‘ದೇಶಪ್ರೇಮವೆಂದರೆ ಭೂಪಟ ಪೂಜಿಸುವುದಲ್ಲ; ಸಕಲ ಜನಕೋಟಿಯನ್ನು ಪ್ರೀತಿಸುವುದು’

0
20

ಕಲಬುರಗಿ: ಅಪೂರ್ವ ಸನ್ಯಾಸಿ ಸ್ವಾಮಿ ವಿವೇಕಾನಂದರು ನೀಡಿದ ಸಂದೇಶ ಇಂದಿನ ಕಾಲಮಾನಕ್ಕೆ ಬಹಳ ಪ್ರಸ್ತುತ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಹೇಳಿದರು.

ನಗರದ ಆರಾಧನಾ ಪಿಯು ಕಾಲೇಜು ಆವರಣದಲ್ಲಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ) ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ-2022, ಕೋವಿಡ್-19 ರೋಗದ 3ನೇ ಅಲೆಯ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಇಂದು ಜಾಗತಿಕ ತಾಪಮಾನ, ಪರಿಸರ ಹಾನಿಯಂತಹ ಅನೇಕ ಸವಾಲು-ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳನ್ನು ಮೆಟ್ಟಿ ನಿಂತು ಭಾರತ ವಿಶ್ವಗುರು ಆಗಲು ಯುವಕರ ಪಾತ್ರ ಬಹಳ ಅಗತ್ಯ. ಇಂದಿನ‌ ಸ್ಪರ್ಧಾತ್ಮಕ ಮತ್ತು ಮಾಹಿತಿ ತಂತ್ರಜ್ಞಾನಯುಗದಲ್ಲಿ ಯುವಕರು ವಿವೇಕಾನಂದರ ಕನಸು ನನಸು ಮಾಡಬೇಕು ಎಂದರು.

Contact Your\'s Advertisement; 9902492681

ಸ್ವಾಮಿ ವಿವೇಕಾನಂದರ ಬದುಕು-ಬರಹ ಕುರಿತು ಮುಖ್ಯ ಅತಿಥಿಯಾಗಿದ್ದ ಪ್ರಗತಿಪರ ಚಿಂತಕ ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಿ, ದೇಶಪ್ರೇಮವೆಂದರೆ ಭೂಪಟವನ್ನು ಪೂಜಿಸುವುದಲ್ಲ. ಸಕಲ ಜನಕೋಟಿಯನ್ನು ಪ್ರೀತಿಸುವುದು. ಅವರ ಸ್ಥಿತಿಗತಿ ಉತ್ತಮಪಡಿಸುವುದು.‌ ಅವರಿಗೆ ವಿದ್ಯಾಬುದ್ಧಿಯನ್ನು ಕೊಡುವುದು ಎಂಬುದನ್ನು ಅರಿತಿದ್ದ ವಿವೇಕಾನಂದರು, ಪರಸ್ಪರ ಪ್ರೀತಿ- ವಿಶ್ವಾಸವನ್ನು ಒಳಗೊಂಡ ಅಧ್ಯಾತ್ಮದ ತಳಹದಿಯ ಮೇಲೆ ಹಿಂದೂ ಧರ್ಮವನ್ನು ಕಟ್ಟಬಯಸಿದ್ದರು ಎಂದು ಅಭಿಪ್ರಾಯಪಟ್ಟರು.

ನಾವೆಲ್ಲರೂ ದೇವರನ್ನು ಹುಡುಕುತ್ತ ಕಲ್ಲು ಮಣ್ಣಿನ ಕಟ್ಟಡಗಳನ್ನು ಎಡತಾಕುತ್ತಿದ್ದರೆ, ಸ್ವಾಮಿ ವಿವೇಕಾನಂದರು ಮಾತ್ರ ದರಿದ್ರ, ಅಮಾಯಕರ ನೋವಿನಲ್ಲಿ ದೇವರನ್ನು ಕಾಣುತ್ತಿದ್ದರು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸದೃಢ ಭಾರತ ಕಟ್ಟಬೇಕು ಎಂದು ಅವರು ಕರೆ ನೀಡಿದರು.

ಆರಾಧನಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚೇತನಕುಮಾರ ಗಾಂಗಜಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ನಿರೂಪಿಸಿ ವಂದಿಸಿದರು. ಆನಂದ ಸ್ವಾಗತಿಸಿದರು.

ಇದೇವೇಳೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪಿ.ಎಸ್.ಐ. ಯಶೋಧಾ ಕಟಕೆ, ಬಿ.ಎಚ್. ನಿರಗುಡಿ, ಜಿ. ಸತೀಶ ಇವರನ್ನು ಸನ್ಮಾನಿಸಲಾಯಿತು. ನಂತರ ನಗರದ ಮಣೂರ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕ ಡಾ. ಫಾರುಖ್ ಅಹ್ಮದ್ ಹಾಗೂ ಸಿಇಒ ಡಾ. ಲಕ್ಷ್ಮೀಕಾಂತ ಮೇತ್ರೆ ಹಾಗೂ ವೈದ್ಯ ಸಿಬ್ಬಂದಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷದೋಪಚಾರ ಒದಗಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here