ಧಾರವಾಡ : ಅವರೆಲ್ಲಾ ಭರ್ಜರಿ ಫಸಲಿನ ನಿರೀಕ್ಷೆಯಲ್ಲಿದ್ರು. ಕೈತುಂಬಾ ಕಾಸು ಮಾಡಿಕೊಳ್ಳುವ ಕನಸಿನಲ್ಲಿದ್ರು. ಆದ್ರೆ ಅವರ ಕನಸೆಲ್ಲಾ ಈಗ ಕಮರುವಂತಾಗಿದೆ. ಅಷ್ಟಕ್ಕೂ ಧಾರವಾಡದ ಮಾವು ಬೆಳೆಗಾರರು, ಬಾಗಲಕೋಟೆ ಕಡಲೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಸುರಿದ ಆಕಾಲಿಕ ಮಳೆ ರೈತರ ಬದುಕನ್ನೇ ಬೀದಿಗೆ ತಂದಿದೆ. ಧಾರವಾಡ ಜಿಲ್ಲೆಯಲ್ಲಿ ಮಾವು ಬೆಳೆಗಾರರು ಹೆಚ್ಚಿದ್ದು, ಅದ್ರಲ್ಲೂ ಆಪೋಸ ತಳಿಯ ಮಾವಿಗೆ ಜಿಲ್ಲೆ ಹೆಸರಾಗಿದೆ. ಜಿಲ್ಲೆಯಲ್ಲಿ ಸುಮಾರು 12500 ಹೆಕ್ಟೇರ್‌ನಲ್ಲಿ ಈ ಮಾವು ಬೆಳೆಯಲಾಗ್ತಿದ್ದು ಗೋವಾ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಗೆ ಇಲ್ಲಿಂದಲೇ ಮಾವು ರವಾನೆಯಾಗ್ತಿತ್ತು. ಸಂಕ್ರಾಂತಿ ವೇಳೆ ತೋಟಗಳಿಗೆ ಬರ್ತಿದ್ದ ವ್ಯಾಪಾರಿಗಳು ತೋಟದಲ್ಲಿನ ಕಾಯಿ ನೋಡಿ ಲೀಸ್‌ಗೆ ಪಡೆಯುತ್ತಿದ್ರು. ಆದ್ರೆ ಈ ಬಾರಿ ವ್ಯಾಪಾರಿಗಳ ಸುಳಿವೇ ಇಲ್ಲ. ಅದಕ್ಕೆ ಕಾರಣವೇ ಅಕಾಲಿಕ ಮಳೆ. ಯೆಸ್ ಸಾಮಾನ್ಯವಾಗಿ ನವೆಂಬರ್‌ನಲ್ಲಿ ಹೂವು ಬಿಟ್ಟು, ಈಗ ಸಣ್ಣ ಕಾಯಿಗಳಾಗ್ತಿದ್ವು. ಆದ್ರೆ ನವೆಂಬರ್‌ನಲ್ಲಿ ಅಕಾಲಿಕ ಮಳೆಯಾಗಿದ್ರಿಂದ ಹೆಚ್ಚಿನ ತಂಪಿನಿಂದಾಗಿ ಹೂವುಗಳು ಉದುರಿ ಹೋಗಿವೆ. ಹೀಗಾಗಿ ಇದುವರೆಗೂ ಕಾಯಿಗಳಾಗಿಲ್ಲ.
ಸಿಡಿರೋಗಕ್ಕೆ ನೂರಾರು ಎಕರೆ ಕಡಲೆ ಬೆಳೆ ಬಲಿ —
ಇನ್ನು ಬಾಗಲಕೋಟೆ ಜಿಲ್ಲೆಯ ರೈತರು ಹಿಂಗಾರು ಹಂಗಾಮಿನಲ್ಲಿ ಕಡಲೆ ಬೆಳೆದಿದ್ರು. ಬಾಗಲಕೋಟೆ ತಾಲೂಕಿನ ಬೇವೂರು, ಹಳ್ಳೂರು, ಭಗವತಿ, ಮನ್ನಿಕಟ್ಟಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಒಳ್ಳೆ ಬೆಳೆ ಕೂಡಾ ಬಂದಿತ್ತು. ಆದ್ರೆ ಕಾಯಿ ಮಾತ್ರ ಕಟ್ಟಿಲ್ಲ. ಇರೋ ಕಾಯಿಗಳೆಲ್ಲಾ ಜೊಳ್ಳಾಗಿದ್ದು, ರೈತರು ಕಂಗಾಲಾಗಿದ್ದಾರೆ. ಎಕರೆಗೆ 15 ಸಾವಿರ ಖರ್ಚು ಮಾಡಿ ಕಡಲೆ ಬಿತ್ತನೆ ಮಾಡಿದ್ದ ರೈತರು ಈಗ ಒಂದು ಪೈಸೆಯೂ ಆದಾಯ ಬರೋದಿಲ್ಲ ಅಂತಾ ಆತಂಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಕೂಡಾ ಪ್ರವಾಹದಿಂದಾಗಿ ಕಡಲೆ ಸಂಪೂರ್ಣ ನಾಶವಾಗಿತ್ತು. ಈ ವರ್ಷ ಸಿಡಿರೋಗಕ್ಕೆ ಕಡಲೆ ಬಲಿಯಾಗಿದ್ದು ಇಡೀ ಬೆಳೆಯೇ ಒಣಗಿ ಹೋಗಿದೆ . ಇಷ್ಟಾದ್ರೂ ಅಧಿಕಾರಿಗಳು ಇತ್ತ ಸುಳಿದಿಲ್ವಂತೆ.
ಒಟ್ನಲ್ಲಿ ಕಳೆದ ವರ್ಷದ ಆಕಾಲಿಕ ಮಳೆ, ಕೀಟ ಬಾಧೆ, ವಿವಿಧ ರೋಗಗಳು ರೈತರ ಬೆಳೆ ಹಾಳು ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರ್ತಿಲ್ಲ ಅನ್ನೋ ಚಿಂತೆಯಲ್ಲಿ ಅನ್ನದಾತರಿದ್ದಾರೆ.