ಕುವೆಂಪು ಸಾಹಿತ್ಯ ವಿಶ್ವಪಥದ ಬೇರು: ದೊಡ್ಡಮನಿ

0
33

ವಾಡಿ: ಮನುಜಮತ ವಿಶ್ವಪಥದ ಮಾರ್ಗ ತೋರಿಸುವ ಅರಿವಿನ ಪ್ರಜ್ಞೆಯೇ ಕುವೆಂಪು ಸಾಹಿತ್ಯ ಎಂದು ಉಪನ್ಯಾಸಕ ನಿಜಲಿಂಗ ದೊಡ್ಡಮನಿ ಹೇಳಿದರು.

ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಸಂಚಲನ ಸಾಹಿತ್ಯ-ಸಾಂಸ್ಕøತಿಕ ವೇದಿಕೆ ವತಿಯಿಂದ ಗುರುವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಎದೆಯ ದನಿ ನಂಬಿದ ಉದಯ ರವಿ ಶೀರ್ಷಿಕೆಯ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿ ಅವರು ಮಾತನಾಡಿದರು. ಧಾರ್ಮಿಕ ಕಟ್ಟಳೆಗಳನ್ನು ಮೀರಿ ಹೊರ ಬನ್ನಿ ಎಂದು ಕರೆ ನೀಡಿರುವ ಕವಿ ಕುವೆಂಪು, ಬರದೆಂತೆ ಬದುಕಿ ತೋರಿಸಿದ್ದಾರೆ. ಅವರ ಸಾಹಿತ್ಯ ಓದಲು ನಮಗೂ ಅಷ್ಟೇ ಧೈರ್ಯ ಬೇಕಾಗುತ್ತದೆ. ಜತೆಗೆ ನಮ್ಮಲ್ಲಿ ಆ ನೈತಿಕತೆಯೂ ಇರಬೇಕಾಗುತ್ತದೆ. ಕುವೆಂಪು ಅವರನ್ನು ಕೆಣಕಿದರೆ ವೈಯಕ್ತಿಕ ಬದುಕು ವೈಚಾರಿಕವಾಗಿ ತೆರೆದುಕೊಳ್ಳುವುದಲ್ಲದೆ ಸಮಾಜಕ್ಕೆ ಬೆಳಕು ದೊರೆಯುತ್ತದೆ ಎಂದರು.

Contact Your\'s Advertisement; 9902492681

ಜನಸಾಮಾನ್ಯರ ಎದೆಯಲ್ಲಿ ಮತ ಮೌಢ್ಯಗಳನ್ನು ಬಿತ್ತುವ ಸಂಪ್ರದಾಯವಾದಿಗಳ ಕುತಂತ್ರ ಬುದ್ದಿಗೆ ಬಲಿಯಾದರೆ ಗುಲಾಮಗಿರಿ ಜೀವನ ಅಪ್ಪಿಕೊಳ್ಳಬೇಕಾಗುತ್ತದೆ. ನಮ್ಮೊಳಗಿನ ಅರಿವಿನ ಪ್ರಜ್ಞೆಯನ್ನು ಎಚ್ಚರಿಸಿಕೊಂಡು ಪ್ರಶ್ನಿಸಲು ಎದ್ದು ನಿಂತರೆ ಜಡತ್ವದಿಂದ ಕೂಡಿದ ಈ ವ್ಯವಸ್ಥೆಯ ದಿಕ್ಕನ್ನೇ ಬದಲಿಸಬಹುದು. ನೇರವಾಗಿ ಮತ್ತು ಕಠೋರವಾಗಿ ಬರೆದ ಕೆಚ್ಚೆದೆಯ ಸಾಹಿತಿ ಕುವೆಂಪು, ಶೋಷಣೆಯಿಂದ ಕೂಡಿದ ಹಾಗೂ ಅಸಮಾನತೆಯಿಂದ ಬಳಲುತ್ತಿರುವ ಈ ಕೊಳೆತ ಸಮಾಜದ ಬದಲಾವಣೆಗಾಗಿ ಯುವಜನರ ಎದೆಯಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದಾರೆ. ಸತ್ಯ ಬರೆಯುವವರನ್ನು ಕೊಲ್ಲಲು ನಿಂತಿರುವ ಈ ಸನಾತನವಾದಿ ಸಮಾಜವನ್ನು ಪ್ರಗತೀಶೀಲವಾಗಿ ಪರಿವರ್ತಿಸಲು ಕುವೆಂಪು ಅವರ ಸಾಹಿತ್ಯವೇ ನಮಗೆ ಅಸ್ತ್ರವಾಗಿದೆ ಎಂದು ವಿವರಿಸಿದರು.

ಸಂಚಲನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ದಯಾನಂದ ಖಜೂರಿ ಮಾತನಾಡಿ, ಸಮಾಜವನ್ನು ಬದಲಿಸುವ ಶಕ್ತಿ ಹೊಂದಿರುವ ವಿದ್ಯಾರ್ಥಿ ಯುವಜನರು ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಪ್ರಗತಿಪರ ಚಳುವಳಿಗಳ ಭಾಗವಾಗಬೇಕು. ಪರಿಣಾಮ ಪ್ರಗತೀಶೀಲವಾದ ಸಿನೆಮಾ, ಪುಸ್ತಕ ಸಂವಾದ, ಕವಿಗೋಷ್ಠಿ, ಗುಂಪು ಚರ್ಚೆ, ಬಯಲು ಕವಿಗೋಷ್ಠಿ ಹೀಗೆ ಹಲವು ವೈಚಾರಿಕ ಕಾರ್ಯಕ್ರಮಗಳನ್ನು ಸಂಚಲನ ವೇದಿಕೆ ಸಂಘಟಿಸಿದೆ. ಆಸಕ್ತರು ವೇದಿಕೆಯ ಸದಸ್ಯರಾಗಲು ಮುಂದೆ ಬರಬೇಕು ಎಂದು ಕರೆ ನೀಡಿದರು.

ಪುರಸಭೆ ಸದಸ್ಯೆ ಸುಗಂಧಾ ನಾಗೇಂದ್ರ ಜೈಗಂಗಾ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು. ಸಂಚಲನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಕಾಶೀನಾಥ ಹಿಂದಿನಕೇರಿ ಅಧ್ಯಕ್ಷತೆ ವಹಿಸಿದ್ದರು. ನಿವೇದಿತಾ ದಹಿಹಂಡೆ, ವಿಕ್ರಮ ನಿಂಬರ್ಗಾ, ಮಡಿವಾಳಪ್ಪ ಹೇರೂರ, ದೇವಿಂದ್ರ ಕರದಳ್ಳಿ, ರವಿ ಕೋಳಕೂರ, ಮಲ್ಲೇಶ ನಾಟೇಕರ, ಚಂದ್ರು ಕರಣಿಕ, ವೀರಣ್ಣ ಯಾರಿ, ಯಶ್ವಂತ ಧನ್ನೇಕರ, ಜಯದೇವ ಜೋಗಿಕಲ್‍ಮಠ, ಬಸವರಾಜ ಕೇಶ್ವಾರ, ಪ್ರಕಾಶ ಚಂದನಕೇರಾ, ಮಹಾಂತೇಶ ಬಿರಾದಾರ, ಭೀಮರಾವ ದೊರೆ, ಮಲ್ಲಯ್ಯಸ್ವಾಮಿ ಮಠಪತಿ, ಬಾಬುಮಿಯ್ಯಾ ಪಾಲ್ಗೊಂಡಿದ್ದರು. ಶೋಭಾ ನಿಂಬರ್ಗಾ ಸಂಗಡಿಗರು ಕುವೆಂಪು ಗೀತೆ ಪ್ರಸ್ತುತಪಡಿಸಿದರು. ಖೇಮಲಿಂಗ ಬೆಳಮಗಿ ಸ್ವಾಗತಿಸಿದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು. ರಾಯಪ್ಪ ಕೊಟಗಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here