ಬೆಳಗಾವಿ: “ಕರ್ನಾಟಕದಲ್ಲಿ ಕ್ರೈಸ್ತರ ಮೇಲಿನ ಸರಣಿ ದಾಳಿಗೆ ಭಾಗಶಃ ಅವರ ತಪ್ಪುಗಳು ಕೂಡಾ ಕಾರಣ,” ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಎನ್‌ಡಿಟಿವಿಗೆ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ. “ಎರಡೂ ಕಡೆಯಿಂದಲೂ ತಪ್ಪು ನಡೆದಿದೆ,” ಎಂದಿದ್ದಾರೆ.
ಕ್ರಿಸ್‌ಮಸ್‌ಗೆ ಎರಡು ದಿನಗಳ ಮೊದಲು, ವ್ಯಾಪಕ ಪ್ರತಿಭಟನೆಗಳ ನಡುವೆ ರಾಜ್ಯವು ವಿವಾದಾತ್ಮಕ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕಾರ ಮಾಡಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ ಕ್ರೈಸ್ತರ ಮೇಲೆ ಹೆಚ್ಚಾದ ದಾಳಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಎರಡೂ ಕಡೆಯಿಂದ ತಪ್ಪು ನಡೆದಿದೆ ಎಂದು ಹೇಳಿದ್ದಾರೆ.
ಕ್ರೈಸ್ತರ ಚರ್ಚುಗಳ ಮೇಲೆ ಬಲಪಂಥೀಯ ಗುಂಪುಗಳ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, “ಎರಡೂ ಕಡೆ ತಪ್ಪು ಇದೆ. ಅವರು ಬಲವಂತದ ಮತಾಂತರವನ್ನು ಮಾಡದಿದ್ದರೆ, ಈ ರೀತಿ ಗದ್ದಲ ಸೃಷ್ಟಿ ಮಾಡಿ ಮತಾಂತರವನ್ನು ನಿಲ್ಲಿಸಬೇಕಾದ ಪ್ರಮೇಯವೇ ಬರುತ್ತಿರಲಿಲ್ಲ,” ಎಂದು ಹೇಳುವ ಮೂಲಕ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವೇಳೆಯೇ “ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ. ಈ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು,” ಎಂದು ಕೂಡಾ ತಿಳಿಸಿದ್ದಾರೆ. ಇನ್ನು “ಈ ಕಾಯ್ದೆಯು ರಾಜ್ಯದಲ್ಲಿ ಅತಿರೇಕದ ಬಲವಂತದ ಮತಾಂತರವನ್ನು ತಪ್ಪಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ,” ಎಂದು ಹೇಳಿದ ಸಚಿವರ ಬಳಿ ಈ ದಾಳಿ ಪ್ರತ್ಯೇಕತಾವಾದಿ ನೀತಿಯಿಂದಾಗಿ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದಾಗ, “ಒಂದೆಡೆ ಹೌದು, ಮತ್ತೊಂದೆಡೆ ಅಕ್ರಮ ಮತಾಂತರಗಳೂ ಕಾರಣವಾಗಿದೆ,” ಎಂದು ಅಭಿಪ್ರಾಯಿಸಿದ್ದಾರೆ.