ಸುರಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರದೇಶ ಜನತಾದಳ ತಾಲೂಕು ಘಟಕದಿಂದ ನಗರ ಸಭೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ ಮಾತನಾಡಿ,ನಗರದ ಅನೇಕ ವಾರ್ಡ್‌ಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದೆ.ಅಲ್ಲದೆ ಕುಡಿಯುವ ನೀರಿನ ತೊಂದರೆ ತುಂಬಾ ಇದೆ.ಅಲ್ಲದೆ ನಗರಸಭೆಯಲ್ಲಿನ ದಾಖಲೆ ಪತ್ರಗಳ ಕೋಣೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಯಾವುದೇ ಸಮಯದಲ್ಲಿ ಕುಸಿದು ಬೀಳುವ ಸಾಧ್ಯತೆ ಇದೆ.ಒಂದು ವೇಳೆ ಕೋಣೆ ಬಿದ್ದಲ್ಲಿ ನಗರದ ಎಲ್ಲರ ಆಸ್ತಿ ದಾಖಲೆಗಳು ನಾಶವಾಗಲಿವೆ.
ಆದ್ದರಿಂದ ಕೂಡಲೇ ದಾಖಲೆಗಳ ಕೋಣೆ ನಿರ್ಮಿಸಬೇಕು ಮತ್ತು ನಗರದ ಖುರೇಶಿ ಮೊಹಲ್ಲಾದಲ್ಲಿರುವ ನೀರಿನ ಟ್ಯಾಂಕರ್ ಕುಸಿದು ಬೀಳುವ ಹಂತದಲ್ಲಿದ್ದು ಬಿದ್ದಲ್ಲಿ ದೊಡ್ಡ ಅನಾಹುತ ಸಂಭವಿಸಲಿದೆ,ಆದ್ದರಿಂದ ಟ್ಯಾಂಕರ್ ನೆಲಸಮಗೊಳಿಸಿ ಹೊಸದಾಗಿ ಟ್ಯಾಂಕರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.ನಗರದ ಎಲ್ಲಾ ವಾರ್ಡ್‌ಗಳಲ್ಲಿ ಬೀದಿ ದೀಪಗಳ ಹಾಕಿಸುವಂತೆ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಆಗಮಿಸಿ ಹೋರಾಟಗಾರರ ಬೇಡಿಕಗಳನ್ನು ಆಲಿಸಿ ನಂತರ ಬೇಡಿಕೆಗಳ ಈಡೇರಿಸುವ ಭರವಸೆ ನೀಡಿದರು.ಅಲ್ಲದೆ ದಾಖಲೆಗಳ ಕೋಣೆ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಅಲ್ಲದೆ ಈಗಾಗಲೇ ಎಲ್ಲಾ ದಾಖಲೆಗಳನ್ನು ಕಂಪ್ಯೂಟರಿಕರಣಗೊಳಿಸಲಾಗಿದ್ದು ಸಾರ್ವಜನಿಕರು ಆತಂಕಪಡಬೇಕಾಗಿಲ್ಲ ಎಂದು ತಿಳಿಸಿದರು.
ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೆದಾರ ಸೋಮನಾಥ ನಾಯಕ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಸಂಗಣ್ಣ ಬಾಕ್ಲಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಿಪ್ಪಣ್ಣ ಪೋಲಿಸ್ ಪಾಟೀಲ್,ಶೌಕತ್ ಅಲಿ ಖುರೇಶಿ,ಅಲ್ತಾಫ್ ಸಗರಿ,ಎಂ.ಡಿ ಮಹೆಬೂಬ,ಭೀಮನಗೌಡ ಬಾಚಿಮಟ್ಟಿ,ನೂರುಲ್ ಹಸನ್ ರಂಗಂಪೇಟೆ,ಮಹೆಬೂಬ ಚೌಧರಿ,ಶಬ್ಬೀರ್ ನಗನೂರಿ,ಮಹ್ಮದ್ ಕೆಂಭಾವಿ,ಶಾಂತು ತಳವಾರಗೇರಿ ಸೇರಿದಂತೆ ಅನೇಕರಿದ್ದರು.