ಕುವೆಂಪು ಸಾಹಿತ್ಯ ಬಂಡಾಯ ಚಳುವಳಿಗೆ ಸ್ಪೂರ್ತಿ

0
84

ಕಲಬುರಗಿ: ನಾಡಿನ ವೈಚಾರಿಕ ಪ್ರಜ್ಞೆ ಕವಿ ಕುವೆಂಪು ಅವರ ಸಾಹಿತ್ಯ ಬಂಡಾಯ ಚಳುವಳಿ ಹುಟ್ಟಿಗೆ ಸ್ಪೂರ್ತಿ ನೀಡಿದೆ. ಸಮಾಜದೊಳಗಿನ ಮೌಢ್ಯ, ಕಂದಾಚಾರ, ಜಾತಿಯತೆ, ದೇವರು, ಧರ್ಮ ನಂಬಿಕೆಗಳನ್ನೇ ಪ್ರಶ್ನಿಸಿ ಚೇಡಿಸಿದ ಕ್ರಾಂತಿಕಾರಕ ಬರಹ ಅವರದ್ದಾಗಿದೆ ಎಂದು ಪ್ರಗತಿಪರ ಚಳುವಳಿಯ ನಾಯಕ, ಮೈಸೂರು ಸಾಂಸ್ಕೃತಿಕ ಸಂಘಟಕ ಬಿ.ರವಿ ಹೇಳಿದರು.

ವಿಶ್ವಮಾನವ ಸಂದೇಶ ಸಾರಿದ ಮಹಾನ್ ಚೇತನ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಪ್ರಯುಕ್ತ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಕುವೆಂಪು ಸಾಹಿತ್ಯ ಮತ್ತು ಪ್ರಸ್ತುತ ಸಮಾಜ ವಿಷಯ ಕುರಿತ ಆನ್‌ಲೈನ್ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಪೂಜೆ, ಆರಾಧನೆ, ವೃತ, ಯಜ್ಞಯಾಗಗಳು ಸೇರಿದಂತೆ ಮೌಢ್ಯಾಚಾರಣೆಯನ್ನು ಸಾಹಿತ್ಯದ ಮೂಲಕವೇ ಖಂಡಿಸಿ ಜಾಗೃತಿ ಮೂಡಿಸಿದ್ದಾರೆ.

Contact Your\'s Advertisement; 9902492681

ಅವರು ಎಂದಿಗೂ ಪುನರ್‌ಜನ್ಮ ಮತ್ತು ಕರ್ಮಗಳನ್ನು ಕಿವಿಗೆ ಹಾಕಿಕೊಂಡವರಲ್ಲ. ಅಸಮಾನತೆಯನ್ನು ಪೋಷಿಸಿ ಸಮಾಜದ ಹಿನ್ನಡೆಗೆ ಕಾರಣವಾಗುವ ಎಲ್ಲಾ ಶತ್ರು ಆಚರಣೆಗಳ ವಿರುದ್ಧ ಸಾಹಿತ್ಯದ ಖಡ್ಗ ಝಳಪಿಸಿದ್ದಾರೆ. ಹರಿತವಾದ ಕತ್ತಿ ಪರದೇಶಿಯರದ್ದಾದರೆ ನೋವೇ? ನಮ್ಮವರದ್ದಾದರೆ ಹೂವೆ? ಎಂದು ಕಾವ್ಯದ ಮೂಲಕ ಪ್ರಶ್ನಿಸಿದ್ದರ ಅರ್ಥ ಬಹುದೊಡ್ಡದಿದೆ ಎಂದು ಹೇಳಿದರು.

ಕುವೆಂಪು ಅವರು ತಮ್ಮ ಸಮಕಾಲಿನ ಎಲ್ಲಾ ಪ್ರಕಾರದ ಪ್ರಶ್ನೆಗಳಿಗೆ ಬರಹದ ಮೂಲಕ ಉತ್ತರಿಸಿದ್ದಾರೆ. ಅಂದಿನ ಸಮಾಜ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಹೋರಾಟದ ಪರಿಹಾರವೂ ತಿಳಿಸಿದ್ದಾರೆ.

ಸಂಘರ್ಷದ ದೊಡ್ಡ ಸದ್ದು ಮಾಡುವ ಮೂಲಕ ಸತ್ತಂತಿಹರನ್ನು ಬಡಿದೆಚ್ಚರಿಸಬೇಕು ಎಂದು ತಿವಿದಿದ್ದಾರೆ. ಯುವಜನರೇ ಎದ್ದೇಳಿ ಸನಾತನ ಸಿದ್ಧಾಂತವನ್ನು ಗಂಟೆ ಜಾಗಟೆಗಳಿಂದ ಹೊಡೆಯಲು ಸಿದ್ಧರಾಗಿರಿ ಎಂದು ಕರೆ ನೀಡಿದ್ದಾರೆ.

ಹಳೆಯ ಮತದ ಸಹಾವಾಸ ಸಾಕಿನ್ನು ಬನ್ನಿ ವಿಶ್ವಪಥಕ್ಕೆ ಮನುಜ ಮತಕ್ಕೆ ಎಂದು ಆಹ್ವಾನಿಸಿದ್ದಾರೆ ಎಂದು ವಿವರಿಸಿದ ಬಿ.ರವಿ, ಕಲೆ ಮತ್ತು ಸಾಹಿತ್ಯ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಂತಿರಬೇಕು. ಕುವೆಂಪು ಅವರ ಸಾಹಿತ್ಯವನ್ನು ಆದರ್ಶವಾಗಿಟ್ಟುಕೊಂಡು ಇಂದಿನ ಬರಹಗಾರರು ಪ್ರಗತಿಪರ ಕೃತಿಗಳನ್ನು ನಾಡಿಗೆ ನೀಡುವಂತಾಗಬೇಕು ಎಂದರು.

ಉಪನ್ಯಾಸಕಿ ವಿಶಾಲಾಕ್ಷಿ ಪಾಟೀಲ ಹಾಗೂ ಆವಿಷ್ಕಾರ ವೇದಿಕೆಯ ಅನಿತಾ ದೇಸಾಯಿ ಅವರು ಕುವೆಂಪು ಜೀವನ ಮತ್ತು ಬರಹದ ಕುರಿತು ವಿಚಾರ ಮಂಡಿಸಿದರು. ಆವಿಷ್ಕಾರ ವೇದಿಕೆ ಜಿಲ್ಲಾ ಸಂಚಾಲಕಿ ಅಶ್ವಿನಿ, ಪುಟ್ಟರಾಜ ಲಿಂಗಶೆಟ್ಟಿ, ಶ್ರೀಶರಣ ಹೊಸಮನಿ, ಮಡಿವಾಳಪ್ಪ ಹೇರೂರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಅನೇಕರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಆವಿಷ್ಕಾರ ವೇದಿಕೆ ಸದಸ್ಯೆ ಮಹಾದೇವಿ ನಾಗೂರ ನಿರೂಪಿಸಿ, ವಂದಿಸಿದರು. ಕುವೆಂಪು ಅವರ ಕಾವ್ಯಗಳು ಕಾರ್ಯಕ್ರಮದಲ್ಲಿ ಹಾಡಾಗಿ ಕೇಳಿಬಂದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here