ಕಲಬುರಗಿ: ಸನ್ನತಿ ಅಭಿವೃದ್ಧಿಯ ವಿಚಾರವಾಗಿ ನಿನ್ನೆ ಸಂಸದರ ಪತ್ರಿಕಾ ಹೇಳಿಕೆ ಗಮನಿಸಿದೆ. ಇತಿಹಾಸದ ಗಂಧ ಗಾಳಿಯನ್ನು ಅರಿಯದೆ ಕೇವಲ ರಾಜಕೀಯಕ್ಕಾಗಿ ಅವರಿಂದ ಮೂಡಿ ಬಂದಿರುವ ಪದಗಳು ಪ್ರತಿಕ್ರಿಯೆ ಪಡೆಯಲು ಯೋಗ್ಯವಲ್ಲ. ಇಡೀ ಕಲಬುರಗಿ ಉದ್ದಾರವಾಗಿರುವುದು ತಮ್ಮಿಂದಲೇ ಎಂಬ ಧಾಟಿಯಲ್ಲಿ ಸಂಸದರು ಮಾತನಾಡಿದ್ದಾರೆ. ಇದು ಮನುಷ್ಯನಲ್ಲಿ ಅಹಂಕಾರ ಮೈತುಂಬಿದರೆ ಆಗುವ ಅಡ್ಡ ಪರಿಣಾಮ ಎಂದು ನನಗನಿಸುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಮತ್ತು ಶಾಸಕ ಪ್ರಿಯಾಂಕ್ ಖರ್ಗೆ ಅವರ ನಡುವೆ ಕೆಲವುದಿನಗಳಿಂದ, ಸಮಾಜಿಕ ಜಾಲಾತಾಣದಲ್ಲಿ ವಾಕ್ಸಮರ ನಡೆಯುತ್ತಿದೆ. ನಕಲಿ ಸಹಿ ವಿಚಾರ ಮರೆ ಮಾಚುವ ಮುನ್ನವೆ ಇದೀಗ ಸನ್ನತಿ ಅಭಿವೃದ್ಧ ವಿಚಾರಕ್ಕೆ ಮತ್ತೆ ಕೆಸರೆಚ್ಚಾಟ ಆರಂಭವಾಗಿದೆ.
ಈ ಕುರಿತು ಜಾಧಾವ್ ಅವರು ಸನ್ನತಿ ಅಭಿವೃದ್ಧಿ ವಿಚಾರವನ್ನು ಪತ್ರಿಕೆಗಳಲ್ಲಿ ತಾವು ನೀಡಿರುವ ಹೇಳಿಕೆಗಳನ್ನು ಸಮಾಜಿಕ ಜಾಲಾತಾಣದಲ್ಲಿ ಹಾಕಿಕೊಂಡು ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಕಾಲು ಎಳೆದಿದ್ದಾರೆ. ಸಂದರ ಹೇಳಿಕೆಗೆ ಶಾಸಕ ಪ್ರಿಯಾಂಕ್ ಖರ್ಗೆ ಸಹ ಸಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡಿದ್ದು ಇದೀಗ ವರೆದಿಯಾಗಿದೆ.
ಸನ್ನತಿ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಪುರಾತತ್ವ ಪ್ರಸಿದ್ದಿ ಪಡೆದಿರುವ ಕ್ಷೇತ್ರ. ಮೌರ್ಯರ ಕಾಲಕ್ಕಿಂತಲೂ ಹಿಂದಿನ, ಕರ್ನಾಟಕದ ಅತ್ಯಂತ ಪ್ರಾಚೀನ ಪಟ್ಟವಾಗಿದೆ. ಹಲವರಿಗೆ ಇದೊಂದು ಧಾರ್ಮಿಕ ಕೇಂದ್ರ ಹಾಗೂ ಯಾತ್ರಾಸ್ಥಳವೂ ಆಗಿದೆ. ಇಲ್ಲಿನ ಚಂದ್ರಲಾಂಬಾ ದೇವಾಲಯ ದಕ್ಷಿಣ ಭಾರತದಲ್ಲಿಯೂ ಅನೇಕರಿಗೆ ಕುಲದೇವತಾ ಸ್ಥಾನವಾಗಿದೆ. ನೂರಾರು ಬೌದ್ಧ ಸ್ಮಾರಕಗಳು, ಅವಶೇಷಗಳು ಇಲ್ಲಿವೆ. ಭಾರಿ ಸ್ತೂಪಗಳ ಅವಶೇಷಗಳೂ, ನೂರಕ್ಕೂ ಮೀರಿ ಬ್ರಾಹ್ಮೀ ಲಿಪಿಯ ಶಾಸನಗಳ ಜೊತೆಗೆ, ಅಶೋಕನ ಐದಾರು ಶಾಸನಗಳೂ ಇಲ್ಲಿ ದೊರೆತಿವೆ. ಈ ಕ್ಷೇತ್ರದ ಪರಿಚಯ, ಸ್ಥಳ ಅಭಿವೃದ್ಧಿ, ಶಿಲಾಶಾಸನ ಸಂರಕ್ಷಣೆ, ಪ್ರಚಾರ, ಮೂಲ ಸೌಕರ್ಯ ನಿರ್ಮಾಣದಂತಹ ಬಹು ಮುಖ್ಯ ಕೆಲಸ ಮಾಡಿರದಿದ್ದರೆ, ಅವರಿಗೆ ಈ ಸ್ಥಳದ ಮಾಹಿತಿಯೂ ಕೊರತೆಯಾಗಿರುತ್ತಿದ್ದು. ಪುರಾತತ್ವ ಇಲಾಖೆ, ಸರ್ಕಾರ ಹಾಗೂ ಪ್ರವಾಸೋಧ್ಯಮ ಇಲಾಖೆಯ ಕಾರ್ಯ ವೈಖರಿಯ ಮಾಹಿತಿ ಕೊರತೆ ಸಂಸದರಲ್ಲಿ ಎದ್ದು ಕಾಣುತ್ತಿದೆ ಎಂದು ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನನಗೆ ಪ್ರವಾಸೋದ್ಯಮ ಸಚಿವನಾಗಿ ಕೆಲಸ ಮಾಡುವ ಸದವಕಾಶ ದೊರಕಿದಾಗ, ಸನ್ನತಿ ಅಭಿವೃದ್ಧಿಗೆ ನೀಡಿರುವ ಹಣ ನನ್ನ ಬದ್ಧತೆಗೆ ಸಾಕ್ಷಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿದ್ದ ಪುರಾತತ್ವ ವಿಭಾಗವನ್ನು ಪ್ರವಾಸೋಧ್ಯಮ ಇಲಾಖೆಯ ಭಾಗವಾಗಿಸಲು, ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆ ನಡುವೆ ಸಂವಹನ ಹಾಗೂ ಸಂಯೋಜನೆ ಮೂಡಿಸುವ ಹಿಂದೆಂದೂ ಮಾಡಿರದಂತಹ ಐತಿಹಾಸಿಕ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ನಿರ್ವಹಿಸಲಾಗಿತ್ತು.
> ನಾಲ್ವರ್ – ಸನ್ನತಿ ರಸ್ತೆ ನಿರ್ಮಾಣಕ್ಕೆ 4.85 ಕೋಟಿ, ಸನ್ನತಿ – ಬನ್ನಟ್ಟಿ ಕ್ರಾಸ್ ರಸ್ತೆ ನಿರ್ಮಾಣಕ್ಕೆ 5.5 ಕೋಟಿ ಹಾಗೂ ರಾಜ್ಯ ಹೆದ್ದಾರಿ 149 ರಿಂದ – ಬುದ್ಧ ಸ್ತೂಪ ವರೆಗಿನ ರಸ್ತೆ ನಿರ್ಮಾಣಕ್ಕೆ 2 ಕೋಟಿ ಹಣ ಬಿಡುಗಡೆ ಮಾಡಿ ಈ ಐತಿಹಾಸಿಕ ಪ್ರದೇಶಕ್ಕೆ ದಾರಿ ಮಾಡಿಕೊಡುವ ಕೆಲಸವನ್ನು ಯಶಸ್ವಿಯಾಗಿ ನಾವು ನಿರ್ವಹಿಸಿದ್ದೆವು. ಆದರೆ 2018-19 ಸಾಲಿನ ನಂತರ ಅಲ್ಲಿನ ಪ್ರವಾಸೋದ್ಯಮಕ್ಕೆ ಸರ್ಕಾರ ಈವರಿಗೂ ಒಂದೂ ರೂಪಾಯಿ ಬಿಡುಗಡೆ ಮಾಡಿರುವುದಿಲ್ಲ ಎಂದಿದ್ದಾರೆ.
ಇದು ರಾಜ್ಯದ ವಿಚಾರವಾದ್ರೆ, ಸನ್ನತಿ ಕ್ಷೇತ್ರದ ಅಭಿವೃದ್ದಿಗಾಗಿ, ಐತಿಹಾಸಿಕ ಹಿನ್ನೆಲೆಯುಳ್ಳ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವ ನಿಟ್ಚಿನಲ್ಲಿ 2015 ರಲ್ಲಿ ಕಾಂಗ್ರೆಸ್ ಸರ್ಕಾರವು ಸನ್ನತಿಯಲ್ಲಿ ಲ್ಯಾಂಡ್ ಸ್ಕೇಪಿಂಗ್, ಇಂಟರ್ಪ್ರಿಟೇಷನ್ ಸೆಂಟರ್, ಸೈನೇಜಸ್ ಸೇರಿದಂತೆ ಮುಂತಾದ ಪ್ರವಾಸಿ ಸೌಲಭ್ಯ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ನಿಟ್ಟಿನಲ್ಲಿ, 2 ಕೋಟಿ ರೂ.ಗಳನ್ನು ಮಂಜೂರು ಮಾಡಿತ್ತು.
ಅದರಂತೆ, 1.5 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಧಾರವಾಡ ಇವರಿಗೆ ಬಿಡುಗಡೆ ಮಾಡಲಾಗಿತ್ತು. ಆದರೆ, ಹಣ ಬಿಡುಗಡೆಯಾಗಿ 6 ವರ್ಷ ಕಳೆದರೂ ಕಾಮಗಾರಿ ಕೈಗೆತ್ತಿಕೊಳ್ಳದಿರುವುದು ಕೇಂದ್ರ ಬಿಜೆಪಿ ಸರ್ಕಾರದ ಬೇಜವಾಬ್ದಾರಿ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಈ ನೂತನ ಸಂಸದರು ಆಯ್ಕೆಯಾಗಿ ಎರಡೂವರೆ ವರ್ಷ ಕೆಳೆಯುತ್ತ ಬಂದಿದೆ. ಆದರೂ 6 ವರ್ಷಳ ಹಿಂದೆ ಬಿಡುಗಡೆಯಾದ ಹಣ ಈವರೆಗೂ ಸನ್ನತಿ ತಲುಪಿಲ್ಲ. ಈ ಹಣ ಬಿಡುಗಡೆಯಾಗಿರುವುದರ ಮಾಹಿತಿಯೂ ಸಂಸದರಿಗಿಲ್ಲ ಎನಿಸುತ್ತಿದೆ. ಇದು ಸಂಸದರಿಗೆ ಇರುವ ಕಾಳಜಿಯ ಪ್ರತೀಕ!
ಇನ್ನು ಸಂಸದರು ಶಾಸಕರಾಗಿದ್ದಾಗ, ಅವರ ಚಿಂಚೋಳಿಯಲ್ಲಿನ ಕಾಳಗಿಯಲ್ಲಿನ ಬೌಧ ಸ್ತೂಪಗಳ ಹಾಗೂ ಸಾಮ್ರಾಟ್ ಅಶೋಕನ ಶಿಲಾಶಾನಗಳ ಸಂರಕ್ಷಣೆಯ ಕಾರ್ಯವನ್ನೂ ನಾನು ಪ್ರವಾಸೋಧ್ಯಮ ಸಚಿವನಿದ್ದಾಗ ಕೈಗೆತ್ತಿಕೊಂಡಿದ್ದೆ. ಅದಕ್ಕೂ 50 ಲಕ್ಷ ಹಣ ಬಿಡುಗಡೆಯನ್ನೂ ಮಾಡಿಸಿದ್ದೆ. ಇದು ಸಂಸದರಿಗೆ ಮರೆತು ಹೋಗಿರಬಹುದು. ಅದೇ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಕಟದಲ್ಲಿನ ಪುರಾತತ್ವ ಸ್ಥಳಗಳ ಸರ್ವತೋಮುಖ ಅಭಿವೃದ್ದಿಗಾಗಿ ಹೈದರಾಬಾದ್ ಕರ್ನಾಟಕ ಪ್ರವಾಸೋದ್ಯಮ ಸಮಿತಿಯನ್ನು ರಚಿಸಿ ಅನೇಕ ಸಭೆಗಳನ್ನು ಇಡೀ ಭಾಗದ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಯ ಕೆಲಸ ಮಾಡಲಾಗಿತ್ತು.
ಆದರೆ ಆ ಸಮಿತಿಗೆ ಆಹ್ವಾನಿತ ಸದಸ್ಯರಾಗಿದ್ದರೂ, ಒಂದೂ ಸಭೆಗೆ ಹಾಜರಾಗದೇ ಪ್ರದೇಶದ, ಸನ್ನತಿಯ, ಕಾಳಗಿಯ ಅಭಿವೃದ್ಧಿಗೆ ಧ್ವನಿ ಎತ್ತದವರು ಈಗ ರಾಜಕೀಯ ಕಾರಣಕ್ಕೆ ಬಂದು, ಸ್ಥಳೀಯ ಶಾಸಕರನ್ನು ಆಹ್ವಾನಿಸುವ ಔಚಿತ್ಯವನ್ನೂ ತೋರದೇ, ಪ್ರಿಯಾಂಕ್ ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿಗಳ ಫೋಟೋ ಬಳಸಲಿಲ್ಲ, ನೋಡಿ ನೋಡಿ” ಎನ್ನುವುದು ಹಾಸ್ಯಾಸ್ಪದವೂ ಹೌದು, ಕುಶೋದ್ಯವೂ ಹೌದು! ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಕೈ ಎತ್ತಿ ತೋರಿಸಿ ಈ ಕೆಲಸ ನಿಮ್ಮ ಕ್ಷೇತ್ರದಲ್ಲಿ ನಡೆದಿಲ್ಲ ಎಂದು ಬಿಜೆಪಿ ನಾಯಕಗೆ ಕೈ ಬೆರೆಳು ಎತ್ತಲೂ ಆಗಿಲ್ಲ. ಇದು ಚಿತ್ತಾಪುರದ ಅಭಿವೃದ್ದಿಗಾಗಿ ನನ್ನ ಹಾಗೂ ನಮ್ಮ ಕಾಂಗ್ರೆಸ್ ಪಕ್ಷದ ಬದ್ಧತೆಯ ಪ್ರತೀಕ ಎಂದಿದ್ದಾರೆ.
ಕುಚೋದ್ಯದ ಕಾರ್ಯಗಳನ್ನು ಕೈ ಬಿಟ್ಟು ಸಂಸದರು ಪುರಾತತ್ವ ಇಲಾಖೆಗೆ ಕಾಂಗ್ರೆಸ್ ಸರ್ಕಾರ ನೀಡಿದ್ದ ಒಂದೂವರೆ ಕೋಟಿ ಹಣವನ್ನ ಸನ್ನತಿಯ ಅಭಿವೃದ್ಧಿಗೆ ಬಳಸುವಂತೆ ಮಾಡುವ ಕೆಲಸ ಮಾಡುವಂತಾಗಲಿ ಎಂದು ಕಿವಿಮಾತು ಹೇಳಿದ್ದಾರೆ.