ಸ್ವಚ್ಛಭಾರತಕ್ಕೆ ಮುನ್ನುಡಿ ಬರೆದ ಶರಣೆ ಸತ್ಯಕ್ಕ

0
176

ಶರಣರು ಅರಿವಿನ ಸಾಕಾರಮೂರ್ತಿಗಳು. ಅರಿವಿನಂಗಳದಲ್ಲಿ ಆತ್ಮದ ಜ್ಯೋತಿ ಬೆಳಗಿಸುವಂಥವರು. ಶರಣರದ್ದು ಆಕಾಶಕ್ಕೆ ಹರಡಿದ್ದ ಮನಸ್ಸು. ಅವರು ಸದಾವಕಾಲ ಸಕಲರೂ ಸುಖವಾಗಿರಲೆಂದು ಪ್ರಾರ್ಥನೆ ಮಾಡಿದರು. ಅವರಿಗೆ ಸಮ ಸಮಾಜದ ಚಿಂತನೆ. ಅವರದು ದಯೆಯ ಧರ್ಮ. ವಚನ ಘನ ಪರಂಪರೆಯನ್ನು ಹುಟ್ಟು ಹಾಕಿದ್ದಲ್ಲದೆ ಉಳಿಸಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದಕ್ಕೆಲ್ಲ ಬಸವಣ್ಣನವರೆ ಕಾರಣ. ಅಪರಿಮಿತದ ಕತ್ತಲೆಯಲ್ಲಿ ವಿಪರೀತದ ಬೆಳಕು ಎನ್ನುವಂತೆ ಅಮೋಘವಾದ ಜೀವಸಾಹಿತ್ಯ, ಜೀವನಸಾಹಿತ್ಯವನ್ನು ನಮ್ಮ ಶರಣರು ನೀಡಿದರು.

ಶಿವಮೊಗ್ಗ ಬಹಳ ವೈಶಿಷ್ಟ್ಯಪೂರ್ಣ, ವೈವಿಧ್ಯತೆಯಿಂದ ಕೂಡಿದ ಜಿಲ್ಲೆ. ಅದೇ ಜಿಲ್ಲೆಯ ಉಡುತಡಿಯಿಂದ ಶರಣೆ ಅಕ್ಕಮಹಾದೇವಿ, ಬಳ್ಳಿಗಾವಿಯ ಶರಣ ಅಲ್ಲಮಪ್ರಭು ಮುಂತಾದವರು ಬಸವತತ್ವ ಪರಿಮಳ ಹುಡುಕಿಕೊಂಡು ಕಲ್ಯಾಣದೆಡೆಗೆ ಬಂದರು. ಅಂಥವರಲ್ಲಿ ಇದೇ ಜಿಲ್ಲೆಯ ಹಿರೇಜಂಬೂರಿನಿಂದ ಒಬ್ಬ ಶರಣೆ ಬಂದಳು. ಅವಳ ಹೆಸರು ಸತ್ಯಕ್ಕ. ಕಸಗುಡಿಸುವುದು ಇವಳ ಕಾಯಕವಾಗಿತ್ತು. ಇಂದು ನಾವು ಸ್ವಚ್ಛಭಾರತದ ಬಗ್ಗೆ ಮಾತನಾಡುತ್ತಿದ್ದೇವೆ. ಅಭಿಯಾನ ನಾವು ಶುರು ಮಾಡಿದ್ದೇವೆ ಎಂದು ಹೇಳುತ್ತೇವೆ. ಆದರೆ ಶರಣೆ ಸತ್ಯಕ್ಕ ಆಗಲೇ ಸ್ವಚ್ಛ ಭಾರತ ಅಭಿಯಾನಕ್ಕೆ ಮುನ್ನಡಿ ಬರೆದಿದ್ದಳು ಎಂಬುದು ಗಮನಾರ್ಹ ಸಂಗತಿ.

Contact Your\'s Advertisement; 9902492681

ಸ್ವಚ್ಛ ಭಾರತ ಅಭಿಯಾನವನ್ನು ನಮ್ಮ ಶರಣರು ೧೨ನೇ ಶತಮಾನದಲ್ಲೆ ಶುರು ಮಾಡಿದ್ದರು. ಶರಣರ ಬೀದಿಯ ಕಸಗುಡಿಸುವ ಕಾಯಕ ಮಾಡುತ್ತಿದ್ದ ಸತ್ಯಕ್ಕ “ಶಂಭು ಜಕ್ಕೇಶ್ವರ” ಅಂಕಿತದಲ್ಲಿ ಬರೆದ ೨೮ ವಚನಗಳು ದೊರೆತಿವೆ. ಶರಣರು ಕೇವಲ ಸ್ವಚ್ಛಭಾರತದ ಕಲ್ಪನೆ ಅಷ್ಟೇ ಅಲ್ಲ, ಭ್ರಷ್ಟಚಾರಮುಕ್ತ ಭಾರತದ ಕನಸು ಸಹ ಕಂಡಿದ್ದರು. ಪ್ರಾಮಾಣಿಕತೆಯ ಪ್ರತೀಕದಂತಿದ್ದಳು ಸತ್ಯಕ್ಕ.

ಲಂಚ ವಂಚನನಕ್ಕೆ ಕೈಯಾನದ ಭಾಷೆ
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ
ಅದೇನು ಕಾರಣವೆಂದರೆ, ನೀವಿಕ್ಕಿದ
ಬಿಕ್ಷೆಯಲ್ಲಿಪ್ಪೆನಾಗಿ.
ಇಂತಲ್ಲದೆ ನಾನು ಅಳಿ ಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ
ನೀನಾಗಲೆ ಎನ್ನ ನರಕದಲ್ಲದ್ದಿ
ನೀನೆದ್ದು ಹೋಗಾ ಶಂಭು ಜಕ್ಕೇಶ್ವರಾ.

ಭ್ರಷ್ಟಾಚಾರ ಎನ್ನುವುದು ಎಲ್ಲ ಕಾಲಕ್ಕೂ ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಅಧಿಕಾರದ ಹೆಸರಲ್ಲಿ ತನ್ನ ಕರಾಳ ಮುಖವನ್ನು ಪ್ರದರ್ಶಿಸುತ್ತಿದ್ದು, ಇದಕ್ಕೆ ಕೊನೆಯಾಡಬೇಕಾದರೆ ಆತ್ಮಗೌರವ ಕಾಪಾಡಿಕೊಂಡು ಬರಬೇಕು ಎಂದು ಹೇಳಿದ್ದಾರೆ. ಭ್ರಷ್ಟಾಚಾರವನ್ನು ಕೂಡ ಬದುಕಿನ ಒಂದು ಭಾಗವಾಗಿ ಸಹಿಸಿಕೊಳ್ಳುತ್ತಿರುವ ನಮಗೆ, ಶರಣೆ ಸತ್ಯಕ್ಕ ಮಾದರಿಯಾಗಬೇಕಿದೆ. ನಾನು ಅನ್ಯಾಯದ ಧನದಿಂದ ದೂರವಿದ್ದೇನೆ ಎಂದು ಎದೆತಟ್ಟಿ ಹೇಳುತ್ತಾಳೆ. ಅಷ್ಟೇ ಅಲ್ಲ ಕಸಗುಡಿಸುವ ಕಾಯಕದ ವೇಳೆಯಲ್ಲಿ ಬಂಗಾರದ ಆಭರಣ, ರೇಷ್ಮೆವಸ್ತ್ರ ಮುಂತಾದ ಬೆಲೆಬಾಳುವ ಪದಾರ್ಥಗಳು ಬೀದಿಯಲ್ಲಿ ಬಿದ್ದಿದ್ದರೂ ಅವುಗಳನ್ನು ಕಾಲ ಕಸದಂತೆ ನೋಡುತ್ತೇನೆ ಹೊರತು ಮುಟ್ಟುವುದಿಲ್ಲ ಎಂದು ಹೇಳುತ್ತಾಳೆ.

ಅರ್ಚನೆ ಪೂಜನೆ ನೇಮವಲ್ಲ
ಮಂತ್ರ ತಂತ್ರ ನೇಮವಲ್ಲ
ಧೂಪ ದೀಪದಾರತಿ ನೇಮವಲ್ಲ
ಪರಧನ ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ
ಶಂಭುಜಕ್ಕೇಶ್ವರನಲ್ಲಿ ಇವು ನಿತ್ಯ ನೇಮ ಕಾಣಿರಣ್ಣ

ಪರಧನ, ಪರದ್ರವ್ಯ, ಪರಸತಿ ಈ ಮೂರು ವಿಷಯ ಕುರಿತು ಶರಣರು ಬಹಳ ಒತ್ತುಕೊಟ್ಟು ಹೇಳುತ್ತಾರೆ. ಇಂದಿಂಗೆ, ನಾಳಿಂಗೆ ಬೇಕೆಂದನಾದೆಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಎಂದು ಹೇಳಿದ ಶರಣರಿಗೆ ಸಂಗ್ರಹಿಸಿಡಬೇಕು ಎಂಬ ಬುದ್ಧಿ-ಭಾವ ಇರಲಿಲ್ಲ. ಪರಮಾತ್ಮನಲ್ಲಿ ಮತ್ತು ಕಾಯಕದಲ್ಲಿ ಅಚಲ ನಂಭಿಕೆಯಿದ್ದವರಿಗೆ ನಾಳಿನ ಭಯ ಇರುವುದಿಲ್ಲ ಎಂಬುದನ್ನು ಸತ್ಯಕ್ಕ ತನ್ನ ವಚನದಲ್ಲಿ ತಿಳಿಸಿದ್ದಾರೆ. ಮನೆದೈವ, ಮನದೈವ ಎರಡೂ ಒಂದಾಗಿರಬೇಕು ಅಂದಾಗ ಮಾತ್ರ ದೇವರ ಒಲುಮೆ, ನಿಲುಮೆ ಸಾಧ್ಯ ಎಂದು ಆಕೆ ಹೇಳುತ್ತಾಳೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here