ಕಲಬುರಗಿ: ಸಿಐಡಿಯವರು ಎರಡನೆಯ ನೋಟಿಸು ಜಾರಿ ಮಾಡಿದ್ದಾರೆ. ಬೆಳಿಗ್ಗೆ ಕಲಬುರಗಿಗೆ ಬರಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇರುವಾಗ ಸಿಐಡಿ ಇನ್ಸಪೆಕ್ಟರ್ ಒಬ್ಬರು ನೋಟಿಸು ತಂದಿರುವುದಾಗಿ ನನ್ನ ಸಿಬ್ಬಂದಿ ತಿಳಿಸಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕಲಬುರಗಿ ಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೊದಲ ನೋಟಿಸಿಗೆ ಈಗಾಗಲೇ ಉತ್ತರ ನೀಡಿದ್ದೇನೆ. ನೋಟಿಸಿನಲ್ಲಿ ಯಾವುದೇ ನಿರ್ದಿಷ್ಟತೆ ಹಾಗೂ ಸ್ಪಷ್ಟತೆ ಇಲ್ಲ. ಕಲಂ ೯೧ ಅಡಿಯಲ್ಲಿ ಹಾಜರಾಗಲು ಹೇಳಿದ್ದರು. ಈ ಸೆಕ್ಷನ್ಗಳ ಪ್ರಕಾರ ನಾನು ಕಡ್ಡಾಯವಾಗಿ ಹಾಜರಾಗಬೇಕಿಲ್ಲ. ಸಿಆರ್ ಪಿಸಿ ಪ್ರಕಾರ ತಮಗೆ ಯಾವ ನಿರ್ದಿಷ್ಟ ದಾಖಲೆ ನೀಡುವಂತೆ ಹೇಳಿಲ್ಲ. ಕಾನೂನಿನ ಪ್ರಕಾರ, ನಿರ್ದಿಷ್ಟ ದಾಖಲೆ ನೀಡುವಂತೆ ಹೇಳದಿರುವುದರಿಂದ ನಾನು ಉತ್ತರ ನೀಡಿದ್ದೇನೆ. ಕಲಂ ೧೬೦ ರ ಪ್ರಕಾರ ಸಾಕ್ಷಿದಾರರು ಮಾತ್ರ ಹಾಜಿರಾಗಬೇಕು. ನಾನೇನು ಈ ಪ್ರಕರಣದ ಸಾಕ್ಷಿದಾರನಾ ? ನಾನು ವಿಚಾರಣೆಗೆ ಹಾಜಿರಾಗಬೇಕೆಂದು ಹೇಳುವ ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಲಿ ಎಂದರು.
ಇದನ್ನೂ ಓದಿ: ಪಿಎಸ್‌ಐ ಪರೀಕ್ಷಾ ಅಕ್ರಮ: ನಿಷ್ಪಕ್ಷಪಾತ ತನಿಖೆಗೆ ಡಾ. ಮಲ್ಲಿಕಾರ್ಜುನ್ ಖರ್ಗೆ ಆಗ್ರಹ
ಈ ಹಗರಣದಲ್ಲಿ ಬಿಜೆಪಿಯ ನಾಯಕರು ಭಾಗಿಯಾಗಿದ್ದಾರೆ. ತನಿಖೆ ಕೇವಲ ಕಲಬುರಗಿಗೆ ಮಾತ್ರ ಸೀಮಿತವಾಗಿದೆ. ಇನ್ನಷ್ಟು ವ್ಯಾಪಕವಾಗಿ ನಡೆದರೆ ಮತ್ತಷ್ಟು ಅಧಿಕಾರಿಗಳು ಹಾಗೂ ಆಳುವ ಪಕ್ಷದ ರಾಜಕಾರಣಿಗಳು ಭಾಗಿಯಾಗಿರುವುದು ಬಯಲಿಗೆ ಬರಲಿದೆ ಅಷ್ಟೇಕೆ ವಿಧಾನಸೌಧಕ್ಕೂ ಮುಟ್ಟಲಿದೆ.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ರೂವಾರಿ ದಿವ್ಯಾ ಹಾಗರಗಿ ಬಂಧನವಾಗಿಲ್ಲ ಯಾಕೆ? ಅವರ ಬಳಿ ಯಾವ ದಿವ್ಯ ಶಕ್ತಿ ಇದೆ ಎಂದು ಬಂಧನವಾಗಿಲ್ಲ. ಪ್ರವಾಸೋದ್ಯಮ, ತೋಟಗಾರಿಕೆ, ಜಂಗಲ್ ಲಾಡ್ಜ್, ಪಿಡಬ್ಲೂಡಿ, ಇಂಜಿನಿಯರಿಂಗ್, ಎಫ್ ಡಿಸಿ, ಪಶುಸಂಗೋಪನೆ ಸೇರಿದಂತೆ ಹಲವಾರು ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಬಿಜೆಪಿ ಸರ್ಕಾರದ ಹಗರಣಗಳ ವಿಚಾರಣೆಗೆ ಕೇವಲ ನಿವೃತ್ತ ನ್ಯಾಯಾಧೀಶರ ನೇಮಕ ಸಾಕಾಗಲ್ಲ ಫಾಸ್ಟ್ ಟ್ರಾಕ್ ಕೋರ್ಟ್ ಸ್ಥಾಪನೆ ಮಾಡಬೇಕು. -ಪ್ರಿಯಾಂಕ್ ಖರ್ಗೆ