ಬಾಗಲಕೋಟೆ : ಹೊಸ ವರ್ಷದಿಂದ ಜಿಎಸ್‌ಟಿ ದರ ಹೆಚ್ಚಳದ ಹಿನ್ನಲೆಯಲ್ಲಿ ರಾಜ್ಯದಲ್ಲಿಯೇ ಸೀರೆ ಉತ್ಪಾದನೆಗೆ ಹೆಸರಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಲಕ್ಷಾಂತರ ನೇಕಾರರು ಜವಳಿ ಉದ್ಯಮಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವದಾಗಿ ನೇಕಾರರ ಒಕ್ಕೂಟಗಳು ಸನ್ನದ್ಧವಾಗಿವೆ.ಉತ್ಪಾದನೆ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಕಚ್ಚಾ ವಸ್ತುಗಳಿಂದ ತಯಾರಾಗದ ಬಟ್ಟೆಗಳಿಗೆ ಸುಂಕ ರಚನೆಯನ್ನು ಸರಿಪಡಿಸಲು ತೀರ್ಮಾಣ ಮಾಡಲಾಗಿದೆ ಎಂದಿರುವ ಸರ್ಕಾರ,
ಇದೇ ಜನೇವರಿ 1 ರಿಂದ ಹೊಸ ತೆರಿಗೆ ಬರಲಿದೆ ಎಂದು ತಿಳಿಸಿದೆ. ಯಾವುದೇ ಮೌಲ್ಯದ ಉಡುಪುಗಳ ಮೇಲಿನ ಜಿಎಸ್‌ಟಿ ದರವು ಶೇ.12 ರಷ್ಟು ಆಗುವದು. ಈ ಮೊದಲು ಒಂದು ಸಾವಿರ ರೂ. ಒಳಗಿನ ಬಟ್ಟೆಯ ಮೇಲೆ ಶೇ.5 ರಷ್ಟು ತೆರಿಗೆ ಇತ್ತು. ಇದೀಗ ಸಣ್ಣ ಪ್ರಮಾಣದ ನೇಕಾರನಿಗೂ ಅದರಲ್ಲೂ ಕಾಟನ್ ಸೀರೆಗಳ ಉತ್ಪಾದನೆ ಮೊದಲೇ ಮೂಲೆ ಹಿಡಿದಿದ್ದು, ನಿಶ್ಚಿತವಾಗಿಯೂ ಮಗ್ಗಗಳು ಸಂಪೂರ್ಣ ಬಂದ್ ಆಗುವ ಮೂಲಕ ಲಕ್ಷಾಂತರ ನೇಕಾರರು ಬೀದಿಪಾಲಾಗುವ ಆತಂಕದಲ್ಲಿದ್ದಾರೆ.
ಇದೇ ನಿಯಮಾನುಸಾರ ಜನೇವರಿ 1 ರಿಂದ ಸಿಂಥೆಟಿಕ್ ಫೈಬರ್‌ಗಳು ಮತ್ತು ನೂಲಿನ ಮೇಲಿನ ಜಿಎಸ್‌ಟಿ ದರಗಳನ್ನು ಶೇ.18 ರಿಂದ 12 ಕ್ಕೆ ಇಳಿಸಲಿದ್ದಾರೆ. ಅದರಂತೆಯೇ ಎಲ್ಲವನ್ನೂ ಏಕರೂಪ ತೆರಿಗೆ ಬದಲಾಗಿ ಕಾಟನ್ ಸೀರೆಗಳ ಬಗ್ಗೆ ಸರ್ಕಾರ ಮಟ್ಟದಲ್ಲಿ ತಿಳಿದಾಗ್ಯೂ ತೆರಿಗೆ ಹೆಚ್ಚಳಗೊಳಿಸಿರುವದು ಅಸಂಬದ್ಧ.ಹೊಸ ತೆರಿಗೆ ಆಕರಣೆ ಬದಲಾಗಿ ಈಗಿರುವ ಶೇ.5 ಆಕರಣೆಯಲ್ಲಿಯೇ ಜವಳಿ ಕ್ಷೇತ್ರದಲ್ಲಿನ ಕಾಟನ್ ಸೀರೆಗಳಿಗೆ ಮೀಸಲಾತಿ ಕಲ್ಪಿಸಬೇಕೆಂದು ರಾಜ್ಯ ನೂಲಿನ ಗಿರಣಿ ಮಹಾಮಂಡಳದ ಉಪಾಧ್ಯಕ್ಷ ಶಂಕರ ಸೊರಗಾಂವಿ ತಿಳಿಸಿದರು.
ಸವಾಲಾದ ಉತ್ಪಾದನೆ: ಕಚ್ಚಾ ವಸ್ತುಗಳ ಬೆಲೆ ಹಿಂದೆಂದೂ ಕಂಡಿರಿಯದಷ್ಟು ದುಪ್ಪಟ್ಟಾಗಿದೆ. ನೇಕಾರರ ಭಾರ ಸರಿದೂಗಿಸಲು ಸರ್ಕಾರವೇ ಸಾಕಷ್ಟು ಯೋಜನೆಗಳನ್ನು ನಿರ್ಮಿಸಿದೆ.ರಾಜ್ಯದಲ್ಲಿ ನೇಕಾರರ ಸ್ಥಿತಿ ಚಿಂತಾಜನಕವಾಗಿ ಸರಣಿ ಆತ್ಮಹತ್ಯೆಗಳೇ ನಡೆಯುತ್ತಿವೆ. ಹೀಗಿದ್ದಾಗ ತೆರಿಗೆ ಹೆಚ್ಚಳ ಯಾವ ಪುರುಷಾರ್ಥಕ್ಕಾಗಿ ಎಂಬುದೇ ಅರಿವಾಗುತ್ತಿಲ್ಲವೆಂದು ಸೊರಗಾಂವಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕೈಗೆಟಕುವಷ್ಟು ಸರ್ಕಾರದ ಯೋಜನೆಗಳು ಮಾತ್ರ ಅಲ್ಪಸ್ವಲ್ಪ ನೇಕಾರರಿಗೆ ದೊರಕುತ್ತಿವೆ.ಹಲವಾರು ಯೋಜನೆಗಳು ಕನ್ನಡಿಯಲ್ಲಿನ ಗಂಟಾಗಿದ್ದು, ಯೋಜನೆಗಳು ಕಟ್ಟಕಡೆಯ ನೇಕಾರನಿಗೆ ತಲುಪಿದರೆ ಯೋಜನೆ ರೂಪಿಸಿದ್ದಕ್ಕೂ ಸಾರ್ಥಕವೆಂದು ಪಾವರ್‌ಲೂಮ್ ಅಶೋಷಿಯನ್ ಅಧ್ಯಕ್ಷ ಶಂಕರ ಜಾಲಿಗಿಡದ ಹೇಳಿದರು.
ಇದೇ ಸಂದರ್ಭ ತೇರದಾಳ ಶಾಸಕರಾದ ಸಿದ್ದು ಸವದಿ ದೊಂದಿಗೆ ಮಾತನಾಡಿ ರಾಜ್ಯದ ನೇಕಾರರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವರಿಕೆ ಮಾಡಿದ್ಧೇನೆ.ಕಾಟನ್ ಸೀರೆಗಳಿಗೆ ಶೇ.5 ತೆರಿಗೆಯನ್ನೇ ಮುಂದುವರೆಸಲು ಸಿಎಂ ಸಹಮತವನ್ನೂ ತೋರಿದ್ದಾರೆ. ಮತ್ತೊಮ್ಮೆ ಒತ್ತಾಯಿಸಿ ಹಳೆ ದರದಲ್ಲಿಯೇ ತೆರಿಗೆ ಆಕರಣೆಗೆ ಒತ್ತಾಯಿಸುವದಾಗಿ ತಿಳಿಸಿದ್ರು.