ಬೆಳಗಾವಿ ಅಧಿವೇಶನ; ಚರ್ಚೆಯಾಗಬೇಕಾಗಿತ್ತೇನು? ಆಗುದ್ದೇನು? ಕಂಪ್ಲಿಟ್ ಮಾಹಿತಿ ಇಲ್ಲಿದೆ

0
16
  • # ಕೆ.ಶಿವು.ಲಕ್ಕಣ್ಣವರ

ಜನರ ಕುಂದುಕೊರತೆಗಳು ಅಧಿವೇಶನಗಳಲ್ಲಿ ಚರ್ಚೆಯಾಗಿ ಅವರ ಆಶೋತ್ತರಗಳು ಅಲ್ಲಿ ಫಲಿತವಾಗಬೇಕು ಎಂಬುದು ಸಂವಿಧಾನದ ಆಶಯ. ಅದಕ್ಕಾಗಿಯೇ ವರ್ಷದಲ್ಲಿ ಇಂತಿಷ್ಟು ದಿನಗಳ ಒಳಗಾಗಿ ಇಂತಿಷ್ಟು ದಿನ ಅಧಿವೇಶನ ನಡೆಯಲೇಬೇಕು ಎಂಬ ಷರತ್ತು ವಿಧಿಸಲಾಗಿದೆ.

ಅಧಿವೇಶನದ ಹಲವಾರು ಕಲಾಪಗಳಲ್ಲಿ ಔಚಿತ್ಯಪೂರ್ಣ ಚರ್ಚೆಗಳು ನಡೆದಿವೆ. ವಿರೋಧ ಪಕ್ಷಗಳು ಆಳುವವರನ್ನು ತರಾಟೆಗೆ ತೆಗೆದುಕೊಂಡಿದ್ದಿದೆ. ಅದೇ ರೀತಿಯಲ್ಲಿ ಆಡಳಿತ ಪಕ್ಷಗಳು ಸ್ನೇಹಪೂರ್ವಕವಾಗಿ ವಿರೋಧ ಪಕ್ಷದ ಶಾಸಕರ ಮನಗೆದ್ದ ನೂರಾರು ಉದಾಹರಣೆಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಚರ್ಚೆ ಸಂವಾದಗಳು ವಿರಳವಾಗುತ್ತಿರುವುದು ದುರಂತವಾಗಿದೆ. ಕೇವಲ ಗದ್ದಲ, ಕಲಾಪ ಮುಂದೂಡಿದೆ, ಕೂಗಾಟ ಚೀರಾಟಗಳಲ್ಲಿ ಮಸೂದೆಗಳಿಗೆ ಅಂಗೀಕಾರ ನಡೆಯುತ್ತಿವೆ. 2019 ರಲ್ಲಿ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಮಯದಲ್ಲಿ ಮಾತ್ರ ಒಂದು ಗಂಭೀರ ಚರ್ಚೆ ನಡೆದಿದ್ದನ್ನು ಮಾತ್ರ ಇಲ್ಲಿ ಉಲ್ಲೇಖಿಸಬಹುದು.

Contact Your\'s Advertisement; 9902492681

ಯಾವುದೇ ಮಸೂದೆಗಳು ಮಂಡನೆಯಾಗುವುದು ಆಧಿವೇಶನಗಳಲ್ಲಿ. ಆ ಸಂದರ್ಭದಲ್ಲಿ ಅವುಗಳ ಸಾಧಕಬಾಧಕಗಳ ಕುರಿತು ವಿಸ್ತೃತ ಚರ್ಚೆ ನಡೆಯಬೇಕು. ಅಲ್ಲದೇ ಜನರ ಸಮಸ್ಯೆಗಳು ಅಧಿವೇಶನದಲ್ಲಿ ಧ್ವನಿಸಬೇಕು. ಅದಕ್ಕಾಗಿ ಅಧಿವೇಶನದ ಸಮಯದಲ್ಲಿ ನೂರಾರು ಪ್ರತಿಭಟನೆಗಳು, ಮನವಿ ಸಲ್ಲಿಕೆಗಳು ನಡೆಯುವುದನ್ನು ನಾವು ಕಾಣುತ್ತೇವೆ. ಅಂದರೆ ಜನತೆ ಇಂದಿಗೂ ಆಳುವವರು ಮತ್ತು ವಿರೋಧ ಪಕ್ಷಗಳ ಮೇಲೆ ನಂಬಿಕೆಯಿಟ್ಟಿವೆ. ಆದರೆ ನಿಜವಾಗಿಯೂ ಅರ್ಥಪೂರ್ಣ ಚರ್ಚೆ ಸಾಧ್ಯವೇ? ಜನರು ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಿಕೊಳ್ಳುವವರೆ ಅಂದರೆ ಉತ್ತರ ನಿರಾಶದಾಯಕ ಅಂತಲೇ ಹೇಳಬೇಕು.

ಈ ಬಾರಿಯ ಚಳಿಗಾಲದ ಅಧಿವೇಶನ ಮೂರು ವರ್ಷಗಳ ನಂತರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆಯಿತ್ತೇನೋ ನಿಜ. ಅಧಿಕಾರ ವಿಕೇಂದ್ರಿಕರಣದ ಬೇಡಿಕೆ, ಉತ್ತರ ಕರ್ನಾಟಕದ ಕಡೆಗಣನೆಯ ದಶಕಗಳ ಕಾಲದ ಆರೋಪದ ನಂತರ ಬೆಂಗಳೂರು ಮಾತ್ರವಲ್ಲದೇ ಬೆಳಗಾವಿಯಲ್ಲಿಯೂ ಅಧಿವೇಶನ ನಡೆಸುವ ಪರಿಪಾಠ ಆರಂಭವಾಗಿದೆ. ಆದರೆ ಪ್ರವಾಹ ಮತ್ತು ಕೊರೊನಾ ಕಾರಣದಿಂದಾಗಿ ಈ ಮೂರು ವರ್ಷ ಬೆಂಗಳೂರಿನ ವಿಧಾನಸೌಧದಲ್ಲಿಯೇ ಅಧಿವೇಶನ ನಡೆಸಲಾಯಿತು. ಇನ್ನು ಈಗ ಬರೀ 10 ದಿನಗಳು ಸಾಲುವುದಿಲ್ಲ, ಅವಧಿ ಹೆಚ್ಚು ಮಾಡಬೇಕು ಎಂಬ ವಿರೋಧ ಪಕ್ಷಗಳ ಕೂಗನ್ನು ಒಮೈಕ್ರಾನ್ ನೆಪ ಹೇಳಿ ಸರ್ಕಾರ ನಿರ್ಲಕ್ಷಿಸಿದೆ.

ಈ 10 ದಿನಗಳ ಅಧಿವೇಶನದ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಹೈಲೈಟ್ ಮಾಡಲು, ಅಧಿವೇಶನದಲ್ಲಿ ಚರ್ಚೆಯಾಗುವಂತೆ ಮಾಡಲು 50ಕ್ಕೂ ಹೆಚ್ಚು ಪ್ರತಿಭಟನೆಗಳು ಬೆಳಗಾವಿಯಲ್ಲಿ ನಡೆಯುದವು. ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುತ್ತಿರುವ ಜಾಡಮಾಲಿಗಳನ್ನು ಕಾಯಂ ಮಾಡಬೇಕು, ಕೆಲಸದಿಂದ ತೆಗೆಯಬಾರದು, ಮುಧೋಳ ಸಕ್ಕರೆ ಕಾರ್ಖಾನೆ ಪುನರಾರಂಭವಾಗಬೇಕು, ಗುತ್ತಿಗೆ ಪದ್ದತಿ ರದ್ದುಗೊಳಿಸಬೇಕು, ಲಿಂಗಾಯತ, ವೀರಶೈವರಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡಬೇಕು, ಎಸಿಬಿ ರದ್ದುಪಡಿಸಿ ಲೋಕಾಯುಕ್ತಾ ಬಲಪಡಿಸಬೇಕು, ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು, ಮರಾಠ ಸಮುದಾಯಕ್ಕೆ ಮೀಸಲಾತಿ, ಬೆಳೆ ಪರಿಹಾರ ಮತ್ತು ಬೆಂಬಲ ಬೆಲೆಯಡಿ ಖರೀದಿ ಕೇಂದ್ರ, ಅಗ್ರಿಗೋಲ್ಡ್ ಸಂಸ್ಥೆಯಿಂದಾಗಿ ಅನ್ಯಾಯದ ವಿರುದ್ಧ, ಮತಾಂತರ ನಿಷೇಧ ಮಸೂದೆ ಜಾರಿಮಾಡಬಾರದು, ಸದಾಶಿವ ವರದಿ ಜಾರಿಯಾಗಬೇಕು, ದೈಹಿಕ ಶಿಕ್ಷಕರ ನೇಮಕಾತಿಯಾಗಬೇಕು, ರೈತವಿರೋಧಿ ಕೃಷಿ ಕಾಯ್ದೆಗಳು ವಾಪಸ್ ಆಗಬೇಕು ಹೀಗೆಯೇ ಹಲವಾರು ಹಕ್ಕೊತ್ತಾಯಗಳನ್ನಿಟ್ಟುಕೊಂಡು ಧರಣಿಗಳು ಆರಂಭವಾದವು.

ಕೇಂದ್ರದ ಕೃಷಿ ಕಾನೂನುಗಳಿಗೆ ಅನುಗುಣವಾಗಿ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ, ಎಪಿಎಂಸಿ, ಭೂಸುಧಾರಣಾ ತಿದ್ದುಪಡಿಗಳು ಮತ್ತು ಜಾನುವಾರು ನಿಷೇಧ ಪ್ರತಿಬಂಧಕ ಕಾಯ್ದೆ ವಾಪಸ್ ಪಡೆಯಬೇಕೆಂದು ಸಂಯುಕ್ತ ಹೋರಾಟ ಕರ್ನಾಟಕ ಡಿಸೆಂಬರ್ 12 ರಂದು ರೈತ ಅಧಿವೇಶನ ನಡೆಸಿತ್ತು. ಇದೇ ವಿಷಯಕ್ಕೆ ಡಿಸೆಂಬರ್ 13 ರಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ಬೃಹತ್ ಪ್ರತಿಭಟನೆ ಮತ್ತು ಸುವರ್ಣಸೌಧ ಮುತ್ತಿಗೆ ಹೋರಾಟ ನಡೆಸಿತು.

ಇನ್ನೊಂದೆಡೆ ಪ್ರವಾಹದಿಂದಾದ ಬೆಳೆಹಾನಿಗೆ ಸಮರ್ಪಕ ನಷ್ಟ ಪರಿಹಾರ ಕೊಡಬೇಕು, ಮತಾಂತರ ನಿಷೇಧ ಮಸೂದೆ ಜಾರಿಗೊಳಿಸಬಾರದು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು. ಜೊತೆಗೇ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ 40% ಕಮಿಷನ್ ಮತ್ತು ಬಿಟ್‌ಕಾಯಿನ್ ಹಗರಣಗಳನ್ನಿಟ್ಟುಕೊಂಡು ಚರ್ಚೆಗೆ ಸಿದ್ಧಗೊಂಡವು.

# 11 ಮಸೂದೆಗಳ ಮಂಡನೆಗೆ ಸಿದ್ಧವಾಗಿತ್ತು ಸರ್ಕಾರ —

ಕರ್ನಾಟಕ ಕೆಲವು ಇನಾಂ ಅಬಾಲಿಷನ್ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ —

ತಲೆಮಾರುಗಳಿಂದ ’ಇನಾಂ ಭೂಮಿ’ ಉಳುಮೆ ಮಾಡುತ್ತಿದ್ದರೂ ರೈತರು ಮತ್ತು ಎಸ್ಸಿ-ಎಸ್ಟಿ ವರ್ಗದ ಜನರು ಭೂಮಿಯ ಒಡೆತನ ಪಡೆಯಲಾಗಿಲ್ಲ. ಈ ಹಿಂದೆ ಇನಾಂ ಭೂಮಿ ಮಂಜೂರಿಗೆ ಅರ್ಜಿ ಕರೆಯಲಾಗಿತ್ತು. ಆದರೆ, ಬಹುತೇಕ ರೈತರು ಹಾಗೂ ಉಳುಮೆದಾರರು ಅರ್ಜಿ ಸಲ್ಲಿಕೆಯಿಂದ ವಂಚಿತರಾಗಿದ್ದಾರೆ. ಹಾಗಾಗಿ ಮರು ಮಂಜೂರು ವಂಚಿತರು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲು ಈ ಮಸೂದೆ ಜಾರಿಗೊಳಿಸಲಾಗುತ್ತಿದೆ ಎಂದು ಸರ್ಕಾರ ಹೇಳಿತ್ತು.

# ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ —

ಈ ವಿಧೇಯಕದಡಿ ಜಮೀನು ಗುರುತಿಸಲು ಅಗತ್ಯವಿರುವ ವಿವರಣೆ ಹಾಗೂ ಭೂ ಸಮೀಕ್ಷೆ ನಕ್ಷೆ ಅಥವಾ ಭೂಮಾಪನ ನಕ್ಷೆ (ನಿಗದಿತ ಅರ್ಜಿ ನಮೂನೆ-11 ಇ)ಯನ್ನು ಇನ್ನು ಮುಂದೆ ಸರ್ಕಾರಿ ಭೂಮಾಪಕರು ನೀಡಲು ಅವಕಾಶ ಕಲ್ಪಿಸಲಾಗುವುದು. ಈವರೆಗೆ ಪರವಾನಿಗೆ ಪಡೆದ ಭೂಮಾಪಕರು ಮಾತ್ರ 11 ಇ ಸ್ಕೆಚ್ ನೀಡಬಹುದಾಗಿತ್ತು. ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮೂಲಕ ಸರ್ಕಾರಿ ಭೂಮಾಪಕರಿಗೂ ಅನುಮತಿ ನೀಡಲಾಗುವುದು ಎನ್ನಲಾಗಿದೆ. ಆದರೆ ಅದು ಆಗಲೇ ಇಲ್ಲ.

# ಕರ್ನಾಟಕ ಮಹಾನಗರಪಾಲಿಕೆಗಳು ಮತ್ತು ಇತರೆ ಕಾನೂನು (ಮೂರನೇ ತಿದ್ದುಪಡಿ) ವಿಧೇಯಕ-2021 —

ಈ ವಿಧೇಯಕದಡಿ ವಾಣಿಜ್ಯ ಕಟ್ಟಡಗಳಿಗೆ ವಿಧಿಸುವ ಆಸ್ತಿ ತೆರಿಗೆಯಿಂದ ಕೈಗಾರಿಕೆಗಳನ್ನು ಪ್ರತ್ಯೇಕಗೊಳಿಸಿ ನೂತನ ಆಸ್ತಿ ತೆರಿಗೆ ಮಿತಿ ವಿಧಿಸಲಾಗುತ್ತದೆ. ಪ್ರಸ್ತುತ ವಿಧಿಸುತ್ತಿರುವ ವಾಣಿಜ್ಯ ತೆರಿಗೆಯ ಶೇ.70 ತೆರಿಗೆಯನ್ನು ಕೈಗಾರಿಕೆಗೆ ಸೀಮಿತಗೊಳಿಸಲಾಗುತ್ತದೆ. ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ ಸಂಬಂಧ ಈಗಾಗಲೇ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಬಿಬಿಎಂಪಿಯು ಈಗಾಗಲೇ ಸಂಗ್ರಹಿಸಿರುವ 2,362 ಕೋಟಿ ರೂ.ಗಳ ಮರುಪಾವತಿ ಮಾಡುವುದರಿಂದ ಎದುರಾಗುವ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು ಈ ವಿಧೇಯಕ ರೂಪಿಸಲಾಗಿದೆ. ಬಿಬಿಎಂಪಿಯು ಕಟ್ಟಡ ನಕ್ಷೆಯ ಮಂಜೂರಾತಿ ಮತ್ತು ಪ್ರಾರಂಭ ಪ್ರಮಾಣಪತ್ರದ ಅನುಮತಿ ಹಾಗೂ ಕಟ್ಟಡ ಮುಕ್ತಾಯ ಪ್ರಮಾಣಪತ್ರವನ್ನು ಮಂಜೂರು ಮಾಡುವ ಸಮಯದಲ್ಲಿ ಸಂಗ್ರಹಿಸಲಾದ ಶುಲ್ಕ ಮತ್ತು ದಂಡಗಳನ್ನು ಮಾನ್ಯಗೊಳಿಸಲಿದೆ.

# ಕೃಷಿ ವಿಜ್ಞಾನಗಳ ವಿವಿ (ತಿದ್ದುಪಡಿ) ವಿಧೇಯಕ-2021 —

ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯ ವಿಧೇಯಕ-2021 ಕ್ಕೆ ತಿದ್ದುಪಡಿ ಮತ್ತು ನಿಬಂಧನೆ ಸೇರ್ಪಡೆಗಳು ಈ ಅಧಿವೇಶನದಲ್ಲಿ ಮಂಡನೆಯಾಗಲಿವೆ ಎಂದೂ ಆಶಿಸಲಾಗಿತ್ತು, ಆಶಯ ಈಡೇರಲೇ ಇಲ್ಲ.

# ಕೃಷಿ ಕಾಯ್ದೆಗಳು ರಾಜ್ಯದಲ್ಲಿಯೂ ವಾಪಸ್ ಆಗುವವೆ? —

ಕೃಷಿ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಯನ್ನು ರದ್ದುಗೊಳಿಸಲು ಮಸೂದೆ ಮಂಡನೆಯಾಗುವುದೇ ಎಂಬುದರ ಬಗ್ಗೆ ಸ್ಪಷ್ಟತೆಗಳೇ ಇದರಲ್ಲಿ. ಅಂದಂತೆಯೇ ಆ ಬಗೆಗೆ ಸ್ಪಷ್ಟತೆಯು ದೊರೆಯಲಿಲ್ಲ. ಆದರೆ ಮೋದಿ ಸರ್ಕಾರವೇ ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದಲ್ಲದೇ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರದ್ದತಿ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಜೊತೆಗೆ ಎಂಎಸ್‌ಪಿ ಸೇರಿದಂತೆ ಇತರ ರೈತರ ಹಕ್ಕೊತ್ತಾಯಗಳನ್ನು ಒಪ್ಪಿಕೊಂಡಿದೆ. ಇದೇ ಹಾದಿಯಲ್ಲಿ ರಾಜ್ಯ ಸರ್ಕಾರ ಮುಂದುವರೆಯುವುದೇ ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ.

ರೈತರ ಎಲ್ಲಾ ಬೇಡಿಕೆಗಳ ಬಗ್ಗೆ ಅವರೊಂದಿಗೆ ಮಾತನಾಡಲು ನಾವು ಸಿದ್ಧರಿದ್ದೇವೆ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಸಾರ್ವಜನಿಕ ಹಿತಾಸಕ್ತಿ ಇದ್ದರೆ ಕೃಷಿ ಕಾನೂನುಗಳು ಮತ್ತು ಇತರ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವು ರೈತರೊಂದಿಗೆ ಮಾತನಾಡಲು ಮುಕ್ತರಾಗಿದ್ದೇವೆ. ಅವರು ಏನನ್ನು ಬಯಸುತ್ತಾರೆ ಎಂಬುದನ್ನು ಆಲಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಷ್ಟೇ ಹೇಳಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ.

ಈ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯುತ್ತದೆಯೋ ಇಲ್ಲವೋ ಎಂಬ ಅನಿಶ್ಚಿತತೆಯ ನಡುವೇ, ವಿದ್ಯುತ್ ಮಸೂದೆ ಸಹ ಮಂಡನೆಯಾಗಬಹುದು ಎಂಬ ಆತಂಕದಲ್ಲಿ ರೈತರಿದ್ದಾರೆ. ಈ ಆತಂಕ ಮುಂದುರೆಯಿತು.

ಈ ಮೇಲಿನ ಮಸೂದೆಗಳ ಕುರಿತು ಸಮರ್ಪಕ ಚರ್ಚೆಯಾಗಲಿಲ್ಲ. ಆದರೆ ಮತಾಂತರ ನಿಷೇಧ ಮಸೂದೆ 2021 ಮತ್ತು ‘ಲವ್ ಜಿಹಾದ್’ ತಡೆ ಮಸೂದೆ 2021ರ ಕುರಿತು ಹೆಚ್ಚಿನ ಸಮಯ ವ್ಯರ್ಥವಾಗಿತು ಎನ್ನಬಹುದು.

# ಮತಾಂತರ ನಿಷೇಧ ಮಸೂದೆ 2021 —

ಮತಾಂತರ ನಿಷೇಧ ಮಸೂದೆ ಇಲಾಖೆಯ ಪರಿಶೀಲನಾ ಸಮಿತಿಯಲ್ಲಿದ್ದು, ಅಲ್ಲಿ ಒಪ್ಪಿಗೆಯಾಗಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಬೇಕು. ನಂತರ ಸದನದಲ್ಲಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ ಹಲವು ಸಚಿವರು ಈ ಅಧಿವೇಶನದಲ್ಲಿ ಖಂಡಿತ ಈ ಮಸೂದೆ ಜಾರಿಯಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಆದರೆ ಆ ಮಸೂದೆ ಜಾರಿಯಾಗಲೇ ಇಲ್ಲ.

ಪ್ರಸ್ತುತ ದೇಶದ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಗಳು ಜಾರಿಯಲ್ಲಿವೆ. ಭಾರತದ ಸಂವಿಧಾನವು ಅನುಚ್ಛೇದ 25 ರಲ್ಲಿ ಈ ದೇಶದ ಪ್ರತಿ ಪ್ರಜೆಗೂ ಸಹ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ್ದು, ತಮ್ಮ ಧರ್ಮವನ್ನು ಸ್ವತಂತ್ರವಾಗಿ ಪ್ರಚಾರಮಾಡಬಹುದು ಎಂದೂ ಸಹ ಹೇಳಿವೆ. ಹಾಗಾಗಿ ಬಿಜೆಪಿಯವರು ಬಲವಂತದ ಮತಾಂತರ ನಿಷೇಧ ಕಾಯ್ದೆ ತರುತ್ತೇವೆ ಎಂದು ಹಲವರು ಅರೋಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರತಿಪಕ್ಷ ಕಾಂಗ್ರೆಸ್ ಈ ಮಸೂದೆಯನ್ನು ಬಲವಾಗಿ ವಿರೋಧಿಸಿದೆ. ಕೆಲವೊಂದು ಜಾತಿ, ಧರ್ಮಗಳನ್ನು ಗುರಿಯಾಗಿಸಿಕೊಂಡು ಅವರಿಗೆ ತೊಂದರೆ ನೀಡುವ ರಾಜಕೀಯ ದುರುದ್ದೇಶವಿರುವುದರಿಂದ ಈ ಮಸೂದೆ
ಜಾರಿಯಾಗಬಾರದು ಎಂದು ಕಾಂಗ್ರೆಸ್‌ನ ಹಲವು ಮುಖಂಡರು ಆರೋಪಿಸಿದರು.

ಮತ್ತೊಂದೆಡೆ ಜೆಡಿಎಸ್ ಪಕ್ಷ ಈ ಕುರಿತು ಪ್ರತಿಕ್ರಿಯಿಸಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಇಡೀ ಬಿಜೆಪಿ ಕುರಿತು ಜೆಡಿಎಸ್‌ಗೆ ಸಹಾನುಭೂತಿ ಇರುವುದರಿಂದ ಒಂದು ವೇಳೆ ಈ ಮಸೂದೆ ಮಂಡನೆಯಾದಲ್ಲಿ ಜೆಡಿಎಸ್ ಬೆಂಬಲಿಸಬಹುದು ಎನ್ನಲಾಗುತ್ತಿದೆ, ಆದರೆ ಅದೂ ಕೂಡ ಆಗಲೇ ಇಲ್ಲ.

# ಲವ್ ಜಿಹಾದ್ ತಡೆ ಮಸೂದೆ 2021 —

ಬಿಜೆಪಿ ಮುಖಂಡ ಮತ್ತು ಗೃಹ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿ ಅವರು 2020 ರ ಫೆಬ್ರವರಿ 04 ರಂದು “ಲವ್ ಜಿಹಾದ್” ಎಂಬ ಪದವನ್ನು ಈಗಿರುವ ಯಾವುದೇ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ. ಅಲ್ಲದೇ ಇದುವರೆಗೂ ’ಲವ್ ಜಿಹಾದ್’ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ ಎಂದು ಲೋಕಸಭೆಗೆ ತಿಳಿಸಿದ್ದರು. ಅದಾದ ಒಂದು ವರ್ಷದಲ್ಲಿಯೇ ಉತ್ತರ ಪ್ರದೇಶ ಸೇರಿ ಹಲವಾರು ರಾಜ್ಯಗಳು ಈ ‘ಲವ್ ಜಿಹಾದ್’ ತಡೆ ಕಾಯ್ದೆ ತಂದಿವೆ. ಈಗ ಕರ್ನಾಟಕ ಬಸವರಾಜ ಬೊಮ್ಮಾಯಿ ಸಹ ಆ ಮಸೂದೆ ಮಂಡಿಸುವ ತರಾತುರಿಯಲ್ಲಿದೆ. ಮತ್ತೂ ಆ ಮಸೂದೆಯನ್ನು ಮಂಡಿಸಲಾಯಿತು.

ಕೊರೊನಾದಿಂದಾಗಿ ರಾಜ್ಯದ ಆರ್ಥಿಕತೆ ಮತ್ತು ಜನಜೀವನ ಕುಸಿದು ಬಿದ್ದಿದೆ. ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದೆ. ಕೇಂದ್ರದಿಂದ ಪರಿಹಾರ, ಜಿಎಸ್‌ಟಿ ಬಾಕಿ ಸಮರ್ಪಕವಾಗಿ ತಲುಪಿಲ್ಲ. ಈಗ ಮತ್ತೊಂದು ಕೋವಿಡ್ ಅಲೆಯ ಭೀತಿ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತೆ ಭಾವನಾತ್ಮಕ ವಿಚಾರಗಳತ್ತಲೇ ಗಿರಕಿ ಹೊಡೆಯೊತು. ಅಂತಹ ವಿಷಯಗಳನ್ನೇ ಚರ್ಚೆಗೆ ತರಲಾಯಿತು. ಇಷ್ಟೆಲ್ಲಾ ಬಿಕ್ಕಟ್ಟುಗಳ ನಡುವೆ ಜನ ಸಮುದಾಯಗಳ ಚಿತ್ತವನ್ನು ವಿಚಲಿಸಲು ಸರ್ಕಾರ ಯಶಸ್ವಿಯಾಗುತು. ಮಾಧ್ಯಮಗಳು ಜನ ಸಮುದಾಯಗಳ ಕಾಳಜಿಯನ್ನು ಹೈಲೈಟ್ ಮಾಡಿದವು..!

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here