ಖಾನಾಪುರ: ತಾಲ್ಲೂಕಿನ ಹಲಸಿಯಲ್ಲಿ ಕನ್ನಡ ಬಾವುಟವನ್ನು ಕಿಡಿಗೇಡಿಗಳು ಸುಟ್ಟುಹಾಕಿದ್ದಕ್ಕೆ ಹಾಗೂ ಬಸವೇಶ್ವರರ ಫೋಟೊಗೆ ಸಗಣಿ ಮೆತ್ತಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ವಿವಿಧ ಕನ್ನಡಪರ ಸಂಘಟನೆಗಳವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
‘ನಂದಗಡ ಠಾಣೆಯ ಪೊಲೀಸರು ಇತ್ತೀಚಿನ ದಿನಗಳಲ್ಲಿ ಹಲಸಿ ಗ್ರಾಮದಲ್ಲಿ ಗಸ್ತು ಬರುತ್ತಿಲ್ಲ. ಗ್ರಾಮದ ಮೂಲಕ ನಿತ್ಯ ಬೆಳಗಾವಿ, ಕಿತ್ತೂರು ಮತ್ತು ಧಾರವಾಡದತ್ತ ನೂರಾರು ಮರಳು ಲಾರಿಗಳು ಸಂಚರಿಸುತ್ತಿದ್ದರೂ ದಾಳಿ ನಡೆಸುತ್ತಿಲ್ಲ. ಗ್ರಾಮದ ಸುತ್ತಮುತ್ತ ಅಕ್ರಮ ಮರಳುಗಾರಿಕೆ, ಜೂಜಾಟ, ಗಾಂಜಾ ಮತ್ತು ಮದ್ಯ ಮಾರಾಟಕ್ಕೆ ಕಡಿವಾಣ ಬಿದ್ದಿಲ್ಲ.
ಈ ಕುರಿತು ಮಾಹಿತಿ ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರ ನಿರ್ಲಕ್ಷತನದಿಂದಲೇ ಹಲಸಿಯಲ್ಲಿ ನಾಡಧ್ವಜಕ್ಕೆ ಮತ್ತು ಮಹಾಪುರುಷರಿಗೆ ಅವಮಾನವಾಗಿದೆ’ ಎಂದು ದೂರಿದರು.
ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಸೇರಿದ ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೊಸ ನಾಡಧ್ವಜವನ್ನು ತರಿಸಿ ಮೊದಲಿದ್ದ ಸ್ಥಳದಲ್ಲಿ ಹಾರಿಸಿದರು. ಬಸವಣ್ಣನವರ ಫೋಟೊ ಸ್ವಚ್ಛಗೊಳಿಸಿದರು.
‘ಘಟನೆ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಇದುವರೆಗೂ ಯಾರನ್ನೂ ಬಂಧಿಸಿಲ್ಲ’ ಎಂದು ಪೊಲೀಸರು ತಿಳಿಸಿದರು.
‘ಕದಂಬರ ಕಾಲದ 2ನೇ ರಾಜಧಾನಿ ಹಲಸಿಯಲ್ಲಿ ನಾಡಧ್ವಜಕ್ಕೆ ಮತ್ತು ಬಸವೇಶ್ವರರಿಗೆ ಅವಮಾನ ಮಾಡಿದ್ದು ಖಂಡನೀಯ. ಈ ಕೃತ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ಅವರಿಗೆ ಶಿಕ್ಷೆ ವಿಧಿಸಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದರು.
‘ರಾಜ್ಯ ಸರ್ಕಾರ ಹಲಸಿಯಲ್ಲಿ ಈ ವರ್ಷ ಅದ್ಧೂರಿಯಾಗಿ ಕದಂಬೋತ್ಸವ ಆಚರಿಸಬೇಕು. ಗ್ರಾಮದಲ್ಲಿ ಭಾಷಾ ಸಾಮರಸ್ಯ ಕದಡುವವರಿಗೆ ಈ ಮೂಲಕ ತಕ್ಕ ಪ್ರತ್ಯುತ್ತರ ನೀಡಬೇಕು’ ಎಂದು ಗ್ರಾ.ಪಂ. ಉಪಾಧಕ್ಷ ಸಂತೋಷ ಹಂಜಿ ಕೋರಿದರು.