- # ಕುಶಲ
ನೀರಾವರಿ, ಸಂಪರ್ಕ ಹಾಗೂ ಅಂತರ್ಜಲ ಮಟ್ಟ ಏರಿಸುವ ಬಹುಪಯೋಗಿ ಅಣೆಕಟ್ಟೊಂದು ಸದ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ತೆರೆದುಕೊಳ್ಳಲಿದೆ. ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಮಧ್ಯೆ ಹರಿಯುವ ನೇತ್ರಾವತಿ ನದಿಗೆ ನಿರ್ಮಾಣಗೊಳ್ಳಲಿರುವ ಈ ಅಣೆಕಟ್ಟಿನ ಕಾಮಗಾರಿ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ಮಾರ್ಚ್ ತಿಂಗಳ ಒಳಗೆ ಇದು ಸಾರ್ವಜನಿಕರ ಸೇವೆಗೆ ಸಿದ್ಧಗೊಳ್ಳಲಿದೆ.
ಸುಮಾರು 46.70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಯೋಜನೆ ಪೂರ್ಣಗೊಂಡಲ್ಲಿ ಕೃಷಿಕರಿಗೆ ಹಾಗೂ ಪ್ರಕೃತಿಗೂ ಭಾರೀ ಉಪಕಾರಿಯಾಗಲಿದೆ. ರಾಜ್ಯ ಸರಕಾರ ಕರಾವಳಿ ಭಾಗದ ಜನರ ತೀವ್ರ ವಿರೋಧದ ನಡುವೆಯೂ ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆ ಜಾರಿಯಾದಲ್ಲಿ ಕರಾವಳಿ ಭಾಗದ ಜನತೆಗೆ ನೀರಿನ ಅಭಾವ ಹೆಚ್ಚಾಗಬಹುದು ಎನ್ನುವ ಕಾರಣಕ್ಕಾಗಿ ಈ ಭಾಗದ ಜನ ಈ ಯೋಜನೆಯನ್ನು ನಿರಂತರವಾಗಿ ವಿರೋಧಿಸಿಕೊಂಡು ಬರುತ್ತಿದ್ದಾರೆ.
ಕಾಮಗಾರಿ ಸ್ಥಳ : ಏನಿದು ಪಶ್ಚಿಮ ವಾಹಿನಿ ಯೋಜನೆ? —
ಈ ವಿರೋಧದ ನಡುವೆ ಕರಾವಳಿ ಭಾಗದ ಜನರಿಗೆ ನೀರಿನ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ರಾಜ್ಯ ಸರಕಾರ ಪಶ್ವಿಮವಾಹಿನಿ ಯೋಜನೆಯನ್ನು ಜಾರಿಗೆ ತಂದಿದೆ. ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಸುಮಾರು 4 ಸಾವಿರ ಮಿಲಿ ಮೀಟರ್ ಮಳೆಯಾದರೂ, ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನೀರಿನ ಅಭಾವ ಕಂಡು ಬರುವ ಹಿನ್ನಲೆಯಲ್ಲಿ, ಈ ಭಾಗದ ಜನರಿಗೆ ನೀರಿನ ಅಭಾವ ಕಾಡದಿರಲಿ ಎನ್ನುವ ಕಾರಣಕ್ಕೆ ರಾಜ್ಯ ಸರಕಾರ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ.
ಈ ಯೋಜನೆಯ ಮೊದಲ ಪ್ರಯೋಗ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಮಧ್ಯೆ ಹಾದುಹೋಗುವ ನೇತ್ರಾವತಿ ನದಿಗೆ ಬೃಹತ್ ಅಣೆಕಟ್ಟನ್ನು ಕಟ್ಟುವ ಕಾಮಗಾರಿಯನ್ನು ಆರಂಭಿಸಲಾಗಿದೆ.
46.70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ: ಕೃಷಿಗೆ ನೀರಾವರಿ, ಸಂಪರ್ಕ ಸೇತುವೆ ಹಾಗೂ ಅಂತರ್ಜಲ ಮಟ್ಟ ವೃದ್ಧಿ ಎನ್ನುವ ಪ್ರಮುಖ ಮೂರು ಉದ್ದೇಶವನ್ನಿಟ್ಟುಕೊಂಡು ಪಶ್ಚಿಮವಾಹಿನಿ ಯೋಜನೆಯನ್ನು ಆರಂಭಿಸಲಾಗಿದೆ. ಬಿಳಿಯೂರು ಹಾಗೂ ತೆಕ್ಕಾರು ಗ್ರಾಮಗಳ ಮಧ್ಯೆ ನಿರ್ಮಾಣಗೊಳ್ಳುವ ಅಣೆಕಟ್ಟನ್ನು 46.70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಯೋಜನೆಯು ಇದೀಗ ಮುಕ್ತಾಯದ ಹಂತ ತಲುಪಿದೆ. ಟೆಂಟರ್ ಕರೆದು 18 ತಿಂಗಳಿನಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿತ್ತಾದರೂ, ಈ ಬಾರಿ ಕರಾವಳಿ ಭಾಗದಲ್ಲಿ ಅಕಾಲಿಕ ಮಳೆ ಸುರಿದ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ಪರಿಣಾಮ ಕಾಮಗಾರಿಗೆ ಕೊಂಚ ಸಮಸ್ಯೆಯಾಗಿದ್ದು, ಇದೀಗ ಮತ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ.
ಪಶ್ಚಿಮ ವಾಹಿನಿ ಯೋಜನೆ : ಯಾಂತ್ರೀಕೃತ ಮಾದರಿಯಲ್ಲಿ ಆಣೆಕಟ್ಟಿನ ಗೇಟುಗಳು ಬಿಳಿಯೂರಿನಿಂದ ತೆಕ್ಕಾರು ಮಧ್ಯ ನದಿಗೆ 305 ಮೀಟರ್ ಸೇತುವೆಯ ನಿರ್ಮಾಣದ ಜೊತೆಗೆ ಅಣೆಕಟ್ಟಿನ ಕಾಮಗಾರಿಯೂ ನಡೆಯುತ್ತಿದೆ. ನೀರನ್ನು ಶೇಖರಿಸಲು ಅಣೆಕಟ್ಟು ಹಾಗೂ ಅಣೆಕಟ್ಟಿನ ಮೇಲ್ಭಾಗದಲ್ಲಿ ಸಂಪರ್ಕ ಸೇತುವೆ ನಿರ್ಮಾಣವನ್ನು ಮಾಡಲಾಗಿದೆ. ಬೇರೆ ಅಣೆಕಟ್ಟುಗಳಲ್ಲಿ ಇರುವಂತೆ ಮಾನವ ಚಾಲಿತ ಗೇಟುಗಳ ಬದಲಾಗಿ ಈ ಅಣೆಕಟ್ಟಿನ ಗೇಟುಗಳು ಸಂಪೂರ್ಣವಾಗಿ ಯಾಂತ್ರೀಕೃತ ಮಾದರಿಯಲ್ಲಿ ಕಾರ್ಯಾಚರಿಸಲಿದೆ.
ಅಣೆಕಟ್ಟು ಎತ್ತರ ಸುಮಾರು 8 ಮೀಟರ್ ಇದ್ದರೂ, ಈ ಭಾಗದಲ್ಲಿ 4 ಮೀಟರ್ ಗೆ ನೀರನ್ನು ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟಿನಿಂದಾಗಿ ಮುಳುಗಡೆಯಾಗುವ ಪ್ರದೇಶವು ಇಲ್ಲಿ ಕಡಿಮೆಯಾಗಿದ್ದು, ಒಂದು ವೇಳೆ ಕೃಷಿ ಭೂಮಿ ಮುಳುಗಡೆಯಾದಲ್ಲಿ ಸರಕಾರದಿಂದ ಸೂಕ್ತ ಪರಿಹಾರ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಬಹುಪಯೋಗಿ ಈ ಅಣೆಕಟ್ಟಿನ ನಿರ್ಮಾಣಕ್ಕೆ ಸ್ಥಳೀಯರ ಸಹಕಾರವೂ ಸಾಕಷ್ಟಿದೆ. ಅಣೆಕಟ್ಟಿಗಾಗಿ ಕೃಷಿಕರು ತಮ್ಮ ಭೂಮಿಯನ್ನೂ ನೀಡಿದ್ದು, ಮುಂದಿನ ದಿನಗಳಲ್ಲಿ ಅಣೆಕಟ್ಟು ತಮಗೆ ಉಪಕಾರಿಯಾಗಲಿದೆ ಎನ್ನುವ ನಿಟ್ಟಿನಲ್ಲಿ ಭೂಮಿಯನ್ನು ನೀಡಿದ್ದಾರೆ.
ಪಶ್ಚಿಮ ವಾಹಿನಿ ಯೋಜನೆ: ಎಲ್ಲವೂ ಅಂದುಕೊಂಡಂತೆ ಸಾಗಿದಲ್ಲಿ ಬಹುಪಯೋಗಿ ಈ ಪಶ್ವಿಮವಾಹಿನಿ ಯೋಜನೆ ಕರಾವಳಿ ಭಾಗದ ಜನರ ನೀರಿನ ಸಮಸ್ಯೆಯನ್ನು ನೀಗಿಸುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿದೆ.