ಬೆಳಗಾವಿ :‌ ರೋಗ ಹರಡುವ ತಾಣಗಳಾದ ಕಾಲಿ ನಿವೇಶನ

0
11

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಖಾಲಿ ನಿವೇಶನಗಳು ರೋಗ ಹರಡುವ ತಾಣಗಳಾಗಿ ಮಾರ್ಪಾಡಾಗಿವೆ. ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿರುವುದು ಇದಕ್ಕೆ ಕಾರಣವಾಗಿದೆ.

‘ಸ್ಮಾರ್ಟ್‌ ಸಿಟಿ’ಯಾಗಿ ರೂಪಗೊಳ್ಳುತ್ತಿರುವ ಬೆಳಗಾವಿ ನಗರದಲ್ಲಿನ ಖಾಲಿ ನಿವೇಶನಗಳು ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿವಕೇಂದ್ರಗಳು ನಗರದಲ್ಲಿ ಸ್ವಚ್ಛತೆ ಕಾಪಾಡಲು ಪ್ರಯಾಸಪಡುತ್ತಿರುವ ಮಹಾನಗರ ಪಾಲಿಕೆಗೆ ಇವು ಇನ್ನಷ್ಟು ತಲೆಬೇನೆ ತಂದಿಟ್ಟಿವೆ.

Contact Your\'s Advertisement; 9902492681

ಖಾಲಿ ನಿವೇಶನಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಕಾರ್ಯ ಮಹಾನಗರಪಾಲಿಕೆ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳಿಂದಾಗಲಿ ಅಥವಾ ಆಯಾ ನಿವೇಶನಗಳ ಮಾಲೀಕರಿಂದಾಗಿ ನಡೆಯುತ್ತಿಲ್ಲ. ಪರಿಣಾಮ, ನೆರೆ ಹೊರೆಯ ಜನರು ತೊಂದರೆ ಅನುಭವಿಸುವಂತಾಗಿದೆ.

ಆ ಖಾಲಿ ನಿವೇಶನಗಳು ‘ತ್ಯಾಜ್ಯ ಡಂಪಿಂಗ್ ಯಾರ್ಡ್‌’ನಂತಾಗಿ ಹೋಗಿ ಸೊಳ್ಳೆಗಳ ಉತ್ಪಾದನೆಯ ತಾಣಗಳಂತಾಗಿವೆ ಹಾಗೂ ಹಂದಿಗಳು ಮತ್ತು ಅಲ್ಲಲ್ಲಿ ಬೀದಿನಾಯಿಗಳ ವಾಸಸ್ಥಾನಗಳೂ ಆಗಿವೆ.

ಜಾಗೃತಿ ಮೂಡಿಸಿದರೂ ಸುಧಾರಿಸಿಲ್ಲ: ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಜಾಗ ಸಿಕ್ಕಲ್ಲಿ ಬೇಕಾಬಿಟ್ಟಿಯಾಗಿ ಕಸ ಹಾಕುವುದು ತಪ್ಪಿಲ್ಲ. ಮನೆಗಳ ಸಮೀಪದಲ್ಲಿರುವ ಖಾಲಿ ನಿವೇಶನದಲ್ಲೇ ತ್ಯಾಜ್ಯ ಪದಾರ್ಥಗಳನ್ನು ಎಸೆಯುವುದು ಸಾಮಾನ್ಯವಾಗಿದೆ. ಕೆಲವು ಕಡೆಗಳಲ್ಲಿ ಕೆಲವರು, ಬಯಲು ಶೌಚಕ್ಕೂ ಇದೇ ಜಾಗ ಬಳಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳು, ರಸ್ತೆಬದಿ ಹಾಗೂ ಖಾಲಿ ನಿವೇಶನದಲ್ಲಿ ಕಸ ಎಸೆದ 170 ಜನರಿಗೆ 2021ರ ಏ.1ರಿಂದ ಈವರೆಗೆ ಪಾಲಿಕೆ ಅಧಿಕಾರಿಗಳು ₹ 1,76,250 ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ಆದರೂ ಪರಿಸ್ಥಿತಿ ಸುಧಾರಿಸಿಲ್ಲ.

ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1,800 ಖಾಲಿ ನಿವೇಶನಗಳಿವೆ. ಆ ಪೈಕಿ ರಾಮತೀರ್ಥ ನಗರ, ರಾಣಿ ಚನ್ನಮ್ಮ ನಗರ, ಆಜಂ ನಗರ, ಕುಮಾರಸ್ವಾಮಿ ಲೇಔಟ್‌, ಅಶೋಕ ನಗರ, ಶಿವಬಸವ ನಗರ ಬಡಾವಣೆಗಳಲ್ಲಿ ಅವುಗಳ ಸಂಖ್ಯೆ ಹೆಚ್ಚಿದೆ. ಅಂದರೆ, ಹೆಚ್ಚಿನ ಸಮಸ್ಯೆಯೂ ಅಲ್ಲಿವೆ.

ಗಿಡಗಂಟಿಗಳು :ದಕ್ಷಿಣ ಕ್ಷೇತ್ರಕ್ಕೆ ಹೋಲಿಸಿದರೆ, ಉತ್ತರ ಕ್ಷೇತ್ರದಲ್ಲಿ ಖಾಲಿ ನಿವೇಶನ ಅಧಿಕವಾಗಿದೆ. ಹಲವೆಡೆ ಗಿಡಗಂಟಿಗಳು ಹೇರಳವಾಗಿ ಬೆಳೆದಿವೆ. ಜನರು ಎಸೆದ ತ್ಯಾಜ್ಯ ಇಲ್ಲಿಯೇ ಕೊಳೆಯುತ್ತಿರುವುದರಿಂದ ಸುತ್ತಲಿನ ಪರಿಸರದಲ್ಲಿ ದುರ್ನಾತ ಹರಡುತ್ತಿದೆ. ಸಾಂಕ್ರಾಮಿಕ ರೋಗಗಳ ಹರಡುವಿಕೆಗೂ ಅವು ಕೊಡುಗೆ ನೀಡುತ್ತಿವೆ.

‘ಸ್ವಚ್ಛತೆ ಕಾಪಾಡಿಕೊಳ್ಳುವಂತೆ ನಿವೇಶನ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ. ಕಠಿಣ ಕ್ರಮದ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಫಾಲೋಅಪ್‌ ಮಾಡುವಲ್ಲಿ ಅಧಿಕಾರಿಗಳು ಕೂಡ ಲಕ್ಷ್ಯ ವಹಿಸದಿರುವುದು ಕಂಡುಬಂದಿದೆ.

ಶಿಸ್ತು ಕ್ರಮ ಕೈಗೊಳ್ಳಿ :’ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಿ ಎಂದು ಪಾಲಿಕೆ ಅಧಿಕಾರಿಗಳು ಮಾಲೀಕರಿಗೆ ನೋಟಿಸ್‌ ನೀಡಿ ಸುಮ್ಮನಾಗುತ್ತಿದ್ದಾರೆ. ಹೀಗಾದರೆ ಇವು ರೋಗ-ರುಜಿನ ಸೃಷ್ಟಿಸುವ ತಾಣವಾಗುತ್ತವೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಸ್ವಚ್ಛತೆ ಕಾಪಾಡದ ಮಾಲೀಕರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅಧಿಕಾರಿ ಏನಂತಾರೆ?: ‘ಈ ವಿಷಯವಾಗಿ ಈಚೆಗೆ ಕಂದಾಯ ಶಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಖಾಲಿ ನಿವೇಶನಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ. ನಿವೇಶನ ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರಿಗೆ ದಂಡ ವಿಧಿಸಲಾಗುವುದು. ಪಾಲಿಕೆಯಿಂದ ಆ ಸ್ಥಳಗಳನ್ನು ಸ್ವಚ್ಛಗೊಳಿಸಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ದುರ್ನಾತ ಕೇಂದ್ರಗಳು: ಚನ್ನಮ್ಮನ ಕಿತ್ತೂರು: ವೃತ್ತಗಳ ಬಳಿ, ತಗ್ಗು ಪ್ರದೇಶಗಳಲ್ಲಿ ಕಸದ ರಾಶಿ ಹಾಕುವ ಸಾರ್ವಜನಿಕರ ಕೆಟ್ಟ ರೂಢಿಯನ್ನು ಇಲ್ಲಿಯ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ತಪ್ಪಿಸಿದ್ದಾರೆ.

ಮನೆ ಬಾಗಿಲಿಗೆ ವಾಹನದೊಂದಿಗೆ ತೆರಳಿ ತ್ಯಾಜ್ಯ ವಿಲೇವಾರಿ ಮಾಡುವ ಅಧಿಕಾರಿಗಳ ಕ್ರಮದಿಂದಾಗಿ ಕಸ ಸಂಗ್ರಹ ಸಾರ್ವಜನಿಕ ಸ್ಥಳದಲ್ಲಿ ಕಡಿಮೆಯಾಗಿದೆ. ಪ್ರಮುಖ ಬೀದಿಯಲ್ಲಿ, ಕೆಲವು ಓಣಿಗಳಲ್ಲಿ ಬಿದ್ದ ಅನಾಥ ಮನೆಗಳಿವೆ. ಇವುಗಳ ಗೋಡೆ ಮರೆಗೆ ಕಸ ಚೆಲ್ಲುತ್ತಾರೆ. ಮರೆಗೆ ನಿಂತು ಮೂತ್ರ ವಿಸರ್ಜನೆಯನ್ನೂ ಮಾಡಲಾಗುತ್ತದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ದುರ್ನಾತ ತಪ್ಪಿಲ್ಲ.

‘ಬಿದ್ದ ಮನೆಗಳ ವಾರಸುದಾರರಿಗೆ ಬೇಲಿ ಹಾಕಿಕೊಳ್ಳಲು ಸೂಚಿಸಿದರೆ ತ್ಯಾಜ್ಯ ಎಸೆಯುವುದು ಅದರಿಂದ ಹೊರಡುವ ದುರ್ನಾತ ತಡೆಯಬಹುದು’ ಎನ್ನುತ್ತಾರೆ ನಾಗರಿಕರು.

ಅಸಮರ್ಪಕ ವಿಲೇವಾರಿ ಕಾರಣ: ತೆಲಸಂಗ: ಅಥಣಿ ತಾಲ್ಲೂಕಿನ ತೆಲಸಂಗ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳವನ್ನು ಗುರುತಿಸಲಾಗಿಲ್ಲ. ಹೀಗಾಗಿ, ಹೊರವಲಯದಲ್ಲಿ ಬೇಕಾಬಿಟ್ಟಿ ಹಾಕಲಾಗುತ್ತಿತ್ತು. ಗ್ರಾಮಸ್ಥರ ವಿರೋಧಕ್ಕೆ ಮಣಿದು ಗ್ರಾಮ ಪಂಚಾಯ್ತಿ ಕಾಂಪೌಂಡ್‌ ಒಳಗಡೆಯೇ ಈಗ ಕಸ ಸುರಿಯುತ್ತಿರುವುದರಿಂದ ಸುತ್ತಲಿನ ಜನತೆ ದುರ್ವಾಸನೆಯ ತಲೆನೋವು ಅನುಭವಿಸಬೇಕಾಗಿದೆ.

ಬಹಳಷ್ಟು ಕಡೆ ರಸ್ತೆಬದಿಯೇ ಗ್ರಾಮಸ್ಥರು ಕಸವನ್ನು ಹಾಕಿ ಎಲ್ಲೆಂದರಲ್ಲಿ ತಿಪ್ಪೆಯನ್ನಾಗಿ ಮಾಡಿಕೊಂಡಿದ್ದಾರೆ. ಅನೇಕ ಕಡೆ ಚರಂಡಿ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದ್ದಕ್ಕೆ ನೀರು ಮತ್ತು ತ್ಯಾಜ್ಯ ರಸ್ತೆಯ ಮೇಲೆಯೇ ಸಂಗ್ರವಾಗುತ್ತಿದೆ. ಇದರಿಂದ ಸೊಳ್ಳೆಗಳು ಮತ್ತು ದುರ್ನಾತದಿಂದ ಜನರು ಬೇಸತ್ತು ಹೋಗಿದ್ದಾರೆ. ಸಾಂಕ್ರಾಮಿಕ ರೋಗದ ಭೀತಿಯೂ ಹೆಚ್ಚಿದೆ. ಖಾಲಿ ನಿವೇಶನಗಳಲ್ಲಿ ಕಸ ಹಾಕುವುದು ಕಂಡುಬರುತ್ತಿದೆ.

ಸಾರ್ವಜನಿಕರಿಗೆ ತೊಂದರೆ: ಮುನವಳ್ಳಿ ಪಟ್ಟಣದ ಸುತ್ತಮುತ್ತಲಿನ ಜಾಗಗಳನ್ನು ನಿವೇಶನಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮಲಪ್ರಭಾ ನದಿಯ ಹತ್ತಿರ ಖಾಲಿ ನಿವೇಶನಗಳಿವೆ. ಸಮೀಪದಲ್ಲಿ ವೈನ್‌ ಶಾಪ್‌, ಶಾಲೆಯೂ ಇದೆ. ಆ ಪ್ರದೇಶಕ್ಕೆ ಸಾರ್ವಜನಿಕರು ವಾಯು ವಿಹಾರಕ್ಕಾಗಿ ಬರುತ್ತಾರೆ. ಆದರೆ, ಸ್ವಚ್ಛತೆ ಮರೀಚಿಕೆಯಾಗಿದೆ.

ಮದ್ಯದ ಖಾಲಿ ಬಾಟಲಿಗಳು, ಬಾಟಲಿಯ ಚೂರುಗಳನ್ನು ನಿವೇಶನದಲ್ಲಿ ಹಾಕಲಾಗುತ್ತಿದೆ. ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರು ಖಾಲಿ ನಿವೇಶನದಲ್ಲಿ ಬಿಡಾರ ಹೊಡುತ್ತಾರೆ. ತ್ಯಾಜ್ಯವನ್ನು ಅಲ್ಲೇ ಬಿಡುತ್ತಾರೆ. ಇದೆಲ್ಲದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ನಿವಾಸಿ ಕಿರಣ ಯಲಿಗಾರ ತಿಳಿಸಿದರು.

ಕ್ರಮಕ್ಕೆ ಆಗ್ರಹ ಸವದತ್ತಿ: ಪಟ್ಟಣದ ಖಾಲಿ ನಿವೇಶನಗಳಲ್ಲಿ ಬಹುತೇಕ ಕಡೆಗಳಲ್ಲಿ ತ್ಯಾಜ್ಯ ಹಾಕಲಾಗುತ್ತಿದೆ. ಕುಮಾರೇಶ್ವರ ಕಾಲೇಜು ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಕಸದ ರಾಶಿ ತುಂಬಿದ್ದು, ಅಕ್ಕಪಕ್ಕದ ಮನೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ನಿವಾಸಿಗಳು.

ಎಪಿಎಂಸಿ ಹತ್ತಿರ, ರೇಣುಕಾ ಚಿತ್ರಮಂದಿರದ ಹತ್ತಿರವಿರುವ ದನದ ಮಾರುಕಟ್ಟೆ ಬಳಿ, ಪುರಸಭೆ ಪಕ್ಕದ ಶಿಕ್ಷಕರ ಭವನದ ಜಾಗ, ಪೆಟ್ರೋಲ್ ಪಂಪ್ ಪಕ್ಕದ ನೌಕರರ ಭವನದ ಸಮೀಪ, ಬಸ್ ನಿಲ್ದಾಣದ ಪಕ್ಕ ಹಾಗೂ ಬಂಡಿ ಓಣಿ ಬೆಡಸೂರ ಮಠದ ಹತ್ತಿರದ ಖಾಲಿ ಜಾಗಗಳಲ್ಲಿ ಕಸ ಸಂಗ್ರಹವಾಗಿದೆ.

ಅವಗಳನ್ನು ಸ್ವಚ್ಛಗೊಳಿಸಿ, ಉತ್ತಮ ವಾತಾವರಣ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆಯವರು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. ಆದರೆ, ಈ ನಿಟ್ಟಿನಲ್ಲಿ ಅಧಿಕಾರಿಗಳಿಂದ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎನ್ನುವುದು ಜನರ ಆಗ್ರಹವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here