-
ಕುಶಲ
ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರುವಾಗ, ಕರ್ನಾಟಕದ ರಾಜಕಾರಣಿಗಳು ಬೆಳಗಾವಿಯಲ್ಲಿ ಬೀಡುಬಿಟ್ಟಿರುವಾಗಲೇ ಹೀಗಾಗುವುದು ಹೆಚ್ಚು ಎಂಬುದು ಗಮನಾರ್ಹ.
ಕರ್ನಾಟಕ ಹಾಗೂ ಮಹಾರಾಷ್ಟ್ರದೊಂದಿಗೆ ಗಡಿಭಾಗವನ್ನು ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಕನ್ನಡಿಗರು ಹಾಗೂ ಮರಾಠಿಗರ ನಡುವೆ ವೈಷಮ್ಯ ಹೊಗೆ ಆಡಿದೆ.
ಹಲವು ಬಾರಿ ಬೂದಿ ಮುಚ್ಚಿದ ಕೆಂಡದಂತೆ ಇರುವ ಬೆಳಗಾವಿ ಕನ್ನಡಿಗರು ಹಾಗೂ ಮರಾಠಿಗರ ನಡುವಿನ ವೈಮನಸ್ಸು ಇದೀಗ ಮತ್ತೆ ಕಾಣಿಸಿಕೊಂಡಿದೆ. ಕನ್ನಡ ಬಾವುಟಕ್ಕೆ ಬೆಂಕಿ, ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮೂರ್ತಿಗೆ ಮಸಿ ಎರಚಿದ್ದು ಹಾಗೂ ಶುಕ್ರವಾರ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ, ಪ್ರತಿಭಟನೆ, ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ ಪ್ರಕರಣದ ವರೆಗೆ ಸಾಲು ಸಾಲು ಘಟನೆಗಳು ಪ್ರತೀಕಾರವಾಗಿ ನಡೆಯುತ್ತಿವೆ. ಅದರಲ್ಲೂ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರುವಾಗ, ಕರ್ನಾಟಕದ ರಾಜಕಾರಣಿಗಳು ಬೆಳಗಾವಿಯಲ್ಲಿ ಬೀಡುಬಿಟ್ಟಿರುವಾಗಲೇ ಹೀಗಾಗುವುದು ಹೆಚ್ಚು ಎಂಬುದು ಗಮನಾರ್ಹ.
ಶುಕ್ರವಾರ (ಡಿಸೆಂಬರ್ 17) ರಾತ್ರಿ ಮಹಾರಾಷ್ಟ್ರ ಅಥವಾ ಮರಾಠ ಪರ ಹೋರಾಟಗಾರರು ಬೆಳಗಾವಿಯ ಸಾಂಭಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆ ಮೇಲೆ ಮಸಿ ಎರಚಿದ ಘಟನೆಯ ವಿರುದ್ಧ ಈ ಪ್ರತಿಭಟನೆ ನಡೆಸಲಾಗಿದೆ. ಆದರೆ, ಪ್ರತಿಭಟನೆ ಶಾಂತಿಯುತವಾಗಿರದೆ ಸರ್ಕಾರಿ ವಾಹನಗಳ ಧ್ವಂಸ ಮಾಡುವವರೆಗೆ ಕೃತ್ಯ ಮುಂದುವರೆದಿದೆ. ಬೆಳಗಾವಿಯಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸ ಮಾಡುವ ಮೂಲಕ ಸ್ಥಳದಲ್ಲಿ ಇನ್ನಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ಒಂದು ಘಟನೆಯ ಮೊದಲು ಏನೇನು ನಡೆದಿದೆ? : ಈ ಸರಣಿ ಘಟನೆಗಳು ಆರಂಭ ಆದದ್ದು ಡಿಸೆಂಬರ್ 13ನೇ ತಾರೀಖಿನಿಂದ. ಮಹಾರಾಷ್ಟ್ರ ಏಕೀಕರಣ ಸಮಿತಿಯು ಬೆಳಗಾವಿಯನ್ನು ಮಹಾರಾಷ್ಟ್ರದಿಂದ ಸೇರ್ಪಡೆ ಮಾಡಬೇಕು ಎಂದು ಅಧಿವೇಶನ ನಡೆಯುವ ಸ್ಥಳದ ಹೊರ ಆವರಣದಲ್ಲಿ ಡಿಸೆಂಬರ್ 13ರಂದು ಪ್ರತಿಭಟನೆ ಕೈಗೊಂಡಿತ್ತು. ಜೊತೆಗೆ ಕನ್ನಡಪರ ಹೋರಾಟಗಾರರು ಮಹಾರಾಷ್ಟ್ರ ಏಕೀಕರಣ ಸಮಿತಿಯ ದೀಪಕ್ ದಲ್ವಿ ಎಂಬವರ ಮೇಲೆ ಮಸಿ ಎರಚಿತ್ತು. ಈ ಘಟನೆಯ ಬಳಿಕ ಆರೋಪಿಗಳನ್ನು ಬಂಧಿಸಲಾಗಿದ್ದರೂ ಘರ್ಷಣೆ ಅಲ್ಲಿಗೆ ನಿಲ್ಲಲಿಲ್ಲ.
ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬೆಂಬಲ ಸೂಚಿಸಿ ಮಹಾರಾಷ್ಟ್ರದ ಕೊಲ್ಹಾಪುರ್ ಎಂಬಲ್ಲಿ ಮಂಗಳವಾರ (ಡಿಸೆಂಬರ್ 14) ರಂದು ಕನ್ನಡ ಬಾವುಟವನ್ನು ಸುಡಲಾಗಿತ್ತು. ಇದಾಗಿ ಒಂದು ದಿನದ ಬಳಿಕ ಅಂದರೆ ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಶಿವಾಜಿ ಮಾಹಾರಾಜರ ಪ್ರತಿಮೆಗೆ ಮಸಿ ಬಳಿಯಲಾಗಿತ್ತು. ವ್ಯಕ್ತಿ ಒಬ್ಬ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಎರಚುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಘಟನೆಗಳಿಗೆ ಪ್ರತಿಯಾಗಿ ನಿನ್ನೆ (ಡಿಸೆಂಬರ್ 17) ರಾತ್ರಿ ಮತ್ತೆ ಬೆಳಗಾವಿಯಲ್ಲಿ ಮರಾಠಿಗರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹಿಂಸಾಚಾರ, ದುಷ್ಕೃತ್ಯಕ್ಕೂ ಕಾರಣವಾಗಿದೆ.
ಕನ್ನಡದ ಬಾವುಟ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರ ಮುಂದಾಗಿದೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಲಿದೆ. ಆದರೆ, ಅತ್ತ ಮಹಾರಾಷ್ಟ್ರ ಶಿವಸೇನೆಯ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಶಿವಾಜಿ ಪ್ರತಿಮೆಗೆ ಮಸಿ ಎರಚಿದ ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿ, ಹುಬ್ಬಳ್ಳಿ- ಧಾರವಾಡದಲ್ಲೂ ಪೊಲಿಸ್ ಬಂದೋಬಸ್ತ್ : ಘಟನೆಯು ಹಿಂಸಾತ್ಮಕ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತಿರುವಂತೆ ಶನಿವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗಿನವರೆಗೆ ಬೆಳಗಾವಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಆದೇಶ ನೀಡಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಂಬಂಧಿಸಿ ಹುಬ್ಬಳ್ಳಿ- ಧಾರವಾಡದಲ್ಲಿ ಕೂಡ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಲಾಭು ರಾಮ್ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿರುವ ಶಿವಾಜಿ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಗಳಿಗೆ ಪೊಲೀಸ್ ಭದ್ರತೆ ನೀಡಿದ್ದಾರೆ. ಗುಂಪು ಸೇರುವ ಜನರ ಬಗ್ಗೆ ಮಾಹಿತಿ ಸಂಗ್ರಹಿಸಲು ನಿರ್ದೇಶನ ನೀಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸಾಹಿಲ್ ಬಾಗ್ಲಾಗೆ ನಿಗಾ ವಹಿಸಲು ಸೂಚನೆ ಕೊಡಲಾಗಿದೆ.