ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಹೆಸರಲ್ಲಿ ಮೂರನೆ ಪೀಠದ ಹಿಂದೆ ಮುರುಗೇಶ್ ನಿರಾಣಿ ಕೈವಾಡವಿದೆ ಎಂಬ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ. ಪಂಚಮಸಾಲಿ 3ನೇ ಪೀಠವಾದರೆ ತಪ್ಪೇನಲ್ಲ.
ನನ್ನಲ್ಲಿ ಎರಡು ಪೀಠ ಗಳು ಒಂದೇ ಎಂಬ ಭಾವನೆ ಇದೆ. ಮೂರನೇ ಪೀಠದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, 3ನೇ ಪೀಠ ಆದರೆ ತಪ್ಪಲ್ಲ, ಪಂಚಮಸಾಲಿ ಸಮಾಜ ದೊಡ್ಡದಿದೆ. ಇದಕ್ಕೆ ನಾವು ಸಹಮತ ವ್ಯಕ್ತಪಡಿಸಬೇಕು. ಸ್ವಾಮೀಜಿಗಳು ಆಪಾದನೆ ಬಿಟ್ಟು ಜವಾಬ್ದಾರಿ ತೆಗೆದುಕೊಳ್ಳಲಿ. ಅವರೇ ಮುಂದೆ ನಿಂತು ಪೀಠ ರಚನೆಯ ಜವಾಬ್ದಾರಿ ತೆಗೆದುಕೊಳ್ಳಬೇಕು. ಪ್ರತಿಷ್ಠೆಗಾಗಿ ಬರೀ ಅಪಾದನೆ ಮಾಡಬಾರದು ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಪಂಚಮಸಾಲಿ ಮೂರನೇ ಪೀಠದ ಬಗ್ಗೆ ಸಮಾಜದ ಜನ ತೀರ್ಮಾನಿಸಿದ್ದಾರೆ. ಮೂರನೇ ಪೀಠದ ಬಗ್ಗೆ ತೀರ್ಮಾನಿಸಿಲ್ಲ. ನಾನು ಯಾವತ್ತಾದ್ರೂ ಸಿಎಂ ಆಗ್ತೀನಿ ಅಂತ ಹೇಳಿದ್ದೀನಾ? ತಾವೇ ಕಲ್ಪನೆ ಮಾಡಿಕೊಂಡು ಮಾತನಾಡ್ತಿದ್ದಾರೆ. ಎಂದು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ನಾನು ವಿಜಯ ಪುರ, ಬಾಗಲಕೋಟೆ ಜಿಲ್ಲೆಯ ನೀರು ಕುಡಿದಿದ್ದೇನೆ. ಬೇರೆ ಬೇರೆಯವರು ಏನು ಮಾತಾಡ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನಾನು ಸುಮ್ಮನಿರುತ್ತೇನೆ ಎಂದರೆ ಅದು ನನ್ನ ಅಸಮರ್ಥತೆ ಅಲ್ಲ. ಟೀಕೆ, ಟಿಪ್ಪಣಿಗಳಿದ್ದರೆ ಹೇಳಲಿ. ನಾನು ನನ್ನ ತಪ್ಪು ತಿದ್ದಿಕೊಳ್ಳುತ್ತೇನೆ ಎಂದು ಬಾಗಲಕೋಟೆಯಲ್ಲಿ ಮುರಗೇಶ್ ನಿರಾಣಿ ಆಕ್ರೋಶ ಹೊರಹಾಕಿದ್ದಾರೆ.
ವೀರಶೈವ- ಲಿಂಗಾಯತ ಎಂದು ಸಮಾಜ ಒಡೆದಿದ್ದು ಯಾರು? ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು, ಲಿಂಗಾಯತ್ ಪ್ರತ್ಯೇಕ ಧರ್ಮ ಹೋರಾಟದಲ್ಲಿದ್ದ ಜಯಮೃತ್ಯುಂಜಯ ಸ್ವಾಮೀಜಿಗೆ ಸಚಿವ ನಿರಾಣಿ ಇದೆ ಸಂದರ್ಭದಲ್ಲಿ ತಿರುಗೇಟು ನೀಡಿದರು.