ಕಲಬುರಗಿ : ನಮ್ಮ ನಿರಂತರ ಸುಧೀರ್ಘ ಹೋರಾಟದ ಫಲಸ್ವರೂಪ ೨೦೧೩ರಲ್ಲಿ ಸಂವಿಧಾನದ ೩೭೧ನೇ (ಜೆ) ಕಲಂ ಜಾರಿಯಾದ ನಂತರ ಇಲ್ಲಿಯವರೆಗೆ ನಡೆದಿರುವ ಬಹುತೇಕ ಇಲಾಖೆಗಳ ನೇಮಕಾತಿಗಳಲ್ಲಿ ಮತ್ತು ಮುಂಬಡ್ತಿಗಳಲ್ಲಿ ರಾಜಾರೋಷವಾಗಿ ಅನ್ಯಾಯ ಮಾಡಿ ನಮ್ಮ ಭಾಗದ ಅಭ್ಯರ್ಥಿಗಳಿಗೆ ಸಿಗಬೇಕಾದ ಫಲ ಸಿಗದೆ ಮಲತಾಯಿ ಧೋರಣೆ ನಡೆಸಿ ಸಂವಿಧಾನಕ್ಕೆ ಅಪಚಾರ ಮಾಡಲಾಗಿದೆ.ಈ ರೀತಿ ಸಂವಿಧಾನಬದ್ಧ ಸ್ಥಾನಮಾನಕ್ಕೆ ವಿರುದ್ಧವಾಗಿ ನಡೆದುಕೊಂಡ ಅಧಿಕಾರಿಗಳು ಎಷ್ಟೇ ದೊಡ್ಡವರಾದರೂ ಅಂತಹವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸರಕಾರಕ್ಕೆ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಒತ್ತಾಯಿಸಿದೆ.
ಸಂವಿಧಾನದ ೩೭೧ನೇ (ಜೆ) ಕಲಂ ತಿದ್ದುಪಡಿಯ ಔಚಿತ್ಯದ ಬಗ್ಗೆ ಆಯಾ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿದುಕೊಂಡರೂ ಸಹ ತಮಗೆ ಏನೂ ಗೊತ್ತಿಲ್ಲದ ಹಾಗೆ ವರ್ತಿಸುವ ಮುಖಾಂತರ ಕಲ್ಯಾಣ ಕರ್ನಾಟಕ ಪ್ರದೇಶದ ನಿರುದ್ಯೋಗಿ ಅಭ್ಯರ್ಥಿಗಳಿಗೆ ನಿರಂತರ ಅನ್ಯಾಯ ಮಾಡುತ್ತಾ ಬರುತ್ತಿದ್ದಾರೆ.
ವಿಶೇಷ ಸ್ಥಾನಮಾನದ ಸಮರ್ಪಕವಾದ ಅನುಷ್ಠಾನಕ್ಕೆ ಯಾವುದೇ ರೀತಿಯ ಯಂತ್ರವಿಲ್ಲದ ಕಾರಣ ಈ ರೀತಿಯ ಅನ್ಯಾಯ ಇನ್ನು ಮುಂದೆಯೂ ನಡೆಯುವುದರಲ್ಲಿ ಆಶ್ಚರ್ಯವಿಲ್ಲ. ಅದಕ್ಕಾಗಿ ಸಂವಿಧಾನದ ೩೭೧ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯವೇ ನಮ್ಮ ಪಾಲಿನ ಹಕ್ಕು ಪಡೆಯಲು ಏಕ ಮಾತ್ರ ಮಾನದಂಡವಾಗಿದೆ.
ಕಳೆದ ೫-೬ ವರ್ಷಗಳಲ್ಲಿ ಸುಮಾರು ಹತ್ತಾರು ಇಲಾಖೆಗಳಲ್ಲಿಯೂ ಸಹ ಕಲ್ಯಾಣ ಕರ್ನಾಟಕದಲ್ಲಿಯೂ ಸಹ ಮೆರಿಟ್ ಅಬ್ಯರ್ಥಿಗಳಿಗೆ ರಾಜ್ಯಮಟ್ಟದ ಸಾಮಾನ್ಯ ಕೋಟಾದ ಉದ್ಯೋಗಗಳ ನೇಮಕಾತಿಗಳಲ್ಲಿ ಅನ್ಯಾಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಮಗೆ ಮೀಸಲಿರುವ ಕೋಟಾದಲ್ಲಿಯೂ ಸಹ ಸಮರ್ಪಕವಾಗಿ ನೇಮಕಾತಿ ಮಾಡಿಕೊಳ್ಳದೇ ರಾಜಾರೋಷವಾಗಿ ಆಯಾ ಇಲಾಖೆಯ ಉನ್ನತ ಅಧಿಕಾರಿಗಳು ಅನ್ಯಾಯ ಮಾಡುತ್ತಾ ಬರುತ್ತಿದ್ದಾರೆ.
ದೆವರು ವರ ನೀಡಿದರೆ ಪೂಜಾರಿಗಳು ತಿರಸ್ಕರಿಸುವಂತೆ ಆಯಾ ಇಲಾಖೆಯ ಅನುಷ್ಠಾನ ಅಧಿಕಾರಿಗಳು ರಾಜ್ಯಮಟ್ಟದ ಸಾಮಾನ್ಯ ಕೋಟಾದಿಂದ ನಮಗೆ ಹೊರಗಿಟ್ಟು ನಮ್ಮ ಭಾಗಕ್ಕೆ ಪ್ರತ್ಯೇಕ ರಾಜ್ಯ ಹಂಚಿಕೊಟ್ಟಂತೆ ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಮಾತ್ರ ಮೀಸಲಾತಿಯಲ್ಲಿ ನೇಮಕಾತಿ ಮಾಡಲು ಕುತಂತ್ರ ನಡೆಸಿರುವುದು ಕಲ್ಯಾಣ ಕರ್ನಾಟಕದ ಜನರಲ್ಲಿ ಪ್ರತ್ಯೇಕ ರಾಜ್ಯ ಕೇಳುವಂತಹ ಕುಮ್ಮಕ್ಕಿನ ಧೋರಣೆ ಅನುಸರಿಸುತ್ತಿರುವುದು ರಾಜಾರೋಷವಾಗಿ ಎದ್ದು ಕಾಣುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಇತ್ತೀಚೆಗೆ ಪೋಲಿಸ್ ಇಲಾಖೆಯಲ್ಲಿ ನಡೆದಿರುವ ಪಿ.ಎಸ್.ಐ. ಹುದ್ದೆಗಳ ನೇಮಕಾತಿಗಳಲ್ಲಿ ಅಗಿರುವ ಅನ್ಯಾಯವನ್ನು ಸರಿಪಡಿಸಲು ತಾತ್ಕಾಲಿಕ ಪಟ್ಟಿ ತಕ್ಷಣ ರದ್ದು ಮಾಡಿ ೩೭೧ನೇ(ಜೆ) ಕಲಮಿನ ಮೂಲ ಉದ್ದೇಶದಂತೆ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾದರಿಯಂತೆ) ರಾಜ್ಯಮಟ್ಟದ ಆಯ್ಕೆಯಲ್ಲಿ ನಮ್ಮ ಅಭ್ಯರ್ಥಿಗಳ ಮೆರಿಟನ್ನು ಗಣನೆಗೆ ತೆಗೆದುಕೊಂಡು ಮೆರಿಟ್ ಆಧಾರದಂತೆ ಸಾಮಾನ್ಯ ಕೋಟ್ಟಾದಲ್ಲಿ ನೆಮಕಾತಿಗಳನ್ನು ಪರಿಗಣಿಸಬೇಕು. ಇದರಲ್ಲಿ ನಮ್ಮ ಅಭ್ಯರ್ಥಿಗಳು ಆಯ್ಕೆಯಾಗದಿದ್ದರೆ ೩೭೧ನೇ(ಜೆ) ಕಲಂ ಕಲ್ಯಾಣ ಕರ್ನಾಟಕ ಕೋಟಾದ ಮೀಸಲು ಮತ್ತು ಕಲ್ಯಾಣ ಕರ್ನಾಟಕೇತರ ಮೀಸಲಾತಿ ಕೋಟಾದಲ್ಲಿ ಆಯ್ಕೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು.
ಇಲ್ಲವಾದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುವುದು. ಅಷ್ಟೇ ಅಲ್ಲದೇ ನಾವು ಯಾವುದೇ ಗತ್ಯಂತರವಿಲ್ಲದೇ ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಜ್ಯದ ಹೋರಾಟ ಮಾಡುವುದೇ ನ್ಯಾಯದ ಮಾನದಂಡವೆಂದು ಪರಿಗಣಿಸ ಬೇಕಾಗುತ್ತದೆ ಎಂದು ಕಲ್ಯಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯು ಸರಕಾರಕ್ಕೆ ಎಚ್ಚರಿಕೆ ನೀಡುತ್ತದೆ.