ಬೆಂಗಳೂರು: ಕರ್ನಾಟಕ ಹೈಕೋರ್ಟ್‍ಗೆ ಹಿರಿಯ ವಕೀಲರಾಗಿ ಐದು ಮಂದಿ ಭಾರತೀಯ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಲಾಗಿದ್ದು, ಇವರನ್ನು ಶನಿವಾರ ನಗರದಲ್ಲಿ ಅಭಿನಂದಿಸಲಾಯಿತು.
ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐಸಿಎಐ)ಯಿಂದ ಎಸ್.ಎಸ್. ನಾಗನಂದ್ (2001), ಎ. ಶಂಕರ್ (2018) ಕೆ.ಎಸ್. ರವಿಶಂಕರ್, ವಿ. ರಘುರಾಮನ್, ಕೆ.ಕೆ. ಚೈತನ್ಯ (ಮೂವರು 2021ರಲ್ಲಿ) ಅವರನ್ನು ಕರ್ನಾಟಕ ಹೈಕೋರ್ಟ್‍ಗೆ ಹಿರಿಯ ವಕೀಲರನ್ನಾಗಿ ನೇಮಕ ಮಾಡಲಾಗಿದೆ. ಇವರನ್ನು ವಸಂತನಗರದ ಎಸ್. ನಾರಾಯಣನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶನಿವಾರ ಗೌರವಿಸಲಾಯಿತು.
ಈ ವೇಳೆ ಐಸಿಎಐ ಬೆಂಗಳೂರು ಘಟಕದ ಅಧ್ಯಕ್ಷ ಬಿ.ಟಿ. ಶೆಟ್ಟಿ ಮಾತನಾಡಿ, `2001ರಲ್ಲಿ ಒಬ್ಬರು, 2018ರಲ್ಲಿ ಒಬ್ಬರು ಹಾಗೂ ಇದೀಗ ಮೂರು ಮಂದಿ ಸೇರಿ ಒಟ್ಟಾರೆ ಐವರು ಲೆಕ್ಕಪರಿಶೋಧಕರು ಕರ್ನಾಟಕ ಹೈಕೋರ್ಟ್‍ಗೆ ಹಿರಿಯ ವಕೀಲರಾಗಿ ನೇಮಕವಾಗಿದ್ದಾರೆ. ಇವರ ಉತ್ತಮ ಕಾರ್ಯನಿರ್ವಹಣೆಯಿಂದಾಗಿ ಆಯ್ಕೆ ಮಾಡಲಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಬೆಂಗಳೂರು ಶಾಖೆಯ ಲೆಕ್ಕ ಪರಿಶೋಧಕ ಜಿ.ಎಸ್. ಪ್ರಶಾಂತ್ ಮಾತನಾಡಿ, `ಎಲ್ಲಾ ಲೆಕ್ಕಪರಿಶೋಧಕರಿಗೆ ಇಂದು ಹೆಮ್ಮೆಯ ದಿನವಾಗಿದೆ. `ಪಂಚ ಮಹಾರತ್ನ’ಗಳು ಎಂದು ಕರೆಯಬಹುದಾದ ನಮ್ಮ ಐವರು ಚಾರ್ಟೆಡ್ ಅಕೌಂಟೆಂಟ್‍ಗಳು ಕರ್ನಾಟಕ ಹೈಕೋರ್ಟ್‍ನ ವಕೀಲರಾಗಿ ಮಾರ್ಗದರ್ಶನ ನೀಡುತ್ತಿರುವುದು ನಮ್ಮೆಲ್ಲರಿಗೂ ಮಾದರಿಯಾಗಿದೆ. ಅವರ ಬಳಿ ವಿದ್ಯೆ ಕಲಿತವರು ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ನಾವೆಲ್ಲಾ ಇವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇವೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಖುಷಿಯ ಸಂಗತಿಯಾಗಿದೆ’ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐಸಿಎಐ) ಉಪಾಧ್ಯಕ್ಷ ಟಿ. ಶ್ರೀನಿವಾಸ, ಕಾರ್ಯದರ್ಶಿ ಎಸ್. ದಿವ್ಯಾ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ತೆರಿಗೆ ವ್ಯಾಜ್ಯಗಳ ಕುರಿತು ಚರ್ಚೆ ನಡೆಯಿತು.
`ಐದು ಮಂದಿ ಮುಂಚೂಣಿ ಲೆಕ್ಕ ಪರಿಶೋಧಕರು ಪ್ರತಿಷ್ಠಿತ ಹೈಕೋರ್ಟ್‍ಗೆ ಆಯ್ಕೆಯಾಗಿರುವುದು ಐಸಿಎಐಗೆ ಮುಕುಟವಿಟ್ಟಂತೆ. ಅವರ ಸಲಹೆ, ಮಾರ್ಗದರ್ಶ ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿದೆ’.- ಸಂಜಯ್ ಎಂ. ಧಾರಿವಾಲ್, ಚಾರ್ಟೆಡ್ ಅಕೌಂಟೆಂಟ್.