ನೇಸರಗಿ: ‘ರೈತರ ಪಂಪ್‍ಸೆಟ್‌ಗಳಿಗೆ ಸಮರ್ಪಕ ವಿದ್ಯುತ ಪೂರೈಕೆ ಮಾಡಬೇಕು’ ಎಂದು ಒತ್ತಾಯಿಸಿ ನೇಸರಗಿ ಸುತ್ತಮುತ್ತಲಿನ ಗ್ರಾಮಸ್ಥರು ಮಲ್ಲಾಪೂರದಲ್ಲಿರುವ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಅಲ್ಲೇ ಅಡುಗೆ ತಯಾರಿಸಿ ಮಂಗಳವಾರ ಪ್ರತಿಭಟಿಸಿದರು.
ಮುಖಂಡರಾದ ಬಾಳಪ್ಪ ಮಾಳಗಿ, ಸೋಮನಗೌಡ ಪಾಟೀಲ, ಜೈ ಭೀಮ್ ಸಂಘರ್ಷ ಸಮಿತಿ ಅಧ್ಯಕ್ಷ ರಮೇಶ ರಾಯಪ್ಪಗೋಳ ಮಾತನಾಡಿ, ‘ಮುರಕೀಭಾವಿ ಪೀಡರ್ ನಂ.4ಕ್ಕೆ ಒಳಪಡುವ ಗ್ರಾಮಗಳಲ್ಲಿರುವ ಹೊಲಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗುತ್ತಿತ್ತು. ಈಗ, ಏಕಾಏಕಿ ತೊಂದರೆ ಕೊಡಲಾಗುತ್ತಿದೆ. ಇದರಿಂದ ಫಸಲಿಗೆ ಹಾನಿಯಾಗುತ್ತಿದೆ. ರಾತ್ರಿ ವೇಳೆ ವಿದ್ಯುತ್ ಪೂರೈಸುವುದರಿಂದ ಪ್ರಾಣಾಪಾಯವಾದರೆ ಯಾರು ಹೊಣೆ? ಎಂದು ಕೇಳಿದರು.
ಸ್ಥಳಕ್ಕೆ ಬಂದ ಬೈಲಹೊಂಗಲ ಎಇಇಗಳಾದ ಕೆ.ಜೈನ್ ಹಾಗೂ ಅಣ್ಣಪ್ಪ ಲಮಾಣಿ, ‘ಈಗ ಹೊಸದಾಗಿ ಮಾರ್ಗಸೂಚಿ ಮಾಡಲಾಗಿದೆ. ಬೇರೆ ಗ್ರಾಮಗಳಿಗೆ ತೊಂದರೆ ಆಗದಂತೆ ರೂಪಿಸಲಾಗಿದೆ. ಕಲ್ಲಿದ್ದಲು ಸಮಸ್ಯೆಯೂ ಇದೆ. ಹೀಗಾಗಿ ಸ್ವಲ್ಪ ದಿನ ಸಹಕರಿಸಬೇಕು’ ಎಂದು ಕೋರಿದರು.
ಒಪ್ಪದ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸಿ, ಉಪ್ಪಿಟ್ಟು, ಬಜಿ ಹಾಗೂ ಚಹಾ ತಯಾರಿಸಿ ಸೇವಿಸಿದರು. ಬಳಿಕ ಬಂದ ಶಾಸಕ ಮಹಾಂತೇಶ ದೊಡ್ಡಗೌಡರ, ‘ಕಲ್ಲಿದ್ದಲು ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಆಗಬೇಕಾಗುತ್ತದೆ. ಅಲ್ಲಿವರೆಗೆ ಸಹಕರಿಸಬೇಕು’ ಎಂದು ಕೋರಿದರು.
ಮನವಿಗೆ ಸ್ಪಂದಿಸಿದ ಹೆಸ್ಕಾಂ ಅಧಿಕಾರಿಗಳು, ‘ರೈತರ ಪಂಪಸೆಟ್‌ಗಳಿಗೆ ಹಗಲಿನ ವೇಳೆ 7 ತಾಸು ವಿದ್ಯುತ್ ಪೂರೈಕೆ ಮಾಡಲಾಗುವುದು’ ಎಂದು ಭರವಸೆ ನೀಡಿದರು. ಆಗ, ರೈತರು ಪ್ರತಿಭಟನೆ ಹಿಂಪಡೆದರು. ಮುಂಜಾನೆಯಿಂದ ಸಂಜೆವರೆಗೆ ಪ್ರತಿಭಟನೆ ನಡೆದಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಸುರೇಶ ಕೆಳಗೇರಿ, ಬಾಳಪ್ಪ ಹಸಬಿ, ಸದೆಪ್ಪ ಮೂಲಿಮನಿ, ಸಿದ್ದಪ್ಪ ಮಾಳನ್ನವರ, ಪ್ರಭು ಗಲಬಿ, ಸುಜಾತಾ ತುಬಾಕಿ, ಪುಂಡಲೀಕ ಮದನಭಾವಿ, ಗುರುಬಸು ಶಿಂತ್ರಿ, ಮಲ್ಲಿಕಾರ್ಜುನ ಕಲ್ಲೋಳಿ, ನಿಂಗಪ್ಪ ತಳವಾರ, ದೇಮಣ್ಣ ಗುಜನಟ್ಟಿ, ಯಮನಪ್ಪ ಪೂಜೇರಿ, ಫಕೀರಪ್ಪ ತೋಟಗಿ, ಸಲೀಂ ನದಾಫ, ಮಕಬುಲ್ ಬೇಪಾರಿ, ಅಡಿವೆಪ್ಪ ಚಿಗರಿ, ಯಲ್ಲಪ್ಪ ಪೂಜೇರಿ ಪಾಲ್ಗೊಂಡಿದ್ದರು.