- # ಕೆ.ಶಿವು.ಲಕ್ಕಣ್ಣವರ
ವಿಧಾನ ಪರಿಷತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಈ ಫಲಿತಾಂಶ ರಾಜಕೀಯ ದಿಕ್ಸೂಚಿಯಾಗಬಹುದು ಎಂಬ ಅಂದಾಜುಗಳು ಕೇಳಿ ಬರುತ್ತಿವೆ.
ಕೇಂದ್ರ ಮತ್ತು ರಾಜ್ಯದಲ್ಲಿ ಎರಡು ಕಡೆ ಬಿಜೆಪಿಯೇ ಅಧಿಕಾರದಲ್ಲಿದೆ. ಜೊತೆಗೆ ಕೇಂದ್ರ ತನಿಖಾ ಸಂಸ್ಥೆಗಳು ಕಾಂಗ್ರೆಸ್ ಬೆಂಬಲಿತ ಸಂಪನ್ಮೂಲ ವ್ಯಕ್ತಿಗಳ ಮೇಲೆ ಪದೇ ಪದೇ ದಾಳಿ ನಡೆಸುತ್ತಿವೆ. ಇದರಿಂದ ಪಕ್ಷಕ್ಕೆ ಆರ್ಥಿಕ ಸಂಪನ್ಮೂಲ ಒದಗಿಸುವ ಮೂಲಗಳ ಮೇಲೆ ಭಾರೀ ಪೆಟ್ಟು ಬಿದ್ದಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ರಾಜಕಾರಣ ಮಾಡುವುದು ಕಷ್ಟವಾಗಲಿದೆ ಎಂಬ ಆತಂಕವನ್ನು ಬಹಳಷ್ಟು ಕಾಂಗ್ರೆಸ್ ನಾಯಕರು ಆಂತರಿಕ ಸಭೆಗಳಲ್ಲಿ ಪ್ರಸ್ತಾಪಿಸಿದ್ದರು.
ಸವಾಲಿನ ಸಂದರ್ಭಗಳಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎದೆಗುಂದದೆ ತಮ್ಮ ಪಕ್ಷದ ಮುಖಂಡರನ್ನು, ಕಾರ್ಯಕರ್ತರನ್ನು ಹುರಿದುಂಬಿಸಲಾರಂಭಿಸಿದರು. ಕಾಂಗ್ರೆಸ್‍ನ ಬಹಳಷ್ಟು ಮಂದಿ ರಾಜಕೀಯವಾಗಿ ತಟಸ್ಥವಾಗಿ ಉಳಿಯುವ ನಿರ್ಧಾರ ಮಾಡಿದ್ದರು, ಅದಕ್ಕೆ ಅವಕಾಶ ನೀಡದೆ ಮನೆಯಲ್ಲಿ ಉಳಿದ್ದಿದ್ದವರನ್ನು ಹೊರ ಕರೆತಂದು ಪಕ್ಷದ ಸಂಘಟನೆಯ ಚಟುವಟಿಕೆಗಳಿಗೆ ಹಚ್ಚಿದರು. ತಮ್ಮ ಮೇಲೆಯೇ ಜಾರಿ ನಿರ್ದೇಶನಾಲಯದ ತನಿಖೆ ಇದೆ. ನಾನೇ ಹೆದರಿಲ್ಲ. ರಾಜಕೀಯದಲ್ಲಿ ಇದೆಲ್ಲಾ ಸಾಮಾನ್ಯ, ಭಯ ಬೇಡ. ಮುಂದೆ ಅಧಿಕಾರ ಬಂದಾಗ ಒಳ್ಳೆಯದಾಗಲಿದೆ ಎಂದು ಹೇಳುತ್ತಲೇ ತಮ್ಮವರನ್ನು ಹುರಿದುಂಬಿಸಿ ಬಿಜೆಪಿಗೆ ಸಡ್ಡು ಹೊಡೆಯಲಾರಂಭಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಾದರೂ ತಲೆ ಕೆಡಿಸಿಕೊಳ್ಳದೆ ರಾಜ್ಯ ಪ್ರವಾಸ ಮಾಡಿ ಪ್ರಚಾರ ನಡೆಸಿದರು. ಅದರ ಪರಿಣಾಮ ಬಿಜೆಪಿಗೆ ಸಮಬಲವಾಗಿ ಕಾಂಗ್ರೆಸ್ ಕೂಡ ವಿಧಾನ ಪರಿಷತ್ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ವಿ.ಪ. ಚುನಾವಣೆ ಮುಗಿಯುತ್ತಿದ್ದಂತೆ ಮೇಕೆದಾಟು ಯೋಜನೆಯ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಘೋಷಿಸಿದರು.
ಈ ಹೋರಾಟ ಹಳೆ ಮೈಸೂರು ಭಾಗದಲ್ಲಿ ಪ್ರಬಲ ಎದುರಾಳಿ ಜೆಡಿಎಸ್‍ನ ಪ್ರಾಬಲ್ಯವನ್ನು ಕುಗ್ಗಿಸುವ ರಣತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕವ್ಯಕ್ತಿ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಸೋಲು ಕಂಡಿತ್ತು. ಅದರ ಬಳಿಕ ಸಾಮೂಹಿಕ ನಾಯಕತ್ವದ ಮೊರೆ ಹೋಗಲು ಹೈಕಮಾಂಡ್ ಸೂಚನೆ ನೀಡಿದೆ.
ಕೆಲವು ಕಾಂಗ್ರೆಸಿಗರು ಹಿಂದುಳಿದ ವರ್ಗಗಳ ಮತಗಳ ಕ್ರೋಢಿಕರಣಕ್ಕಾಗಿ ಪ್ರಬಲ ನಾಯಕತ್ವದ ಅಗತ್ಯ ಇದೆ ಎಂದು ಪ್ರತಿಪಾದಿಸುತ್ತಾ ಡಿ.ಕೆ.ಶಿವಕುಮಾರ ಅವರ ಕಾಲು ಎಳೆಯುವ ಪ್ರಯತ್ನ ನಡೆಸುತ್ತಲೆ ಬಂದಿದ್ದಾರೆ. ಆದರೆ ಯಾವುದಕ್ಕೂ ಸೊಪ್ಪು ಹಾಕದೆ ಡಿ.ಕೆ.ಶಿವಕುಮಾರ್ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುತ್ತಾ ಪಕ್ಷ ಸಂಘಟನೆಯನ್ನು ಸದಾ ಚುರುಕಾಗಿಡುವ ಪ್ರಯತ್ನ ಮಾಡುತ್ತಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದೆ ಆದರೆ ಮುಂದಿನ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವುದು ತಪ್ಪಲಿದೆ ಎಂಬ ಲೆಕ್ಕಾಚಾರಗಳು ನಡೆದಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಜೊತೆ ಪೈಪೋಟಿ ನಡೆಸಲು ಸಿದ್ಧವಿರುವ ಕಾಂಗ್ರೆಸ್, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಸಣ್ಣ ಪ್ರಮಾಣದ ರಾಜಿಗೂ ಆಸಕ್ತಿ ಹೊಂದಿಲ್ಲ.
ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಹಳಷ್ಟು ಕಡೆ ಜೆಡಿಎಸ್ ಕೆಲವು ಸ್ಥಾನಗಳನ್ನು ಗೆದ್ದು, ನಿರ್ಣಾಯಕ ಸ್ಥಾನದಲ್ಲಿ ಕುಳಿತಿದೆ. ಅಕಾರ ಹಿಡಿಯಬೇಕಾದರೆ ರಾಷ್ಟ್ರಿಯ ಪಕ್ಷಗಳು ತಮ್ಮ ಬಳಿ ಬರಬೇಕಾದ ಅನಿರ್ವಾತೆಯನ್ನು ಜೆಡಿಎಸ್ ಸೃಷ್ಟಿಸಿದೆ. ಕಳೆದ ಎರಡು ತಿಂಗಳ ಹಿಂದೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಲುಬರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ನಾಲ್ಕು ಸ್ಥಾನಗಳನ್ನು ಗೆದ್ದು ನಿರ್ಣಾಯಕ ಸ್ಥಾನದಲ್ಲಿ ಕುಳಿತಿದೆ. ಹೀಗಾಗಿ ಈವರೆಗೂ ಅಲ್ಲಿ ಮೇಯರ್ ಆಯ್ಕೆ ಸಾಧ್ಯವಾಗಿಲ್ಲ. ಇಂದು ಪ್ರಕಟವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶವೂ ಅದೇ ಮಾದರಿಯಲ್ಲಿದೆ. ಬಹಳಷ್ಟು ಕಡೆ ಜೆಡಿಎಸ್ ಪಾತ್ರ ನಿರ್ಣಾಯಕವಾಗಿದೆ.
ಈ ಅತಂತ್ರ ಸ್ಥಿತಿಯನ್ನು ತೊಡೆದು ಹಾಕಬೇಕಾದರೆ ಸ್ಪಷ್ಟ ಫಲಿತಾಂಶ ಬರಬೇಕು ಎಂಬ ಒತ್ತಾಸೆ ಕಾಂಗ್ರೆಸ್‍ನದಾಗಿದೆ. ಅದಕ್ಕಾಗಿ ಸ್ಪಷ್ಟ ಹಾದಿ ನಿರ್ಮಿಸಲು ಜನವರಿ 9ರಿಂದ ಪಾದಯಾತ್ರೆ ಆಯೋಜಿಸಲಾಗಿದೆ. ಹತ್ತು ದಿನಗಳ ಈ ಯಾತ್ರೆ ಯಶಸ್ವಿಯಾಗಿದ್ದೆ ಆದರೆ ಕಾಂಗ್ರೆಸ್ ಲೆಕ್ಕಾಚಾರಗಳು ಗೆಲ್ಲಲಿವೆ. ಇಲ್ಲವಾದರೆ ಮತ್ತದೆ ತ್ರಿಕೋನ ಚದುರಂಗದಾಟ ನಡೆಯಲಿದೆ. ಇತ್ತೀಚೆಗೆ ನಡೆದ ಚುನಾವಣೆ ಫಲಿತಾಂಶಗಳು ತ್ರೀಕೋನ ಚದುರಂಗದಾಟದ ಸುತ್ತಲೂ ಸುತ್ತುತ್ತಿವೆ. ವಿದಾನ ಪರಿಷತ್, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಮುಂದಿನ ರಾಜಕೀಯದ ದಿಕ್ಸೂಚಿಯಾಗಲಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.