ಆಳಂದ: ಸೃಜನಾತ್ಮಕವಾಗಿರುವ ಸಾಹಿತ್ಯವನ್ನು ಪೋಷಿಸಿಕೊಂಡು ಸಾಹಿತಿಗಳ ಆಶಯದಂತೆ ತಾಲೂಕಿನಲ್ಲಿ ಕನ್ನಡ ನಾಡು ನುಡಿಯ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲಾಗುವುದು ಎಂದು ಆಳಂದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಣಮಂತ ಶೇರಿ ಹೇಳಿದರು.
ಪಟ್ಟಣದಲ್ಲಿ ಸಮಾನ ಮನಸ್ಕ ಸಾಹಿತ್ಯ ಆಸಕ್ತ ಶಿಕ್ಷಕರು ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ತಾಲೂಕಿನಲ್ಲಿ ಕನ್ನಡದ ಕಾರ್ಯಗಳು ನಿರಂತರವಾಗಿರುವಂತೆ ಮಾಡುವುದರ ಜೊತೆಗೆ ಪರಿಷತ್ ವತಿಯಿಂದ ಪ್ರಕಟಣೆ, ಪ್ರೋತ್ಸಾಹ, ವಿಚಾರ ಸಂಕೀರಣ, ಕಾರ್ಯಾಗಾರ ಸೇರಿದಂತೆ ವೈಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಹಿರಿಯ ಶಿಕ್ಷಕ ಪಂಚಪ್ಪ ಪಾಟೀಲ ಮಾತನಾಡಿ, ತಾಲೂಕಿನ ಶಿಕ್ಷಕ ಸಮುದಾಯದಲ್ಲಿಯೂ ಹಲವಾರು ಜನ ಪ್ರತಿಭಾವಂತ ಸಾಹಿತಿಗಳಿದ್ದಾರೆ ಅವರನ್ನು ಬಳಸಿಕೊಂಡು ಕನ್ನಡ ಭಾಷೆ ಬೆಳವಣಿಗೆಗೆ ಜೊತೆಯಾಗಿ ಸಾಗೋಣಾ ಎಂದು ಆಶಯ ವ್ಯಕ್ತಪಡಿಸಿದರು.
ಶಿಕ್ಷಕ ಸಾಹಿತಿ ಅಂಬಾರಾಯ ಕಾಂಬಳೆ ಮಾತನಾಡಿದರು. ಸಿಆರ್‌ಪಿ ನಾಗೇಂದ್ರಪ್ಪ ಗಾಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಶಿಕ್ಷಕ ವಿಶ್ವನಾಥ ಘೋಡಕೆ, ಶಿಕ್ಷಕರ ಸಂಘದ ಖಜಾಂಚಿ ಮಹಾದೇವ ಗುಣಕಿ, ರಾಜಕುಮಾರ ಕೋಷ್ಟಿ, ಶಿಕ್ಷಕರಾದ ಪ್ರಫುಲಕುಮಾರ, ವಿನಾಯಕ ಚೋಳಕೆ, ಸುರೇಶ ಹಂಚಿನಾಳ, ಪರಮಾನಂದ ಜಮಾದಾರ, ಶಿಕ್ಷಕರ ಸಂಘದ ಕಾರ್ಯದರ್ಶಿ ವೆಂಕಟೇಶ ಇಳಿಗಾರ, ಮಾರುತಿ, ಶ್ರೀನಾಥ ನಾಗೂರ, ಶಿವುಕುಮಾರ ಮೇಟಿ, ಅನೀಲ ಸೇರಿದಂತೆ ಶಿಕ್ಷಕರು ಇದ್ದರು. ಚಂದ್ರಶೇಖರ ನಿರೂಪಿಸಿ, ವಂದಿಸಿದರು.