ಆಳಂದ: ಕೋವಿಡ್‌ನಂತ ಹಲವು ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗಳಿಗೆ ಬರುವ ಬಡವರು, ಸಾರ್ವಜನಿಕರು ಮತ್ತು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರ ತಂಡವು ಶ್ರಮಿಸಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಇಂದಿಲ್ಲಿ ಸಲಹೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆಯ ೨೦೨೦-೨೧ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಆಸ್ಪತ್ರೆಯ ಆವರಣದಲ್ಲಿ ಕೈಗೊಂಡ ೮೦ ಲಕ್ಷ ರೂ. ಸಿಮೆಂಟ್ ರಸ್ತೆ ಉದ್ಘಾಟನೆ ಹಾಗೂ ಸಿ ಮತ್ತು ಡಿ. ಮಾದರಿಯ ೧ ಕೋಟಿ ರೂ.ಗಳ ವೆಚ್ಚದಲ್ಲಿ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಕೈಗೊಂಡು ಅವರು ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಬಗ್ಗೆ ಸಿಬ್ಬಂದಿಗಳು ಅಸಮಾಧಾನ ಕೇಳಿಬಂದಿದೆ. ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೋಗಿಗಳ ಸೇವೆ ಮಾಡಬೇಕು. ಆಸ್ಪತ್ರೆಗೆ ಬೇಕಾದ ೨ ಕೊಳವೆ ಬಾವಿ ತೋಡಿ ನೀರಿನ ಸೌಲಭ್ಯ, ೧೮ ಲಕ್ಷ ರೂ.ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ಸಜ್ಜುಗೊಂಡಿದೆ. ಆವರಣದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಹೀಗೆ ಆಸ್ಪತ್ರೆಗೆ ಸೌಲಭ್ಯ ಕಲ್ಪಿಸಿದಂತೆ ವೈದ್ಯರು ಸಹ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಹೇಳಿದರು.
ತಾಲೂಕು ಗಡಿ ಪ್ರದೇಶಕ್ಕೆ ಹೊಂದಿಕೊಂಡಿದ್ದರಿಂದ ಮಹಾರಾಷ್ಟ್ರದಿಂದ ಕೋವಿಡ್ ಹರಡುವ ಭೀತಿಯ ಮುನ್ನೆಚ್ಚರಿಕೆಯ ಕ್ರಮವಾಗಿ ಗ್ರಾಮೀಣ ಆಸ್ಪತ್ರೆಗಳಿಗೆ ಆರೋಗ್ಯಾಧಿಕಾರಿಗಳು ಸಕಾಲಕ್ಕೆ ಔಷಧಿ ಮಾತ್ರೆ ಸೌಲಭ್ಯಗಳನ್ನು ಒದಗಿಸಬೇಕು. ಇದಕ್ಕಾಗಿ ಸಿಡಿಪಿಓ ಇಲಾಖೆಯಿಂದ ೫೦ ಲಕ್ಷ ರೂ.ಗಳು ಮೀಸಲಿರಿಸಲಾಗಿದೆ, ಕೋವಿಡ್ ೩ನೇ ಅಲೆ ತಡೆಯಲು ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಜನರ ಆರೋಗ್ಯವನ್ನು ಕಾಪಾಡುವಲ್ಲಿ ವೈದ್ಯರು ಮುಂದಾಗಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಸುಶೀಲಕುಮಾರ ಅಂಬುರೆ ಅವರು ಮಾತನಾಡಿ, ಕೋವಿಡ್ ೩ನೇ ಅಲೆ ತಡೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೌಲಭ್ಯಗಳ ಯಾವುದೇ ಕೊರತೆಯಿಲ್ಲ. ಶಾಸಕರಿಂದ ಸಾಕಷ್ಟು ರೀತಿಯಲ್ಲಿ ಆಸ್ಪತ್ರೆಗೆ ಸೌಲಭ್ಯಗಳು ದೊರೆಕ್ಕಿದ್ದು, ಆಸ್ಪತ್ರೆ ಮತ್ತು ಆವರಣದಲ್ಲಿ ಸಿಬ್ಬಂದಿಗಳ ಜೊತೆ ಸಾರ್ವಜನಿಕರು ಸಹ ಸ್ವಚ್ಛತೆ ಕಾಪಾಡಲು ಕೈಜೋಡಿಸಬೇಕು ಎಂದರು.
ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಲೋಕೋಪಯೋಗಿ ಎಇಇ ಅರುಣಕುಮಾರ ಬಿರಾದಾರ, ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ| ಚಂದ್ರಕಾಂತ ಅಂಬುರೆ, ಲೋಕೋಪಯೋಗಿ ಇಲಾಖೆಯ ಎಇಇ ಅರುಣಕುಮಾರ ಬಿರಾದಾರ, ಮುಖಂಡ ಶ್ರೀಮಂತ ನಾಮಣೆ, ಮಲ್ಲಿಕಾರ್ಜುನ ಕಂದಗುಳೆ, ಸಿದ್ಧು ಪೂಜಾರಿ, ಮಹಾಂತೇಶ ಪೂಜಾರಿ, ಗುತ್ತಿಗೆದಾರ ವೈಜನಾಥ ತೆಲ್ಲೂರ, ರಾಜು ಷಣ್ಮೂಖ, ಸಿದ್ರಾಮ ಹತ್ತರಕಿ, ಶ್ರೀಶೈಲ ಖಜೂರಿ, ಇಸೂಫ್ ಅನ್ಸಾರಿ, ಮಿರುಸಾಬ, ಅಪ್ಪಾಸಾಬ ಗುಂಡೆ, ಸುನೀಲ ಹಿರೋಳಿಕರ್, ಭೋಜರಾಜ ಜುಭ್ರೆ, ವಿಜಯಕುಮಾರ ಚಿಟಗುಪಕರ್, ವಿಜಯಕುಮಾರ ಕೋಥಳಿಕರ್, ಪ್ರಭಾಕರ್ ಘನಾತೆ ಆಸ್ಪತ್ರೆಯ ಶ್ರೀಕಾಂತ ಭೂಸನೂರ ಪಾಲ್ಗೊಂಡಿದ್ದರು.