ಬೆಳಗಾವಿ; ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟು, ಬೆಳಗಾವಿಯಲ್ಲಿ ಕನ್ನಡಿಗರ ವಾಹನಗಳ ಮೇಲೆ ದಾಳಿ ಮಾಡಿ ಪುಂಡಾಟಿಕೆ ಮಾಡುತ್ತಿರುವ ಎಂಇಎಸ್ ಬಗ್ಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಪುಂಡರಿಗೆ ಖಡಕ್ ಸಂದೇಶ ನೀಡಿದ್ದಾರೆ.
ಮುಖ್ಯಮಂತ್ರಿಗಳು ಈ ಕುರಿತು ಟ್ವೀಟ್ ಮಾಡಿದ್ದಾರೆ. “ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆ ಖಂಡನೀಯ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ತೆಗೆದುಕೊಳ್ಳಲು ಗೃಹಸಚಿವರಿಗೆ ಸೂಚನೆ ನೀಡಲಾಗಿದ್ದು, ಹಲವರ ಬಂಧನವೂ ಆಗಿದೆ. ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಕಾನೂನುಬಾಹಿರ. ಇಂತಹ ಘಟನೆ ನಡೆಯದಂತೆ ದೀರ್ಘಾವಧಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ” ಎಂದು ಹೇಳಿದ್ದಾರೆ.
“ರಾಷ್ಟ್ರಭಕ್ತರ ಪ್ರತಿಮೆಗೆ ಭಂಗ ತರುವುದು ಸರಿಯಲ್ಲ. ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಗೌರವಿಸಬೇಕು. ನಾಡಿಗೆ ಹೋರಾಡಿದವರ, ತ್ಯಾಗ ಮಾಡಿದವರ ಗೌರವ ಉಳಿಸಬೇಕು. ನಾಡಿನಲ್ಲಿ ಕ್ಷೋಭೆ ಉಂಟುಮಾಡುವುದು ಸರಿಯಲ್ಲ. ಕೆಲವೇ ಕೆಲವು ಪುಂಡರು ಇಂತಹ ದುಷ್ಕೃತ್ಯ ಮಾಡುತ್ತಿದ್ದು, ಅವರನ್ನು ಸದೆಬಡಿಯುತ್ತೇವೆ” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಗೃಹ ಸಚಿವರ ಮನವಿ; ಗೃಹ ಸಚಿವ ಆರಗ ಜ್ಞಾನೇಂದ್ರ ಬೆಳಗಾವಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಹಾನಿ ಮಾಡಿರುವುದನ್ನು ಖಂಡಿಸುತ್ತೇನೆ. ಬೆಳಗಾವಿಯ ಈ ಘಟನೆ ಕುರಿತು ಮಾಹಿತಿ ಪಡೆದಿದ್ದು, ಎಫ್‌ಐಆರ್ ದಾಖಲಿಸಿ, ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಘಟನೆಯ ಬಗ್ಗೆಯೂ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದ್ದಾರೆ.
“ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ್ ದೇಶದ ಹೆಮ್ಮೆಯ ಪ್ರತೀಕ. ಪ್ರತಿ ನಾಗರಿಕರು ಗರ್ವದಿಂದ ನೆನೆಸಿಕೊಳ್ಳುವಂತಹ ಭಾರತೀಯ ಪುತ್ರರು ಇವರು. ಈ ಮಹನೀಯರ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು, ದುಷ್ಕೃತ್ಯ ನಡೆಸಿ ಸೌಹಾರ್ದತೆ ಕೆಡಿಸುವ ಕೃತ್ಯಗಳು ಅಕ್ಷಮ್ಯ ಅಪರಾಧ. ಈ ವಿಚಾರದಲ್ಲಿ ಎಲ್ಲರೂ ಶಾಂತಿ ಕಾಪಾಡಬೇಕೆಂದು ಕೋರುತ್ತೇನೆ” ಎಂದು ಮನವಿ ಮಾಡಿದ್ದಾರೆ.