-
ಗೃಹ ಸಚಿವರ ವಿರುದ್ಧ ದಾಖಲೆ ಇದ್ದರೆ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಲಿ: ಹೆಚ್.ಡಿ.ಕುಮಾರಸ್ವಾಮಿ
-
ದಾಖಲೆಗಳಿದ್ದರೆ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಬಹುದು
-
ಅಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಪಾತ್ರವಿದೆ; ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳೂ ಶಾಮೀಲಾಗಿರಬಹುದು ಎಂದ ಹೆಚ್ಡಿಕೆ
ಕುಣಿಗಲ್: ಪಿಎಸ್ಐ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ನೇರವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಪಾತ್ರ ಇದ್ದರೆ, ಅದಕ್ಕೆ ಸಂಬಂಧಪಟ್ಟ ದಾಖಲೆಗಳಿದ್ದರೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಬಿಡುಗಡೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ‘ಕೊಳದ ಮಠದ ಸ್ವಾಮಿ’ ಶಾಂತವೀರ ಸ್ವಾಮೀಜಿ ಅಗಲಿಕೆ
ಕುಣಿಗಲ್ ನಲ್ಲಿ ಇಂದು ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅವರು ಮಾಧ್ಯಮದೊಂದಿಗೆ ಅವರು ಮಾತನಾಡಿರು. ದಿನೇಶ್ ಗುಂಡೂರಾವ್ ಅವರು ಒಂದು ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಪಿಎಸ್ಐ ಪರೀಕ್ಷೆಯಲ್ಲಿ ಗೃಹ ಸಚಿವರ ಪಾತ್ರ ಇದ್ದರೆ ನೇರವಾಗಿ ದಾಖಲೆಗಳನ್ನು ಬಿಡುಗಡೆ ಮಾಡಿ ಆಪಾದನೆ ಮಾಡಬೇಕು. ನಾನು ಇಂಥ ಯಾವುದೇ ವಿಷಯ ಇದ್ದರೆ ದಾಖಲೆಗಳನ್ನು ಇಟ್ಟುಕೊಂಡೇ ಮಾತನಾಡುತ್ತೇನೆ ಎಂದರು.
ಪಿಎಸ್ಐ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸತ್ಯ. ಇದರಲ್ಲಿ ಅಧಿಕಾರಿಗಳು ಸೇರಿದಂತೆ ಯಾವ ಯಾವ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬ ಸತ್ಯಾಂಶವನ್ನು ಸಿಐಡಿ ತನಿಖೆಯಿಂದ ಜನರ ಮುಂದೆ ತರಬೇಕು. ಇಲಾಖೆಯಲ್ಲಿ ಯಾರೋ ಕೈ ಜೋಡಿಸಿದ ಹೊರತು ಇಂಥ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಅಂಬೇಡ್ಕರ ಅವರ ವಿಚಾರಧಾರೆ ಜನರಿಗೆ ಇನ್ನೂ ತಲುಪಿಲ್ಲ: ಶಾಸಕ ಪ್ರಿಯಾಂಕ್ ಖರ್ಗೆ ವಿಷಾದ.
ದಿನೇಶ್ ಗುಂಡೂರಾವ್ ಅವರು ತಮ್ಮ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ಗೃಹ ಸಚಿವರ ರಾಜೀನಾಮೆ ಕೇಳಬಹುದು. ದಾಖಲೆಗಳನ್ನು ಬಿಡುಗಡೆ ಮಾಡದೇ ನಾವು ಹೇಗೆ ರಾಜೀನಾಮೆ ಕೇಳಲು ಸಾಧ್ಯ? ಆದರೆ ಇಲ್ಲಿ ನಡೆದಿರುವ ವಾಸ್ತವಾಂಶವನ್ನು ನೋಡಿದಾಗ ಸರಕಾರದಲ್ಲಿರುವ ಬಿಜೆಪಿ ಪಕ್ಷದ ಪ್ರಮುಖ ಕಾರ್ಯಕರ್ತರು ಸೇರಿದಂತೆ ಕಾಂಗ್ರೆಸ್ ಪಕ್ಷದವರು ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಈ ಪರೀಕ್ಷೆ ಹಗರಣದಲ್ಲಿ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸಹ ಭಾಗಿಯಾಗಿರಬಹುದು. ಈ ಬಗ್ಗೆ ಅನುಮಾನಗಳು ಸೃಷ್ಟಿ ಆಗಿವೆ. ಹಾಗಾಗಿ ಇಡೀ ಪ್ರಕರಣದ ಕೂಲಂಕಷ ತನಿಖೆ ಮಾಡಿದ ನಂತರ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು.