ಪ್ರಾಣ ಹೋದರೂ ಸರಿ, ಮೇಕೆದಾಟು ಪಾದಯಾತ್ರೆ ನಿಲ್ಲುವುದಿಲ್ಲ: ಡಿ.ಕೆ. ಶಿವಕುಮಾರ್

0
21

ಬೆಂಗಳೂರು: ‘ನನ್ನ ಪ್ರಾಣ ಹೋದರೂ ಸರಿ, ರಾಜ್ಯದ ಜನರ ಕುಡಿಯುವ ನೀರಿಗಾಗಿ ಮಾಡುತ್ತಿರುವ ಮೇಕೆದಾಟು ನಡಿಗೆಯನ್ನು ಮಾಡಿಯೇ ತೀರುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುನರುಚ್ಛರಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಸರ್ಕಾರ ಪಾದಯಾತ್ರೆ ಮೊಟಕುಗೊಳಿಸಲು ಷಡ್ಯಂತ್ರ ರೂಪಿಸುತ್ತಿದ್ದು, ಬಿಜೆಪಿ ಸರ್ಕಾರ ಕೀಳು ರಾಜಕೀಯಕ್ಕಾಗಿ ಜನಸಾಮಾನ್ಯರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು:

ರಾಜ್ಯ ಸರ್ಕಾರ ಉತ್ಪ್ರೇಕ್ಷೆಯಿಂದ ಕೋವಿಡ್ ಸಂಖ್ಯೆ ಹೆಚ್ಚಳ ಮಾಡಿ, ರಾಜ್ಯದಲ್ಲಿ ನಿರ್ಬಂಧ ಹೇರಿದೆ. ಕುಡಿಯುವ ನೀರಿಗಾಗಿ ನಡೆಯುವ ಪಾದಯಾತ್ರೆಗೆ ಸಿಗುತ್ತಿರುವ ವ್ಯಾಪಕ ಬೆಂಬಲ ಸಹಿಸಲಾಗದೇ, ಚುನಾವಣೆಯಲ್ಲಿನ ಸೋಲು ಅರಗಿಸಿಕೊಳ್ಳಲು ಆಗದೇ ನಮ್ಮ ಯಾತ್ರೆ ತಡೆಯಲು ಸಂಚು ರೂಪಿಸಿದ್ದಾರೆ.

ಯೂರೋಪ್ ರಾಷ್ಟ್ರಗಳಲ್ಲಿ, ಅಮೆರಿಕದಲ್ಲಿ ಲಕ್ಷಾಂತರ ಕೋವಿಡ್ ಪ್ರಕರಣ ಇದ್ದರೂ ಯಾವುದೇ ನಿರ್ಬಂಧ ಇಲ್ಲ. ಕೇವಲ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗಳು ರಾಷ್ಟ್ರವ್ಯಾಪಿ ಕಾರ್ಯಕ್ರಮ, ಸಭೆಗಳನ್ನು ಮಾಡುತ್ತಿದ್ದರೂ ಯಾವುದೇ ನಿರ್ಬಂಧವಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ವಿಶೇಷ ಬಿಜೆಪಿ ಕರ್ಫ್ಯೂ ಹಾಕಿದ್ದಾರೆ.

ಇಡೀ ವರ್ತಕರ ಸಮುದಾಯ, ಸಾರ್ವಜನಿಕರಿಗೆ ತೊಂದರೆ ಕೊಟ್ಟು ಸಂತೋಷ ಪಡುವ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದೆ. ನಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಲು, ಯಾರಿಗೂ ರೂಮ್ ಕೊಡಬೇಡಿ, ಹೊಟೇಲ್, ರೆಸ್ಟೋರೆಂಟ್ ಮುಚ್ಚಿಸಿ ಎಂದು ಜಿಲ್ಲಾಧಿಕಾರಿಗಳ ಮೂಲಕ ವಿಶೇಷ ಆದೇಶ ಹೊರಡಿಸಿದ್ದಾರೆ. ನಮ್ಮ ರಾಮನಗರದ ಜಿಲ್ಲಾಧಿಕಾರಿಗಳ ಮೂಲಕ ಮೇಕೆದಾಟು, ಚುಂಚಿ ಫಾಲ್ಸ್, ಕೆಲವು ಬೆಟ್ಟ, ಸಂಗಮ ಹಾಗೂ ಇತರೆ ಪ್ರವಾಸಿ ತಾಣಗಳಿಗೆ ಯಾರೂ ಹೋಗದಂತೆ ಆದೇಶ ಹೊರಡಿಸಿದ್ದಾರೆ.

ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಇಂತಹ ಕ್ಷುಲ್ಲಕ ರಾಜಕಾರಣ ಮಾಡಬೇಡಿ. ರಾಜಕಾರಣ ಮಾಡುವ ಸಮಯದಲ್ಲಿ ಮಾಡೋಣ. ರಾಜ್ಯದ ಎಲ್ಲ ಹೊಟೇಲ್, ವ್ಯಾಪಾರ ವಹಿವಾಟು ಮುಚ್ಚಿಸುವ ನಿಮ್ಮ ನಿರ್ಬಂಧ ಸರಿಯಲ್ಲ. ಇದು ಒಮಿಕ್ರಾನ್ ಅಲ್ಲ, ಇದು ಬಿಜೆಪಿಯ ಕಾಯಿಲೆ. ನಿಮ್ಮ ಹೆಸರಿನ ಮುಂದೆ ಇರುವ ಕರ್ಫ್ಯೂ. ಇದನ್ನು ಮಾಡಬೇಡಿ. ಸಾರ್ವಜನಿಕರ ಬದುಕಿಗೆ ಅವರ ವಹಿವಾಟಿಗೆ ತೊಂದರೆ ಮಾಡಬೇಡಿ. ಜಿಲ್ಲಾಧಿಕಾರಿಗಳ ಮೂಲಕ ಹೊರಡಿಸಿರುವ ಆದೇಶ ಹಿಂಪಡೆಯಿರಿ ಎಂದು ಮನವಿ ಮಾಡಿದ್ದೇನೆ.

ಪಾದಯಾತ್ರೆ ಹಿನ್ನೆಲೆಯಲ್ಲಿ ನಾವು 15 ದಿನ, ಒಂದು ವಾರ ಮುಂಚಿತವಾಗಿ ರಾಮನಗರದ ಎಲ್ಲ ರೆಸಾರ್ಟ್, ಹೊಟೇಲ್ ಗಳಲ್ಲಿ ಕೊಠಡಿ ಕಾಯ್ದಿರಿಸಿದ್ದೇವೆ. ನಾನು, ಶಾಸಕಾಂಗ ಪಕ್ಷದ ನಾಯಕರು, ಶಾಸಕರು, ಪರಿಷತ್ ಸದಸ್ಯರು ಹಿಂದಿನ ದಿನ ಹೋಗಿ ಸಂಗಮದಲ್ಲಿರುವ ಜಾಗದಲ್ಲಿ ಉಳಿದುಕೊಂಡು ಮರುದಿನ ಪಾದಯಾತ್ರೆ ಆರಂಭಿಸಲು ತೀರ್ಮಾನಿಸಿದ್ದೆವು. ಈಗ ಅವರಿಗೂ ಹೆದರಿಸಿ ನೀವು ಯಾರೂ ಹೊಟೇಲ್ ತೆಗೆಯುವಂತಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ನಮಗೆ ಜಾಗ ನೀಡದಿದ್ದರೂ ಪರ್ವಾಗಿಲ್ಲ, ಹೊಳೆ, ನದಿ ಪಕ್ಕ ಮರಗಳ ಕೆಳಗೆ ಹಾಸಿಗೆ ಹಾಕಿಕೊಂಡು ಮಲಗುತ್ತೇವೆ. ಆದರೆ ನಿಮ್ಮ ರಾಜಕಾರಣಕ್ಕಾಗಿ ಇಡೀ ರಾಜ್ಯದ ಜನರಿಗೆ ತೊಂದರೆ ಯಾಕೆ ನೀಡುತ್ತಿದ್ದೀರಿ? ಕೂಲಿ ಕಾರ್ಮಿಕರ ಪರಿಸ್ಥಿತಿ ಏನಾಗಬೇಕು. ಚಾಲಕರ ಪರಿಸ್ಥಿತಿ ಏನಾಗಬೇಕು? ಅವರ ಬದುಕು ಏನಾಗಬೇಕು? ಇದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ.

ಸರ್ಕಾರ ಯಾರನ್ನಾದರೂ ಬಂಧಿಸಲಿ, ಏನಾದರೂ ಮಾಡಿಕೊಳ್ಳಲಿ. ನಿಮಗೆ ಕಾನೂನು, ಸಂವಿಧಾನ, ಪ್ರಜಾಪ್ರಭುತ್ವದ ಹಕ್ಕುಗಳು, ಹೋರಾಟದ ಮೇಲೆ ಗೌರವಿಲ್ಲ. ನಿಮಗೆ ನೀತಿ, ಸಂಸ್ಕೃತಿ ಇಲ್ಲ. ನಾವು ನಡೆಯುತ್ತೇವೆ. ಯಾರೂ ಇಲ್ಲದಿದ್ದರೂ ನಾವಿಬ್ಬರೇ ನಡೆಯುತ್ತೇವೆ. ನಾವು ರಾಜ್ಯದ ಎಲ್ಲ ಸಂಘ ಸಂಸ್ಥೆಗಳಿಗೆ, ಧರ್ಮಗುರುಗಳಿಗೆ, ಪಕ್ಷದ ನಾಯಕರಿಗೆ, ವರ್ಗದವರಿಗೆ ಪಕ್ಷಾತೀತವಾಗಿ ಆಹ್ವಾನ ನೀಡಿದ್ದೇವೆ. ನೀವು ಕೇವಲ ಒಂದು ದಿನ ಮಾತ್ರ ಬಂಧಿಸಬಹುದು. ಮರುದಿನ ಅದು ನಿಮ್ಮಿಂದ ಸಾಧ್ಯವಿಲ್ಲ. ನೀವು ಬಂಧಿಸಿದರೂ ನಾವು ಹೆದರುವುದಿಲ್ಲ. ಮರುದಿನ ಕರ್ಫ್ಯೂ ಇಲ್ಲ, ನೀವು ಎಲ್ಲಿ ನಿಲ್ಲಿಸಿರುತ್ತೀರೋ ಅಲ್ಲಿಂದಲೇ ನಡೆಯುತ್ತೇನೆ. ನನ್ನ ಮನೆ, ನನ್ನ ಊರು, ನನ್ನ ಕ್ಷೇತ್ರ, ನನ್ನ ರಾಜ್ಯ. ಯಾರೂ ಈ ಪಾದಯಾತ್ರೆ ನಿಲ್ಲಿಸಲು ಸಾಧ್ಯವಿಲ್ಲ.

ಸರ್ಕಾರ ಏನೇ ಹೊಟೇಲ್ ಬಂದ್ ಮಾಡಿಸಿದರೂ ಪಾದಯಾತ್ರೆಗೆ ಐದು ಸಾವಿರವಲ್ಲ ಹತ್ತು ಸಾವಿರ ಜನ ಬಂದರೂ ಅವರಿಗೆ, ಪೊಲೀಸರಿಗೆ ಸೇರಿ ಎಲ್ಲರಿಗೂ ಉಳಿದುಕೊಳ್ಳುವ ಹಾಗೂ ಊಟದ ವ್ಯವಸ್ಥೆ ಮಾಡುವ ಶಕ್ತಿ ನನ್ನ ಕ್ಷೇತ್ರದ ಜನತೆಗೆ ಇದೆ. ನಾವು ಪೊಲೀಸರಿಗೆ, ಮಾಧ್ಯಮದವರಿಗೂ ಕೊಠಡಿ ಬುಕ್ ಮಾಡಿದ್ದರೂ ಅದನ್ನು ನೀಡಬಾರದು ಎಂದು ಹೇಳಿದ್ದಾರೆ. ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಈ ಹೋರಾಟದಲ್ಲಿ ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ.

ನಾವು ನೀರಿಗಾಗಿ ನಡೆಯುತ್ತಿದ್ದು, ಕಾವೇರಿ ಜಲಾನಯನ ಪ್ರದೇಶದ ರೈತರು ಹಾಗೂ ಜನರ ಕುಡಿಯುವ ನೀರಿಗೆ ನಮ್ಮ ಹೊರಾಟ. ನಮ್ಮ ಸರ್ಕಾರ ಡಿಪಿಆರ್ ಮಾಡಿದ್ದು, ನಾನು ಕೊಟ್ಟ ಡಿಪಿಆರ್ ಗೆ ಕೇಂದ್ರ ಸರ್ಕಾರ ಪ್ರಿನ್ಸಿಪಲ್ ಒಪ್ಪಿಗೆ ನೀಡಿದೆ. ಕೇವಲ ಪರಿಸರ ಇಲಾಖೆ ಅನುಮತಿ ಪಡೆದು ಕೆಲಸ ಆರಂಭಿಸಲಿ. ಕಳೆದ ಎರಡೂವರೆ ವರ್ಷದಿಂದ ಇದನ್ನು ಮಾಡಲು ಈ ಸರ್ಕಾರ ವಿಫಲವಾಗಿದೆ. ಇದನ್ನು ಒತ್ತಾಯಿಸಲು ಈ ಯಾತ್ರೆ ಕೈಗೊಂಡಿದ್ದು, ಇದನ್ನು ಹತ್ತಿಕ್ಕಲು ನಿಮ್ಮಿಂದ ಸಾಧ್ಯವಿಲ್ಲ. ನಾವು ಹೋರಾಟ ಮಾಡಿಯೇ ಸಿದ್ಧ.

ಇಂದು ರಾಮನಗರ ಜಿಲ್ಲೆ ಹೊರತುಪಡಿಸಿ ರಾಜ್ಯದ ಇತರೆ ಯಾವುದೇ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳಲ್ಲಿ ನಿರ್ಬಂಧ ಹಾಕಿಲ್ಲ. ಕೇವಲ ರಾಮನಗರದ ಸಂಗಮ, ಮೇಕೆದಾಟಿನಲ್ಲಿ ಮಾತ್ರ ನಿರ್ಬಂಧ. ಹೊರಗಿನಿಂದ ಬಂದ ಪ್ರವಾಸಿಗರ ಪರಿಸ್ಥಿತಿ ಏನು? ಹೊಟೇಲ್ ಬಂದ್ ನಿಂದ ಎಷ್ಟು ವ್ಯಾಪಾರ ವಹಿವಾಟಿಗೆ, ಎಷ್ಟು ಕಾರ್ಮಿಕರಿಗೆ ತೊಂದರೆಯಾಗುತ್ತದೆ ಎಂದು ತಿಳಿದಿದೆಯೇ?

ಬಿಜೆಪಿ ಈ ದೇಶವನ್ನು, ರಾಜ್ಯದ ಗೌರವವನ್ನು ಹಾಳು ಮಾಡುತ್ತಿದೆ. ಸರ್ಕಾರದ ವ್ಯವಸ್ಥೆ ಹಾಳುಮಾಡುತ್ತಿದ್ದು, ಇದನ್ನು ಖಂಡಿಸಿ, ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳುತ್ತೇನೆ.

ಪಾದಯಾತ್ರೆಯನ್ನು ನಾವು ಕೋವಿಡ್ ಮಾರ್ಗಸೂಚಿಯ ಎಲ್ಲ ನಿಯಮವನ್ನು ಪಾಲಿಸಿಕೊಂಡು ಮಾಡುತ್ತೇವೆ. ನಾನು ಪಕ್ಷದ ಅದ್ಯಕ್ಷನಾಗಿ ಪಕ್ಷವನ್ನು ಪ್ರತಿನಿಧಿಸುತ್ತೇನೆ. ಸಿದ್ದರಾಮಯ್ಯ ಅವರು 100 ಶಾಸಕರು ಹಾಗೂ ಪರಿಷತ್ ಸದಸ್ಯರನ್ನು ಪ್ರತಿನಿಧಿಸುತ್ತಾರೆ. ನಾವಿಬ್ಬರೇ ನಡೆಯುತ್ತೇವೆ. ನಮ್ಮ ಹೆಣ ಹೊರಲು ನಾಲ್ಕೈದು ಜನ ಇದ್ದಾರೆ. ಇವರು ಹೆಣಾನೂ ಹೊರುತ್ತಾರೆ, ಪಲ್ಲಕ್ಕಿಯನ್ನೂ ಹೊರುತ್ತಾರೆ. ಅದನ್ನೆಲ್ಲ ತೋರಿಸಲು ಮಾಧ್ಯಮದವರಿದ್ದಾರೆ.’

ಡಿ.ಕೆ. ಶಿವಕುಮಾರ್ ಅವರ ನಾಟಕದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಗುಬ್ಬಿ ವೀರಣ್ಣ ನಾಟಕ ಮಂಡಳಿ ತೆರೆದು ನಾಟಕ ಆಡಿಸುತ್ತಿರುವವರು ಮುಖ್ಯಮಂತ್ರಿಗಳೇ. ಅವರದೇ ನಾಟಕದ ಕಂಪನಿ ಇದೆ. ಇವರೇ ಆದೇಶ ಹೊರಡಿಸಿ ನಾಗಮಂಗಲಕ್ಕೆ ಹೋಗಿದ್ದು ಯಾಕೆ? ಅಲ್ಲಿ ಹೇಗೆ ಕಾರ್ಯಕ್ರಮ ಮಾಡಿದರು? ಇಂದು ಬೆಳಗ್ಗೆ ವಿಧಾನಸೌಧದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಷ್ಟು ಸಾವಿರ ಜನ ಇದ್ದರು? ಪ್ರಮಾಣವಚನ ನೀಡುವುದೇ ಆಗಿದ್ದರೆ, ಸದನದಲ್ಲಿ 25 ನೂತನ ಸದಸ್ಯರನ್ನು ಕರೆದು, ಸಾಮಾಜಿಕ ಅಂತರ ಕಾಪಾಡಿಕೊಂಡು, ಅವರ ಕುಟುಂಬದವರಿಗೆ ಗ್ಯಾಲರಿಯಲ್ಲಿ ಅವಕಾಶ ಮಾಡಿಕೊಟ್ಟು ಪ್ರಮಾಣವಚನ ನೀಡಬೇಕಿತ್ತು.

ಯಾಕೆ ಇಷ್ಟು ದೊಡ್ಡ ಕಾರ್ಯಕ್ರಮ ಮಾಡಿದಿರಿ? ಕಾನೂನು ಏನಾಗಿತ್ತು? ವಿಧಾನಸೌಧದಲ್ಲಿ ಕಾನೂನು ಅನ್ವಯವಾಗುವುದಿಲ್ಲವೇ? ಮಂತ್ರಿಗಳು ಯಾಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು? ಅವರಿಗೆ ಹೇಗೆ ಅನುಮತಿ ಕೊಟ್ಟಿರಿ? ಅವರ ವಿರುದ್ಧ ಯಾಕೆ ಪ್ರಕರಣ ದಾಖಲಿಸಿಲ್ಲ? ನಮಗೆ ಮಾತ್ರ ಕಾನೂನು ಅನ್ವಯಾನಾ? ಸಿಎಂ ಉತ್ತರ ನೀಡಲಿ ಎಂದು ನಾನು ಕೇಳುತ್ತಿಲ್ಲ. ಈ ರಾಜ್ಯ, ದೇಶದ ಕಾನೂನನ್ನು ಎಲ್ಲರೂ ಗೌರವಿಂದ ಕಂಡು ಪಾಲಿಸಿ. ನಮ್ಮ ಪಾದಯಾತ್ರೆಗೆ ಯಾವ ಜಿಲ್ಲೆ ಜನರು ಯಾವತ್ತು ಭಾಗವಹಿಸಲಿದ್ದಾರೆ ಎಂಬ ಪಟ್ಟಿ ನೀಡುತ್ತಿದ್ದೇನೆ. ಅವರು ಏನೇ ನಿರ್ಬಂಧ ಹಾಕಿಕೊಳ್ಳಲಿ, ನಮ್ಮ ಪಕ್ಷಕ್ಕೆ ಹೋರಾಟದ ಇತಿಹಾಸವಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ತೀರ್ಮಾನ ಮಾಡಿದ್ದೇವೆ. ನಾವೆಲ್ಲ ಸೇರಿ ಕಾರ್ಯಕ್ರಮ ಮುಂದುವರಿಸುತ್ತೇವೆ, ಇದನ್ನು ಮುಂದೂಡುವ ಪ್ರಶ್ನೆ ಇಲ್ಲ. ನೀವು ಎಲ್ಲಿ ಬಂಧಿಸುತ್ತೀರೋ ಅಲ್ಲಿಂದಲೇ ನಮ್ಮ ಹೋರಾಟ ಆರಂಭ’ ಎಂದರು.

ಬಿಜೆಪಿ ಸಂಸದರು ಹಾಗೂ ಸಚಿವ ಭೈರತಿ ಬಸವರಾಜು ಅವರ ನಡುವಣ ಮಾತುಕತೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅವರ ರಾಜಕೀಯ ವಿಚಾರ ಮಾತನಾಡಲು ಸಾಕಷ್ಟು ಸಮಯವಿದೆ. ಮೊದಲು ನಾವು ಕುಡಿಯುವ ನೀರಿನ ಬಗ್ಗೆ ಯೋಚಿಸೋಣ. ನಮ್ಮ ಪಕ್ಷದಲ್ಲಿ ಅಂತಹ ಘಟನೆ ನಡೆದಾಗ ಯಾವ ರೀತಿ ಬಿತ್ತರಿಸಿದಿರೋ ಅದೇ ರೀತಿ ಬಿತ್ತರಿಸಿ, ಆನಂತರ ಪ್ರತಿಕ್ರಿಯೆ ನೀಡುತ್ತೇನೆ’ ಎಂದರು.

ಪಾದಯಾತ್ರೆ ಕುರಿತು ಜೆಡಿಎಸ್ ನಾಯಕರ ಟಾಂಗ್ ನೀಡುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಟಾಂಗ್ ಕೊಡುತ್ತಿರಲಿ, ಏಟು ನೀಡುತ್ತಿರಲಿ, ನಾವು ಹೊಡೆಸಿಕೊಳ್ಳೋಣ. ಅವರು ನಮ್ಮ ಸುದ್ದಿ ಮಾತನಾಡಿ ಸಂತೋಷಪಡುತ್ತಾರೆ, ಪಡೆಯಲಿ. ಅವರು ನಮ್ಮ ಅಣ್ಣಾ ಅಲ್ಲವೇ, ಅವರ ಮೇಲೆ ಕೈ ಮಾಡಲು ಸಾಧ್ಯವೇ? ಅವರು ಹೊಡೆದರೆ ನಾವು ಹೊಡೆಸಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ನಿಮ್ಮ ತಂದೆ, ಅಣ್ಣಾ ಕೈಮಾಡಿದಾಗ ನೀವು ತಿರುಗಿಸಿ ಕೈ ಮಾಡಲು ಸಾಧ್ಯವೇ? ದೊಡ್ಡವರು ಚಿಕ್ಕವರ ಮೇಲೆ ಕೈ ಮಾಡಬಹುದು, ಚಿಕ್ಕವರು ದೊಡ್ಡವರ ಮೇಲೆ ಕೈ ಮಾಡಿದರೆ ತಪ್ಪಾಗುತ್ತದೆ. ನಮ್ಮ ಮೇಲೆ ಅವರಿಗೆ ಬಹಳ ಪ್ರೀತಿ ಇದೆ. He loves me a lot’ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here