ವಾಡಿ: ರಾಜ್ಯ ಸರ್ಕಾರವು ಹೊಸದಾಗಿ ಪ್ರಕಟಿಸುತ್ತಿರುವ 10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ಭಗತ್ ಸಿಂಗ್ ಪಾಠವನ್ನು ಕೈಬಿಟ್ಟು ಕೆ.ಬಿ. ಹೆಡ್ಗೇವಾರ್ ಭಾಷಣ ಸೇರ್ಪಡೆ ಮಾಡಿರುವುದನ್ನು ಎಐಡಿಎಸ್ಓ ಉಗ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್ ಓ) ನಗರ ಸಮಿತಿ ಅಧ್ಯಕ್ಷ ವೆಂಕಟೇಶ ದೇವದುರ್ಗ, ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ಸಿಂಗ್ ಅವರ ಜೀವನ ಹೋರಾಟದ ಇತಿಹಾಸವನ್ನು ಪಠ್ಯದಿಂದ ಕೈಬಿಟ್ಟರೆ ರಾಜ್ಯದ ವಿದ್ಯಾರ್ಥಿಗಳು ಸಿಡಿದೇಳಲಿದ್ದಾರೆ ಎಂದು ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಶಿಕ್ಷಣವು ಪ್ರಜಾತಾಂತ್ರಿಕ ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕವಾಗಿರಬೇಕೆಂಬುದು ನಮ್ಮ ನವೋದಯ ಚಳುವಳಿಯ ಹರಿಕಾರರು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಹಲವು ಮಹಾನ್ ಹೋರಾಟಗಾರರ ಆಶಯವಾಗಿತ್ತು. ಆದರೆ ಇಲ್ಲಿಯವರೆಗೂ ಆಡಳಿತ ನಡೆಸಿರುವ ಎಲ್ಲಾ ಪಕ್ಷಗಳು ಈ ಆಶಯಗಳಿಗೆ ವಿರುದ್ಧವಾಗಿ ತಮ್ಮ ಅಜೆಂಡಾಗಳನ್ನು ಪುಸ್ತಕದಲ್ಲಿ ತೂರಿಸುವ ಷಡ್ಯಂತ್ರ ರೂಪಿಸುತ್ತಾ ಬಂದಿವೆ. ರಾಜ್ಯ ಸರ್ಕಾರದಿಂದ ಹೊಸದಾಗಿ ಪ್ರಕಟಿಸಲ್ಪಡುತ್ತಿರುವ 10ನೇ ತರಗತಿಯ ಕನ್ನಡ ಪಠ್ಯದಿಂದ, ಸ್ವಾತಂತ್ರ್ಯಕ್ಕಾಗಿ 23ನೇ ವಯಸ್ಸಿಗೆ ಗಲ್ಲಿಗೇರಿದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗರ ಕುರಿತಾದ ಪಾಠವನ್ನು ಕೈಬಿಟ್ಟು ಆರ್ ಎಸ್ಎಸ್ ಸ್ಥಾಪಕ ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದೆ ಹೋರಾಟಕ್ಕೆ ಬೆನ್ನು ತೋರಿಸಿ, ಜನತೆಯ ಐಕ್ಯತೆಗೆ ವಿರುದ್ಧವಾಗಿ ಕೋಮು ಭಾವನೆಗಳನ್ನು ಹರಡಿದ ಕೆ.ಬಿ. ಹೆಡ್ಗೇವಾರ್ ಭಾಷಣವನ್ನು ಸೇರಿಸಲಾಗಿದೆ ಎಂದು ದೂರಿದ್ದಾರೆ.
ಸ್ಥಾಪಿತ ಸತ್ಯವನ್ನು ತಿರುಚುವ ಸರ್ಕಾರದ ಈ ವಿತಂಡವಾದವನ್ನು ಎಐಡಿಎಸ್ಓ ಅತ್ಯುಗ್ರ ಪದಗಳಲ್ಲಿ ಖಂಡಿಸುತ್ತದೆ. ಆಡಳಿತಾರೂಢ ಬಿಜೆಪಿ ಮತ್ತು ಸಂಘಪರಿವಾರದವರಿಗೆ ಭಗತ್ ಸಿಂಗ್ ಸೇರಿದಂತೆ ಈ ದೇಶದ ಸ್ವಾತಂತ್ರ್ಯಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲದಿರುವುದನ್ನು ಇದು ಸ್ಪಷ್ಟೀಕರಿಸುತ್ತದೆ. ಮತ್ತು ಅವರ ವಿಚಾರಧಾರೆಯನ್ನು ಇದು ಎತ್ತಿತೋರಿಸುತ್ತದೆ. ಇದರ ಜೊತೆಯಲ್ಲೇ ಜನಾಂಗೀಯ ದ್ವೇಷವನ್ನು ಖಂಡಿಸುವ ಪಿ. ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’, ಎ.ಎನ್. ಮೂರ್ತಿರಾಯರ ‘ವ್ಯಾಘ್ರಗೀತೆ’, ಸಾರಾ ಅಬೂಬಕರ್ ಅವರ ‘ಯುದ್ಧ’ ದಂತಹ ಹಲವು ಮೌಲ್ಯಯುತ ಪಾಠಗಳನ್ನು ಕೈಬಿಟ್ಟಿರುವುದು ವೈಜ್ಞಾನಿಕ ಮತ್ತು ಪ್ರಜಾತಾಂತ್ರಿಕ ವಿರೋಧಿ ನೀತಿಯಾಗಿದೆ ಎಂದು ಆಪಾದಿಸಿದ್ದಾರೆ.
ಕರ್ನಾಟಕದ ಬಿಜೆಪಿ ಸರ್ಕಾರವು ನೇಮಿಸಿರುವ ಪಠ್ಯಪುಸ್ತಕ ಪರಿಷ್ಕರಣ ಮಂಡಳಿಯ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರ ಬಗ್ಗೆ ಪ್ರಜ್ಞಾವಂತ ಮತ್ತು ಶಿಕ್ಷಣ ಪ್ರೇಮಿ ಜನತೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಸರ್ಕಾರವು ತನ್ನ ಕೋಮು ವಿಚಾರಧಾರೆಗಳನ್ನು ಶಿಕ್ಷಣದಲ್ಲಿ ತೂರಿಸುವ ಹುನ್ನಾರವಾಗಿ ಈ ಸಮಿತಿಯನ್ನು ರಚಿಸಿರುವುದು ಈಗ ಸಾಬೀತಾಗಿದೆ. ಸಂಕುಚಿತ ವಿಚಾರಗಳನ್ನು ಹರಡುವ ಸರ್ಕಾರದ ಈ ಷಡ್ಯಂತ್ರದ ವಿರುದ್ಧ ರಾಜ್ಯದ ಪ್ರಜ್ಞಾವಂತ ಜನತೆ ಹಾಗೂ ವಿದ್ಯಾರ್ಥಿ ಸಮುದಾಯ ಧ್ವನಿ ಎತ್ತಬೇಕೆಂದು ವಿದ್ಯಾರ್ಥಿ ನಾಯಕ ವೆಂಕಟೇಶ ಕರೆ ನೀಡಿದ್ದಾರೆ.
ಕೂಡಲೇ ತೆಗೆದುಹಾಕಿರುವ ಪಠ್ಯಗಳನ್ನು ಮರಳಿ ಸೇರಿಸಬೇಕು ಮತ್ತು ಧರ್ಮನಿರಪೇಕ್ಷವಲ್ಲದ, ಅವೈಜ್ಞಾನಿಕ ಹಾಗೂ ಅಪ್ರಜಾತಾಂತ್ರಿಕ ಚಿಂತನೆಗಳನ್ನು ಪಠ್ಯಪುಸ್ತಕದಿಂದ ಕೈಬಿಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.