ಶಹಾಬಾದ: ಒಮಿಕ್ರಾನ್ ಮತ್ತು ಕೊರೊನಾ ವೈರಸ್ ಮಹಾಮಾರಿ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದಾಧ್ಯಾದಂತ ಎರಡು ದಿನಗಳ ವೀಕೆಂಡ್ ಕರ್ಫ್ಯೂ ಹೇರಲ್ಪಟ್ಟಿದಲ್ಲದೇ, ಪೊಲೀಸ್ ಇಲಾಖೆಯ ಕಠಿಣ ಕ್ರಮದಿಂದಾಗಿ ಶನಿವಾರ ಜನಸಂಚಾರ ವಿರಳವಾಗಿತ್ತು.
ಸರ್ಕಾರದ ಆದೇಶದ ಮೇರೆಗೆ ಒಮಿಕ್ರಾನ್ ಮತ್ತು ಕೊರಾನಾ ವೈರಸ್ ಹರಡದಂತೆ ಮುಂಜಾಗ್ರತ ಕೈಗೊಂಡ ಪರಿಣಾಮವಾಗಿ ಪೊಲೀಸ್ ಇಲಾಖೆ ಶುಕ್ರವಾರ ರಾತ್ರಿ೮ ಗಂಟೆಯಿಂದ ಅಗತ್ಯ ವಸ್ತುಗಳನ್ನು ಬಿಟ್ಟು ಎಲ್ಲಾ ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಿಸಲಾಗಿತ್ತು. ಜನರು ಮನೆಯಿಂದ ಹೊರಬರಲು ಹಿಂದೆಮುಂದೆ ನೋಡುತ್ತಿದ್ದು, ನಗರಕ್ಕೆ ಜನರು ಬರುವುದು ಹಾಗೂ ಬೇರೆ ಊರಿಗೆ ಹೋಗುವ ಜನರ ಸಂಖ್ಯೆ ಕಡಿಮೆಯಾಗಿತ್ತು.
ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಎಂದಿನಂತೆ ಇರದೇ ಜನದಟ್ಟಣೆಯಿಲ್ಲದೇ ಬಿಕೋ ಎನ್ನುತ್ತಿತ್ತು.ಯಾವಾಗಲೂ ರೇಲ್ವೆ ನಿಲ್ದಾಣದ ಸಮೀಪ ನೂರಾರು ಜನರ ಜನದಟ್ಟಣೆ ಕಾಣುತ್ತಿತ್ತು.ಆದರೆ ವಿಕೆಂಡ್ ಕರ್ಫ್ಯೂ ರೇಲ್ವೆ ನಿಲ್ದಾಣ ಸುತ್ತಮುತ್ತಲಿನಲ್ಲಿ ಯಾವುದೇ ಅಂಗಡಿಗಳು ತೆರೆದಿರಲಿಲ್ಲ.ಅಲ್ಲದೇ ಲಾಡ್ಜ್, ಬಾರ್, ರೆಸ್ಟೋರೆಂಟ ಮುಚ್ಚಿದ್ದರಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ ಎಂದು ವ್ಯಾಪಾರಸ್ಥರು ಅಸಮಾಧಾನ ಹೊರಹಾಕಿದರು.
ಕೆಲವು ಕಲ್ಯಾಣ ಮಂಟಪದಲ್ಲಿ ಮದುವೆಗಳು ನಡೆದಿದ್ದು ಬಿಟ್ಟರೇ, ಸಂಪೂರ್ಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಅನಗತ್ಯವಾಗಿ ಜನರು ಮಾಸ್ಕ್ ಧರಿಸದೇ ಓಡಾಡುತ್ತಿರುವುದು ಕಂಡು ಬಂತು.ನಗರದ ಮುಖ್ಯ ಬಜಾರನಲ್ಲಿ ಕಿರಾಣಾ, ತರಕಾರಿ, ಮೆಡಿಕಲ್ ಹಾಗೂ ಹಾಲು ಬಿಟ್ಟರೇ ಎಲ್ಲಾ ಅಂಗಡಿಗಳು ಮುಚ್ಚಲ್ಪಟ್ಟಿದ್ದವು.
ಬಸ್ ನಿಲ್ದಾಣದಲ್ಲಿ ಯಾವಾಗಲೂ ಜನಜಂಗುಳಿಯಿಂದ ಕೂಡಿರುವ ಸ್ಥಳ ಸಂಪೂರ್ಣ ಜನರಿಲ್ಲದೇ ಸ್ಮಶಾನ ಸ್ಥಿತಿ ಆವರಿಸಿದಂತಾಗಿತ್ತು. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರ ವಿರಳವಾಗಿತ್ತು. ನಗರದ ಜನರು ಮನೆಯಲ್ಲಿಯೇ ಉಳಿದು ಗೃಹ ಬಂಧನಕ್ಕೆ ಜಾರಿಕೊಂಡ ಸನ್ನಿವೇಶ ಮಾತ್ರ ಸರ್ವೆ ಸಾಮಾನ್ಯವಾಗಿತ್ತು. ಆದರೆ ಸಂಜೆಯಾದಂತೆ ಒಬ್ಬೊಬ್ಬರು ಹೊರಗಡೆ ಬರುವುದು ಕಂಡು ಬಂದಿತು.