೀಡಲಾಗುತ್ತಿಲ್ಲ. ಅದಕ್ಕೆ ಅವಕಾಶ ನೀಡಲು ವನ್ಯಜೀವಿಧಾಮ ಸ್ಥಾನಮಾನ ರದ್ದು ಮಾಡಬೇಕು ಎಂಬ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.

ಬಲ್ಡೋಟಾ ಕಂಪನಿ ಸುಮಾರು 20 ವರ್ಷಗಳಷ್ಟು ಹಿಂದೆಯೇ ಇಲ್ಲಿ ಚಿನ್ನದ ನಿಕ್ಷೇಪ ಇದೆಯೆ ಎಂಬ ಸಮೀಕ್ಷೆ ಮಾಡಿಸಿತ್ತು. ಆ ಪ್ರಕಾರ, ಈ ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಚಿನ್ನ ಇರುವುದು ಪತ್ತೆ ಆಗಿತ್ತು ಎಂದೂ ಈ ಗಣಿ ಕಂಪನಿಗಳು ಹೇಳುತ್ತಿವೆ ಈಗ.

ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರಾಜು ಖಾನಪ್ಪನವರ್ ಕಿಡಿ ಕಾರಿದ್ದಾರೆ. ಸದ್ಯ ಗಣಿಗಾರಿಕೆ ಚೆಂಡು ಯಡಿಯೂರಪ್ಪ ಅವರ ಮುಂದಿದೆ. ಗದಗ ಜಿಲ್ಲೆಯ ಜನತೆ ಕಪ್ಪತಗುಡ್ಡವನ್ನು ರಕ್ಷಿಸಲು ಮುಂದಾಗಿದ್ದಾರೆ.

ವನ್ಯಜೀವಿ ಅಭಯಾರಣ್ಯ ಟ್ಯಾಗ್ ತೆಗೆಯಬೇಕು ಎಂದು ಕೆಲವು ಮಂದಿ ಈ ಗಣಿ ಕಳ್ಳರು ಮತ್ತು ಪವನ ವಿದ್ಯುತ್ ಮಾಲೀಖರು ಒತ್ತಾಯಿಸಿದ್ದಾರೆಂದು ಗದಗ ಅರಣ್ಯಧಿಕಾರಿಗಳು ತಿಳಿಸಿದ್ದಾರೆ, ಈ ಸಂಬಂಧ ಅರಣ್ಯ ಸಚಿವರು ಸಿ.ಎಂ.ಯಡಿಯೂರಪ್ಪ ಜೊತೆ ಚರ್ಚಿಸಬೇಕು. ಇನ್ನೂ ಈ ಸಂಬಂಧ ಅರಣ್ಯಾಧಿಕಾರಿಗಳ ವಿರುದ್ಧ ಎಫ್.ಐ.ಆರ್. ದಾಖಲಿಸಬೇಕು.

ಕಪ್ಪತ್ ಗುಡ್ಡದಲ್ಲಿ ಮತ್ತೆ ಮತ್ತೇ ಕಾಣಿಸಿಕೊಳ್ಳುತ್ತಿದೆ ಬೆಂಕಿಯೂ..!: ಕಪ್ಪತ್ತಗುಡ್ಡದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಮತ್ತೆ, ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಕಪ್ಪತ್ತಗುಡಲ್ಲಿರುವ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿರುವ ಔಷಧೀಯ ಸಸ್ಯಗಳು, ಚಿಕ್ಕಪುಟ್ಟ ಗಿಡಗಂಟಿಗಳು, ಬಾದೆಹುಲ್ಲು ನಾಶವಾಗಿದೆ. ಬೆಂಕಿ ಅವಘಡಕ್ಕೆ ಕಿಡಿಗೇಡಿಗಳ ಕೈವಾಡ ಕಾರಣವೋ ಅಥವಾ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆಯೇ ಎಂಬುದರ ಬಗ್ಗೆ ಅರಣ್ಯ ಇಲಾಖೆಯೇ ಉತ್ತರಿಸಬೇಕಿದೆ. ಜೊತೆಗೆ ಕಪ್ಪತ್ತಗುಡ್ಡದಲ್ಲಿರುವ ಗಾಳಿಯಂತ್ರಗಳಿಂದ ಸಿಡಿಯುವ ಕಿಡಿ ಬೆಂಕಿ ಹತ್ತಲು ಕಾರಣವೋ ಎನ್ನುವುದು ತನಿಖೆಯಿಂದ ಮಾತ್ರ ಹೊರ ಬರಬೇಕಿದೆ.

ಪ್ರತಿವರ್ಷ ಕಪ್ಪತ್ತಗುಡ್ಡದಲ್ಲಿ ಬೆಂಕಿಯಿಂದ ಔಷಧೀಯ ಸಸ್ಯಗಳು, ಅಪರೂಪದ ಸಸ್ಯಗಳು, ಬಾದೆಯ ಹುಲ್ಲು, ಪ್ರಾಣಿ ಪಕ್ಷಿಗಳಿಗೆ ತೊಂದರೆಯಂತೂ ತಪ್ಪುತ್ತಿಲ್ಲ. ಕಪ್ಪತ್ತ ಹಿಲ್ಸ್‌ ವಲಯ ಅರಣ್ಯ ಇಲಾಖೆ ಪ್ರತಿ ವರ್ಷ ಬೆಂಕಿ ಬೀಳದಂತೆ ಮುಂಜಾಗ್ರತಾ ಕ್ರಮ ಕೈಕೊಂಡು, ಬೆಂಕಿ ಬೇರೆಡೆಗೆ ಹರಡದಂತೆ ಬೆಂಕಿಯ (ಪೈಯರ್‌ )ಲೈನ್‌ಗಳನ್ನು ಹಾಕುತ್ತದೆ. ಆದರೆ, ಕಪ್ಪತ್ತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ರಭಸವಾಗಿ ಬೀಸುವ ಗಾಳಿಯಿಂದ ಹತೋಟಿಗೆ ಬಾರದೇ ಬೆಂಕಿ ಜ್ವಾಲೆ ನಿಯಂತ್ರಣ ಮೀರಿ ಆವರಿಸತೊಡಗುತ್ತದೆ.

ಆಧುನಿಕ ಉಪಕರಣ ಅಗತ್ಯ– ಕಪ್ಪತ್ತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಆಧುನಿಕ ಉಪಕರಣಗಳು, ರಾಸಾಯನಿಕ ಪುಡಿಯ ಗ್ಯಾಸ್‌ ಉಪಯೋಗ ಕಂಡದ್ದು ಕಡಿಮೆಯೇ ಎನ್ನಬೇಕು. ಸಿಬ್ಬಂದಿ ಬೆಂಕಿ ನಂದಿಸಲು ಗಿಡದ ತಪ್ಪಲಿನಿಂದ ಬೆಂಕಿ ಆರಿಸುವಾಗ ಬೆಂಕಿಯ ಕೆನ್ನಾಲಿಗೆ ಹಿಡತಕ್ಕೆ ಸಿಗದೇ ಆವರಿಸತೊಡಗುತ್ತದೆ. ಇದರಿಂದ ಅರಣ್ಯದಲ್ಲಿ ಬೆಂಕಿ ಆವರಿಸುವಾಗ ಸಿಬ್ಬಂದಿ ಅಸಹಾಯಕರಾಗಿ ನಿಲ್ಲಬೇಕಾಗುತ್ತದೆ.

ಬೆಂಕಿ ನಿರೋಧಕ ಬಟ್ಟೆ-ನೀರು– ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು 24 ಗಂಟೆಯೂ ಶ್ರಮಿಸುತ್ತಾರೆ. ಆದರೆ ಬೆಂಕಿಯಿಂದ ರಕ್ಷಿಸಿಕೊಳ್ಳಲುಸಿಬ್ಬಂದಿಗೆ ಬೆಂಕಿ ನಿರೋಧಕ ಬಟ್ಟೆಗಳು, ಕಾರ್ಬನ್‌ ಡೈಆಕ್ಸೈಡ್‌ ಮತ್ತು ಹೊಗೆಯಿಂದ ರಕ್ಷಿಸಿಕೊಳ್ಳಲು ಮುಖಕ್ಕೆ ಮಾಸ್ಕ್, ಕೈಗವಸುಗಳು ಬೇಕು. ಜತೆಗೆಬೆಂಕಿಯನ್ನು ನಂದಿಸುವಾಗ ವಿಪರೀತ ದಾಹ ಉಂಟಾಗುವುದರಿಂದ ಕುಡಿಯಲು ನೀರು ಕೂಡಾ ಬೇಕಾಗುತ್ತದೆ. ಕೆಲ ಸಂದರ್ಭದಲ್ಲಿ ಬೆಂಕಿ ನಂದಿಸುವಾಗ ನೀರಡಿಕೆಯಿಂದ ಸಿಬ್ಬಂದಿ ತತ್ತರಿಸುತ್ತಾರೆ.

ಗ್ರಾಮ ಅರಣ್ಯ ಸಮಿತಿ ಸಹಭಾಗಿತ್ವವೂ ಅಗತ್ಯ– ಕಪ್ಪತ್ತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ಗ್ರಾಮ ಅರಣ್ಯ ಸಮಿತಿಗಳು, ಯುವ ಸಂಘಗಳ, ಗುಡ್ಡದ ಸುತ್ತಲಿನಲ್ಲಿರುವ ಹೊಲಗಳ ರೈತರ ಸಹಭಾಗಿತ್ವ ಕೂಡಾ ತುಂಬಾ ಅಗತ್ಯವಿದೆ. ಬೆಂಕಿ ನಂದಿಸಲು ಸ್ಥಳೀಯರ ಸಹಕಾರ, ಸಹಭಾಗಿತ್ವ ಅಗತ್ಯ. ಏಕೆಂದರೆ, ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದರೆ ಬೆಂಕಿಯಿಂದಾಗುವ ಹೆಚ್ಚಿನ ನಷ್ಟ ತಪ್ಪಿಸಬಹುದಾಗಿದೆ.

ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ಗ್ರಾಮದ ಯುವಕರು, ರೈತರು ಸ್ವಯಂಪ್ರೇರಣೆಯಿಂದ ಬೆಂಕಿ ಆರಿಸಲು ಗುಂಪು ರಚಿಸಿಕೊಂಡು ನೀರು, ಬೆಲ್ಲದ ಜೊತೆಗೆ ಟ್ರ್ಯಾಕ್ಟರ್‌ ತೆಗೆದುಕೊಂಡು ಹೋಗಿ ಬೆಂಕಿ ಆರಿಸಿ ಬರುತ್ತಿದ್ದೆವು. ಆದರೆ, ಅರಣ್ಯ ಇಲಾಖೆಯವರು ಅರಣ್ಯ ಸಮಿತಿಗಳು, ಜನರ ಜತೆಗೆ ಸಂವಾದ ನಡೆಸಿದರೆ ಸಹಕಾರ ಇದ್ದೇ ಇರುತ್ತದೆ. ಕಪ್ಪತ್ತಗುಡ್ಡದ ಸುತ್ತಲಿನ 32 ಹಳ್ಳಿಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಬೆಂಕಿ ಪ್ರಕರಣ ತಡೆಯಬಹುದು. ಪ್ರಸಕ್ತ ಬೆಂಕಿ ಪ್ರಕರಣದ ಸಮಗ್ರ ತನಿಖೆ ನಡೆದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಶಂಕರಗೌಡ ಜಾಯನಗೌಡರ, ಮಾಜಿ ಅಧ್ಯಕ್ಷ, ಡೋಣಿ ಗ್ರಾಪಂ‌. ಹೇಳುತ್ತಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಕಪ್ಪತ್ತಗುಡ್ಡದಲ್ಲಿ 12 ಸಲ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ 700 ರಿಂದ 800 ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಔಷಧೀಯ ಸಸ್ಯಗಳು, ಬಾದೆಹುಲ್ಲು, ಸಣ್ಣಪುಟ್ಟ ಗಿಡಗಂಟಿಗಳು ಸುಟ್ಟಿವೆ. ಬೆಂಕಿ ಘಟನೆ ಕುರಿತು ಈಗಾಗಲೇ 15 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪ್ರದೀಪ್‌ ಪವಾರ, ಕಪ್ಪತ್ತಹಿಲ್ಸ್‌ ವಲಯ ಅರಣ್ಯಾಧಿಕಾರಿ ಹು.ಬಾ.ವಡ್ಡಟಿ ಹೇಳುತ್ತಾರೆ.

ಅದಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಮೂಡ ನಂಬಿಕೆಯ ಜನರು ಪ್ರತಿ ವರ್ಷವೂ ಹೀಗೆಯೇ ಈ ಗುಡ್ಡಕ್ಕೆ ಬೆಂಕಿ ಹಚ್ಚುವುದೂ ಇದೆ. ಕಾರಣ ಹೀಗೆಯೇ ಕಪತ್ತಗುಡ್ಡಕ್ಕೆ ಬೆಂಕಿ ಹಚ್ಚಿದರೆ ತಮ್ಮ ಕಷ್ಟ ಕಾರ್ಪಣ್ಯಗಳು ದೂರಾಗುವವು ಎಂಬ ಮೂಢನಂಬಿಕೆಯಲ್ಲಿ ಇದ್ದಾರೆ ಇಲ್ಲಿಯ ಕೆಲವು ಜನರು. ಆದರೆ ಇವರ ಮೂಲ ವಿಶೇಷವೆಂದರೆ ಇಲ್ಲಿ ಬೇಸಿಗೆಯಲ್ಲಿ ಬೆಂಕಿಯನ್ನು ಹಚ್ಚಿ ನಂತರ ಮಳೆಗಾಲದಲ್ಲಿ ತಮ್ಮ ದನಕರುಗಳಿಗೆ ಉತ್ತಮ ಹುಲುಸಾಗಿ ಹುಲ್ಲು ಬೆಳೆಸಿಕೊಳ್ಳುವುದು ಆಗಿದೆ ಇಲ್ಲಿಯ ಜನರ ಮೂಲ ಉದ್ದೇಶ. ಹೀಗಾಗಿಯೇ ಕಪ್ಪತ್ತಗುಡ್ಡ ವರ್ಷದಲ್ಲಿ ಮೂರ್ನಾಲ್ಕು ಬಾರಿ ಬೆಂಕಿಯ ಕೆನ್ನಾಲಿಗೆಗೆ ಈಡಾಗಬೇಕಾಗಿದೆ. ಇದನ್ನು ತಡೆಯುವುವರು ಯಾರು..?

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here