ನೈಟ್ ಕರ್ಪ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ರಾಜ್ಯ ಸರಕಾರ ಗೊಂದಲದಲ್ಲಿದೆ: ಹೆಚ್.ಡಿ.ಕುಮಾರಸ್ವಾಮಿ

0
51

ಬೆಂಗಳೂರು: ಕೋವಿಡ್ ಬಗ್ಗೆ ಸರಕಾರ ಉಪೇಕ್ಷೆ ಮಾಡಬಾರದು. ನಿನ್ನೆ ಒಂದೇ ದಿನ 41 ಸಾವಿರ ಕೇಸ್ ಬಂದಿದೆ. ಇದು ಎಚ್ಚರಿಕೆಯ ಗಂಟೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಸೋಂಕಿನ ಪ್ರಮಾಣವನ್ನು ತಡೆಯಲೇಬೇಕು. ಜನರ ಪರಿಸ್ಥಿತಿ ಮತ್ತು ಅವರ ಜೀವನ ನೋಡಿಕೊಂಡು ಸರಕಾರ ಕ್ರಮ ವಹಿಸಬೇಕು ಎಂದರು.

Contact Your\'s Advertisement; 9902492681

ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಚಾರದ ಬಗ್ಗೆ ಈಗಾಗಲೇ ಹೇಳಿದ್ದೇನೆ. ಸರಕಾರ ನಡೆಸುವ ಪಕ್ಷದಲ್ಲೇ ಈ ಬಗ್ಗೆ ಸಹಮತ ಇಲ್ಲ. ಅವರೇ ಗೊಂದಲದಲ್ಲಿ ಇದ್ದರೆ ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ? ನೈಟ್ ಕರ್ಫ್ಯೂ ಬಗ್ಗೆ ಬಿಜೆಪಿಯ ಪ್ರಮುಖರೇ ವಿರೋಧ ಮಾಡ್ತಾ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಸರಕಾರ ದಾರಿ ತಪ್ಪಿಸುತ್ತಿದೆ:

ದೇಶದಲ್ಲಿ ಹಸಿವಿನಿಂದ ಯಾರೂ ಸತ್ತಿಲ್ಲ ಎಂದು ಕೇಂದ್ರ ಸರಕಾರ ಕೋರ್ಟ್ ಮುಂದೆ ನಿನ್ನೆ ಹೇಳಿದೆ. ಎರಡು ಹೊತ್ತಿನ ಊಟ ಇಲ್ಲದೆ ಸಾಯುವವರು ಇದ್ದಾರೆ. ಜನ ಎಷ್ಟು ಕಷ್ಟದಲ್ಲಿ ಇದ್ದಾರೆ ಎನ್ನುವುದನ್ನು ಸರಕಾರ ನೋಡಬೇಕು. ಸೋಂಕಿನ ಕಾರಣದಿಂದ ಜನ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನಿಜ ಸ್ಥಿತಿ ಹೀಗಿರುವಾಗ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಜನರಿಗೆ ಸಂಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುವುದು ಎಲ್ಲ ಸರಕಾರಗಳ ಜವಾಬ್ದಾರಿ. ಸಣ್ಣ ರೈತರಿಗೆ ಮಾರಾಟ ವ್ಯವಸ್ಥೆ, ಬೀದಿಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಬೇಕು. ವಿರೋಧ ಪಕ್ಷಗಳು ಹೇಳುತ್ತವೆ ಎಂದು ಸರಕಾರ ಮಾಡದೇ ಇರಬಾರದು. ಜನರ ಕಷ್ಟಕ್ಕೆ ಮಿಡಿಯದಿದ್ದರೆ ಸರಕಾರ ಇರುವುದು ಏತಕ್ಕೆ ಎಂದು ಅವರು ಪ್ರಶ್ನೆ ಮಾಡಿದರು.

ಒಂದು ಕಡೆ ಸೋಂಕನ್ನು ನಿಯಂತ್ರಣ ಮಾಡಬೇಕು ಹಾಗೂ ಅದರ ಜತೆ ಜತೆಯಲ್ಲೇ ಜನರ ಸಮಸ್ಯೆ ನಿವಾರಣೆಗೆ ಆದ್ಯತೆ ಕೊಡಬೇಕು. ಜೀವ ಉಳಿಯಬೇಕು, ಜೀವನವೂ ನಡೆಯಬೇಕು. ಸರಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಣ್ಣಸಣ್ಣ ಕೆಲಸ ಮಾಡಿ ಜನರು ಜೀವನ ಮಾಡುತ್ತಿದ್ದಾರೆ. ಅವರಿಗೆ ತೊಂದರೆ ಆಗುತ್ತದೆ ಎಂಬುದನ್ನು ಸರಕಾರ ಗಮನಿಸಬೇಕು. ತಜ್ಞರ ವರದಿ ಹಾಗು ಪರ ವಿರೋಧಗಳನ್ನು ನೋಡಬೇಕಾಗುತ್ತದೆ. ಇದನ್ನೆಲ್ಲ ತಿಳಿದುಕೊಂಡು ರಾಜ್ಯ ಸರಕಾರ ತೀರ್ಮಾನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಫೆಬ್ರವರಿಯಲ್ಲಿ ಜನರಿಗೆ ಜಲಧಾರೆ ಮಾಹಿತಿ: ಕೋವಿಡ್ ಕಾರಣದಿಂದ ಜನತಾ ಜಲಧಾರೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಸೋಂಕಿನ ಪರಿಸ್ಥಿತಿಯನ್ನು ನೋಡಿಕೊಂಡು ಜಲಧಾರೆಯ ಹೊಸ ವೇಳಾಪಟ್ಟಿಯನ್ನು ಪ್ರಕಟ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಪಕ್ಷದಲ್ಲಿ ಕೆಲವು ಪ್ರಮುಖರ ಸಭೆ ಕರೆದಿದ್ದೇನೆ. ಪಕ್ಷ ಸಂಘಟನೆ ಕುರಿತು ಸಭೆ ನಡೆಯಲಿದೆ. ಮಾಜಿ ಪ್ರಧಾನಿಗಳಾದ ದೇವೇಗೌಡರು ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು. ಜಲಧಾರೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಜಲಧಾರೆಯ ಕಳಶ ವಾಹನ, ಯಾವ ಮಾರ್ಗ, ಜಲ ಸಂಗ್ರಹ ಇತ್ಯಾದಿ ಅಂಶಗಳ ಬಗ್ಗೆ ಮುಖಂಡರಿಗೆ ಮಾಹಿತಿ ನೀಡಿದ್ದೇವೆ. ಕೆಲ ಜಿಲ್ಲೆಗಳ ಮುಖಂಡರು ಗಂಗಾ ರಥಗಳು ಹೆಚ್ಚು ಸಮಯ ತಮ್ಮ ಭಾಗದಲ್ಲಿ ಸಂಚಾರ ಮಾಡಬೇಕು ಎಂದು ಕೇಳಿದ್ದಾರೆ. ಆ ಬಗ್ಗೆ ಕೂಡ ಚರ್ಚೆ ಮಾಡುತ್ತಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

ಮನೆ ಬಾಗಿಲಿಗೆ ಜಲಧಾರೆ ಮಾಹಿತಿ: ಜಲಧಾರೆ ಕಾರ್ಯಕ್ರಮವನ್ನು ನಮ್ಮ ಪಕ್ಷ ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದೆ. ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಫೆಬ್ರವರಿ ಮೊದಲ ವಾರದಿಂದ ಜಲಧಾರೆ ಮಾಹಿತಿ ಜನರ ಮುಂದೆ ಇಡುತ್ತೇವೆ. ಹ್ಯಾಂಡ್ ಬಿಲ್ ಗಳನ್ನು ನೀಡಲಾಗುತ್ತದೆ. ಜತೆಗೆ ಬೇರೆ ಬೇರೆ ನಮೂನೆಗಳಲ್ಲಿ ಮಾಹಿತಿ ಕೊಡುತ್ತೇವೆ. ಜನರ ವಿಶ್ವಾಸ ಗಳಿಸಿ ಅವರ ಬೆಂಬಲದೊಂದಿಗೆ ಜಲಧಾರೆ ಕಾರ್ಯಕ್ರಮ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here