ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲ್ಲೂಕಿನ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಮೈಶಾಳ ಗ್ರಾಮದ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಶಿವಸೇನಾ ಕಾರ್ಯಕರ್ತರು ಬುಧವಾರ ಕನ್ನಡ ಬಾವುಟಕ್ಕೆ ಸುಟ್ಟು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕೃತಿ ದಹಿಸಿದ್ದಾರೆ.
ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ‘ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಬೆಂಗಳೂರಿನಲ್ಲಿ ಅವಮಾನ ಮಾಡಿದ್ದನ್ನು ಖಂಡಿಸುತ್ತೇವೆ. ಬೆಳಗಾವಿಯಲ್ಲೂ ಪ್ರತಿಮೆ ದ್ವಂಸ ಮಾಡಲು ಯತ್ನಿಸಲಾಗಿದೆ. ಇವೆಲ್ಲವನ್ನೂ ತಡೆಯಲು ಸರ್ಕಾರ ವಿಫಲವಾಗಿದೆ’ ಎಂದು ಕಿಡಿಕಾರಿದ್ದಾರೆ.
ಮುಖಂಡ ಚಂದ್ರಕಾಂತ ಮೈಗೂರೆ, ‘ಶಿವಾಜಿಗೆ ಅವಮಾನ ಮಾಡುವುದು ಕರ್ನಾಟಕದಲ್ಲಿ ಮುಂದುವರಿದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಶಿವಸೇನಾ ಪ್ರಮುಖ ದಿವಂಗತ ಬಾಳಾ ಠಾಕ್ರೆ ಚಿತ್ರಗಳಿಗೆ ಬೆಂಕಿ ಹಚ್ಚುತ್ತಿರುವುದನ್ನು ಅಲ್ಲಿನ ಸರ್ಕಾರ ತಡೆಯುತ್ತಿಲ್ಲ. ಇನ್ಮುಂದೆ ನಾವು ಕರ್ನಾಟಕದ ಒಳಗಡೆಗೆ ನುಗ್ಗಿ ಕನ್ನಡಿಗರನ್ನು ಅಟ್ಟಾಡಿಸಿಕೊಂಡು ಒಡೆಯಬೇಕಾಗುತ್ತದೆ’ ಎಂದು ಹೇಳಿದ್ದಾರೆ.
ಶಿವಸೇನಾ ಕಾರ್ಯಕರ್ತರ ಕೃತ್ಯ ಖಂಡಿಸಿ, ಕರವೇ ಕಾರ್ಯಕರ್ತರು ಜಿಲ್ಲೆಯ ಗೋಕಾಕ ತಾಲ್ಲೂಕಿನ ಘಟಪ್ರಭಾದಲ್ಲಿ ಮಹಾರಾಷ್ಟ್ರದ ಕೆಲವು ವಾಹನಗಳನ್ನು ತಡೆದು ಮರಾಠಿ ಹೆಸರುಗಳಿಗೆ ಮಸಿ ಬಳಿದಿದ್ದಾರೆ. ಜೈ ಕರ್ನಾಟಕ, ಜೈ ಕನ್ನಡ ಎಂದು ಬರೆದಿದ್ದಾರೆ. ವಾಹನದ ಮೇಲೆ ನಿಂತು ಕನ್ನಡ ಬಾವುಟವನ್ನು ಹಾರಿಸಿದ್ದಾರೆ.