ಸುರಪುರ: ವಿಜಯಪುರದಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಕೊಲೆ ಘಟನೆಯನ್ನು ಖಂಡಿಸಿ ನಗರದ ತಹಸೀಲ್ ಕಚೇರಿ ಮುಂದೆ ಗೋರ ಸೇನಾ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ವಿಜಯಪುರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ.ಈ ಘಟನೆಯನ್ನು ಸಂಘಟೆನೆ ಉಗ್ರವಾಗಿ ಖಂಡಿಸುತ್ತದೆ.ಅಲ್ಲದೆ ಘಟನೆಗೆ ಕಾರಣರಾದ ಕಾಮುಕರನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ನೀಡಬೇಕು ಮತ್ತು ಬಾಲಕಿಯ ಸಂತ್ರಸ್ತ ಕುಟುಂಬಕ್ಕೆ ೫೦ ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು,ಇಲ್ಲವಾದಲ್ಲಿ ನಮ್ಮ ಗೋರ ಸೇನಾ ಸಂಘಟನೆಯಿಂದ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಒತ್ತಾಯಿಸಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತೆ ೭೫ ವರ್ಷಗಳಾದರು ದೇಶದಲ್ಲಿನ ಜನರಿಗೆ ಅದರಲ್ಲೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ.ಸರಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ರಕ್ಷಣೆ ನೀಡುವಂತ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಕಾಂತೇಶ ರಾಮಾವತ್,ಕಾರ್ಯದರ್ಶಿ ರವಿ ಜಾಧವ್,ಸಂತೋಷ ರಾಠೋಡ,ವಿನೋದ ರಾಠೋಡ,ಕಾಂತೇಶ ನಾಯ್ಕ ರಾಠೋಡ,ಶಂಕರ ಚವ್ಹಾಣ,ಗಣೇಶ ಚವ್ಹಾಣ,ಶ್ರೀಕಾಂತ ರಾಠೋಡ ಸೇರಿದಂತೆ ಅನೇಕರಿದ್ದರು.