ಸಂತೆಗೆ ಬಂದವರಿಗೆ ‘ಜಲಭಾದೆ’ ಸಂಕಟ

0
22

ದಾವಣಗೆರೆ: ವಾಣಿಜ್ಯ ನಗರಿ ದಾವಣಗೆರೆಗೆ ಖರೀದಿ-ವ್ಯಾಪಾರಕ್ಕಾಗಿ ಜಿಲ್ಲೆಯ ವಿವಿಧೆಡೆಯಿಂದ ನಿತ್ಯ ಬರುವ ಜನರು ಸಾವಿರಾರು. ದಿನವಿಡೀ ಮಾರುಕಟ್ಟೆಯಲ್ಲೇ ಕಾಲ ಕಳೆಯುವ ಎಷ್ಟೋ ಮಂದಿಗೆ ಸಮೀಪದಲ್ಲಿ ಸಾರ್ವಜನಿಕ ಶೌಚಾಲಯ ಸಿಗದೇ ‘ಜಲಬಾಧೆ’ಯ ಸಂಕಟ.

ರೈತರು, ಬೀದಿ-ಬದಿ ವ್ಯಾಪಾರಿಗಳು ನಗರದ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಜೊತೆಗೆ ಖರೀದಿಗಾಗಿ ಬರುವ ಗ್ರಾಹಕರೂ ‘ಸಂತೆ’ ಮುಗಿಸಿಕೊಂಡು ಮನೆಯತ್ತ ಹೆಜ್ಜೆ ಹಾಕುವಾಗ ಹಲವು ಗಂಟೆಗಳೇ ಆಗುತ್ತದೆ. ಇಂಥವರು ‘ಜಲಬಾಧೆ’ ತೀರಿಸಿಕೊಳ್ಳಬೇಕೆಂದರೆ ಹಲವೆಡೆ ಸಮೀಪದಲ್ಲಿ ಶೌಚಾಲಯಗಳೇ ಇಲ್ಲ. ಪುರುಷರೇನೋ ಸಮೀಪದಲ್ಲಿರುವ ಖಾಲಿ ಜಾಗವನ್ನು ಹುಡುಕಿಕೊಂಡು ಮೂತ್ರವಿಸರ್ಜನೆ ಮಾಡಿ ‘ರಿಲ್ಯಾಕ್ಸ್‌’ ಆಗುತ್ತಾರೆ. ಆದರೆ, ಮಹಿಳೆಯರ ಸ್ಥಿತಿ ಹಾಗಿಲ್ಲ.

Contact Your\'s Advertisement; 9902492681

ನಗರದ ಮುಖ್ಯ ಮಾರುಕಟ್ಟೆ ಪ್ರದೇಶವಾದ ಮಂಡಿಪೇಟೆ, ಕಾಯಿಪೇಟೆ, ಎಂ.ಜಿ. ರಸ್ತೆ, ಕೆ.ಆರ್‌. ಮಾರ್ಕೆಟ್‌, ಗಾಂಧಿ ಸರ್ಕಲ್‌, ಪಿ.ಜೆ. ಬಡಾವಣೆಗೆ ಸಾವಿರಾರು ಜನ ಬಂದು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಒಂದೆರಡು ಕಡೆ ಸಾರ್ವಜನಿಕ ಶೌಚಾಲಯ ಇದೆಯಾದರೂ ಬೀದಿ ಬದಿಯ ವ್ಯಾಪಾರಿಗಳಿಗೆ ತಮ್ಮ ಅಂಗಡಿಯನ್ನು ಬಿಟ್ಟು ದೂರದಲ್ಲಿರುವ ಶೌಚಾಲಯಕ್ಕೆ ತೆರಳಲಾಗದ ಸ್ಥಿತಿ.

ಇನ್ನು ನಗರದ ಮುಖ್ಯ ರಸ್ತೆಯಾದ ಹಳೇ ಪಿ.ಬಿ. ರಸ್ತೆಯಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ಈ ಮಾರ್ಗದಲ್ಲಿ ಸಾಗುವವರು ಜಲಬಾಧೆ ನೀಗಿಸಿಕೊಳ್ಳಲು ಪರದಾಡುವಂತಾಗಿದೆ. ಶೌಚಾಲಯಗಳು ಎಲ್ಲಿವೆ ಎಂಬ ಬಗ್ಗೆ ಮಾರ್ಗಸೂಚಿ ಫಲಕಗಳನ್ನೂ ಹಾಕದೇ ಇರುವುದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವವರು ತುರ್ತು ಸಂದರ್ಭದಲ್ಲಿ ಶೌಚಾಲಯಕ್ಕಾಗಿ ಹುಡುಕಾಡಬೇಕಾದ ಸ್ಥಿತಿ ಇದೆ.

ಈ ಮೊದಲು ಹಳೇ ಪಿ.ಬಿ. ರಸ್ತೆಯಲ್ಲಿ ಕೆ.ಎಸ್‌.ಆರ್‌.ಟಿ.ಸಿ. ಬಸ್‌ನಿಲ್ದಾಣ, ಖಾಸಗಿ ಬಸ್‌ ನಿಲ್ದಾಣದಲ್ಲಿ ಶೌಚಾಲಯಗಳಿದ್ದವು. ಇದೀಗ ನೂತನ ಬಸ್‌ನಿಲ್ದಾಣ ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಈ ಎರಡೂ ಬಸ್‌ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಹೈಸ್ಕೂಲ್‌ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಹೈಸ್ಕೂಲ್‌ ಮೈದಾನದಲ್ಲಿ ಈ ಮೊದಲೇ ಇದ್ದ ಸಾರ್ವಜನಿಕ ಶೌಚಾಲಯ ಹಾಗೂ ಸ್ನಾನಗೃಹವೂ ಸೇರಿ ಈಗ ಒಂದೇ ಕಡೆ ಅಕ್ಕ-ಪಕ್ಕದಲ್ಲಿ ಮೂರು ಶೌಚಾಲಯಗಳು ತಲೆಎತ್ತಿವೆ.

‘ಜನಸಂಖ್ಯೆಗೆ ಹೋಲಿಸಿದರೆ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಕಡಿಮೆ ಇದೆ. ಜನಸಂದಣಿ ಹೆಚ್ಚಿರುವ ಗಾಂಧಿ ಸರ್ಕಲ್‌, ಅರುಣಾ ಸರ್ಕಲ್‌ ಹಾಗೂ ಸಂಗೊಳ್ಳಿ ರಾಯಣ್ಣ ಸರ್ಕಲ್‌, ಗುಂಡಿ ಸರ್ಕಲ್‌ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್‌.ಜಿ. ಉಮೇಶ್‌ ಒತ್ತಾಯಿಸಿದರು.

‘ಶೌಚಾಲಯಗಳ ಕೊರತೆ ಇರುವುದರಿಂದ ವಿಶೇಷವಾಗಿ ಬೀದಿ ಬದಿ ವ್ಯಾಪಾರಿಗಳು, ತಾವು ಬೆಳೆದ ಉತ್ಪನ್ನ ಮಾರಾಟ ಮಾಡಲು ಬಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಗಾಂಧಿ ಸರ್ಕಲ್‌ ಬಳಿ ಶೌಚಾಲಯ ಇಲ್ಲದೇ ಇರುವುದರಿಂದ ಅಶೋಕ ರಸ್ತೆಯ 1ನೇ ಕ್ರಾಸ್‌ನ ದೀಕ್ಷಿತ್‌ ರಸ್ತೆಯ ಖಾಲಿ ಜಾಗದಲ್ಲೇ ಜನ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇಲ್ಲೇ ಸಮೀಪದಲ್ಲಿರುವ ಕನ್ಸರ್‌ವೆನ್ಸಿ ಜಾಗದಲ್ಲಿ ಶೌಚಾಲಯ ನಿರ್ಮಿಸಿದರೆ
ಈ ಭಾಗದ ಜನರಿಗೆ ಅನುಕೂಲವಾಗಲಿದೆ’ ಎಂದು ಚಹಾದಂಗಡಿಯ ಸಂಜಯ್‌ ಅಭಿಪ್ರಾಯಪಟ್ಟರು.

ಹೈಸ್ಕೂಲ್‌ ಮೈದಾನ, ಸಿ.ಜಿ. ಆಸ್ಪತ್ರೆ ರಸ್ತೆ, ಜಯದೇವ ಸರ್ಕಲ್‌, ಹಳೇ ತಾಲ್ಲೂಕು ಕಚೇರಿ ಆವರಣ ಸೇರಿ ಹಲವೆಡೆ ಇರುವ ಸಾರ್ವಜನಿಕ ಶೌಚಾಲಯದಲ್ಲಿ ಆಗಾಗ ನೀರಿನ ಕೊರತೆ ಎದುರಾಗುತ್ತದೆ. ಪಾಲಿಕೆ ವಾರಕ್ಕೊಮ್ಮೆ ಬಿಡುವ ನೀರು ಸಾಲದೇ ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳಬೇಕಾಗುತ್ತಿದೆ.

‘ಪಾಲಿಕೆ ಬಿಡುವ ನೀರು ಎರಡು ದಿನವೂ ಸಾಕಾಗುವುದಿಲ್ಲ. ಹೀಗಾಗಿ ಬಾಟಲಿ ನೀರನ್ನು ಆಟೊದಲ್ಲಿ ತಂದು ಇಟ್ಟುಕೊಳ್ಳುತ್ತಿದ್ದೇನೆ. ಅಕ್ಕ-ಪಕ್ಕದ ಕೆಲ ಅಂಗಡಿಯವರು ಮಾತ್ರ ಬರುತ್ತಿದ್ದಾರೆ. ನೀರಿನ ಸಮಸ್ಯೆ ಇರುವುದರಿಂದ ಶೌಚಾಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕಷ್ಟವಾಗಿದೆ’ ಎನ್ನುತ್ತಾರೆ ಹಳೇ ತಾಲ್ಲೂಕು ಕಚೇರಿಯ ಸಾರ್ವಜನಿಕ ಶೌಚಾಲಯದ ಸಿಬ್ಬಂದಿ ರಾಜಪ್ಪ.

ಸ್ಮಾರ್ಟ್‌ ಶೌಚಾಲಯ: ಸ್ಮಾರ್ಟ್‌ ಸಿಟಿ ಯೋಜನೆಯಡಿ 20ಕ್ಕೂ ಹೆಚ್ಚು ಕಡೆ ಸ್ಮಾರ್ಟ್‌ ಶೌಚಾಲಯ ಅಳವಡಿಸಲಾಗಿದೆ. ಆದರೆ, ನಿರ್ವಹಣೆಯ ಸಮಸ್ಯೆಯಿಂದಾಗಿ ಹಲವು ಬಾರಿ ಶೌಚಾಲಯ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ನಗರದಲ್ಲಿ ಹಲವೆಡೆ ಪಾಲಿಕೆಗೆ ಸೇರಿದ ಕನ್ಸರ್‌ವೆನ್ಸಿ ಜಾಗಗಳು ಪಾಳುಬಿದ್ದಿವೆ. ಜನಸಂದಣಿ ಇರುವ ಕಡೆ ಕನ್ಸರ್ವೆನ್ಸಿಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೆ ನಾಗರಿಕರಿಗೆ ಅನುಕೂಲವಾಗಲಿದೆ. -ಎಚ್‌.ಜಿ. ಉಮೇಶ್‌, ಪಾಲಿಕೆ ಮಾಜಿ ಸದಸ್ಯ

ನಗರದಲ್ಲಿ 25 ಕಡೆ ಸಾರ್ವಜನಿಕ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿವೆ. ಸ್ಮಾರ್ಟ್‌ ಸಿಟಿಯಿಂದಲೂ ಕೆಲವೆಡೆ ಶೌಚಾಲಯ ನಿರ್ಮಿಸಲಾಗಿದೆ. ನಿಜಲಿಂಗಪ್ಪ ಬಡಾವಣೆಯ ಸಂತೆ ಮಾರ್ಕೆಟ್‌ ಬಳಿ ಶೌಚಾಲಯ ನಿರ್ಮಿಸಲಾಗುತ್ತಿದೆ. ಜಾಗದ ಸಿಕ್ಕರೆ ಇನ್ನಷ್ಟು ಕಡೆ ಶೌಚಾಲಯ ನಿರ್ಮಿಸಲು ಸಿದ್ಧರಿದ್ದೇವೆ. ಸಾರ್ವಜನಿಕರು ಶಾಪಿಂಗ್‌ ಮಾಲ್‌, ಪೆಟ್ರೋಲ್‌ ಬಂಕ್‌ಗಳಲ್ಲಿನ ಶೌಚಾಲಯವನ್ನು ಬಳಸಿಕೊಳ್ಳಬಹುದು. -ಬಸವಣ್ಣ ಜಿ.ಆರ್‌., ಪರಿಸರ ಎಂಜಿನಿಯರ್‌, ಪಾಲಿಕೆ

ಜಗಳೂರು: ಪಟ್ಟಣದಲ್ಲಿ ಜನನಿಬಿಡ ಸ್ಥಳಗಳಲ್ಲಿ ಶೌಚಾಲಯಗಳಿಲ್ಲದೆ ನಾಗರಿಕರು ಪರದಾಡುವ ಸ್ಥಿತಿ ಇದೆ.ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆ ಕೊರತೆಯಿಂದಾಗಿ ಗಬ್ಬು ನಾರುತ್ತಿದ್ದು, ಸೊಳ್ಳೆಗಳ ತಾಣಗಳಾಗಿ ಮಾರ್ಪಟ್ಟಿವೆ.

ತಹಶೀಲ್ದಾರ್ ಕಚೇರಿ, ಉಪನೋಂದಣಾಧಿಕಾರಿ ಕಚೇರಿ, ಭೂ ಮಾಪನಾ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಚೇರಿಗಳನ್ನೊಳಗೊಂಡ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಆದರೆ, ಇಲ್ಲಿ ಶೌಚಾಲಯದ ಸೌಲಭ್ಯ ಇಲ್ಲ.

ತಾಲ್ಲೂಕು ಪಂಚಾಯಿತಿ ಕಚೇರಿಯ ಆವರಣದಲ್ಲಿ 10 ವರ್ಷಗಳ ಹಿಂದೆ ₹ 12 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸಿದ್ದರೂ ಬಳಕೆಗೆ ಅವಕಾಶ ನೀಡದ ಕಾರಣ ಮುಳ್ಳುಗಂಟಿಗಳು ಬೆಳೆದು ಶೌಚಾಲಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.

ಜನದಟ್ಟಣೆಯಿಂದ ಕೂಡಿರುವ ಮಹಾತ್ಮ ಗಾಂಧಿ ವೃತ್ತದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಎದುರಲ್ಲಿ ಒಂದೂ ಸಾರ್ವಜನಿಕ ಶೌಚಾಲಯ ಇಲ್ಲ. ಹಲವು ಬ್ಯಾಂಕ್‌ಗಳು, ಬಸ್ ನಿಲ್ದಾಣ, ಹೋಟೆಲ್‌ಗಳು ಹಾಗೂ ತರಕಾರಿ ಮಾರುಕಟ್ಟೆ ಹೊಂದಿರುವ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸುವಂತೆ ನಾಗರಿಕರು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಪಟ್ಟಣ ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಿಲ್ಲ.

ಚನ್ನಗಿರಿ: ಪುರಸಭೆಯಾಗಿ ಮೇಲ್ದರ್ಜೆಗೇರಿ ಮೂರು ವರ್ಷಗಳಾದರೂ ಪಟ್ಟಣದಲ್ಲಿ ಜನಸಂಖ್ಯೆಗೆ ತಕ್ಕಷ್ಟು ಸಾರ್ವಜನಿಕ ಶೌಚಾಲಯಗಳಿಲ್ಲ. ಪ್ರತಿದಿನ ಹಲವು ಗ್ರಾಮಗಳಿಂದ ತಾಲ್ಲೂಕು ಕೇಂದ್ರಕ್ಕೆ ಕೆಲಸ-ಕಾರ್ಯಗಳಿಗೆ ಮೂರ್ನಾಲ್ಕು ಸಾವಿರ ಜನ ಬರುತ್ತಾರೆ. ಆದರೆ, ಪಟ್ಟಣದಲ್ಲಿ ಪುರಸಭೆಯಿಂದ 9 ಸಾರ್ವಜನಿಕ ಶೌಚಾಲಯ ಹಾಗೂ 3 ಸಮುದಾಯ ಶೌಚಾಲಯ ಮಾತ್ರ ಇದೆ. ಹೊರಗಿನಿಂದ ಬಂದ ಜನ ಶೌಚಕ್ಕೆ ತೆರಳಲು ಪರದಾಡುವಂತಾಗಿದೆ. 23 ವಾರ್ಡ್‌ಗಳಲ್ಲೂ ಶೌಚಾಲಯ ನಿರ್ಮಿಸಿದರೆ ನಾಗರಿಕರಿಗೆ ಅನುಕೂಲವಾಗಲಿದೆ.

ಪಟ್ಟಣದ ಬಸ್ ನಿಲ್ದಾಣದ ಬಳಿ 1, ಕಗತೂರು ರಸ್ತೆ ತಾಲ್ಲೂಕು ಕ್ರೀಡಾಂಗಣದ ಸಮೀಪ 1 ಹಾಗೂ ಮೇಲಿನ ಬಸ್ ನಿಲ್ದಾಣದಲ್ಲಿ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಹಾಗೂ ವಡ್ನಾಳ್ ರಾಜಣ್ಣ ಸಮುದಾಯ ಭವನದ ಬಳಿಯ ಶೌಚಾಲಯಗಳು ನಿರ್ವಹಣೆ ಕೊರತೆಯಿಂದಾಗಿ ದುರ್ವಾಸನೆ ಬೀರುತ್ತಿವೆ. ಪುರಸಭೆಯವರು ಕೇವಲ ಬ್ಲೀಚಿಂಗ್ ಪೌಡರ್ ಹಾಕುತ್ತಾರೆ. ಹದಿನೈದು ದಿನಗಳಿಗೊಮ್ಮೆ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ.

ತಾಲ್ಲೂಕು ಕಚೇರಿ, ಸರ್ಕಾರಿ ಪದವಿ ಪೂರ್ವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾರುತಿ ವೃತ್ತ, ಎಪಿಎಂಸಿ ವೃತ್ತ, ತರಳಬಾಳು ವೃತ್ತ, ನಾಯಕರ ಬೀದಿ, ಮಡಿವಾಳರ ಬೀದಿಗಳಲ್ಲಿ ಜನ ಸಂಚಾರ ಹೆಚ್ಚಾಗಿದ್ದು, ಈ ಭಾಗದಲ್ಲಿ ಪುರಸಭೆಯವರು ಶೌಚಾಲಯ ನಿರ್ಮಿಸಬೇಕಾಗಿದೆ. ಶೌಚಾಲಯ ನಿರ್ಮಿಸುವ ವಿಚಾರದಲ್ಲಿ ಪುರಸಭೆ ಆಸಕ್ತಿ ವಹಿಸುತ್ತಿಲ್ಲ. ಪಟ್ಟಣದ ಎಲ್ಲ 23 ವಾರ್ಡ್‌ಗಳಲ್ಲೂ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೆ ಅನುಕೂಲವಾಗಲಿದೆ ಎನ್ನುತ್ತಾರೆ ಪಟ್ಟಣದ ವಾಸಿ ಶಶಿಕುಮಾರ್.

ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಶೌಚಾಲಯ ನಿರ್ಮಿಸಲು ಶಾಸಕರು ಸೂಚಿಸಿದ್ದಾರೆ. ಶೀಘ್ರದಲ್ಲೇ ಇಲ್ಲಿ ಶೌಚಾಲಯ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್‌ಗಳಲ್ಲೂ ಶೌಚಾಲಯ ನಿರ್ಮಿಸುತ್ತೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಐ. ಬಸವರಾಜ್ ಪ್ರತಿಕ್ರಿಯಿಸಿದರು.

ಹೊನ್ನಾಳಿ: ನಗರದಲ್ಲಿ ಪ್ರತಿ ಬುಧವಾರ ಸಂತೆ ನಡೆಯುತ್ತದೆ. ಇದೇ ಜಾಗದಲ್ಲಿ ದಿನಾಲೂ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೆ, ಇಲ್ಲಿ ವ್ಯಾಪಾರಿಗಳಿಗೆ ಹಾಗೂ ನಾಗರಿಕರಿಗೆ ಶೌಚಾಲಯ ಸೌಲಭ್ಯವಿಲ್ಲ. ‌

ಬಹುತೇಕ ಜನ ಬಹಿರ್ದೆಸೆಗೆ ಇಲ್ಲಿನ ಬೇಲಿ ಸಾಲುಗಳನ್ನೇ ಆಶ್ರಯಿಸಿದ್ದಾರೆ. ಈ ಸಂತೆ ಮಾರುಕಟ್ಟೆಯ ಕೂಗಳತೆ ದೂರದಲ್ಲಿ ತುಂಗಭದ್ರಾ ನದಿ ಇದ್ದು, ಆ ಕಡೆ ಮುಖಮಾಡಿ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ತರಕಾರಿ ವ್ಯಾಪಾರಕ್ಕೂ ತೊಂದರೆಯಾಗುತ್ತಿದೆ. ಹೀಗಾಗಿ ಪುರಸಭೆಯವರು ಈ ಭಾಗದಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಾಲಯ ನಿರ್ಮಿಸುವ ಅಗತ್ಯವಿದೆ.

ಖಾಸಗಿ ಬಸ್ ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣ ಮತ್ತು ಪುರಸಭೆ ಕಚೇರಿಯ ಬಲಭಾಗದಲ್ಲಿ ಸಾರ್ವಜನಿಕ ಶೌಚಾಲಯಗಳಿವೆ. ಇವುಗಳ ನಿರ್ವಹಣೆಯ ಸಮಸ್ಯೆ ಇಲ್ಲ. ಆದರೆ, ಕೆಲವರು ಖಾಸಗಿ ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋಗದೇ ಕಟ್ಟಡದ ಹಿಂಭಾಗದಲ್ಲಿ ಹೊರಗಡೆಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ಸುತ್ತಲೂ ಕೆಟ್ಟ ವಾಸನೆ ಬರುತ್ತಿದೆ. ಶೌಚಾಲಯದ ಸುತ್ತಲಿನ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಡಿವಾಣ ಹಾಕಬೇಕಾಗಿದೆ.

ನ್ಯಾಮತಿ: ತಾಲ್ಲೂಕು ಕೇಂದ್ರವಾಗಿರುವ ನ್ಯಾಮತಿ ಪಟ್ಟಣದಲ್ಲಿ ಹಳೆ ಬಸ್‌ನಿಲ್ದಾಣ ಬಳಿ ನಾಮಕಾವಾಸ್ತೆಗೆ ಒಂದು ಶೌಚಾಲಯ ಇದೆ. ಪ್ರತಿದಿನ ಶಾಲಾ-ಕಾಲೇಜು, ಆಸ್ಪತ್ರೆ, ಕಚೇರಿಗಳಿಗೆ ಬರುವ ಜನ ಹಾಗೂ ಪ್ರಯಾಣಿಕರಿಗೆ, ಸಂತೆ ವ್ಯಾಪಾರಸ್ಥರಿಗೆ ಅಗತ್ಯ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ಪರದಾಡುವಂತಾಗಿದೆ.

ಪಟ್ಟಣದ ಮಹಾಂತೇಶ್ವರ ರಸ್ತೆಯಲ್ಲಿ ಬಸ್ ನಿಲುಗಡೆ ಸ್ಥಳವಾಗಿದೆ. ಪ್ರತಿದಿನ ಸುಮಾರು 50 ಬಸ್‌ಗಳು ಇಲ್ಲಿ ಸಂಚರಿಸುತ್ತವೆ. ಇಲ್ಲಿಗೆ ಬರುವ ಪ್ರಯಾಣಿಕರು ಅದರಲ್ಲೂ ಮಹಿಳಾ ಪ್ರಯಾಣಿಕರಿಗೆ ಸಾರ್ವಜನಿಕ ಶೌಚಾಲಯ ಇಲ್ಲದೆ, ಕಷ್ಟ ಅನುಭವಿಸುವಂತಾಗಿದೆ. ಈ ಹಿಂದೆ ಗ್ರಾಮಾಡಳಿತದಲ್ಲಿ ಸುಮಾರು ₹ 1 ಲಕ್ಷ ವೆಚ್ಚದಲ್ಲಿ ಶೌಚಾಲಯಕ್ಕೆ ಶೆಡ್‌ಗಳನ್ನು ತಂದಿದ್ದು, ಪಟ್ಟಣ ಪಂಚಾಯಿತಿ ಕಚೇರಿ ಪಕ್ಕದಲ್ಲಿ ತುಕ್ಕು ಹಿಡಿಯುತ್ತಿರುವುದು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಕಪ್ಪು ಮಸಿಯಾಗಿದೆ.

ಮಹಾಂತೇಶ್ವರ ರಸ್ತೆಯಲ್ಲಿ, ಸಂತೆ ಮಾರುಕಟ್ಟೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತಾಗಿ ಶೌಚಾಲಯ ಅವಶ್ಯಕತೆ ಇದೆ ಎಂಬುದು ನಾಗರಿಕರ ಅಭಿಪ್ರಾಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here