ಸಂಕ್ರಾಂತಿಯ ಸಂಬ್ರಕ್ಕೆ ಬೆಲೆ ಏರಿಕೆ ಬಿಸಿ

0
12

ಹುಬ್ಬಳ್ಳಿ: ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣ ಆಚರಣೆಗೆ ದರ ಏರಿಕೆ ಬಿಸಿ ತಟ್ಟಿದೆ. ಶುಕ್ರವಾರ ಮಾರುಕಟ್ಟೆಯಲ್ಲಿ ಎಳ್ಳು-ಬೆಲ್ಲ, ಕುಸರೆಳ್ಳು ವೈವಿಧ್ಯಮಯ ಹೂವು-ಹಣ್ಣು, ಕಬ್ಬು, ತೋರಣ ಕಟ್ಟಲು ಮಾವಿನ ಎಲೆ ಖರೀದಿ ನಡೆಯಿತು. ಆದರೆ, ಖರೀದಿಯಲ್ಲಿ ಸಂಭ್ರಮ ಕಂಡುಬರಲಿಲ್ಲ.

ದರ ಹೆಚ್ಚಳ: ಒಂದು ಇಡೀ ಕಬ್ಬಿಗೆ ₹30-₹50 ತನಕ ದರವಿತ್ತು. ಮೂರು ತುಂಡು, ನಾಲ್ಕು ತುಂಡುಗಳ ಕಬ್ಬಿನ ಕಟ್ಟು ₹20ಕ್ಕೆ ಬಿಕರಿಯಾಯಿತು. ಹೂವುಗಳ ದರವೂ ಹೆಚ್ಚಾಗಿತ್ತು. ಮಲ್ಲಿಗೆ ಹೂವಿನ ಮಾಲೆ ಒಂದು ಮಾರಿಗೆ ₹30, ಚಿಕ್ಕ ಚೆಂಡು ಹೂವಿನ ಮಾಲೆ ಮಾರಿಗೆ ₹15, ಗುಲಾಬಿ ಹೂವು 5ಕ್ಕೆ ಒಂದರಂತೆ ಮಾರಾಟವಾದವು. ಕಡಲೆ ಸುಲಗಾಯಿ ಪ್ರತಿ ಕೆ.ಜಿ. ₹40ರಿಂದ ₹60 ತನಕ ಮಾರಾಟವಾಯಿತು.

Contact Your\'s Advertisement; 9902492681

‘ಸಂಕ್ರಾಂತಿ ಹಿನ್ನೆಲೆಯಲ್ಲಿ ಎಲ್ಲ ಹೂವುಗಳ ದರ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹50-₹100 ತನಕ ಹೆಚ್ಚಾಗಿದೆ. ಹೀಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲೂ ದರ ಹೆಚ್ಚಿದೆ’ ಎಂದು ದುರ್ಗದಬೈಲ್‌ನಲ್ಲಿ ಹೂವು ಮಾರುತ್ತಿದ್ದ ಗಿರಿಜವ್ವ ಕಾಶಿಮಠ ತಿಳಿಸಿದರು.‌

ವೈವಿಧ್ಯಮಯ ಕುಸುರೆಳ್ಳು: ಮಾರುಕಟ್ಟೆಯಲ್ಲಿ ಬಣ್ಣ-ಬಣ್ಣದ ಹಾಗೂ ವಿವಿಧ ಬಗೆಯ ಕುಸುರೆಳ್ಳು ಮಾರಾಟ ನಡೆಯಿತು. ಶೇಂಗಾ ಕುಸುರೆಳ್ಳು, ಎಳ್ಳಿನ ಕುಸುರೆಳ್ಳು, ಬಡೆಸೋಂಪ್‌ ಕುಸುರೆಳ್ಳು, ಎಳ್ಳು, ಬೆಲ್ಲ, ಕೊಬ್ಬರಿ, ಶೇಂಗಾ, ಪುಟಾಣಿ, ದ್ರಾಕ್ಷಿ, ಗೋಡಂಬಿ, ಏಲಕ್ಕಿ ಮಿಶ್ರಿತ ಕುಸುರೆಳ್ಳು ಜತೆಗೆ ಎಳ್ಳು-ಬೆಲ್ಲದ ಚಿಕ್ಕ ಉಂಡೆಗಳ ಮಾರಾಟವೂ ಕಂಡುಬಂತು.

ಚಿಲ್ಲರೆ ಮಾರುಕಟ್ಟೆಯಲ್ಲಿ ₹10ಕ್ಕೆ 100 ಗ್ರಾಂ ಸಾಮಾನ್ಯ ಕುಸುರೆಳ್ಳು, 100 ಗ್ರಾಂ ಎಳ್ಳಿನ ಕುಸುರೆಳ್ಳು, 100 ಗ್ರಾಂ ಶೇಂಗಾ ಕುಸುರೆಳ್ಳು, 100 ಗ್ರಾಂ ಬಡೇಸೋಂಪ್‌ ಕುಸುರೆಳ್ಳಿಗೆ ತಲಾ ₹40-₹50 ದರವಿತ್ತು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಹೂವು, ಹಣ್ಣು, ತರಕಾರಿ, ಕಬ್ಬು ಎಲ್ಲದರ ದರಗಳೂ ಹೆಚ್ಚಾಗಿವೆ. ಐದು ತುಂಡು ಕಬ್ಬು, ನಾಲ್ಕು ಮಾರು ಹೂವು, ಒಂದಿಷ್ಟು ಕುಸುರೆಳ್ಳಿಗೆ ₹200 ಆಯಿತು. ಕಳೆದ ವರ್ಷ ಇದೇ ವಸ್ತುಗಳು ₹120ಕ್ಕೆ ಕೊಂಡಿದ್ದೆ’ ಎಂದು ಹುಬ್ಬಳ್ಳಿಯ ದೇಸಾಯಿ ಓಣಿ ನಿವಾಸಿ ಗಿರೀಶ ಚಿನಗಿ ತಿಳಿಸಿದರು.

ಕೋವಿಡ್‌, ಕರ್ಫ್ಯೂನಿಂದ ತೊಂದರೆ: ’30 ವರ್ಷಗಳಿಂದ ಸಂಕ್ರಾಂತಿ ಸಮಯದಲ್ಲಿ ಕುಸರೆಳ್ಳು ಮಾರುತ್ತಿದ್ದೇನೆ. ಜನವರಿ 1ರಿಂದಲೇ ಮಾರಾಟ ಆರಂಭಿಸಿ ಸಂಕ್ರಾಂತಿ ತನಕ ಮಾರಾಟ ಮಾಡುತ್ತಿದ್ದೆ. ಸರಾಸರಿ ಒಂದು ಟನ್‌ ಕುಸುರೆಳ್ಳು ಮಾರಾಟವಾಗುತ್ತಿತ್ತು. ಈ ಸಲ ಕೋವಿಡ್‌, ವಾರಾಂತ್ಯ ಕರ್ಫ್ಯೂನಿಂದಾಗಿ ಶೇಕಡ 40ರಷ್ಟು ವ್ಯಾಪಾರ ಕುಸಿತಗೊಂಡಿದೆ’ ಎಂದು ದುರ್ಗದ ಬೈಲ್‌ನ ಕುಸುರೆಳ್ಳು ವ್ಯಾಪಾರಿ ಗೋವಿಂದರಾಜ್ ಚಿಗಳಂಪಲ್ಲೆ ಹೇಳಿದರು.

‘ಪ್ರತಿ ವರ್ಷ ತರಹೇವಾರಿ ಕುಸುರೆಳ್ಳು ಮಾರುತ್ತಿದ್ದೆ. ಎಲ್ಲವೂ ತಲಾ 45-50 ಕೆ.ಜಿಯಷ್ಟು ಬಿಕರಿಯಾಗುತ್ತಿತ್ತು. ಈ ಸಲ ಅದು 10-20 ಕೆ.ಜಿಗೆ ತಗ್ಗಿದೆ. ಸಂಕ್ರಾಂತಿ ಸಮಯದಲ್ಲಿ ಮಕ್ಕಳಿಗೆ ಕಟ್ಟುವ ಸಕ್ಕರೆ ಕಿರೀಟ, ಬಾಜು ಬಂಧಿ, ನಕ್ಲೆಸ್‌, ನಡಪಟ್ಟಿ ಮತ್ತಿತರ ವಸ್ತುಗಳು ಪ್ರತಿ ವರ್ಷ 50 ಸೆಟ್‌ ಮಾರುತ್ತಿದ್ದೆ. ಈಸಲ 10-15 ಸೆಟ್‌ ಮಾತ್ರ ಮಾರಾಟವಾಗಿದೆ’ ಎಂದರು.

‘ಒಂದೆಡೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತವೆ. ಮತ್ತೊಂದೆಡೆ ಈ ಸಲ ಸಂಕ್ರಾಂತಿ ಶನಿವಾರ ಬಂದಿದೆ. ಅಂದು ವಾರಾಂತ್ಯದ ಕರ್ಫ್ಯೂ ಇರುತ್ತದೆ. ಇವೆಲ್ಲ ಅಂಶಗಳು ವ್ಯಾಪಾರಕ್ಕೆ ಹೊಡೆತ ನೀಡಿವೆ’ ಎಂದು ಅಭಿಪ್ರಾಯಪಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here