ಒಂದೇ ಹುಟ್ಟಲಿ ಕಡೆಯ ಹಾಯಿಸುವ ಅಂಬಿಗರ ಚೌಡಯ್ಯ

0
43
  • ಬಾಲಾಜಿ ಕುಂಬಾರ್

“ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ, ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು, ಅಕ್ಕಿ ಕಣಕವ ಕೊಂಡುಹೋಗುವ ಗುರುವಿನ ಕಂಡರೆ, ಕೆಡವಿ ಹಾಕಿ ಮೂಗನೆ ಕೊಯ್ಧು ಇಟ್ಟಂಗಿಯ ಕಲ್ಲಿಲೆ ತಿಕ್ಕಿ ಸಾಸಿವೆಯ ಹಿಟ್ಟನೆ ತಳಿದು ಮೇಲೆ ಲಿಂಬಿಯ ಹುಳಿಯನೆ ಹಿಂಡಿ ಪಡುವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ”

ನಿಜ ಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರು. ಇವರು ಮೂಲತಃ ಧಾರವಾಡ ಜಿಲ್ಲೆಯ ಚೌಡದಾನಪೂರನವರು ಎಂದು ತಿಳಿದು ಬರುತ್ತದೆ.‌ ಬಸವಣ್ಣನವರ ಸಾಮಾಜಿಕ ಕ್ರಾಂತಿಯನ್ನು ತಿಳಿದು ಕಲ್ಯಾಣ ನಾಡಿಗೆ ಆಗಮಿಸಿ ಶರಣ ಸಂಕುಲದಲ್ಲಿ ಒಳಗೊಳ್ಳುತ್ತಾರೆ.

Contact Your\'s Advertisement; 9902492681

ಬಸವಕಲ್ಯಾಣದ ತ್ರಿಪುರಾಂತ ಕೆರೆಯಲ್ಲಿ ದೋಣಿ ನಡೆಸುವ ‘ಕಾಯಕ’ ಮೂಲಕ ಬದುಕು ನಡೆಸುತ್ತಾರೆ. ತಮ್ಮ ವೃತ್ತಿ ಕಾಯಕದ ಅನುಭವಗಳನ್ನೇ ತನ್ನ ವಚನಗಳಲ್ಲಿ ರೂಪಕ, ನಿದರ್ಶನಗಳಾಗಿ ಬಳಸಿಕೊಂಡಿರುವುದು ಚೌಡಯ್ಯನವರ ವಚನಗಳಲ್ಲಿ ಕಾಣಬಹುದು.

ಸಮಾಜದಲ್ಲಿರುವ ಜಾತಿವ್ಯವಸ್ಥೆ, ಡಾಂಭೀಕತೆಯನ್ನು ವೈಚಾರಿಕ, ವೈಜ್ಞಾನಿಕ ನೆಲೆಯಲ್ಲಿ ತೀಕ್ಷ್ಣವಾಗಿ ಟೀಕಿಸುತ್ತಾರೆ. ಕಂಡದ್ದು ಕಂಡ ಹಾಗೇ ನೇರ ನಿಷ್ಠುರವಾಗಿ ಖಂಡಿಸುವ ಕ್ರಾಂತಿಕಾರಿ ನಿಜ ಶರಣ ಚೌಡಯ್ಯನವರ 278 ವಚನಗಳು ಲಭ್ಯವಾಗಿವೆ.

ರಾಜ್ಯಶಕ್ತಿಗಳ ಅಟ್ಟಹಾಸ, ಪೌರೋಹಿತ್ಯ ವ್ಯವಸ್ಥೆಯ ಶೋಷಣೆಗೆ ಒಳಪಟ್ಟ ಸಮಾಜ ಅನೇಕ ಸಮಸ್ಯೆಗಳಿಂದ ನಲುಗುತ್ತಿತ್ತು. ಚಾತುರ್ವರ್ಣ ವ್ಯವಸ್ಥೆಯಲ್ಲಿ ತಳವರ್ಗ ಸಮುದಾಯದವರ ಬದುಕು ಬರ್ಬರವಾಗಿತ್ತು. ಉಚ್ಚಕುಲದವರ ಗುಲಾಮರಾಗಿ, ಶೋಷಿತರಾಗಿ ಬದುಕುವ ಅನಿವಾರ್ಯತೆಯ ವಾತಾವರಣ ನಿರ್ಮಾಣಗೊಂಡಿತ್ತು. ಅಂಥ ವಿಷಮ ಪರಿಸ್ಥಿತಿಯ ವಾತವರಣವನ್ನು *ವಚನಾಸ್ತ್ರ* ಮೂಲಕ ಶುದ್ಧಿಗೊಳಿಸಲು ಪ್ರಯತ್ನಿಸಿದರು.

ಜಾತಿ, ಕುಲರ ಮತ, ಪಂಥ, ಲಿಂಗ-ಭೇದಗಳ ಅಸಮಾನತೆ ಕಳಚಿ ಸಾಮಾಜಿಕ, ಧಾರ್ಮಿಕ ಹಾಗೂ ಸಮಾನತೆ ಸಮಾಜ ಕಟ್ಟಲು ಮುಂದಾಗಿದರು. ಎಲ್ಲಾ ವರ್ಗ ಸಮುದಾಯಕ್ಕೂ ಸಮಾನತೆಯ ಹಕ್ಕು ದೊರಕಿಸುವ ಕೊಡುವ ಮಹತ್ವದ ಉದ್ದೇಶ ಬಸವಾದಿ ಶರಣರದ್ದಾಗಿತ್ತು.

‘ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ, ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು ಅಕ್ಕಿ ಕಣಕವ ಕೊಂಡು ಹೋಗುವ ಗುರುವಿನ ಕಂಡರೆ’ ವಚನದ ಇಡೀ ಸಾರಾಂಶ ಒಂದೇ ಸಾಲಿನಲ್ಲಿ ಹಿಡಿದಿಟ್ಟಿದ್ದಾರೆ.

ಡಾಂಭೀಕ ಗುರುಗಳ ಭೇದ ಭಾವವನ್ನು ಚೌಡಯ್ಯನವರು ಖಂಡಿಸುತ್ತಾರೆ. ಎಲ್ಲಾ ಕುಲಜಾತಿಯ ಶರಣರು ಕಲ್ಯಾಣಕ್ಕೆ ಬಂದು ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಭಾಗಿಯಾದರು. ಲಿಂಗಾಯತ ಧರ್ಮದ ತತ್ವ ಸಿದ್ದಾಂತ ಆಚರಣೆ ಮುನ್ನೆಲೆಗೆ ತಂದು ‘ಇವನಮ್ಮವ ‘ಎಂಬ ತತ್ವದಿಂದ ಎಲ್ಲಾ ಶರಣರು ಕಾಯಕ -ಬದುಕು ನಡೆಸಿದರು. ಹೀಗಾಗಿ ಅವರಿಗೆ ಕುಲಜಾತಿಗಳ ತಾರತಮ್ಯ ಇರಲಿಲ್ಲ. ಅವರು ಜಾತ್ಯಾತೀತ ಸಮಾಜದ ಕನಸುಗಾರರು.

ಶರಣರಲ್ಲಿ ಕುಲ ಜಾತಿ ಮತ ಪಂಥಗಳಿರಲಿಲ್ಲ,
ತತ್ವ ಸಿದ್ದಾಂತ ಒಪ್ಪಿ ಅಪ್ಪಿಕೊಂಡು ಶರಣರಾಗಿ ಸಮಾಜ ಪರಿವರ್ತನೆಗಾಗಿ ಸಮ ಸಮಾಜ ಕಟ್ಟಲು ಒಗ್ಗೂಡಿದರು. ತಿಳಿನೀರಿನಲ್ಲಿ ಸಕ್ಕರೆ, ಉಪ್ಪು, ಮಣ್ಣು ಹಾಕಿದರೆ ಮೂರು ಪದಾರ್ಥಗಳು ನೀರಿನಲ್ಲಿ ಕರಗುತ್ತವೆ. ನಮಗೆ ಕೇವಲ ಸಕ್ಕರೆ ನೀರು ಮಾತ್ರ ಬೇಕು, ಉಪ್ಪು ವಿಲೀನವಾದ ನೀರು ಬೇಡ ಎಂದರೆ ಸಿಗಲು ಸಾಧ್ಯವೇ? ಹಾಗೇ ಗುರುವಾದವನಿಗೆ ಯಾರೂ ಮೇಲಲ್ಲ ಯಾರೂ ಕೀಳಲ್ಲ. ಎಲ್ಲಾ ಶರಣರು ಒಂದೇ ಎನ್ನುವ ಭಾವತತ್ವ ಬಸವಾದಿ ಶರಣರು ಒತ್ತಿ ಸಾರಿದರು.

ಒಬ್ಬಾತ ಗುರು ತಳವರ್ಗ ಸಮುದಾಯದ ಶಿಷ್ಯನ ಮನೆಗೆ ಹೋಗಿ ಆತನಿಗೆ ದೀಕ್ಷೆ ಅನುಗ್ರಹ ಮಾಡಿದನು. ಆದರೆ ಆತ ಹೀನ ಜಾತಿಯವನು ಎಂಬ ಕಾರಣಕ್ಕೆ ಆತನ ಮನೆಯಲ್ಲಿ ಪ್ರಸಾದ ಸ್ವೀಕರಿಸಲು ಆತನ ಮನಸ್ಸು ಒಪ್ಪಲಿಲ್ಲ. ಬದಲಾಗಿ ಅಕ್ಕಿ, ಜೋಳ, ಗೋಧಿ, ಬೆಲ್ಲ ತೆಗೆದುಕೊಂಡು ಮನೆಗೆ ಹೋಗುತ್ತಾನೆ.ಇಂಥ ಗುರುವಿಗೆ ಕಂಡ ಚೌಡಯ್ಯನವರು ಮೇಲಿನ ವಚನ ಮೂಲಕ ತೀವ್ರವಾಗಿ ಖಂಡಿಸುತ್ತಾರೆ.

ಮೇಲು-ಕೀಳು ಎಂದು ಭೇದ ಭಾವ ಮಾಡುವ
ಇಂತಹ ಜಾತಿವಾದಿ ಗುರುಗಳು ಕಂಡರೆ ಕೆಳಗೆ ಕೆಡವಿ ಹಾಕಿ ಮೂಗನೆ ಕೊಯ್ದು, ಇಟ್ಟಂಗಿಯ ಕಲ್ಲಿನಿಂದ
ತಿಕ್ಕಿ ಸಾಸಿವೆಯ ಹಿಟ್ಟನೆ ತಳಿದು ಮೇಲೆ ನಿಂಬೆಹಣ್ಣಿನ ಹುಳಿಯನ್ನು ಹಿಂಡಿ ಪಡುವ ಗಾಳಿಗೆ ಹಿಡಿ ಎಂದು ಹೇಳುತ್ತಾರೆ. ತಮ್ಮ ಹರಿತವಾದ ಭಾಷೆಯಲ್ಲಿ ಖಂಡಿಸಿರುವ ಚೌಡಯ್ಯನವರ ಮಾತಿನಲ್ಲಿ ದ್ವೇಷ, ಕೋಪವಿಲ್ಲ, ಸಾಮಾಜಿಕ ಪರಿವರ್ತನೆಯ ಕಳಕಳಿ, ಪ್ರೀತಿ ಹಾಗೂ ಸಾಮಾಜಿಕ ಜವಾಬ್ದಾರಿ ಕೂಡ ಇತ್ತು.

ಬಸವ ಸಿದ್ದಾಂತದಲ್ಲಿ ಜಾತಿ ಕುಲ ಮತ ಭೇದಗಳಿಲ್ಲ, ತತ್ವ ಸಿದ್ದಾಂತ ಅಪ್ಪಿಕೊಂಡ ನಂತರ ಆತ ಬಸವ ತತ್ವದ ಅನುಯಾಯಿ ಹಾಗೂ ಲಿಂಗವಂತ ಎನಿಸಿಕೊಳ್ಳುತ್ತಾನೆ. ಲಿಂಗಾಯತ ತತ್ವ ಸಿದ್ದಾಂತ ಒಪ್ಪಿಕೊಂಡರೂ ಕೂಡ ಆತ ತಳವರ್ಗ ಸಮುದಾಯಕ್ಕೆ ಸೇರಿದವನೆಂಬ ಕಾರಣಕ್ಕೆ ಆತನ ಮನೆಯಲ್ಲಿ ಪ್ರಸಾದ ಸ್ವೀಕರಿಸಲು ನಿರಾಕರಿಸಿದರೆ ಆತ ಶರಣನಾಗಲು ಸಾಧ್ಯವಿಲ್ಲ. ಇವನಮ್ಮವ ಎಂದ ಮೇಲೆ ಆತನ ಮನೆಯಲ್ಲಿ ಪ್ರಸಾದ ಸೇವಿಸಬೇಕು, ಆತನ ಜೊತೆಗೆ ರಕ್ತ ಸಂಬಂಧ ಕೂಡ ಬೆಳೆಸಲು ಒಪ್ಪಬೇಕು. ಅದುವೇ ನಿಜವಾದ ಬಸವ ತತ್ವ ಸಿದ್ದಾಂತದ ಮೂಲ ಪರಿಕಲ್ಪನೆ ಎಂದು ಚೌಡಯ್ಯನವರು ಪ್ರತಿಪಾದಿಸಿದರು.

ವರ್ತಮಾನದಲ್ಲಿಯೂ ಈ ರೀತಿಯ ಅನೇಕ ಡಾಂಭೀಕತೆಯ ಗುರುಗಳನ್ನು ಕಾಣುತ್ತೇವೆ. ಮುಖ ನೋಡಿ ಮಣೆ ಹಾಕುವ ಅಸಮಾನತೆ ಪೋಷಣೆಯ ಗುರುಗಳು ಜಾತಿ, ಕುಲ, ಆಸ್ತಿ ,ಅಧಿಕಾರ ನೋಡಿ ಗುರುತಿಸುವ ಆಧ್ಯಾತ್ಮ ರಾಜಕೀಯ ಗುರುಗಳನ್ನು ನೋಡುತ್ತೇವೆ.

ಬಡ ಜನರು, ಕೂಲಿ ಕಾರ್ಮಿಕರು, ತಳವರ್ಗ ಕುಟುಂಬದವರು ತಮ್ಮ ಮನೆಗೆ ಸ್ವಾಮಿ,ಗುರುಗಳಿಗೆ ಆಹ್ವಾನಿಸಿದರೂ ಹೋಗಲು ಹಿಂಜರಿಯುತ್ತಾರೆ. ಅದೇ ಅಧಿಕಾರಸ್ಥರ, ಉಳ್ಳವರ, ಮೇಲ್ಜಾತಿಯವರ ಮನೆಗೆ ಓಡೋಡಿ ಹೋಗಿ ಪ್ರಸಾದ ಸ್ವೀಕರಿಸಿ ಕಾಣಿಕೆ ಕೂಡ ತೆಗೆದುಕೊಳ್ಳುತ್ತಾರೆ.
ಈ ರೀತಿಯ ಡಾಂಭೀಕತೆ, ತೋರಿಕೆಯ ಸಿದ್ಧಾಂತ ಬಸವ ಸಿದ್ದಾಂತ ಅಲ್ಲ ಎಂದು ಚೌಡಯ್ಯನವರು ಯಾವುದೇ ಮುಲಾಜಿಲ್ಲದೇ ಛಾಡಿಸುತ್ತಾರೆ.

ಬಸವ ಧರ್ಮದಲ್ಲಿ ಯಾವುದೇ ಜಾತಿ ಮತಗಳಿಲ್ಲ, ಹಾಗೇ ಜಾತಿ ಮತ ಪೋಷಿಸುವುದು ಕೂಡ ಬಸವ ಧರ್ಮಕ್ಕೆ ಮಾಡುವ ದ್ರೋಹ ಕೂಡ ಹೌದು, ಉತ್ತಮ ಸಂಸ್ಕಾರ ಪಡೆದ ಮನುಷ್ಯ ನಿಜ ಶರಣನಾಗುತ್ತಾನೆ ಎಂಬುದು ಶರಣರ ನಿಲುವು.

ಜಾತಿವ್ಯವಸ್ಥೆ, ವರ್ಗ ವ್ಯವಸ್ಥೆ, ಡಾಂಭಿಕತೆಯ ಅಸಮಾನತೆಯ ಸನಾತನ ಸಮಾಜದಲ್ಲಿ ಅನೇಕ ಪ್ರತಿರೋಧಗಳು ಎದುರಿಸಿ ಸಮ ಸಮಾಜಕ್ಕಾಗಿ ಶ್ರಮಿಸಿದ ಅಸಂಖ್ಯಾತ ಶರಣ ಸಂಕುಲಕ್ಕೆ ನಾವು ತಲೆಬಾಗಲೇಬೇಕು. ಶರಣರ ಜೀವನ ಆದರ್ಶಗಳಿಗೆ ವಾಸ್ತವ ಸಮಾಜ ಒಳಗೊಳ್ಳಬೇಕು.

ಅಸಮಾನತೆಯ ಬೀಜ ಬಿತ್ತುವರನ್ನು ಕಂಡರೆ ಅಂಬಿಗರ ಚೌಡಯ್ಯನವರ ವಚನತತ್ವ ಚಿಂತನೆಯ ವಿಚಾರಗಳು ಇಂದಿಗೂ ವಾಸ್ತವ, ಇಂದಿನ ಸಮಾಜಕ್ಕೂ ಅಗತ್ಯವಾಗಿವೆ.

ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯ ಶುಭಾಶಯಗಳು, ಶರಣು ಶರಣಾರ್ಥಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here