ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ವಿಶ್ವಮಾನವ, ಕುವೆಂಪು

0
31

ಕಲಬುರಗಿ: 20ನೇ ಶತಮಾನ ಕಂಡ ದೈತ್ಯ ಸಾಹಿತಿ, ಬಹುಮುಖ ಪ್ರತಿಭೆ, ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ವಿಜೇತ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರತ್ನ, ಪ್ರಶಸ್ತಿ ಪದ್ಮವಿಭೂಷಣ ಹೀಗೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕನ್ನಡದ ಹೆಮ್ಮೆ ಕವಿ ಎನಿಸಿಕೊಂಡಿದ್ದಾರೆ.

ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಚಿಂತಕ, ರಾಷ್ಟ್ರಕವಿ ಕುವೆಂಪುರವರ ಜೀವನವೇ ಒಂದು ಅದ್ಭುತವಾದ ಸಾಹಿತ್ಯದ ಕೊಡುಗೆಯನ್ನು ನೀಡಿದ್ದಾರೆ. ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿಬೇಕು ಬೇಡವಾದ್ದನ್ನು ಖಂಡಿಸಿ ತಿರುತ್ತಿದ್ದರು. ಇಡೀ ಪ್ರಪಂಚಕ್ಕೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪುರವರು ಸಮಾಜದಲ್ಲಿ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದರು. ನವೋದಯ ಸಾಹಿತ್ಯ ಬಗ್ಗೆ ಬೆಳಕು ಚೆಲ್ಲಿದ್ದಾರೆ.

Contact Your\'s Advertisement; 9902492681

ಕನ್ನಡದ ಬಗ್ಗೆ ಅಪ್ಪಟ ಅಭಿಮಾನಿಯಾಗಿದ್ದರು. ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಸಾರಿದ್ದಾರೆ.  ಕುವೆಂಪು ಎಂಬುದು ಅವರ ಕಾವ್ಯನಾಮ, ಅವರು ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಗ್ರಾಮದಲ್ಲಿ 29ಡಿಸೆಂಬರ್ 1904 ರಂದು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ತಾಯಿ ಸೀತಮ್ಮ ಅವರ ಉದರದಲ್ಲಿ ಜನಿಸಿದರು.

2015ರಲ್ಲಿ ಕರ್ನಾಟಕ ಸರ್ಕಾರ ಡಿಸೆಂಬರ್ 29ರಂದು ಕುವೆಂಪು ಜನ್ಮ ದಿನವನ್ನು “ವಿಶ್ವಮಾನವ ದಿನ” ವನ್ನಾಗಿ ಆಚರಿಸಲು ಆದೇಶ ನೀಡುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ವರಕವಿ ದ. ರಾ.ಬೇಂದ್ರೆ ಅವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ಅವರ ವೈಚಾರಿಕ ಸಾಹಿತ್ಯ ಹಲವಾರು ವಿಷಯ ಮೇಲೆ ಬೆಳಕು ಚೆಲ್ಲುತ್ತದೆ. ವಾಸ್ತವಾಂಶಗಳನ್ನು ಎತ್ತಿಹಿಡಿಯುತ್ತದೆ. ಜಾತಿ, ಧರ್ಮ, ರಾಜಕೀಯ, ಸಂಸ್ಕೃತಿ, ಕಲೆ, ಹೀಗೆ ಹಲವು ಕ್ಷೇತ್ರಗಳಿಗೆ ಇವರ ಶ್ರೇಷ್ಠ ಸಾಹಿತ್ಯಕ್ಕೆ ಪಾತ್ರರಾಗಿರುವುದು.

ಪ್ರತಿಯೊಂದು ಮಗುವೂ ಹುಟ್ಟುತ್ತಲೆ ‘ವಿಶ್ವ ಮಾನವ’ ಬೆಳೆಯುತ್ತಲೇ ನಾವು ‘ಅಲ್ಪಮಾನವ’ನನ್ನಾಗಿ ಮಾಡುತ್ತಿದ್ದೇವೆ. ಮತ್ತೆ ವಿಶ್ವಮಾನವರಾಗಿ ಮಾಡುವುದೇ ಪ್ರತಿಯೊಬ್ಬರ ನಾಗರಿಕನ ಪ್ರಮುಖ ಕರ್ತವ್ಯವಾಗಬೇಕು. ಜಾತ್ಯತೀಯತೆ ಯನ್ನು ಕಟ್ಟುವ ವಿಚಾರವಾಗಿ ಕನ್ನಡದ ಆದಿಕವಿ ಪಂಪ ಹೇಳುವಂತೆ “ಮಾನವ ಜಾತಿ ತಾನೊಂದೆ ಕುಲ” ಎಂದು ಎಚ್ಚರಿಸಿದರು.

ಕುವೆಂಪು ಅವರು ಸಹ “ಏನಾದರೂ ಸರಿಯೇ ಆಗು ಮೊದಲು ಮಾನವನಾಗು” ಹಾಗೆಯೇ “ಗುಡಿ ಚರ್ಚು- ಮಸೀದಿಗಳ ಬಿಟ್ಟು ಹೊರಬನ್ನಿ! ಬಡತನವ ಬುಡಮಟ್ಟ ಕೀಳಬನ್ನಿ! ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ, ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ, ಓ ಬನ್ನಿ ಸೋದರರೆ ಬೇಗ ಬನ್ನಿ! ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ ಮತಿಯಿಂದ ದುಡಿಯಿರೈ ಲೋಕಹಿತಕೆ, ಆ ಮತದ ಈ ಮತದ ಹಳೆಮತದ ಸಹವಾಸ, ಸಾಕಿನ್ನು ಸೇರಿರೈ ಮನುಜ ಮತಕೆ ವಿಶ್ವಪಥಕ್ಕೆ” ಎಂಬ ಸಂದೇಶ ತುಂಬಾ ಅರ್ಥಗರ್ಭಿತ ಮತ್ತು ವಾಸ್ತವಿಕವಾಗಿದೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಪದಗಳು ಮಂತ್ರಗಳಾಗಿ ನಿಮ್ಮನ್ನು ಜಾತಿಮತಗಳಿಂದಲೂ, ಭೇದಭಾವಗಳಿಂದಲೂ ಪಾರುಮಾಡಿ ನಿಮ್ಮಿಂದ ನಿಜವಾದ ಪ್ರಜಾಪ್ರಭುತ್ವ ಹಾಗೂ ಸಮಾಜವಾದ ಸ್ಥಾಪನೆ ಮಾಡುವ ಆಶಯವನ್ನು ಹೊಂದಿದ್ದರು.

ಹಾಗೆಯೇ ‘ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯ ದೇವಿ ನಮಗಿಂದು ಪೂಜಿಸುವ ಬಾರ! ಎಲ್ಲಾ ಸಂಕುಚಿತ ಮೂಢನಂಬಿಕೆಗಳು, ದೇವರು ಮತ್ತು ಜಾತಿ ಧರ್ಮಗಳಿಂದ ಮುಕ್ತರಾಗಿ ನಮ್ಮ ದೇಶ ಭಾರತ ಪೂಜಿಸಬೇಕು. ದೇಶದ ಸಮಸ್ಯೆ ಬಗ್ಗೆ ಧ್ವನಿ ಎತ್ತಬೇಕು ಎಂದು ಕರೆ ನೀಡುತ್ತಾರೆ.

ಎಲ್ಲಾ ಧರ್ಮಗಳಿಗಿಂತ ಮನುಷ್ಯ ಧರ್ಮ ಶ್ರೇಷ್ಠ ಎಂದಿದೆ. ಅರ್ಥೈಸಿಕೊಳ್ಳುವಲ್ಲಿ ಸೋತ ನಾವು ನಮ್ಮದೇ ಶ್ರೇಷ್ಠ ಧರ್ಮ ಎನ್ನುತ್ತೇವೆ. ಎಲ್ಲಾ ಸಂಕುಚಿತ ಮತ ಧರ್ಮಗಳಿಂದ ಮುಕ್ತರಾಗಬೇಕು. ಮತ ಮನುಜಮತ’ ವಾಗಬೇಕು ಪಥ ವಿಶ್ವಪಥ’ವಾಗಬೇಕು. ಕುವೆಂಪು ವಿಚಾರಧಾರೆಗಳು ಅರ್ಥಮಾಡಿಕೊಂಡರೆ ಮತಾಂಧರರಾಗಲು ಸಾಧ್ಯವಿಲ್ಲ.

ನೇಗಿಲ ಹಿಡಿದ ಹೊಲದೊಳು ಹಾಡುತ, ಉಳುವಾ ಯೋಗಿಯ ನೋಡಲಿ ಎನ್ನುವ ಒಂದು ಪದ್ಯದಂತೆ ಸಮಾಜದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಜಾತಿ, ಧರ್ಮ, ಪಂಥ, ಭಾಷೆ, ಮೀರಿ ಸಿಡಿದೇಳಲು ಕುವೆಂಪು ಅವರ ಒಂದು ವಿಚಾರ ಬಹಳ ಪ್ರಸ್ತುತವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ದೇಶಕ್ಕಾಗಿ ಹುತಾತ್ಮರಾದವರನ್ನು ಮರೆತಿದ್ದೇವೆ. ಇಲ್ಲಿ ನಾವು ಬಡತನವನ್ನು ಎಷ್ಟರಮಟ್ಟಿಗೆ ಪರಿಹರಿಸಿದ್ದೇವೆ? ಜಾತಿಮತಗಳ ಭೇದ ಬುದ್ಧಿಯನ್ನು ಎಷ್ಟರಮಟ್ಟಿಗೆ ತೊಡೆದುಹಾಕಿದ್ದೇವೆ? ಉಳ್ಳವರು ಇಲ್ಲದವರ ನಡುವಣ ಅಂತರವನ್ನು ಕಡಿಮೆ ಮಾಡಿದ್ದೇವೆಯೇ? ಸಾಮಾನ್ಯವಾಗಿ ಪ್ರಜಾಪ್ರಭುತ್ವದ ಜ್ಞಾನೋದಯವಾಗಿದೆಯೇ? ಕ್ರಮ ಕೈಗೊಂಡಿದ್ದೇವೆಯೇ? ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿಯನ್ನು ಸಮಪ್ರಮಾಣದಲ್ಲಿ ಎಂಬ ವಿಚಾರವನ್ನು ಮಾಡುವುದರ ಜೊತೆಗೆ ಅನಕ್ಷರತೆ, ನಿರುದ್ಯೋಗ ಸಮಸ್ಯೆ ಎಷ್ಟು ಮಟ್ಟಿಗೆ ನಿವಾರಿಸಿದ್ದೇವೆ? ರೈತರ ಕಾರ್ಮಿಕರ ಸಮಸ್ಯೆಗಳನ್ನು ಎಷ್ಟು ಮಟ್ಟಿಗೆ ನಾವು ಬಗೆಹರಿಸಿದ್ದೇವೆ. ಎಂಬುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ.

ಆಳ್ವಿಕೆ ಸರ್ಕಾರಗಳು ಇಂತಹ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮಕೈಗೊಳ್ಳದೇ ದೇಶದ ಬಂಡವಾಳಶಾಹಿಗಳ ಪರ ಕಾಯ್ದೆ ಕಾನೂನು ತಂದು ಇನ್ನಷ್ಟು ಬಡವರನ್ನಾಗಿ ಮಾಡಿ ದೇಶದಲ್ಲಿ ಹಲವು ಸಮಸ್ಯೆಗಳಿಗೆ ಈಡುಮಾಡಿದೆ. ಇವತ್ತು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಮುಂದಾಗುತ್ತಿವೆ. ಜನರಿಗೆ ಇಂತಹ ಸಾಹಿತ್ಯವನ್ನು ನಾವು ಮುಟ್ಟಿಸಿದೆವು ವೈಚಾರಿಕ ಸಾಹಿತ್ಯ ನಿಜವಾಗಲೂ ಈ ದೇಶದ ಜನ ತಲುಪಿಸಿದೇವೆ ಎಂಬುದನ್ನು ನಾವು ಇವತ್ತು ಪರಿಶೀಲಿಸಿ ಕೊಳ್ಳಬೇಕಾಗಿದೆ.

ನಮ್ಮ ಭಾರತ ಶ್ರೀಸಾಮಾನ್ಯರಲ್ಲಿ ಮತದ ಮೌಲ್ಯಗಳು ಮಾತ್ರವಲ್ಲದೆ ಮತ್ತು ಜಾತಿ ಧರ್ಮದ ಅಮಲಿನ ದುಷ್ಟ ಮೌಲ್ಯಗಳು ತೊಲಗಬೇಕು. ವರ್ಣಾಶ್ರಮ, ಜಾತಿಪದ್ಧತಿ, ಮೇಲು-ಕೀಳು ಭಾವನೆ ಜಾತಿ ಧರ್ಮ ಮುಂತಾದ ಮಧ್ಯಯುಗದ ಕ್ರೂರ ಕರಾಳ ತತ್ವಗಳೆಲ್ಲಾ ವೈಜ್ಞಾನಿಕದೃಷ್ಟಿ ಅಗ್ನಿಕುಂಡದಲ್ಲಿ ಭಸ್ಮಿ ಕೃತ ವಾಗಬೇಕು.

ನಾನು ಯಾವ ಜಾತಿ ವಿರುದ್ಧವಾಗಿ ಅಥವಾ ದ್ವೇಷದಿಂದ ಯಾವ ಮಾತನ್ನೂ ಆಡಲಾರೆ. ಏಕೆಂದರೆ ನನಗೆ ಯಾವ ಜಾತಿಯೂ ಇಲ್ಲ ಆದ್ದರಿಂದ ಜಾತಿದ್ವೇಷವೂ ಇಲ್ಲ. ಆದರೆ ಯಾವುದಾದರೂ ಒಂದು ಜಾತಿಯನ್ನು ನಿರ್ದೇಶಿಸುತ್ತಿದ್ದೇನೆ. ಎಂದು ಭಾವಿಸಬಾರದು ಅನೇಕ ಮತಗಳಲ್ಲಿರುವ ಆ ವರ್ಗದ ಜನಕ್ಕೆ ಅನ್ವಯವಾಗುತ್ತದೆ ಹಾಗೆ ನನ್ನ ಜೀವನ ದೃಷ್ಟಿ ಒಂದು ರೀತಿಯಲ್ಲಿ ಸಮಾಜವಾದಿ ದೃಷ್ಟಿ ನೀವು ಸಮಾಜವಾದಿ ಸಮತಾವಾದಿ ಎಂದೆಲ್ಲ ವ್ಯಾಖ್ಯಾನ ಮಾಡಬಹುದು. ಆದರೆ ನಾನು ಸಮಾನತಾವಾದಿ. ಆದ್ದರಿಂದ ನಾನು ಮಾಡುವ ಟೀಕೆ, ಖಂಡನೆ, ಪ್ರಶಂಸ್ಸೆ ಏನೇ ಇದ್ದರೂ ಅವು ಸಮಾನತಾವಾದಿಯ ದೃಷ್ಟಿಯಿಂದ ಹೊಮ್ಮುತ್ತವೆ. ಹೊರತು ಯಾವ ಜಾತಿ ದ್ವೇಷದಿಂದಾಗಲಿ ಹೊಮ್ಮುವುದಿಲ್ಲ. ಎಂಬುವುದು ಅರಿತು ಕೊಳ್ಳಬೇಕಿದೆ.

ಮದುವೆ ಕುರಿತು ಕುವೆಂಪುರವರ ಒಂದು ಅಭಿಪ್ರಾಯ ಹೀಗಿದೆ : ಮಂತ್ರ ಮಾಂಗಲ್ಯ ಎನ್ನುವುದು ಸರಳವಾದ ಆಡಂಬರವಿಲ್ಲದ, ಪುರೋಹಿತರ ಅವಲಂಬನೆಯಿಲ್ಲದೆ, ದುಂದುವೆಚ್ಚಕ್ಕೆ ಕಡಿವಾಣ, ಹಾಕುವ ಇದೊಂದು ವಿಶಿಷ್ಟ ರೀತಿಯ ವಿವಾಹ ವಿಧಾನವಾಗಿದೆ. ತಮ್ಮ ಮಗ ಪೂರ್ಣಚಂದ್ರ ತೇಜಸ್ವಿ ಅವರು ಸಹ ಇದೇ ರೀತಿ ವಿವಾಹವಾಗಿ ಮಾದರಿಯಾಗಿದ್ದಾರೆ. ಇಂದಿನ ಪ್ರಜ್ಞಾವಂತ ಮತ್ತು ವಿಚಾರಶೀಲ ಯುವಕ-ಯುವತಿಯರಿಗೆ ಇಂತಹ ಮದುವೆಗಳು ಬಹಳ ಸ್ಪೂರ್ತಿ ನೀಡುತ್ತಿವೆ. ಮಂಡ್ಯ ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಲೂ ಪ್ರಸ್ತುತವಾಗಿವೆ ಇಂತಹ ಮದುವೆಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಅದೇ ರೀತಿ ಪರಿಸರದ ಕುರಿತು ವಿಸ್ಮಯ, ನಿಗೂಢ, ಪ್ರಕೃತಿ ಕುರಿತು ಸದಾ ಸ್ಫೂರ್ತಿಯ ಸೆಲೆಯಾಗಿದ್ದರು. ಇದಕ್ಕೆ ಸಾಕ್ಷಿಯೆಂಬಂತೆ ‘ಮಲೆಗಳಲ್ಲಿ ಮದುಮಗಳು’ ‘ಕಾನೂರು ಹೆಗ್ಗಡತಿ’ ಕೃತಿಗಳು ಸಾಕ್ಷಿಯಾಗಿವೆ. ಪ್ರಪಂಚದಲ್ಲಿರುವ ಎಲ್ಲ ಜಾತಿ ಧರ್ಮ ಪ್ರಾಂತ ಭಾಷೆ ಎಲ್ಲವೂ ಮೀರಿ ಮನುಷ್ಯ ನಿಜವಾಗಲೂ ಮಾನವನ ಆಗಬೇಕು. ಇವರು ಕೊಟ್ಟಿರುವ ವಿಶ್ವಮಾನವ ಸಂದೇಶ ಸದಾ ಪ್ರಸ್ತುತವಾಗಿದೆ. ಓ ನನ್ನ ಚೇತನ ಆಗು ನೀ ಅನಿಕೇತನ ದ ಮೂಲಕ ಒಬ್ಬ ವ್ಯಕ್ತಿ ಯಾಗದೆ ಒಂದು ಶಕ್ತಿಯಾಗಿ ವಿಶ್ವಮಾನವನಾಗಿ ಎಲ್ಲರ ಮನೆ ಮನಗಳಲ್ಲಿ ಗೋಚರಿಸುತ್ತಾರೆ.

ಅವರು ನವೆಂಬರ್ 14, 1994 ರಲ್ಲಿ ಮೈಸೂರಿನಲ್ಲಿ ನಿಧನರಾದರು. ಇಡೀ ವಿಶ್ವಕ್ಕೆ ‘ಏನಾದರೂ ಸರಿ ಮೊದಲು ಮಾನವನಾಗು, ಎಂದು ಸಾರಿದ ಮಹಾನ್ ಚೇತನ ಕುವೆಂಪು ಅವರ ಜನ್ಮದಿನದಂದು ಈ ಸಂದರ್ಭದಲ್ಲಿ ಅವರ ವಿಚಾರ, ಸಾಹಿತ್ಯ ಮತ್ತು ಅವರ ಕನಸು ನನಸು ಮಾಡಲು ಹಾಗೂ ಸಮಾಜದ ಸೌಹಾರ್ದತೆಗಾಗಿ ಅಡಿಪಾಯ ಹಾಕುವ ಪ್ರತಿಜ್ಞೆ ನಾವೆಲ್ಲರೂ ಕೈಗೊಂಡಾಗ ಮಾತ್ರ ಅವರ ಜನ್ಮದಿನಕ್ಕೆ ನಿಜವಾಗುವ ಅರ್ಥ ಬರುತ್ತದೆ ಎಂಬುವದೇ ನನ್ನ ಆಶಯ.

✍️ ಭೀಮಾಶಂಕರ ಪಾಣೇಗಾಂವ್,
ಹವ್ಯಾಸಿ ಬರಹಗಾರರು, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here